ಕುಂದಗೋಳದಲ್ಲಿ ನಗ ನಗದು ಇರುವ ಬ್ಯಾಗ್ ಮಹಿಳೆಗೆ ಮರಳಿಸಿದ ರಾಜ್ಯ ರಸ್ತೆ ಸಾರಿಗೆ ಬಸ್ ಸಿಬ್ಬಂದಿ; ಪ್ರಾಮಾಣಿಕತೆಗೆ ಪ್ರಶಂಸೆ
Oct 21, 2024 09:33 AM IST
ಪ್ರಾಮಾಣಿಕತೆಗೆ ಪ್ರಶಂಸೆ: ಕುಂದಗೋಳದಲ್ಲಿ ನಗ ನಗದು ಇರುವ ಬ್ಯಾಗ್ ಮಹಿಳೆಗೆ ಮರಳಿಸಿದ ರಾಜ್ಯ ರಸ್ತೆ ಸಾರಿಗೆ ಬಸ್ ಸಿಬ್ಬಂದಿ
ಪ್ರಾಮಾಣಿಕವಾಗಿ ನಡೆದುಕೊಂಡಾಗ ಪ್ರಶಂಸೆ ವ್ಯಕ್ತವಾಗುವುದು, ವ್ಯಕ್ತಪಡಿಸಬೇಕಾದ್ದು ಕೂಡ ಅವಶ್ಯ. ಅಂತಹ ಒಂದು ಘಟನೆ ಕುಂದಗೋಳದಲ್ಲಿ ನಡೆದಿದೆ. ರಾಜ್ಯ ರಸ್ತೆ ಸಾರಿಗೆ ಬಸ್ ಸಿಬ್ಬಂದಿ, ತಮ್ಮ ಬಸ್‌ನಲ್ಲಿ ಪ್ರಯಾಣಿಸಿದ್ದ ಮಹಿಳೆ ಬಿಟ್ಟು ಹೋಗಿದ್ದ ಬ್ಯಾಗ್ ಅನ್ನು ವಾಪಸ್ ಒಪ್ಪಿಸಿ ಗಮನಸೆಳೆದಿದ್ದಾರೆ. ನಗ-ನಗದು ಇದ್ದ ಬ್ಯಾಗ್ ಆದ ಕಾರಣ ಅವರ ನಡೆ ಪ್ರಶಂಸೆಗೆ ಒಳಗಾಗಿದೆ.
ಕುಂದಗೋಳ: ಮಹಿಳಾ ಪ್ರಯಾಣಿಕರೊಬ್ಬರು ಬಸ್‌ನಲ್ಲಿ ಮರೆತು ಹೋಗಿದ್ದ ನಗ, ನಗದು ಇರುವ ಬ್ಯಾಗ್ ಅನ್ನು ಪುನಃ ಸುರಕ್ಷಿತವಾಗಿ ಅವರಿಗೆ ಒಪ್ಪಿಸುವ ಮೂಲಕ ರಾಜ್ಯ ರಸ್ತೆ ಸಾರಿಗೆ ಬಸ್ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರ ಈ ಪ್ರಾಮಾಣಿಕ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಮಹಿಳಾ ಪ್ರಯಾಣಿಕರು ತಮ್ಮ ಹಣ, ಬೆಳ್ಳಿ ಆಭರಣ ಮತ್ತು ಇತರೆ ವಸ್ತುಗಳಿದ್ದ ಬ್ಯಾಗ್ ಅನ್ನು ಬಸ್‌ನಲ್ಲೇ ಮರೆತು ಇಳಿದು ಹೋಗಿದ್ದರು. ಬ್ಯಾಗ್ ಗಮನಿಸಿದ ಸಾರಿಗೆ ಬಸ್ ನಿರ್ವಾಹಕ ಮತ್ತು ಚಾಲಕ ಬಳಿಕ ಅದನ್ನು ಸರಿಯಾದ ವಾರಸುದಾರರಿಗೆ ಒಪ್ಪಿಸಿ ಗಮನಸೆಳೆದಿದ್ದಾರೆ.
ಧಾರವಾಡದ ನವಲಗುಂದ ತಾಲೂಕು ಹಣಸಿ ಗ್ರಾಮದ ಕಮಲಾ ಎಂಬ ಮಹಿಳೆ ಈ ರೀತಿ ಕಳೆದುಕೊಂಡ ಬ್ಯಾಗ್ ಅನ್ನು ಪುನಃ ಪಡೆದುಕೊಂಢಿದ್ದಾರೆ. ಅವರು ಕುಂದಗೋಳ ತಾಲೂಕು ದೇವನೂರು ಗ್ರಾಮಕ್ಕೆ ತೆರಳಲು ಹುಬ್ಬಳ್ಳಿಯಿಂದ ಕುಂದಗೋಳ ಮಾರ್ಗವಾಗಿ ಸಾಗುವ ಯರಗುಪ್ಪಿ ಬಸ್‌ನಲ್ಲಿ ಪ್ರಯಾಣಿಸಿದ್ದರು. ನಿರ್ದಿಷ್ಟ ಸ್ಥಳದಲ್ಲಿ ಬಸ್ ಇಳಿಯುವಾಗ ಚೀಲ ಕೈಗೆತ್ತಿಕೊಳ್ಳುವುದನ್ನು ಮರೆತಿದ್ದರು. ಬಿಟ್ಟು ಹೋಗಿದ್ದ ಆ ಬ್ಯಾಗ್ ಅನ್ನು ಆರು ಗಂಟೆಗಳ ಬಳಿಕ ಪುನಃ ಕುಂದಗೋಳ ಬಸ್‌ನಿಲ್ದಾಣದಲ್ಲಿ ಅದೇ ಮಹಿಳೆಗೆ ವಾಪಸ್ ಕೊಟ್ಟಿದ್ದಾರೆ. ಬಸ್ ನಿರ್ವಾಹಕ ಶರೀಫ್ ಸಾಬ್ ನದಾಫ್ ಮತ್ತು ಚಾಲ್ ಬಸವಂತಪ್ಪ ಮಂಟೂರು ಅವರ ಈ ನಡೆ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.
ಪ್ರತ್ಯೇಕ ಪ್ರಕರಣ: 1.5 ಲಕ್ಷ ರೂ ಸಾಗವಾನಿ ವಶ
ಕಾತೂರ ವಲಯದ ಅರಣ್ಯಾಧಿಕಾರಿ ವಿರೇಶ್ ನೇತೃತ್ವದ ತಂಡ ಶನಿವಾರ ಭಾರಿ ಕಾರ್ಯಾಚರಣೆ ನಡೆಸಿ 1.5 ಲಕ್ಷ ರೂಪಾಯಿ ಮೌಲ್ಯದ ಸಾಗವಾನಿ ತುಂಡುಗಳನ್ನು ವಶಪಡಿಸಿಕೊಂಡಿದ್ದು, ಕಾಡುಗಳ್ಳನನ್ನು ಬಂಧಿಸಿದೆ.
ಚಿಪಗೇರಿ ಅರಣ್ಯ ಪ್ರದೇಶದಲ್ಲಿ ಯಲ್ಲಾಪುರ ತಾಲೂಕು ರಾಜೀವಾಡ ಗ್ರಾಮದ ಕಾಡುಗಳ್ಳ ಆರೋಪಿ ಜಾನು ಕೊಂಡು ಪಾಟೀಲ್ ಬ್ರಹತ್ ಒಣಗಿದ ಸಾಗವಾನಿ ಮರವನ್ನು ಕಡಿದು 6 ತುಂಡುಗಳಾಗಿ ಕತ್ತರಿಸಿ ದಾಸ್ತಾನು ಮಾಡಿರುವ ಮಾಹಿತಿ ಲಭ್ಯವಾಗಿತ್ತು. ಇದರಂತೆ, ಕಾರ್ಯಪ್ರವರ್ತರಾದ ಅರಣ್ಯಾಧಿಕಾರಿಗಳು ಆತನನ್ನು ಬಂಧಿಸಿ ದಾಸ್ತಾನು ಮಾಡಿಟ್ಟಿದ್ದ 1.5 ಲಕ್ಷ ರೂಪಾಯಿ ಮೌಲ್ಯದ ಸಾಗವಾನಿ ಕಟ್ಟಿಗೆ ವಶಪಡಿಸಿಕೊಂಡರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರತ್ಯೇಕ ಅಪಘಾತ : ಐವರ ದುರ್ಮರಣ
ಧಾರವಾಡ ಸಂಪಿಗೆ ನಗರದ ಬಳಿ ಹಾಗೂ ತಾರಿಹಾಳ ಕ್ರಾಸ್ ಬಳಿ ಬೈಪಾಸ್ನಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಐವರು ದುರ್ಮರಣಕ್ಕೊಳಗಾಗಿದ್ದಾರೆ. ತಾರಿಹಾಳ ಬೈಪಾಸ್‌ನಲ್ಲಿ ಮಧ್ಯರಾತ್ರಿ ನಂತರ ನಡೆದ ರಸ್ತೆ ಅಪಘಾತದಲ್ಲಿ ಕೊಲ್ಲಾಪುರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ವಾಹನಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಕುಂದಗೋಳದ ಕುಂಬಾರ ಓಣಿಯ ಇಬ್ಬರು ಮೃತ ಪಟ್ಟಿದ್ದಾರೆ. ಇನ್ನೊಂದು ಅಪಘಾತದಲ್ಲಿ ಧಾರವಾಡ ಸಂಪಿಗೆ ನಗರದ ಬಳಿ ಭಾನುವಾರ ಬೆಳಗಿನ ಜಾವ ಲಾರಿ ಮತ್ತು ಅಟೋ ಮುಖಾಮುಖಿ ಡಿಕ್ಕಿಯಾಗಿ ಮೂವರು ಅಸು ನೀಗಿದ್ದಾರೆ. ಇಂಟರ್ ಸಿಟಿ ರೈಲಿಗೆ ಪ್ರಯಾಣಿಕರನ್ನು ಬಿಡಲು ಹೋಗುತ್ತಿದ್ದ ಆಟೋ ರಿಕ್ಷಾ ರಸ್ತೆಯಲ್ಲಿ ಮಲಗಿದ್ದ ದನವನ್ನು ತಪ್ಪಿಸಲು ಹೋಗಿ ಲಾರಿಗೆ ಡಿಕ್ಕಿ ಹೊಡದು ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ಧಾರೆ. ಈ ದುರಂತದಲ್ಲಿ ರಮೇಶ ದುರ್ಗಪ್ಪ ಹಂಚಿನಮನಿ(36), ಮರೆವ್ವ ನಿಂಗಪ್ಪ ಹಂಚಿನಮನಿ(48) ಸ್ಥಳದಲ್ಲೇ ಮೃತ ಪಟ್ಟಿದ್ದು, ಪ್ರಣವ ರವಿ ಹಂಚಿನಮನಿ (6) ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ರೇಣುಕಾ, ಪ್ರಥ್ವಿ ಇನ್ನಿಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಅವರ ಸ್ಥಿತಿ ಸಹ ಚಿಂತಾಜನಕವಾಗಿದೆ. ಘಟನೆಯ ನಂತರ ಕೆಲಗೇರಿ ಕೆರೆ ಬ್ರಿಜ್ ಬಳಿ ಸ್ಥಳೀಯ ನಿವಾಸಿಗಳು ಧಾರವಾಡ- ಅಳ್ನಾವರ ರಸ್ತೆ ತಡೆ, ವಾಹನ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
(ವರದಿ- ಪ್ರಸನ್ನ ಕುಮಾರ್)