logo
ಕನ್ನಡ ಸುದ್ದಿ  /  ಕರ್ನಾಟಕ  /  ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ಡಿಸೆಂಬರ್ 2ಕ್ಕೆ ಮುಂದೂಡಿಕೆ; ಖುದ್ದು ಹಾಜರಿಗೆ ಹೈಕೋರ್ಟ್ ನೀಡಿದ್ದ ವಿನಾಯಿತಿ ಮುಂದುವರಿಕೆ

ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ಡಿಸೆಂಬರ್ 2ಕ್ಕೆ ಮುಂದೂಡಿಕೆ; ಖುದ್ದು ಹಾಜರಿಗೆ ಹೈಕೋರ್ಟ್ ನೀಡಿದ್ದ ವಿನಾಯಿತಿ ಮುಂದುವರಿಕೆ

Umesha Bhatta P H HT Kannada

Nov 29, 2024 12:34 AM IST

google News

ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ.

    • BS Yediyurappa in Posco Case: ಕರ್ನಾಟಕ ಮಾಜಿ ಸಿಎಂ ಯಡಿಯೂರಪ್ಪ ವಿರುದ್ದ ದಾಖಲಾಗಿರುವ ಪೋಕ್ಸೋ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ ಖುದ್ದು ಹಾಜರಾತಿ ವಿನಾಯಿತಿಯನ್ನು ನೀಡಿದೆ.
    • ವರದಿ: ಎಚ್‌.ಮಾರುತಿ, ಬೆಂಗಳೂರು
ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ.
ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ.

BS Yediyurappa in Posco Case: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕುರಿತು ತಮ್ಮ ವಿರುದ್ದ ದಾಖಲಾಗಿರುವ ಪೋಕ್ಸೋ ಪ್ರಕಣವನ್ನು ರದ್ದುಗೊಳಿಸುವಂತೆ ಬಿಜೆಪಿ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 2 ಸೋಮವಾರಕ್ಕೆ ಮುಂದೂಡಲಾಗಿದೆ. ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆಯನ್ನು ಮುಂದೂಡಿತು. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ರದ್ದುಕೋರಿ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು.

ಕೋರ್ಟ್‌ ವಿಚಾರಣೆ ಹೀಗಿತ್ತು

ಈ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್, ಪ್ರಕರಣ ಸಂಬಂಧ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಪೋಕ್ಸೋ ಕಾಯಿದೆಯ ಸೆ. 35ರ ಪ್ರಕಾರ, ಪ್ರಕರಣ ಸಂಬಂಧ ಮೂರು ತಿಂಗಳಲ್ಲಿ ಸಾಕ್ಷ್ಯಗಳನ್ನು ದಾಖಲಿಸಿಕೊಳ್ಳಬೇಕು. ವಿಳಂಬವಾದಲ್ಲಿ, ಅದಕ್ಕೆ ಸೂಕ್ತ ಕಾರಣವನ್ನು ವಿಶೇಷ ನ್ಯಾಯಾಲಯ ದಾಖಲಿಸಬೇಕು ಎಂದು ತಿಳಿಸಿದರು. ಆದರೆ, ಪ್ರಕರಣದ ಅರಿವಿಗೆ ಬಂದು 6 ತಿಂಗಳು ಕಳೆದಿದ್ದರೂ ಸಾಕ್ಷ್ಯಗಳನ್ನು ದಾಖಲಿಸಿಕೊಂಡಿಲ್ಲ. ಆದ್ದರಿಂದ ಅರ್ಜಿದಾರ ಆರೋಪಿ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದಕ್ಕೆ ವಿನಾಯಿತಿ ನೀಡಿರುವ ಈ ಹಿಂದಿನ ಮಧ್ಯಂತರ ಆದೇಶವನ್ನು ತೆರವುಗೊಳಿಸಬೇಕು ಎಂದು ಕೋರಿದರು.

ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ ನಾಗೇಶ್, ಅರ್ಜಿಗೆ ಸಂಬಂಧಿಸಿದಂತೆ ತಮ್ಮ ವಾದವನ್ನು ಡಿಸೆಂಬರ್ 2 ರಂದು ಪೂರ್ಣಗೊಳಿಸುವುದಾಗಿ ತಿಳಿಸಿದರು. ಇದಕ್ಕೆ ಒಪ್ಪಿದ ನ್ಯಾಯಾಧೀಶರು, ಅರ್ಜಿ ವಿಚಾರಣೆಯನ್ನು ಡಿಸೆಂಬರ್ 2, ಸೋಮವಾರಕ್ಕೆ ನಿಗದಿಪಡಿಸಿ ಅಂದೇ ತೀರ್ಮಾನ ತೆಗೆದುಕೊಳ್ಳಲಾಗುವುದಾಗಿ ತಿಳಿಸಿದರು.

ಹಾಗೆಯೇ ಅರ್ಜಿದಾರ ಯಡಿಯೂರಪ್ಪ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ನೀಡಿರುವ ವಿನಾಯಿತಿಯ ಆದೇಶವನ್ನು ನ್ಯಾಯಮೂರ್ತಿಗಳು ವಿಸ್ತರಿಸಿದರು.

ಏನಿದು ಪ್ರಕರಣ?

ತಮ್ಮ 17 ವರ್ಷದ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಯಡಿಯೂರಪ್ಪ ವಿರುದ್ಧ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ನ್ಯಾಯಕ್ಕಾಗಿ ಸಹಾಯ ಮಾಡುವಂತೆ ಕೋರಿ ಯಡಿಯೂರಪ್ಪ ಅವರ ಬಳಿ ಹೋಗಿದ್ದಾಗಿ ಆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ಮನೆಗೆ ತೆರಳಿ ಸಹಾಯ ಕೇಳಿದಾಗ ಅವರು ನನ್ನ ಪುತ್ರಿಯನ್ನು ಪ್ರತ್ಯೇಕ ಕೊಠಡಿಯೊಳಕ್ಕೆ ಕರೆದೊಯ್ದು ನನ್ನ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಒಂದಿಷ್ಟು ಹಣ ನೀಡಿದ್ದರು ಎಂದು ಸಂತ್ರಸ್ತ ಬಾಲಕಿಯ ತಾಯಿ ಆರೋಪಿಸಿದ್ದರು.

ನಂತರ ಸದಾಶಿವ ನಗರ ಪೊಲೀಸರು ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದರು. ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಿದ್ದರೂ ಯಡಿಯೂರಪ್ಪ ಗೈರು ಹಾಜರಾಗಿದ್ದರು. ಅಂತಿಮವಾಗಿ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಅವರ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯಡಿಯೂರಪ್ಪ ತಮ್ಮ ವಿರುದ್ಧ ದಾಖಲಾಗಿರುವ ದೂರು ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನಿರ್ದೇಶನದಂತೆ ಯಡಿಯೂರಪ್ಪ ಅವರು ಸಿಐಡಿ ಎದುರು ವಿಚಾರಣೆಗೆ ಹಾಜರಾಗಿದ್ದರು.

ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಅವರು ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಬಾಲಕಿಯ ತಾಯಿ ಉಸಿರಾಟದ ತೊಂದರೆಯಿಂದ ಮೇ 26, 2024ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವರದಿ: ಎಚ್‌.ಮಾರುತಿ, ಬೆಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ