EVM: ಕರ್ನಾಟಕ ಚುನಾವಣೆ; ಇವಿಎಂ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ ಎಂಬುದರ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ
May 08, 2023 05:39 PM IST
ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಹೇಗೆ ಕೆಲಸ ಮಾಡುತ್ತದೆ ಎಂಬುದರ ಮಾಹಿತಿ ಇಲ್ಲಿದೆ
ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹಾಗೂ ಹೈದರಾಬಾದ್‌ನ ಎಲೆಕ್ಟ್ರಾನಿಕ ಕಾರ್ಪೊರೇಷನ್ ಆಫ್ ಇಂಡಿಯಾ ಎರಡು ಸರ್ಕಾರಿ ಸಂಸ್ಥೆಗಳು ಇವಿಎಂಗಳ ಅಭಿವೃದ್ಧಿ ಮತ್ತು ವಿನ್ಯಾಸ ಮಾಡಿವೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election) ಈ ಬಾರಿ ಬರೋಬ್ಬರಿ 11 ಲಕ್ಷ ಯುವ ಮತದಾರರು (Young voters) ಮೊದಲ ಬಾರಿಗೆ ತಮ್ಮ ಹಕ್ಕ ಚಲಾಯಿಸಲಿದ್ದಾರೆ. ಎಷ್ಟೋ ಮಂದಿಗೆ ಮತದಾನದ ಪ್ರಕ್ರಿಯೆಗೆ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಜೊತೆಗೆ ಇವಿಎಂ ಬಗ್ಗೆಯೂ ಮಾಹಿತಿ ಇರುವುದಿಲ್ಲ.
ಇವಿಎಂ ಎಂದರೇನು, ಇದು ಹೇಗೆ ಕೆಲಸ ಮಾಡುತ್ತೆ. ಇದರ ನಿರ್ವಹಣೆ ಹೇಗೆ ಮಾಡುತ್ತಾರೆ ಎಂಬುದರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಇವಿಎಂ ಒಂದು ವಿದ್ಯುನ್ಮಾನ ಯಂತ್ರವಾಗಿದ್ದು, ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (Electronic Voting Machine) ಇದರ ವಿಸ್ತೃತ ರೂಪವಾಗಿದೆ. ಇವಿಎಂ ಬರುವುದಕ್ಕೆ ಮುಂಚೆ ಬ್ಯಾಲೇಟ್ ಪೇಪರ್ ಮೂಲಕ ಮತದಾನ ಮಾಡಲಾಗುತ್ತಿತ್ತು. ಬ್ಯಾಲೆಟ್ ಪೇಪರ್ ಮತದಾನದ ವೇಳೆ ಸಾಕಷ್ಟು ಮತಗಳು ಅಮಾನ್ಯವಾಗುತ್ತಿದ್ದವು. ಸರಿಯಾದ ರೀತಿಯಲ್ಲಿ ಗುರುತು ಹಾಕದೆ ಇರುವುದು ಸೇರಿದಂತೆ ಹಲವು ಸಮಸ್ಯೆಗಳು ಬ್ಯಾಲೆಟ್ ಮತದಾನದ ಪ್ರಕ್ರಿಯೆಯಲ್ಲಿ ಕಾಣಬಹುದಾಗಿತ್ತು. ಇಂತಹ ಸಮಸ್ಯೆಗಳ ನಿವಾರಣೆಗಾಗಿ ದೇಶದಲ್ಲಿ ಮತದಾನಕ್ಕಾಗಿ ಇವಿಎಂ ಯಂತ್ರವನ್ನು ಪರಿಚಯಿಸಲಾಗಿದೆ.
ಇವಿಎಂ ಬಳಸಿ ಹೇಗೆ ಮತದಾನ ಮಾಡುವುದು
ಮತಗಟ್ಟೆಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಅಧಿಕಾರಿಗಳು ಮೊದಲು ಮತದಾರನ ಹೆಸರನ್ನು ಖಾತ್ರಿ ಪಡಿಸಿಕೊಂಡು ಮತದಾನಕ್ಕೆ ಅವಕಾಶ ನೀಡುತ್ತಾರೆ. ನೀವು ಇವಿಎಂ ಬಳಿ ಹೋಗುತ್ತಿದ್ದಂತೆ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳು ಇರುತ್ತವೆ. ಅದರ ಪಕ್ಕದಲ್ಲೇ ನೀಲಿ ಬಣ್ಣದ ಬಟ್ (ಮೊಮೆಂಟರಿ ಸ್ವಿಚ್) ನೀಡಲಾಗಿರುತ್ತದೆ. ನಿಮಗೆ ಯಾವ ಅಭ್ಯರ್ಥಿಗೆ ಮತದಾನ ಮಾಡಬೇಕು ಅನಿಸುತ್ತದೆಯೋ ಆ ವ್ಯಕ್ತಿಯ ಚಿತ್ರ ಮತ್ತು ಚಿಹ್ನೆ ಮುಂದಿರುವ ನೀಲಿ ಬಟ್ ಒತ್ತ ಬೇಕು. ಆಗ ಒಂದು ಬೀಪ್ ಸೌಂಡ್ ಬರುತ್ತದೆ. ಆ ಬಳಿಕ ನಿಮ್ಮ ಮತದಾನ ಸಕ್ಸಸ್ ಆಗುತ್ತದೆ.
ಎಲೆಕ್ಟ್ರಾನಿಕ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಗಳು ನಿರ್ಮಿಸಿರುವ ಈ ಇವಿಎಂಗಳು ಬ್ಯಾಟರಿ ಚಾಲಿತ ಯಂತ್ರಗಳಾಗಿವೆ. ಹೀಗಾಗಿ ಇವುಗಳಿಗೆ ವಿದ್ಯುತ್‌ನ ಅಗತ್ಯ ಇರುವುದಿಲ್ಲ.
ಚುನಾವಣಾ ಆಯೋಗದ ತಾಂತ್ರಿಕ ತಜ್ಞರ ಸಮಿತಿ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಾದ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಹೈದರಾಬಾದ್‌ನ ಎಲೆಕ್ಟ್ರಾನಿಕ ಕಾರ್ಪೊರೇಷನ್ ಆಫ್ ಇಂಡಿಯಾ ಎರಡೂ ಸಂಸ್ಥೆಗಳು 1980-90ರಲ್ಲಿ ಇವಿಎಂಗಳ ಅಭಿವೃದ್ಧಿ ಮತ್ತು ವಿನ್ಯಾಸವನ್ನು ಮಾಡಿವೆ.
ಮತದಾನದ ವೇಳೆ ಇವಿಎಂ ಕೆಟ್ಟುಹೋದರೆ ಏನಾಗುತ್ತೆ
ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿರುವಾಗಲೇ ಇವಿಎಂ ಕೆಟ್ಟು ಹೋದರೆ ಬೇರೊಂದು ಇವಿಎಂಗೆ ಬದಲಾಯಿಸಿಕೊಂಡು ಮತದಾನವನ್ನು ಮುಂದುವರೆಸಬಹುದು. ಕೆಟ್ಟು ಹೋದ ಇವಿಎಂನಲ್ಲಿ ಮತಗಳು ಕಂಟ್ರೋಲ್ ಯೂನಿಟ್‌ನಲ್ಲಿ ಭದ್ರವಾಗಿರುತ್ತದೆ. ಪುನಃ ಆರಂಭದಿಂದ ಮತದಾನ ಮಾಡಬೇಕಾದ ಅಗತ್ಯ ಇರುವುದಿಲ್ಲ.
ಇವಿಎಂ ಯಂತ್ರಗಳು ಮತದಾನ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಮತ ಎಣಿಕೆಗೂ ಅನುಕೂಲವಾಗಿದೆ. ಅತಿ ಕಡಿಮೆ ಸಮಯದಲ್ಲಿ ಮತದಾನ ಹಾಗೂ ಮತ ಎಣಿಕೆ ಕಾರ್ಯವನ್ನು ಮಾಡಲು ಇದು ಅನುಕೂಲಕರಿಯಾಗಿದೆ. ಜೊತೆಗೆ ಪೇಪರ್ ಲೆಸ್ ಮತದಾನ ಆಗಿರುವುದರಿಂದ ಕಾಗದ, ಮುದ್ರಣ, ಸಾಗಣೆ, ಸಂಗ್ರಹ ಹಾಗೂ ಸಮಯವನ್ನು ಉಳಿಸಬಹುದಾಗಿದೆ.
ದೇಶದ ವಿವಿಧೆಡೆ ನಡೆದಿದ್ದ ವಿಧಾನಸಭೆ ಚುನಾವಣೆಗಳಲ್ಲಿ ಮೊದಲ ಬಾರಿಗೆ ಇವಿಎಂಗಳನ್ನು ಬಳಸಲಾಗಿತ್ತು. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯ 16 ವಿಧಾನಸಭಾ ಕ್ಷೇತ್ರಗಳಲ್ಲಿ ಇವಿಎಂ ಬಳಸಲಾಗಿತ್ತು. ಮತ್ತೊಂದು ವಿಶೇಷ ಎಂದರೆ ರಾಷ್ಟ್ರಪತಿ ಚುನಾವಣೆಗೆ ಇವಿಎಂ ಬಳಸುವುದಿಲ್ಲ. ವಿಶ್ವದತ ದೊಡ್ಡಣ್ಣ ಅಮೆರಿಕದಲ್ಲಿ ಇವಿಎಂ ಮತದಾನ ಇಲ್ಲ. ಅಲ್ಲಿ ಇಂದಿಗೂ ಬ್ಯಾಲೆಟ್ ಪೇಪರ್ ಮತದಾನ ಇದೆ.