logo
ಕನ್ನಡ ಸುದ್ದಿ  /  Karnataka  /  Karnataka Election Bengaluru Hotels Offering Free Food To Voters High Court Stays Bbmp Order Pcp

Karnataka Election: ಮತದಾನ ಮಾಡಿದವರಿಗೆ ಬೆಂಗಳೂರಿನ 2 ಹೋಟೆಲ್‌ಗಳಲ್ಲಿ ಉಚಿತ ಉಪಹಾರ, ಹೈಕೋರ್ಟ್‌ ಅನುಮತಿ

Praveen Chandra B HT Kannada

May 10, 2023 09:36 AM IST

ಮತದಾನ ಮಾಡಿದವರಿಗೆ ಬೆಂಗಳೂರಿನ 2 ಹೋಟೆಲ್‌ಗಳಲ್ಲಿ ಉಚಿತ ಉಪಹಾರ

    • Bengaluru Hotels Free Food: ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಮತ್ತು ಚಾಲುಕ್ಯ ಸಾಮ್ರಾಟ್ ಹೋಟೆಲ್‌ಗಳಲ್ಲಿ ಮತದಾನ ಮಾಡಿ ಬಂದವರು ತಮ್ಮ ಬೆರಳಿನ ಶಾಯಿ ಗುರುತು ತೋರಿಸಿ ಉಚಿತ ಉಪಹಾರ ಸೇವಿಸಬಹುದು. ಈ ರೀತಿ ಆಹಾರ ನೀಡುವುದಕ್ಕೆ ಬಿಬಿಎಂಪಿ ನೀಡಿದ ನಿರ್ಬಂಧವನ್ನು ಹೈಕೋರ್ಟ್‌ ತೆರವುಗೊಳಿಸಿದೆ.
ಮತದಾನ ಮಾಡಿದವರಿಗೆ ಬೆಂಗಳೂರಿನ 2 ಹೋಟೆಲ್‌ಗಳಲ್ಲಿ ಉಚಿತ ಉಪಹಾರ
ಮತದಾನ ಮಾಡಿದವರಿಗೆ ಬೆಂಗಳೂರಿನ 2 ಹೋಟೆಲ್‌ಗಳಲ್ಲಿ ಉಚಿತ ಉಪಹಾರ

ಬೆಂಗಳೂರು: ಬೆಂಗಳೂರಿನ ಕೆಲ ಹೋಟೆಲ್‌ಗಳಲ್ಲಿ ಮುಂಭಾಗದಲ್ಲಿ ಉಚಿತವಾಗಿ/ ರಿಯಾಯಿತಿ ದರದಲ್ಲಿ ತಿಂಡಿ ಪಾನಿಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಬೋರ್ಡ್‌ಗಳನ್ನು ಅಳವಡಿಸಲಾಗಿತ್ತು. ಇದಕ್ಕೆ ಬಿಬಿಎಂಪಿ ನಿರ್ಬಂಧ ಹಾಕಿತ್ತು. ಘನ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಈ ನಿರ್ಬಂಧವನ್ನು ಹಿಂಪಡೆಯಲಾಗಿದೆಯೆಂದು ಸಹಾಯಕ ಆಯುಕ್ತರು (ಚುನಾವಣೆ) ರವರು ತಿಳಿಸಿದ್ದಾರೆ. ಬಿಬಿಎಂಪಿ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದ್ದು, ಇಂದು ಮತ ಚಲಾಯಿಸಿ ಬಂದು ಬೆರಳಿನ ಶಾಯಿ ತೋರಿಸಿದವರಿಗೆ ಬೆಂಗಳೂರಿನ ಕೆಲವು ಹೋಟೆಲ್‌ಗಳಲ್ಲಿ ಉಚಿತ ಉಪಹಾರ ದೊರಕಲಿದೆ.

ಟ್ರೆಂಡಿಂಗ್​ ಸುದ್ದಿ

Bangalore News: ಬೆಂಗಳೂರಲ್ಲಿ ಅನಧಿಕೃತ ಬಡಾವಣೆಗಳ ಅಬ್ಬರ, ನಿವೇಶನ ಖರೀದಿಸುವಾಗ ಇರಲಿ ಎಚ್ಚರ

Arecanut News: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘಕ್ಕೆ ಯುವ ಮುಖ, ಹೊಸ ಅಧ್ಯಕ್ಷರ ಯೋಜನೆಗಳು ಏನೇನು?

Hassan Sex Scandal: ಪ್ರಜ್ವಲ್‌ ನಂತರ ತಂದೆ ಎಚ್‌ಡಿರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ದೂರು, ಮೊಕದ್ದಮೆ ದಾಖಲು

KSRTC News: ಕರ್ನಾಟಕದ ಸಾರಿಗೆ ಬಸ್‌ಗಳಲ್ಲಿ ಸದ್ಯವೇ ಕ್ಯಾಶ್‌ಲೆಸ್‌ ಸೇವೆ, ಯುಪಿಐ ಮೂಲಕ ಹಣ ಪಾವತಿ

ಈ ರೀತಿ ತಿಂಡಿ ಉಚಿತವಾಗಿ ನೀಡಲು ನೀಡಿದ್ದ ಅನುಮತಿಯನ್ನು ಬಿಬಿಎಂಪಿ ವಾಪಸ್‌ ಪಡೆದಿತ್ತು. ಇದರ ವಿರುದ್ಧ ಬೃಹತ್‌ ಬೆಂಗಳೂರು ಹೋಟೆಲ್‌ ಅಸೋಷಿಯೇಷನ್‌ ಕೋರ್ಟ್‌ ಮೆಟ್ಟಿಲೇರಿತ್ತು. ಅಸೋಸಿಯೇಷನ್‌ನ ಕಾರ್ಯದರ್ಶಿ ವೀರೇಂದ್ರ ಎನ್‌ ಕಾಮತ್‌ ಮತ್ತು ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ ಮಾಲೀಕರಾದ ಎಸ್‌ಪಿ ಕೃಷ್ಣರಾಜ್‌ ಸಲ್ಲಿಸಿದ ಅರ್ಜಿಯನ್ನು ಮಂಗಳವಾರ ರಜಾಕಾಲದ ನ್ಯಾಯಪೀಠ ತುರ್ತು ವಿಚಾರಣೆ ನಡೆಸಿತ್ತು. ನ್ಯಾಯಮೂರ್ತಿ ಟಿಜಿ ಶಿವಶಂಕರೇ ಗೌಡ ಅವರಿದ್ದ ಪೀಠವು ತುರ್ತು ವಿಚಾರಣೆ ನಡೆಸಿ ಉಚಿತ ತಿಂಡಿ ವಿತರಣೆಗೆ ಅನುಮತಿ ನೀಡಿದೆ.

"ಅರ್ಜಿದಾರರು ಈ ಹಿಂದಿನ ಚುನಾವಣೆಗಳ ಸಂದರ್ಭದಲ್ಲಿಯೂ ಇದೇ ರೀತಿ ಪಾಲಿಕೆಯ ಅನುಮತಿ ಪಡೆದು ತಿಂಡಿಗಳನ್ನು ಉಚಿತವಾಗಿ ನೀಡುವ ಪರಿಪಾಠ ಹೊಂದಿರುತ್ತಾರೆ. 2013, 2018ರ ಮತ್ತು 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಉಚಿತವಾಗಿ ತಿಂಡಿ ವಿತರಿಸಿದ್ದರು. ಈ ಬಾರಿಯೂ ಪಾಲಿಕೆಯಿಂದ ಅನುಮತಿ ಪಡೆದು ಎಲ್ಲಾ ಸಿದ್ಧತೆ ನಡೆಸಲಾಗಿದೆ. ನಿನ್ನೆ ಸಂಜೆ ವೇಳೆಗೆ ಬಿಬಿಎಂಪಿಯು ಈ ಅನುಮತಿಯನ್ನು ವಾಪಸ್‌ ಪಡೆದಿದೆ" ಎಂದು ಅರ್ಜಿದಾರರ ಪರ ವಕೀಲ ಕೆ. ಸತೀಶ್‌ ಭಟ್‌ ವಾದಿಸಿದ್ದಾರೆ.

ಇಂದು ಮತದಾನ ಮಾಡಿ ಬಂದ ಮತದಾರರಿಗೆ ಉಚಿತವಾಗಿ ಮೈಸೂರು ಪಾಕ್‌, ತಂಪುಪಾನೀಯ, ಬೆಣ್ಣೆ ದೋಸೆ ನೀಡುವುದಾಗಿ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಮತ್ತು ಚಾಲುಕ್ಯ ಸಾಮ್ರಾಟ್ ಹೋಟೆಲ್​ಗಳು ಪ್ರಕಟಿಸಿದ್ದವು. ಈ ಮೂಲಕ ಎಲ್ಲರೂ ಮತದಾನ ಮಾಡಿ ಎಂದು ಪ್ರೋತ್ಸಾಹ ನೀಡಲಾಗಿತ್ತು. ಆದರೆ, ಈ ವಿಷಯದ ಬಗ್ಗೆ ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್ ವಿರೋಧ ವ್ಯಕ್ತಪಡಿಸಿದ್ದರು. ಈ ರೀತಿ ಕೊಡುಗೆಗಳನ್ನು ನೀಡಲು ಅನುಮತಿ ನೀಡುವುದಿಲ್ಲ ಎಂದು ಅವರು ಸೂಚನೆ ನೀಡಿದ್ದರು. ಈಗಾಗಲೇ ನೀಡಿರುವ ಅನುಮತಿಯನ್ನು ವಾಪಸ್‌ ಪಡೆದಿದ್ದರು.

ಈ ಹೋಟೆಲ್‌ಗೂ ರಾಜಕೀಯ ಪಕ್ಷಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಇದು ಮತದಾರರಿಗೆ ಮತದಾನ ಮಾಡುವುದನ್ನು ಪ್ರೋತ್ಸಾಹಿಸಲು ಮಾಡುವ ಕ್ರಮವಾಗಿದೆ. ಹೀಗಾಗಿ, ಅನುಮತಿ ವಾಪಸ್‌ ಪಡೆದಿರುವ ಆದೇಶವನ್ನು ಹಿಂಪಡೆಯಬೇಕು" ಎಂದು ಅವರು ನ್ಯಾಯಪೀಠಕ್ಕೆ ಮನವಿ ಮಾಡಿದರು ಇದಕ್ಕೆ ಕರ್ನಾಟಕ ಹೈಕೋರ್ಟ್‌ ಒಪ್ಪಿದ್ದು, ಬಿಬಿಎಂಪಿ ನೀಡಿದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.

ಇದರಿಂದಾಗಿ ನೃಪತುಂಗ ರಸ್ತೆಯ ನಿಸರ್ಗ ಗಾರ್ಡನ್‌ ಸೇರಿದಂತೆ ವಿವಿಧ ಹೋಟೆಲ್‌ಗಳಲ್ಲಿ ಮತದಾನ ಮಾಡಿ ಬಂದ ಮತದಾರರು ತಮ್ಮ ಬೆರಳಿನ ಶಾಯಿ ಗುರುತು ತೋರಿಸಿ ಉಚಿತವಾಗಿ ಉಪಹಾರ ಸೇವಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು