logo
ಕನ್ನಡ ಸುದ್ದಿ  /  ಕರ್ನಾಟಕ  /  Voter List: ಚುನಾವಣೆಯ ಅಂತಿಮ ಮತದಾರರ ಪಟ್ಟಿ ಬಿಡುಗಡೆ: 11 ಲಕ್ಷಕ್ಕೂ ಅಧಿಕ ಯುವ ಮತದಾರರ ನೋಂದಣಿ

Voter List: ಚುನಾವಣೆಯ ಅಂತಿಮ ಮತದಾರರ ಪಟ್ಟಿ ಬಿಡುಗಡೆ: 11 ಲಕ್ಷಕ್ಕೂ ಅಧಿಕ ಯುವ ಮತದಾರರ ನೋಂದಣಿ

Nikhil Kulkarni HT Kannada

Apr 27, 2023 06:16 AM IST

ಸಾಂದರ್ಭಿಕ ಚಿತ್ರ

    • ಈ ಬಾರಿಯ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, 18 ರಿಂದ 19 ವರ್ಷದೊಳಗಿನ ಒಟ್ಟು 11,71,558 ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡಲು ಸಜ್ಜಾಗಿದ್ದಾರೆ. ಏ.20 ರಂದು ಪರಿಷ್ಕೃತ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು, ಹೊಸದಾಗಿ 16,04,285 ಜನರ ನೋಂದಣಿಯಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾರರ ಮನಗೆಲ್ಲಲು ತರಹೇವಾರಿ ಕಸರತ್ತು ನಡೆಸುತ್ತಿರುವ ರಾಜಕೀಯ ಪಕ್ಷಗಳು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಅಧಿಕಾರ ನೀಡುವಂತೆ ಮನವಿ ಮಾಡಿಕೊಳ್ಳುತ್ತಿವೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಅಂತಿಮವಾಗಿ ಕರ್ನಾಟಕದ ಮತದಾರ ಪ್ರಭು ಯಾರ ಕೊರಳಿಗೆ ವಿಜಯದ ಮಾಲೆ ಹಾಕಲಿದ್ದಾನೆ ಎಂಬ ಪ್ರಶ್ನೆಗೆ, ಮುಂಬರುವ ಮೇ 13ರಂದು ಉತ್ತರ ದೊರೆಯಲಿದೆ.

ಟ್ರೆಂಡಿಂಗ್​ ಸುದ್ದಿ

Bangalore News:ಮುಂಗಾರಿಗೆ ಅಣಿಯಾಗುತ್ತಿದೆ ಬೆಂಗಳೂರು, ಬಿಬಿಎಂಪಿಯಿಂದ ಸ್ವಚ್ಛ ಕಾರ್ಯ ಚುರುಕು

Summer Effect: ಬಿಸಿಲಿಗೆ ತತ್ತರಿಸಿದ ಕುಕ್ಕುಟೋದ್ಯಮ, ಕೋಳಿ ಉಳಿಸಿಕೊಳ್ಳಲು ಕೂಲರ್‌ ಮೊರೆ, ಚಿಕನ್‌ ಬೆಲೆಯಲ್ಲಿ ಏರಿಕೆ

ಸಿಇಟಿ, ನೀಟ್ ಕುರಿತು ಆಟೊ ಚಾಲಕನೊಂದಿಗೆ ಮಹಿಳೆ ಚರ್ಚೆ; ಪ್ರಯಾಣದಲ್ಲಿನ ಸಂಭಾಷಣೆ ಪೋಸ್ಟ್‌ ವೈರಲ್, ಭಾರಿ ಮೆಚ್ಚುಗೆ

ಹೊರಗೂ ಬಿಸಿ, ಒಳಗೂ ಬಿಸಿ: ಸುಡುವ ಗಾಳಿ, ಕೆಂಡದಂಥ ರಸ್ತೆ, ಕಾವೇರಿದ ಎಂಜಿನ್; ಬಿಸಿಲಿಗೆ ಬಸವಳಿದ ಬಸ್ ಚಾಲಕರು

ಈ ಮಧ್ಯೆ ಈ ಬಾರಿಯ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, 18 ರಿಂದ 19 ವರ್ಷದೊಳಗಿನ ಒಟ್ಟು 11,71,558 ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡಲು ಸಜ್ಜಾಗಿದ್ದಾರೆ. ಕಳೆದ ಜ.5 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರ 16 ಲಕ್ಷ ಮಂದಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರಿದ್ದಾರೆ.

ಏಪ್ರಿಲ್‌ 10 ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿತ್ತು. ಏ.20 ರಂದು ಪರಿಷ್ಕೃತ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು, ಹೊಸದಾಗಿ 16,04,285 ಜನರ ನೋಂದಣಿಯಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹೊಸ ನೋಂದಣಿ ಹೆಚ್ಚಿರುವುದು ವಿಶೇಷ.

ಜನಾದೇಶ ಪ್ರಕ್ರಿಯೆಯತ್ತ ಮತದಾರರ ಆಸಕ್ತಿ ಹೆಚ್ಚುತ್ತಿದ್ದು, ಇದಕ್ಕೆ ಯುವ ಮತದಾರರ ನೋಂದಣಿ ಅಧಿಕವಾಗಿರುವುದೇ ಸಾಕ್ಷಿ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಚುನಾವಣೆಯಲ್ಲಿ ಒಟ್ಟಾರೆಯಾಗಿ 5.31 ಕೋಟಿ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ.

''ಮೇ 10 ರಂದು ನಡೆಯುವ ಚುನಾವಣೆಯಲ್ಲಿ2,66,82,156 ಪುರುಷರು, 2,63,98,483 ಮಹಿಳೆಯರು, 4,927 ತೃತೀಯ ಲಿಂಗಿಗಳು ಹಾಗೂ 47,488 ಸೇವಾ ಮತದಾರರು ಒಳಗೊಂಡು ಒಟ್ಟು 5,31,33,054 ಮತದಾರರು ಮತದಾನ ಮಾಡಲು ಅರ್ಹರಾಗಿದ್ದಾರೆ..'' ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್‌ ಕುಮಾರ್‌ ಮೀನಾ ಮಾಹಿತಿ ನೀಡಿದ್ದಾರೆ.

ಈ ಚುನಾವಣೆಯಲ್ಲಿ ಹಾಲಿ 58,282 ಮತದಾನ ಕೇಂದ್ರಗಳ ಜೊತೆಗೆ, ಹೆಚ್ಚುವರಿ 263 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಅಂದರೆ ರಾಜ್ಯದಲ್ಲಿ ಒಟ್ಟು 58,545 ಮತದಾನ ಕೇಂದ್ರಗಳಿವೆ. 2018ರ ವಿಧಾನಸಭೆ ಚುನಾವಣೆಯಲ್ಲಿ56,696 ಮತಕೇಂದ್ರಗಳಿದ್ದವು. ಮತದಾರರ ಮನೆಮನೆಗೆ ಮತದಾರರ ಚೀಟಿ ಹಾಗೂ ಮತದಾರರ ಮಾರ್ಗದರ್ಶಿಯನ್ನು ಹಂಚಲು, ಚುನಾವಣಾ ಆಯೋಗ ಈಗಾಗಲೇ ಕ್ರಮ ತೆಗೆದುಕೊಂಡಿದೆ ಎಂದು ಮನೋಜ್‌ ಕುಮಾರ್‌ ಮೀನಾ ತಿಳಿಸಿದರು.

''ರಕ್ಷಣಾ ಪಡೆಗಳಲ್ಲಿಕೆಲಸ ಮಾಡುವವರು ಸೇರಿ ಒಟ್ಟು 47,488 ಸೇವಾ ಮತದಾರರಿದ್ದು, ಈ ಎಲ್ಲರಿಗೂ ಮಂಗಳವಾರವೇ (ಏ.25) ಎಲೆಕ್ಟ್ರಾನಿಕ್‌ ವಿಧಾನದಲ್ಲಿ ಮತಪತ್ರಗಳನ್ನು ಕಳಿಸಲಾಗಿದೆ. ಈ ಪೈಕಿ ಸುಮಾರು 20 ಸಾವಿರಕ್ಕೂ ಅಧಿಕ ಸೇವಾ ಮತದಾರರು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದವರೇ ಇರುವುದು ವಿಶೇಷವಾಗಿದೆ. ಅತೀ ಕಡಿಮೆ ಸೇವಾ ಮತದಾರರು ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ8 ಮಂದಿ ನೋಂದಣಿಯಾಗಿದ್ದಾರೆ..'' ಎಂದು ಮನೋಜ್‌ ಕುಮಾರ್‌ ಮೀನಾ ಹೇಳಿದರು.

ರಾಜ್ಯದಲ್ಲಿ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಎಲ್ಲಾ ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದು, ಮತದಾರರ ಮನವೋಲಿಸಲು ಮುಂದಾಗಿದ್ದಾರೆ. ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಅಬ್ಬರವೂ ಜೋರಾಗಿದೆ. ರಾಜ್ಯದಲ್ಲಿ ಈ ಬಾರಿ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮೇ13 ಕ್ಕೆ ಫಲಿತಾಂಶ ಹೊರ ಬೀಳಲಿದೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಇದೀಗ ಚುನಾವಣಾ ಸಮಯವಾಗಿದ್ದು, ಪ್ರಜಾಪ್ರಭುತ್ವದ ಸಾರ್ವತ್ರಿಕ ಹಬ್ಬ ಆಚರಣೆಗೆ ರಾಜ್ಯದ ಜನ ಸಂಪೂರ್ಣವಾಗಿ ಸಜ್ಜಾಗಿದ್ದಾರೆ ಎಂದು ಹೇಳಬಹುದು.

    ಹಂಚಿಕೊಳ್ಳಲು ಲೇಖನಗಳು