Karnataka Cabinet: ಸಚಿವ ಸಂಪುಟ ರಚನೆಗೆ ಕಸರತ್ತು: ಆಕಾಂಕ್ಷಿಗಳ ಪಟ್ಟಿ ಹಿಡಿದು ದೆಹಲಿಗೆ ತೆರಳಿದ ಸಿದ್ದರಾಮಯ್ಯ, ಡಿಕೆಶಿ
May 19, 2023 12:08 PM IST
ಡಿಕೆಶಿ- ಸಿದ್ದರಾಮಯ್ಯ (ಸಂಗ್ರಹ ಚಿತ್ರ)
- Karnataka Cabinet: ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣಿಸುತ್ತಿರುವ ಉಭಯ ನಾಯಕರು ಸಂಪುಟ ರಚನೆ ಸಂಬಂಧ ಹೈಕಮಾಂಡ್ ಜೊತೆ ಚರ್ಚೆ ನಡೆಸಿ, ಇಂದು ಸಂಜೆಯೇ ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ನಾಳೆ ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ 12ರಿಂದ 15 ಸಚಿವರನ್ನು ಸಂಪುಟಕ್ಕೆ ಸೇರಿಸುವ ಸಾಧ್ಯತೆ ಇದೆ.
ಕರ್ನಾಟಕ ಸಿಎಂ ಆಯ್ಕೆ ಕಗ್ಗಂಟು ಬಗೆಹರಿದ ಬಳಿಕ ಇದೀಗ ಸಚಿವ ಸ್ಥಾನಕ್ಕಾಗಿ ಲಾಭಿ ಶುರುವಾಗಿದೆ. ಸಚಿವ ಸಂಪುಟ (Karnataka Cabinet) ರಚನೆಗೆ ಕಸರತ್ತು ನಡೆಯುತ್ತಿದೆ. ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಂದು ( ಮೇ 19) ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳಾಗಿರುವ ಶಾಸಕರ ಪಟ್ಟಿ ಹಿಡಿದು ದೆಹಲಿಗೆ ತೆರಳಿದ್ದಾರೆ.
ನಾಳೆ ( ಮೇ 20) ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ಇವರಿಬ್ಬರ ಜೊತೆ ಜೊತೆಗೆ ಕೆಲ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣಿಸುತ್ತಿರುವ ಉಭಯ ನಾಯಕರು ಸಂಪುಟ ರಚನೆ ಸಂಬಂಧ ಹೈಕಮಾಂಡ್ ಜೊತೆ ಚರ್ಚೆ ನಡೆಸಿ, ಇಂದು ಸಂಜೆಯೇ ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ನಾಳೆ ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ 12ರಿಂದ 15 ಸಚಿವರನ್ನು ಸಂಪುಟಕ್ಕೆ ಸೇರಿಸುವ ಸಾಧ್ಯತೆ ಇದೆ, ಇವರಲ್ಲಿ ಹೆಚ್ಚಿನವರು ಹಿರಿಯ ನಾಯಕರಾಗಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೊಸ ಮುಖಗಳಿಗೂ ಸಚಿವ ಸ್ಥಾನ ಸಿಗುತ್ತೋ ಇಲ್ಲವೋ ಕಾದುನೋಡಬೇಕಾಗಿದೆ.
ಇಂದು ಬೆಳಗ್ಗೆ ಡಾ ಜಿ ಪರಮೇಶ್ವರ್ ಅವರು ಬೆಂಗಳೂರಿನ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು. ಸಿಎಂ ಅಥವಾ ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಪರಮೇಶ್ವರ್ ಅವರಿಗೆ ದೊಡ್ಡ ಖಾತೆಯನ್ನೇ ಕೊಡಬಹುದು ಎಂದು ಹೇಳಲಾಗುತ್ತಿದೆ.
ನಾಳೆ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಇಂದು ದೆಹಲಿಗೆ ಹೊರಡುವ ಮುನ್ನ ಭೇಟಿ ನೀಡಿದ ಡಿಕೆಶಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ಸ್ಟೇಡಿಯಂಗೆ ಮನೆಯಿಂದ ಹೊರಡುವ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಡಿಕೆಶಿ, ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಮತ್ತೊಮ್ಮೆ ಭರವಸೆ ನೀಡಿದರು.
ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ, ನೂತನ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂಬುದು ಖಚಿತವಾಯಿತು. ಇನ್ನು ಸಚಿವ ಸಂಪುಟದ ವಿಚಾರ. ಸಂಭಾವ್ಯ ಸಚಿವರು ಯಾರೆಂಬ ವಿಚಾರ ಈಗಾಗಲೇ ಚರ್ಚೆಗೆ ಒಳಗಾಗಿದೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ