logo
ಕನ್ನಡ ಸುದ್ದಿ  /  ಕರ್ನಾಟಕ  /  Rahul Gandhi: ಮಂಗಳೂರಿನ ಸೀಫುಡ್‌ ರೆಸ್ಟೋರೆಂಟ್‌ನಲ್ಲಿ ಆಹಾರ ಸವಿದ ರಾಹುಲ್‌; ಪಬ್ಬಾಸ್‌ ಐಸ್‌ಕ್ರೀಮ್‌ ರುಚಿಗೆ ಮಾರುಹೋದ ಕೈ ನಾಯಕ

Rahul Gandhi: ಮಂಗಳೂರಿನ ಸೀಫುಡ್‌ ರೆಸ್ಟೋರೆಂಟ್‌ನಲ್ಲಿ ಆಹಾರ ಸವಿದ ರಾಹುಲ್‌; ಪಬ್ಬಾಸ್‌ ಐಸ್‌ಕ್ರೀಮ್‌ ರುಚಿಗೆ ಮಾರುಹೋದ ಕೈ ನಾಯಕ

Jayaraj HT Kannada

Apr 28, 2023 11:59 AM IST

google News

ಆಹಾರ ಸವಿಯುತ್ತಿರುವ ರಾಹುಲ್‌ ಗಾಂಧಿ

    • ಗಜಲೀ ಸೀಫುಡ್ ರೆಸ್ಟೊರೆಂಟ್‌ನಲ್ಲಿ ಊಟ ಮಾಡಿದ ರಾಹುಲ್‌ ಗಾಂಧಿ, ನಂತರ ಮಂಗಳೂರಿನ ಖ್ಯಾತ ಪಬ್ಬಾಸ್ ಐಸ್‌ಕ್ರೀಮ್‌ಗೆ ತೆರಳಿ ವಿಶೇಷ ರುಚಿಯ ಐಸ್‌ಕ್ರೀಮ್‌ ಸವಿದು ಖುಷಿಪಟ್ಟರು.
ಆಹಾರ ಸವಿಯುತ್ತಿರುವ ರಾಹುಲ್‌ ಗಾಂಧಿ
ಆಹಾರ ಸವಿಯುತ್ತಿರುವ ರಾಹುಲ್‌ ಗಾಂಧಿ

ಕರ್ನಾಟಕದಲ್ಲಿ ಮೇ 10ರಂದು ವಿಧಾನಸಭಾ ಚುನಾವಣೆ (Karnataka Election 2023) ನಡೆಯಲಿದೆ. ಈಗಾಗಲೇ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಗುರುವಾರ(ಏಪ್ರಿಲ್‌ 27) ದಿನಪೂರ್ತಿ ಚುನಾವಣಾ ಪ್ರಚಾರ ನಡೆಸಿದರು. ಭರ್ಜರಿ ಪ್ರಚಾರದ ಬಳಿಕ ಸಂಜೆ ವೇಳೆ ಕರಾವಳಿಯ ವಿಶೇಷ ಸ್ವಾದದ ಸಮುದ್ರಾಹಾರಕ್ಕೆ ಮನಸೋತರು. ಕೈ ನಾಯಕರೊಂದಿಗೆ ಮಂಗಳೂರಿನಲ್ಲಿ ಪ್ರಮುಖ ಸೀಫುಡ್‌ ರೆಸ್ಟೋರೆಂಟ್‌ನಲ್ಲಿ ಆಹಾರ ಸವಿದ ರಾಹುಲ್‌, ಬಳಿಕ ಪಬ್ಬಾಸ್‌ ಐಸ್‌ಕ್ರೀಮ್‌ ಸವಿದು ಖುಷಿಪಟ್ಟರು.

ಮೀನಿನ ಊಟಕ್ಕೆ ಮಂಗಳೂರು ಫೇಮಸ್.‌ ಅಂತೆಯೇ ಬಗೆಬಗೆಯ ಐಸ್‌ಕ್ರೀಮ್‌ ಉಣಬಡಿಸುವಲ್ಲೇ ಭಾರತದಲ್ಲೇ ಮಂಗಳೂರು ನಂಬರ್‌ ವನ್.‌ ಮಂಗಳೂರನ್ನು ಭಾರತದ ಐಸ್‌ಕ್ರೀಮ್‌ಗಳ ತವರು (Ice Cream Capital of India) ಎಂದು ಕರೆಯಲಾಗುತ್ತದೆ. ಮಂಗಳೂರಿಗೆ ಬಂದು ಸಮುದ್ರಾಹಾರ ಹಾಗೂ ಐಸ್‌ಕ್ರೀಮ್‌ ಸವಿಯದೆ ಇದ್ದರೆ, ಅ ಪ್ರಯಾಣ ಅಪೂರ್ಣ. ಹೀಗಾಗಿ ರಾಹುಲ್‌ ಗಾಂಧಿ ಅವರು ತಮ್ಮ ಪಕ್ಷದ ಇತರ ನಾಯಕರೊಂದಿಗೆ ಮಂಗಳೂರಿನಲ್ಲಿ ವಿಶೇಷ ಆಹಾರ ಹಾಗೂ ಪಬ್ಬಾಸ್‌ ಐಸ್‌ಕ್ರೀಮ್‌ ಸವಿದು ಖುಷಿಪಟ್ಟಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪಕ್ಷದ ಇತರ ನಾಯಕರೊಂದಿಗೆ ಪಕ್ಷದ ಹಿರಿಯ ನಾಯಕ ಐಸ್ ಕ್ರೀಮ್ ಸವಿಯುತ್ತಿರುವ ಫೋಟೋಗಳನ್ನು ಕಾಂಗ್ರೆಸ್ ಪಕ್ಷವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಮೊದಲು ಗಜಲೀ ಸೀಫುಡ್ ರೆಸ್ಟೊರೆಂಟ್‌ (Gajalee seafood restaurant)ನಲ್ಲಿ ಊಟ ಮಾಡಿದ ಅವರು, ನಂತರ ಮಂಗಳೂರಿನ ಖ್ಯಾತ ಪಬ್ಬಾಸ್ ಐಸ್‌ಕ್ರೀಮ್‌ (Pabba's ice cream) ಗೆ ತೆರಳಿ ಮಂಗಳೂರಿನ ವಿಶೇಷ ರುಚಿಯ ಐಸ್‌ಕ್ರೀಮ್‌ ಸವಿದು ಖುಷಿಪಟ್ಟರು.

"ಉತ್ಸಾಹ ಮತ್ತು ದಿನವೊಂದನ್ನು ಉತ್ತಮವಾಗಿ ಕಳೆದ ಬಳಿಕ, ತಂಡದೊಂದಿಗೆ ರುಚಿಕರವಾದ ಆಹಾರ ಮತ್ತು ಐಸ್ ಕ್ರೀಮ್‌ ಸವಿಯುವುದಕ್ಕಿಂತ ಉತ್ತಮ ಮಾರ್ಗ ಯಾವುದಿದೆ" ಎಂದು ಪಕ್ಷ ಟ್ವೀಟ್ ಮಾಡಿದೆ.

ಮಂಗಳೂರಿನಲ್ಲಿ ರ‍್ಯಾಲಿ ನಡೆಸಿದ ರಾಹುಲ್ ಗಾಂಧಿ, ನಂತರ ಉಡುಪಿಯಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದರು. ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಮಹಿಳೆಯರು ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಕಾಂಗ್ರೆಸ್ ಪಕ್ಷದ ಐದನೇ ಚುನಾವಣಾ ಭರವಸೆಯನ್ನು ರಾಹುಲ್ ಘೋಷಿಸಿದರು. ಮೀನುಗಾರರಿಗೆ 10 ಲಕ್ಷ ರೂಪಾಯಿ ವಿಮಾ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದರು.

ಮೀನನ್ನು ಮುಟ್ಟಿದ ನಂತರ ಅಲ್ಲಿನ ದೇವಸ್ಥಾನಕ್ಕೆ ಪ್ರವೇಶಿಸಲು ನಿರಾಕರಿಸಿದ ಕಾಂಗ್ರೆಸ್ ನಾಯಕ, ಅಲ್ಲಿನ ಜನರ ಹೃದಯ ಗೆದ್ದರು. ಉಡುಪಿಯಲ್ಲಿ ಮೀನುಗಾರ ಸಮುದಾಯದವರನ್ನು ಭೇಟಿಯಾಗಿ ಸ್ವಾಗತಿಸಿದ ಸಂದರ್ಭದಲ್ಲಿ ಸ್ಥಳೀಯರು ಅವರಿಗೆ ಅಂಜಲ್ ಮೀನನ್ನು ಉಡುಗೊರೆಯಾಗಿ ನೀಡಿದರು. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿದ ರಾಹುಲ್‌, ಒಳ ಪ್ರವೇಶಿಸಲು ನಿರಾಕರಿಸಿದರು. ದೇಗುಲದ ಆವರಣದ ಹೊರ ಭಾಗದಿಂದ ಪ್ರಾರ್ಥನೆ ಸಲ್ಲಿಸಿದರು.

ತಾನು ಮೀನನ್ನು ಮುಟ್ಟಿರುವ ಕಾರಣಕ್ಕೆ ದೇವಾಲಯ ಪ್ರವೇಶಿಸುತ್ತಿಲ್ಲ ಎಂದು ರಾಹುಲ್‌ ಅರ್ಚಕರಿಗೆ ತಿಳಿಸುತ್ತಿರುವುದು ವಿಡಿಯೋಗಳಲ್ಲಿ ಕಾಣಿಸುತ್ತಿದೆ. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸೇರಿದಂತೆ ರಾಜ್ಯದ ಕೆಲವು ನಾಯಕರು ಮಾಂಸಾಹಾರ ಸೇವನೆಯ ಬಳಿಕ ದೇವಸ್ಥಾನಗಳಿಗೆ ಪ್ರವೇಶಿಸಿದ ಘಟನೆ ನಡೆದಿತ್ತು. ಈ ನಡುವೆ ರಾಹುಲ್‌ ಗಾಂಧಿ ಮೀನು ಮುಟ್ಟಿರುವ ಕಾರಣಕ್ಕೆ ದೇವಸ್ಥಾನದ ಒಳ ಪ್ರವೇಶಿಸದೆ ಸ್ಥಳೀಯರ ಭಾವನೆಗಳಿಗೆ ಗೌರವ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ