ಕನ್ನಡ ಸುದ್ದಿ  /  ಕರ್ನಾಟಕ  /  Assembly Session: ಜುಲೈ 3ರಿಂದ ಅಧಿವೇಶನ, ಶಾಸಕರ ಹಕ್ಕುಗಳು, ಏನು ಪ್ರಶ್ನೆ ಕೇಳಬಹುದು, ಕಾರ್ಯಕಲಾಪ ಹೇಗೆ ನಡೆಯುತ್ತದೆ? ಇಲ್ಲಿದೆ ವಿವರ

Assembly Session: ಜುಲೈ 3ರಿಂದ ಅಧಿವೇಶನ, ಶಾಸಕರ ಹಕ್ಕುಗಳು, ಏನು ಪ್ರಶ್ನೆ ಕೇಳಬಹುದು, ಕಾರ್ಯಕಲಾಪ ಹೇಗೆ ನಡೆಯುತ್ತದೆ? ಇಲ್ಲಿದೆ ವಿವರ

Karnataka Assembly Session July 2023: 16ನೇ ವಿಧಾನಸಭೆಯ ಅಧಿವೇಶನ ಸೋಮವಾರ, ದಿ. 3ನೇ ಜುಲೈ 2023ರಂದು ಅಪರಾಹ್ನ 12.00 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಆರಂಭವಾಗಲಿದೆ. 16 ನೇ ವಿಧಾನ ಸಭೆಯ ಮೊದಲನೇ ಅಧಿವೇಶನ ಇದಾಗಿದೆ.

ವಿಧಾನಸೌಧ
ವಿಧಾನಸೌಧ

ಬೆಂಗಳೂರು: 16ನೇ ವಿಧಾನಸಭೆಯ ಅಧಿವೇಶನ ಸೋಮವಾರ, 3ನೇ ಜುಲೈ 2023ರಂದು ಅಪರಾಹ್ನ 12.00 ಗಂಟೆಗೆ (Assembly Session July 2023) ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಆರಂಭವಾಗಲಿದೆ. 16 ನೇ ವಿಧಾನ ಸಭೆಯ ಮೊದಲನೇ ಅಧಿವೇಶನ ಇದಾಗಿದೆ. ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಅಧಿವೇಶನದ ಕಾರ್ಯಕಲಾಪಗಳು ಜುಲೈ 3 ರಿಂದ 14 ರವರೆಗೆ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಅಧಿವೇಶನದ ಕಾರ್ಯಕಲಾಪಗಳು ಹೇಗೆ ನಡೆಯುತ್ತವೆ ಗೊತ್ತೇ?

ಶಾಸಕರಿಗೆ ರಾಜ್ಯದ ವಿಷಯಗಳನ್ನು ಕುರಿತು ಮತ್ತು ತಮ್ಮ ತಮ್ಮ ಕ್ಷೇತ್ರದ ಸಮಸ್ಯೆ ಮತ್ತು ಬೇಡಿಕೆಗಳನ್ನು ಪ್ರಸ್ತಾಪಿಸಲು ಅವಕಾಶವಿರುತ್ತದೆ. ಆಡಳಿತ ಮತ್ತು ವಿರೋಧ ಪಕ್ಷಗಳ ಶಾಸಕರಿಗೆ ಸಮಾನವಾದ ಅವಕಾಶಗಳಿರುತ್ತವೆ. ಎಲ್ಲ ಶಾಸಕರು ಪ್ರಶ್ನೆಗಳನ್ನು ಕೇಳುವುದರಿಂದ ಹಿಡಿದು ಚರ್ಚೆಯಲ್ಲಿ ಭಾಗವಹಿಸುವವರೆಗೆ ಹಲವಾರು ಹಕ್ಕುಗಳು ಶಾಸನಬದ್ಧವಾಗಿ ಲಭ್ಯವಾಗಿರುತ್ತವೆ.

ಸದನದ ಒಳಗೆ ನಡೆಯುವ ಪ್ರತಿಯೊಂದು ನಡಾವಳಿಯೂ ದಾಖಲೆಗೆ ಹೋಗುತ್ತದೆ. ಹಾಗಾಗಿ ಆಡಳಿತ ಮತ್ತು ವಿಪಕ್ಷಗಳು ಆಸಕ್ತಿ ಮತ್ತು ಎಚ್ಚರಿಕೆಯಿಂದ ಪಾಲ್ಗೊಳ್ಳುತ್ತವೆ.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿ ಪಕ್ಷಗಳ ಸದಸ್ಯರು ತುದಿಗಾಲಲ್ಲಿ ನಿಂತಿರುತ್ತಾರೆ. ಹಾಗಾಗಿ ಸರಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಪರಿಸ್ಥಿತಿ ಇರುತ್ತದೆ.

ಕಾರ್ಯಕಲಾಪಗಳು ಯಾವುವು ?

ಪ್ರಶ್ನೋತ್ತರ (ನಿಯಮ 42, 45), ಅರ್ಧ ಗಂಟೆ ಕಾಲಾವಧಿ ಚರ್ಚೆ (ನಿಯಮ 59), ಶೂನ್ಯ ವೇಳೆ (ನಿಯಮ 59ಎ, ಬಿ, ಸಿ ಮತ್ತು ಡಿ), ನಿಲುವಳಿ ಸೂಚನೆ (ನಿಯಮ 60), ಗಮನ ಸೆಳೆಯುವ ಸೂಚನೆಗಳನ್ನು ಕುರಿತು (ನಿಯಮ 73) ಕಲಾಪಗಳು ನಡೆಯುತ್ತವೆ.

1.ಪ್ರಶ್ನೋತ್ತರ

ಶಾಸಕರು ಸಾರ್ವಜನಿಕ ಹಿತದೃಷ್ಟಿಯ ಪ್ರಶ್ನೆಗಳನ್ನು ಕೇಳಲು ಅವಕಾಶವಿರುತ್ತದೆ. ಅದಕ್ಕೂ ಮುನ್ನ ಶಾಸಕರು ಪ್ರಶ್ನೆಗಳನ್ನು ವಿಧಾನಸಭೆ ಕಾರ್ಯದರ್ಶಿ ಗಳಿಗೆ ನಿಗಧಿತ ಅವಧಿಯೊಳಗೆ ಕಳುಹಿಸಬೇಕು.

ದಿನವೊಂದಕ್ಕೆ ಗರಿಷ್ಠ 5 ಪ್ರಶ್ನೆಗಳನ್ನು ನೀಡಲು ಶಾಸಕರಿಗೆ ಅವಕಾಶವಿರುತ್ತದೆ.

ಪ್ರಶ್ನೆಗಳನ್ನು ಕೇಳುವ ದಿನಾಂಕಕ್ಕೂ 15 ದಿನ ಮುಂಚಿತವಾಗಿ ಪ್ರಶ್ನೆಗಳನ್ನು ಕಳುಹಿಸಬೇಕು. ಅಂದರೆ ಪ್ರಶ್ನೋತ್ತರ ಆರಂಭವಾಗುವ ಜುಲೈ 4ರಂದು ಕೇಳಬಯಸುವ ಪ್ರಶ್ನೆಗಳನ್ನು ಜೂನ್ 16 ರೊಳಗೆ ಕಳುಹಿಸಬೇಕು. ಆ ಪ್ರಶ್ನೆಗಳನ್ನು ಜೂನ್ 21ರಂದು ಕಾರ್ಯದಶಿಗಳ ಕಚೇರಿಯಲ್ಲಿ ಆಯ್ಕೆ ಮಾಡಲಾಗುತ್ತದೆ.

2. ಅರ್ಧ ಗಂಟೆ ಕಾಲಾವಧಿ ಚರ್ಚೆ (ನಿಯಮ 59)

ಶಾಸಕರ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಿದ ಅಥವಾ ಮಂಡನೆ ಮಾಡಿದ ಉತ್ತರಗಳಿಂದ ಉದ್ಭವಿಸಿದ ವಿಷಯಗಳನ್ನು ಚರ್ಚಿಸುವ ಸಲುವಾಗಿ ಅಥವಾ ಉತ್ತರಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ವಿವರಣೆ ಬೇಕಾದಲ್ಲಿ ಶಾಸಕರು ಅರ್ಧ ಗಂಟೆ ಕಾಲಾವಧಿ ಚರ್ಚೆಯ ಸೂಚನೆಗಳನ್ನು ನೀಡಲು ಅವಕಾಶವಿರುತ್ತದೆ. ಅರ್ಧ ಗಂಟೆ ಕಾಲಾವಧಿಯ ಸೂಚನಾ ಪತ್ರವನ್ನು ಮೂರು ದಿನ ಮುಂಚಿತವಾಗಿಯೇ ಕಾರ್ಯದರ್ಶಿಯವರಿಗೆ ನೀಡಬೇಕಾಗಿರುತ್ತದೆ.

3. ಶೂನ್ಯ ವೇಳೆ (ನಿಯಮ 59)

ಅಧಿವೇಶನದ ಅವಧಿಯಲ್ಲಿ ಸಂಭವಿಸಿದ ಸಾರ್ವಜನಿಕ ಮಹತ್ವವುಳ್ಳ ಯಾವುದೇ ಘಟನಾವಳಿಯನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ, ಶೂನ್ಯ ವೇಳೆಯ ಸೂಚನೆಗಳನ್ನು ನೀಡಲು ಶಾಸಕರಿಗೆ ಅವಕಾಶವಿರುತ್ತದೆ. ಒಂದು ದಿನಕ್ಕೆ ಒಂದು ಶೂನ್ಯ ವೇಳೆಯ ಸೂಚನೆಯನ್ನು ಮಾತ್ರ ನೀಡಲು ಅವಕಾಶವಿರುತ್ತದೆ.

4. ನಿಲುವಳಿ ಸೂಚನೆ (ನಿಯಮ 60)

ಭಾರತ ಸಂವಿಧಾನದ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸರ್ಕಾರ

ವಿಫಲವಾದ ನಿರ್ದಿಷ್ಟ ವಿಷಯ, ಸಾರ್ವಜನಿಕವಾಗಿ ಅತ್ಯಂತ ಮಹತ್ವವಾದ ಮತ್ತು ಜರೂರಾದ ವಿಷಯಗಳನ್ನು ನಿಲುವಳಿ ಸೂಚನೆಯ ರೂಪದಲ್ಲಿ ಪ್ರಸ್ತಾಪ ಮಾಡಲು ಶಾಸಕರಿಗೆ ಅವಕಾಶವಿರುತ್ತದೆ.

5. ನಿಯಮ 69ರ ಸೂಚನೆಗಳು

ಇತ್ತೀಚೆಗೆ ಜರುಗಿದ ಸಾರ್ವಜನಿಕ ಮಹತ್ವವುಳ್ಳ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸುವ

ಸಲುವಾಗಿ ಈ ನಿಯಮದಡಿ ಶಾಸಕರು ಸೂಚನೆಗಳನ್ನು ನೀಡಬಹುದಾಗಿರುತ್ತದೆ.

6. ಗಮನ ಸೆಳೆಯುವ ಸೂಚನೆಗಳು (ನಿಯಮ 73)

ಯಾವುದೇ ಸಾರ್ವಜನಿಕ ಹಿತದೃಷ್ಟಿಯ ಮಹತ್ವದ ವಿಷಯಗಳನ್ನು ಮಾನ್ಯ ಸಚಿವರ ಗಮನಕ್ಕೆ ತರಲಿಚ್ಛಿಸುವ ಸಲುವಾಗಿ ಶಾಸಕರು ಸೂಚನೆಗಳನ್ನು ನೀಡಲು ಅವಕಾಶವಿರುತ್ತದೆ.

(ಮಾಹಿತಿ: ಎಚ್‌. ಮಾರುತಿ)

IPL_Entry_Point