Toll hike 2023: ಮತ್ತೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ದುಬಾರಿ, 5 ವರ್ಷಗಳಲ್ಲಿ ಕರ್ನಾಟಕದ ಜನ ಪಾವತಿಸಿದ ಟೋಲ್ ಎಷ್ಟು? ಓದಿ ಟೋಲಾಯಣ
Jun 14, 2023 12:18 PM IST
Toll hike 2023: ಮತ್ತೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ದುಬಾರಿ, 5 ವರ್ಷಗಳಲ್ಲಿ ಕರ್ನಾಟಕದ ಜನ ಪಾವತಿಸಿದ ಟೋಲ್ ಎಷ್ಟು? ಓದಿ ಟೋಲಾಯಣ
- Bengaluru Mysuru Expressway ಯಲ್ಲಿ ಸಂಚರಿಸುವವರಿಗೆ ಕಹಿ ಸುದ್ದಿ. ಬೆಂಗಳೂರು–ಮೈಸೂರು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸದ್ದಿಲ್ಲದೆ ಶೇ. 22 ರಷ್ಟು ಟೋಲ್ ಹೆಚ್ಚಳ ಮಾಡಿದೆ.ಇಂತಹ ಸಮಯದಲ್ಲಿ ಕರ್ನಾಟಕ ಮತ್ತು ಭಾರತದ ಸಮಗ್ರ ಟೋಲ್ ಸಂಗ್ರಹ ಚಿತ್ರಣವನ್ನು ಎಚ್‌ಟಿ ಕನ್ನಡದ ವರದಿಗಾರರಾದ ಎಚ್. ಮಾರುತಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಬೆಂಗಳೂರು: ಬೆಂಗಳೂರು–ಮೈಸೂರು ಹೆದ್ದಾರಿ (Bengaluru Mysuru Expressway) ಅಭಿವೃದ್ಧಿ ಪ್ರಾಧಿಕಾರ ಸದ್ದಿಲ್ಲದೆ ಶೇ. 22 ರಷ್ಟು ಟೋಲ್ ಹೆಚ್ಚಳ ಮಾಡಿದೆ. 30ರೂಪಾಯಿಯಿಂದ ರೂ. 200 ರವರಿಗೆ ಟೋಲ್ ಹೆಚ್ಚಾಗಿದೆ. ಈ ಟೋಲ್ ಹೆಚ್ಚಳವಾದ ನಂತರ ಬಳಕೆದಾರರ ಶುಲ್ಕ ಸಂಗ್ರಹ (Karnataka toll collection) ಕುರಿತು ಭಾರಿ ಚರ್ಚೆ ಆರಂಭವಾಗಿದೆ.
ಟೋಲ್ ಅನ್ನು ಯಾವ ಮಾನದಂಡದಲ್ಲಿ ಸಂಗ್ರಹ ಮಾಡಲಾಗುತ್ತದೆ, ಪ್ರತಿ ವರ್ಷ ಎಷ್ಟು ಹೆಚ್ಚಳ ಮಾಡಬೇಕು ಮತ್ತು ಜನರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಹೆದ್ದಾರಿಗೆ ಮತ್ತೆ ಶುಲ್ಕವನ್ನೇಕೆ ಪಾವತಿ ಮಾಡಬೇಕು ಎಂಬ ಚರ್ಚೆಗಳು ವಿಶೇಷವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಆರಂಭವಾಗಿದೆ. ಈ ಗೊಂದಲಕ್ಕೆ ತೆರೆ ಎಳೆಯುವ ಸಾಹಸವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇನೂ ಮಾಡುತ್ತಿಲ್ಲ. ಹಾಗಾಗಿ ಹೆದ್ದಾರಿ ಬಳಕೆದಾರರ ಶುಲ್ಕಕ್ಕೆ ಸಂಬಂಧಿಸಿದಂತೆ ಗೊಂದಲ ಮುಂದುವರಿದಿದೆ. ತೆರಿಗೆಯ ಮೇಲೆ ತೆರಿಗೆ ಮತ್ತು ಶುಲ್ಕ ವಿಧಿಸುವ ಕುರಿತು ಆಕ್ಷೇಪ ವ್ಯಕ್ತವಾಗುತ್ತಲೇ ಇದೆ.
ತೆರಿಗೆಯ ಮೇಲೆ ತೆರಿಗೆ ಮತ್ತು ಟೋಲ್
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸಿದ ಅಥವಾ ಪ್ರಾಧಿಕಾರದ ಗುತ್ತಿಗೆಯ ಆಧಾರದಲ್ಲಿ ಯಾವುದೇ ಖಾಸಗಿ ಕಂಪನಿ ನಿರ್ಮಿಸಿದ ನಾಲ್ಕು ಮತ್ತು ಅದಕ್ಕಿಂತಲೂ ಹೆಚ್ಚಿನ ಪಥದ ರಾಷ್ಟ್ರೀಯ ಹೆದ್ದಾರಿಗಳಿಗೆ ಮತ್ತು ಎಕ್ಸ್‌ಪ್ರೆಸ್ ಹೆದ್ದಾರಿಗಳಿಗೆ ಬಳಕೆದಾರರ ಶುಲ್ಕ ಸಂಗ್ರಹಿಸಲು ಅವಕಾಶ ಇದೆ. ಸರ್ಕಾರವೇ ಸಂಪೂರ್ಣ ಬಂಡವಾಳ ಹೂಡಿ ನಿರ್ಮಿಸಿದ್ದರೂ ಅಥವಾ ಖಾಸಗಿ ಕಂಪನಿಗಳು ಬಂಡವಾಳ ಹೂಡಿ, ಹೆದ್ದಾರಿ ನಿರ್ಮಿಸಿದ್ದರೂ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಬಹುದಾಗಿದೆ.
ಜನರ ತೆರಿಗೆ ಹಣದಲ್ಲಿ ಸರ್ಕಾರವೇ ನಿರ್ಮಿಸಿದ ಹೆದ್ದಾರಿಗೆ ಬಳಕೆದಾರರ ಶುಲ್ಕ ವಿಧಿಸುವುದನ್ನು ಪ್ರಶ್ನಿಸಿ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ಹಲವು ಅರ್ಜಿಗಳು ವಜಾ ಆಗಿದ್ದರೆ ಇನ್ನೂ ಕೆಲವು ವಿಚಾರಣಾ ಹಂತದಲ್ಲಿವೆ. ವಾಹನಗಳ ಮೇಲೆ ಹಲವು ಹಂತದಲ್ಲಿ ತೆರಿಗೆ ಮತ್ತು ಶುಲ್ಕ ಸಂಗ್ರಹ ಮಾಡಲಾಗುತ್ತದೆ. ಮತ್ತೆ ಟೋಲ್ ಸಂಗ್ರಹಿಸುವುದು ಹಗಲು ದರೋಡೆಯೇ ಸರಿ ಎಂದು ವಾದ ಮಂಡಿಸಲಾಗಿತ್ತು.
ದೇಶದಲ್ಲಿ ತಯಾರಾಗುವ ಪ್ರತಿ ವಾಹನದ ಎಕ್ಸ್‌ಷೋರೂಂ ಬೆಲೆಯಲ್ಲಿ ಜಿಎಸ್‌ಟಿ ಸೇರಿರುತ್ತದೆ. ಕಾರುಗಳ ಎಕ್ಸ್‌ಶೋರೂಂ ಬೆಲೆಯಲ್ಲಿ ಜಿಎಸ್‌ಟಿ ಮತ್ತು ಸೆಸ್‌ನ ಪ್ರಮಾಣ ಶೇ 28ರಿಂದ ಶೇ 48ರವರೆಗೂ ಇದೆ. ಕೆಲವು ಸ್ವರೂಪದ ವಾಹನಗಳ ಮೇಲೆ ಇಂತಹ ತೆರಿಗೆಯ ಪ್ರಮಾಣ ಶೇ 53ರವರೆಗೂ ಇದೆ. ಈ ತೆರಿಗೆಯನ್ನು ಒಳಗೊಂಡ ಎಕ್ಸ್‌ಷೋರೂಂ ಬೆಲೆಯ ಮೇಲೆ ಮತ್ತೆ ರಸ್ತೆ ತೆರಿಗೆ ವಿಧಿಸಲಾಗುತ್ತದೆ. ಅಂದರೆ 20ಲಕ್ಷ ರೂಪಾಯಿ ಬೆಲೆ ಬಾಳುವ ಕಾರಿನ ನಿಜವಾದ ಬೆಲೆ ಕೇವಲ 10 ಲಕ್ಷ ರೂಪಾಯಿ. ಉಳಿದ ಹತ್ತು ಲಕ್ಷ ಮೇಲೆ ಹೇಳಿದ ತೆರಿಗೆ ರೂಪದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಗ್ರಹಿಸುತ್ತವೆ.
ಇಲ್ಲಿ ತೆರಿಗೆಯ ಮೊತ್ತದ ಮೇಲೂ ತೆರಿಗೆ ಅನ್ವಯವಾಗುತ್ತದೆ. ವಾಹನಗಳ ಮಾರಾಟ ಬೆಲೆ ಆಧರಿಸಿ, ಹಲವು ಲಕ್ಷ ರೂಗಳಷ್ಟು ರಸ್ತೆ ತೆರಿಗೆ ಕಟ್ಟಬೇಕಾಗಿದೆ. ಜತೆಗೆ ಬಳಕೆದಾರರು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂಪಾಯಿ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 2 ರೂ.ಗಳಷ್ಟು ರಸ್ತೆ ಮೂಲಸೌಕರ್ಯ ಸೆಸ್. ಪಾವತಿಸಲಾಗುತ್ತಿದೆ. ಹೀಗೆ ವಾಹನ ಖರೀದಿಸುವಾಗ ಮತ್ತು ಆ ವಾಹನಗಳಿಗೆ ಇಂಧನ ತುಂಬಿಸುವಾಗ ರಸ್ತೆ ಅಭಿವೃದ್ಧಿಗೆಂದೇ ಪ್ರತ್ಯೇಕ ತೆರಿಗೆ ಮತ್ತು ಸೆಸ್ ಅನ್ನು ಪಾವತಿಸಲಾಗುತ್ತಿದೆ. ಆದರೂ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದು ನಿಲ್ಲಬೇಕು ಎಂದು ಈ ಅರ್ಜಿಗಳಲ್ಲಿ ವಾದಿಸಲಾಗಿತ್ತು.
ಟೋಲ್ ಜಾರಿಗೊಂಡಿದ್ದು ಯಾವಾಗ?
2008ರಲ್ಲಿ ಈ ಟೋಲ್ ಸಂಗ್ರಹ ನಿಯಮ ಜಾರಿಗೆ ಬಂದಿತು. ಆಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೀಪು/ಕಾರು/ವ್ಯಾನ್‌ಗಳಿಗೆ ಪ್ರತಿ ಕಿ.ಮೀ.ಗೆ 60 ಪೈಸೆಯಂತೆ ಶುಲ್ಕ ವಿಧಿಸಬಹುದು. ಮತ್ತು ಪ್ರತಿ ವರ್ಷ ಇದು ಶೇ. 3ರ ದರದಲ್ಲಿ ಏರಿಕೆಯಾಗಬೇಕು ಎಂಬ ನಿಯಮವಿತ್ತು. ಈಗ ಪ್ರತಿ ಕಿ.ಮೀ. ಹೆದ್ದಾರಿಗೆ ಪಾವತಿಸುವ ಶುಲ್ಕವು ಪೈಸೆಗಳಿಂದ ಹಲವು ರೂಪಾಯಿಗಳಿಗೆ ಬಂದು ನಿಂತಿದೆ. ಜತೆಗೆ ಹೆದ್ದಾರಿಗಳಲ್ಲಿ ನಿರ್ಮಿಸಿರುವ ಸೇತುವೆಗಳು, ಅಂಡರ್‌ಪಾಸ್, ಸುರಂಗಗಳ ಸಂಖ್ಯೆಯ ಆಧಾರದಲ್ಲಿ ಪ್ರತಿ ಹೆದ್ದಾರಿಯಲ್ಲಿ ಒಂದು ಕಿ.ಮೀ.ಗೆ ವಿಧಿಸಲಾಗುವ ಶುಲ್ಕದಲ್ಲಿ ವ್ಯತ್ಯಾಸವಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ಶುಲ್ಕ ವಿಧಿಸಬಾರದು ಎಂದು ನಿಯಮಾವಳಿ ರೂಪಿಸಿದೆ. ಆದರೆ ಅಷ್ಟಾಗಿ ಪಾಲನೆಯಾಗುತ್ತಿಲ್ಲ. ಉದಾಹರಣೆಗೆ ಹೆದ್ದಾರಿಯ ಒಟ್ಟು ಉದ್ದದ ಶೇ 75ರಷ್ಟು ಕಾಮಗಾರಿ ಪೂರ್ಣಗೊಳ್ಳದೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಹೆದ್ದಾರಿಗೆ ಸಮನಾಂತರವಾಗಿ ಸರ್ವಿಸ್ ರಸ್ತೆಗಳು ಮತ್ತು ಪರ್ಯಾಯ ರಸ್ತೆಗಳು ಇಲ್ಲದೇ ಇದ್ದರೆ, ಸ್ಥಳೀಯ ವಾಹನಗಳಿಗೆ ಶುಲ್ಕ ವಿಧಿಸುವಂತಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎರಡು ಟೋಲ್ ಘಟಕಗಳ ಮಧ್ಯೆ, ಹೆದ್ದಾರಿಗೆ ಪ್ರವೇಶಿಸಿ–ನಿರ್ಗಮಿಸಿದರೆ ಶುಲ್ಕ ವಿಧಿಸುವಂತಿಲ್ಲ. ಶುಲ್ಕ ಸಂಗ್ರಹ ಒಪ್ಪಂದದ ಅವಧಿ ಮುಗಿದ ನಂತರ ಶುಲ್ಕ ವಿಧಿಸುವಂತಿಲ್ಲ.
ಯಾವುದೇ ಹೆದ್ದಾರಿಯ ನಿರ್ಮಾಣಕ್ಕೆ ವೆಚ್ಚವಾದ ಮೊತ್ತವು ಬಳಕೆದಾರರ ಶುಲ್ಕದ ಮೂಲಕ ವಸೂಲಿಯಾದ ನಂತರ, ಶುಲ್ಕವನ್ನು ಶೇ. 60ರಷ್ಟು ಕಡಿತ ಮಾಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳು ಹೇಳುತ್ತವೆ. ಉದಾಹರಣೆಗೆ ಒಂದು ಹೆದ್ದಾರಿಯಲ್ಲಿ ನಿಗದಿತ ದೂರವನ್ನು ಕ್ರಮಿಸಲು 100 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು ಎಂದು ಪರಿಗಣಿಸಿದರೆ, ಕಾಮಗಾರಿಯ ವೆಚ್ಚ ಸಂಪೂರ್ಣವಾಗಿ ವಸೂಲಿಯಾದ ನಂತರ ಶುಲ್ಕವನ್ನು 40ರೂಗಳಿಗೆ ಇಳಿಸಬೇಕು. ಆದರೆ, ಕಾಮಗಾರಿಯ ವೆಚ್ಚ ವಸೂಲಿಯಾಗಿದೆಯೇ ಎಂಬ ಮಾಹಿತಿಯನ್ನು ಬಹಿರಂಗಪಡಿಸುವ ವ್ಯವಸ್ಥೆ ಇಲ್ಲ. ಹೀಗಾಗಿ ಶುಲ್ಕವನ್ನು ಇಳಿಸಿ ಎಂದು ಆಗ್ರಹಿಸುವ ಅವಕಾಶ ಇಲ್ಲವಾಗಿದೆ.
ದೇಶದ ಟೋಲ್ ಪಿತಾಮಹ ಇವರೇ ...
ಮುಂಬಯಿ ಪೂನಾ ರಸ್ತೆಯೇ ಮೊದಲ ಟೋಲ್ ಸಂಗ್ರಹ ರಸ್ತೆಯಾಗಿದೆ. ಈಗಿನ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ 90ರ ದಶಕದಲ್ಲಿ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿದ್ದ ಅವಧಿಯಲ್ಲಿ ಈ ರಸ್ತೆ ನಿರ್ಮಾಣ ಆರಂಭವಾಯಿತು. 1630 ಕೋಟಿ ರೂ ವೆಚ್ಚದ ಈ ರಸ್ತೆ ನಿರ್ಮಾಣ ಮುಗಿದಿದ್ದು 2002 ರಲ್ಲಿ. ನಂತರ ಈ ರಸ್ತೆಗೆ ಟೋಲ್ ಸಂಗ್ರಹ ಆರಂಭವಾಯಿತು. 95 ಕಿಲೋಮೀಟರ್ ಉದ್ದದ 6 ಪಥಗಳ ಈ ಮಾರ್ಗವು ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ ಸಿದ್ಧ ಮಾದರಿಯೊಂದನ್ನು ಒದಗಿಸಿತ್ತು. ಅಲ್ಲಿಂದೀಚೆಗೆ ದೇಶಾದ್ಯಂತ ಟೋಲ್ ರಸ್ತೆಗಳ ನಿರ್ಮಾಣ ಆರಂಭವಾಯಿತು. ನಂತರ ಅವರು ವಾಜಪೇಯಿ ಸಂಪುಟದಲ್ಲಿ ಇದೇ ಖಾತೆ ನಿರ್ವಹಿಸಿ ದೇಶಾದ್ಯಂತ ಟೋಲ್ ರಸ್ತೆಗಳನ್ನು ನಿರ್ಮಿಸಿದರು. ಒಳ್ಳೆಯದೋ ಕೆಟ್ಟದ್ದೋ ಟೋಲ್ ರಸ್ತೆಗಳ ಪಿತಾಮಹ ನಾನೇ ಎಂದು ಲೋಕಸಭೆಯಲ್ಲಿ ಕಳೆದ ವರ್ಷ ಹೇಳಿಕೊಂಡಿದ್ದರು.
ಕರ್ನಾಟಕದ ಜನ ಕಟ್ಟಿದ ಟೋಲ್ ಎಷ್ಟು?
2018ರಿಂದ 2022ರ ವರೆಗೆ ಕರ್ನಾಟಕದ ಜನತೆ ಸುಮಾರು 10,000 ಕೋಟಿ ರೂಪಾಯಿ ಟೋಲ್ ರೂಪದಲ್ಲಿ ಕಟ್ಟಿದ್ದಾರೆ. ಇಡೀ ದೇಶದಲ್ಲಿ ಇದೇ ಅವಧಿಯಲ್ಲಿ 1.5 ಲಕ್ಷ ಕೋಟಿ ಪಾವತಿ ಮಾಡಿದ್ದಾರೆ.
ಕರ್ನಾಟಕದಲ್ಲಿ 2018-19ರಲ್ಲೂ 1,830.1 ಕೋಟಿ ರೂಪಾಯಿ, 2019-20 ರಲ್ಲಿ 1,814.3 ಕೋಟಿ ರೂಪಾಯಿ, 2020-21 ರಲ್ಲಿ 1,800 ಕೋಟಿ ರೂಪಾಯಿ, 2021-22 ರಲ್ಲೂ 2,269.2 ಕೋಟಿ ರೂಪಾಯಿ ಮತ್ತು 2022-23ರಲ್ಲಿ 2,268.9 ಕೋಟಿ ರೂಪಾಯಿ ಟೋಲ್ ಪಾವತಿ ಮಾಡಿದ್ದಾರೆ.
ಬೆಂಗಳೂರು–ಮೈಸೂರು ಟೋಲ್ ದುಬಾರಿ?
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸವಲತ್ತುಗಳ ಕೊರತೆ ಚರ್ಚೆಯಾಗುತ್ತಿದೆ. ಈಚೆಗಷ್ಟೇ ಉದ್ಘಾಟನೆಯಾಗಿರುವ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕಾರಿಗೆ ರೂಪಾಯಿ 165 ಶುಲ್ಕ ವಿಧಿಸಲಾಗುತ್ತಿದೆ. ಈ ಪ್ರಕಾರ 117 ಕಿ.ಮೀ. ಉದ್ದದ ಈ ಹೆದ್ದಾರಿಯಲ್ಲಿ ಪ್ರಯಾಣಿಸಲು ಪ್ರತಿ ಕಿ.ಮೀ. 1.25 ರೂಪಾಯಿ ಶುಲ್ಕ ಪಾವತಿಸಿದಂತಾಗುತ್ತದೆ. ಆದರೆ, ಈ ಶುಲ್ಕವು ಪಾರದರ್ಶಕವಾಗಿಲ್ಲ. ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಲಭ್ಯವಿರುವಂತಹ ಎಲ್ಲಾ ಅತ್ಯಾಧುನಿಕ ಸೌಲಭ್ಯವೂ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಇಲ್ಲ.
ದೇಶದ ದುಬಾರಿ ಟೋಲ್ ಹೆದ್ದಾರಿ ಇದೇ...
ಯಮುನಾ ಎಕ್ಸ್‌ಪ್ರೆಸ್‌ವೇ ದೇಶದ ಅತ್ಯಂತ ದುಬಾರಿ ಎಕ್ಸ್‌ಪ್ರೆಸ್‌ವೇ ಎನಿಸಿದೆ. ಏಕೆಂದರೆ ಅಲ್ಲಿ ಲಭ್ಯವಿರುವ ಸವಲತ್ತುಗಳೂ ಗುಣಮಟ್ಟ ಹೊಂದಿವೆ. ದೆಹಲಿ–ಆಗ್ರಾ ನಡುವಿನ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯು ಸುರಕ್ಷಿತ ಪ್ರಯಾಣ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ದೇಶದ ಗಮನ ಸೆಳೆದಿದೆ. 2012ರಲ್ಲಿ ನಿರ್ಮಾಣವಾದ ಈ ಎಕ್ಸ್‌ಪ್ರೆಸ್ ಹೆದ್ದಾರಿಯು 165 ಕಿಲೋಮೀಟರ್ ಉದ್ದವಿದ್ದು, ಸುಮಾರು 2 ಗಂಟೆಗಳಲ್ಲಿ ಈ ದೂರವನ್ನು ಕ್ರಮಿಸಬಹುದಾಗಿದೆ. ಈ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಪ್ರತೀ ಕಿಲೋಮೀಟರ್ ಪ್ರಯಾಣಕ್ಕೆ ಕಾರುಗಳಿಗೆ ಸರಿಸುಮಾರು 2.52 ರೂಪಾಯಿ ಟೋಲ್ ಸಂಗ್ರಹಿಸಲಾಗುತ್ತದೆ.
ಸುರಕ್ಷಿತವಾಗಿ ಪ್ರಯಾಣಕ್ಕೆ ಸಾಧ್ಯವಾಗುವ ಎಲ್ಲ ಸವಲತ್ತುಗಳನ್ನು ಕಲ್ಪಿಸಿರುವುದು ಈ ಹೆದ್ದಾರಿಯ ವಿಶೇಷತೆ. ರಿಪೇರಿ, ಅಪಘಾತದ ಸಮಯದಲ್ಲಿ, ರಸ್ತೆ ಮಧ್ಯದ ವಿಭಜಕದ ಒಂದು ಭಾಗವನ್ನು ತೆರವು ಮಾಡಿ, ಅದರ ಮೂಲಕ ವಾಹನಗಳನ್ನು ಸಾಗುವಂತೆ ಮಾಡಿ ದಟ್ಟಣೆ ಆಗದಂತೆ ನೋಡಿಕೊಳ್ಳುವ ವ್ಯವಸ್ಥೆಯಿದೆ. ಪ್ರತೀ ಐದು ಕಿಲೋಮೀಟರ್‌ಗೆ ಒಂದು ಕಡೆ ಈ ರೀತಿ ವಿಭಜಕಗಳನ್ನು ತಾತ್ಕಾಲಿಕವಾಗಿ ತೆರೆಯಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ. ಪ್ರಯಾಣಿಕರಿಗೆ ಮಾಹಿತಿ ನೀಡಲು ಆದ್ಯತೆ ನೀಡಲಾಗಿದೆ. ಸುಮಾರು 12 ಮೀಟರ್ ಅಗಲದ ಫಲಕಗಳಲ್ಲಿ ಮಳೆ ಸಾಧ್ಯತೆ, ಬಿಸಿಲು ಹೆಚ್ಚಳದಂತಹ ತಾಪಮಾನ ಬದಲಾವಣೆಯ ಮಾಹಿತಿಯನ್ನೂ ನೀಡಲಾಗುತ್ತದೆ. ವಾಹನಗಳ ವೇಗ ಮಿತಿ, ದಟ್ಟಣೆ, ತಿರುವು ಹಾಗೂ ರಸ್ತೆ ಬಳಕೆಯ ಸೂಚನೆಗಳನ್ನು ನೀಡಲಾಗುತ್ತಿದೆ. ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲಿ ಲೋಹದ ತಡೆಗೋಡೆಗಳನ್ನು ಅಳವಡಿಸಲಾಗಿದೆ. ಈ ಹೆದ್ದಾರಿ ಗುಣಮಟ್ಟ ಎಷ್ಟಿದೆಯೆಂದರೆ, ಈ ಮಾರ್ಗವನ್ನು ರನ್‌ವೇ ರೀತಿ ಬಳಸಿಕೊಂಡು ಯುದ್ಧ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ. ಹೆದ್ದಾರಿಯ ಹಲವು ಕಡೆಗಳಲ್ಲಿ ಪ್ರಥಮ ಚಿಕಿತ್ಸೆ ನೀಡುವ ಟ್ರಾಮ ಸೆಂಟರ್ ಸ್ಥಾಪಿಸಲಾಗಿದೆ. ಎಲ್ಲ ಟ್ರಾಮ ಸೆಂಟರ್ ಹಾಗೂ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಆಂಬ್ಯುಲೆನ್ಸ್ ಒದಗಿಸಲಾಗಿದೆ. ಸರಿಸುಮಾರು 50 ಕಿಲೋಮೀಟರ್ ಅಂತರದಲ್ಲಿ ಒಂದು ಟ್ರಾಮ ಸೆಂಟರ್ ಇರುವಂತೆ ನೋಡಿಕೊಳ್ಳಲಾಗಿದೆ.
ವಿಶೇಷ ಲೇಖನ: ಎಚ್. ಮಾರುತಿ