logo
ಕನ್ನಡ ಸುದ್ದಿ  /  Karnataka  /  Karnataka News Congress Guarantee Fifty Thousand Crore 5 Guarantee Siddaramaiah Dk Shivakumar Analysis In Kannada Rst

Congress Guarantee: ಐದು ಗ್ಯಾರಂಟಿಗಳ ಜಾರಿಗೆ ಬೇಕಿದೆ 50 ಸಾವಿರ ಕೋಟಿ: ಹೇಗೆ ಹೊಂದಿಸಿಕೊಳ್ಳಲಿದೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೋಡಿ

HT Kannada Desk HT Kannada

Jun 07, 2023 02:49 PM IST

ಐದು ಗ್ಯಾರಂಟಿಗಳ ಜಾರಿಗೆ ಬೇಕಿದೆ 50 ಸಾವಿರ ಕೋಟಿ: ಹೇಗೆ ಹೊಂದಿಸಿಕೊಳ್ಳಲಿದೆ ಸಿದ್ದರಾಮಯ್ಯ, ಶಿವಕುಮಾರ್ ಜೋಡಿ

    • Fifty Thousand Crore for 5 Guarantee: ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳ ಜಾರಿಕೆ ವಾರ್ಷಿಕ 50 ಸಾವಿರ ಕೋಟಿ ಬೇಕು ಎಂದು ಅಂದಾಜಿಸಲಾಗಿದೆ. ಹಾಗಾದರೆ ಈ ಹಣವನ್ನು ಹೇಗೆ ಹೊಂದಿಸಲಿದೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಜೋಡಿ? ಮುಂದಿನ ವರ್ಷಗಳ ಗ್ಯಾರಂಟಿ ಕಥೆ ಏನು? ಈ ಕುರಿತ ವಿಶ್ಲೇಷಣಾ ವರದಿ ಇಲ್ಲಿದೆ. 
ಐದು ಗ್ಯಾರಂಟಿಗಳ ಜಾರಿಗೆ ಬೇಕಿದೆ 50 ಸಾವಿರ ಕೋಟಿ: ಹೇಗೆ ಹೊಂದಿಸಿಕೊಳ್ಳಲಿದೆ ಸಿದ್ದರಾಮಯ್ಯ,  ಶಿವಕುಮಾರ್ ಜೋಡಿ
ಐದು ಗ್ಯಾರಂಟಿಗಳ ಜಾರಿಗೆ ಬೇಕಿದೆ 50 ಸಾವಿರ ಕೋಟಿ: ಹೇಗೆ ಹೊಂದಿಸಿಕೊಳ್ಳಲಿದೆ ಸಿದ್ದರಾಮಯ್ಯ, ಶಿವಕುಮಾರ್ ಜೋಡಿ

ಬೆಂಗಳೂರು: ಅಳೆದೂ ಸುರಿದು ರಾಜ್ಯ ಕಾಂಗ್ರೆಸ್ ಸರ್ಕಾರ ಐದೂ ಗ್ಯಾರಂಟಿ (Congress Guarantee) ಗಳನ್ನು ಕೆಲವು ಷರತ್ತುಗಳೊಂದಿಗೆ ಜಾರಿಗೊಳಿಸಲು ನಿರ್ಧರಿಸಿದೆ. ಕಂಡೀಷನ್‌ಗಳು ಅಪ್ಲೈ ಆದರೂ ಈ ಯೋಜನೆಗಳಿಗೆ ಅಂದಾಜು ವಾರ್ಷಿಕ 50-60,000 ಕೋಟಿ ರೂಪಾಯಿ ಅವಶ್ಯಕತೆ ಇದೆ ಎನ್ನುವುದು ಆರ್ಥಿಕ ಇಲಾಖೆ ಮತ್ತು ತಜ್ಞರ ಅಭಿಪ್ರಾಯವಾಗಿದೆ. ರಾಜ್ಯದ ಒಟ್ಟು ಬಜೆಟ್ ಮೊತ್ತವೇ 3.20 ಲಕ್ಷ ಕೋಟಿ. ಇದರಲ್ಲಿ ಉಚಿತ ಕೊಡುಗೆಗಳಿಗೆ ಬಜೆಟ್‌ನ ಆರನೇ ಒಂದು ಭಾಗದಷ್ಟು ಹಣ ಬೇಕಾಗುತ್ತದೆ ಎನ್ನುವುದು ಯಾರಿಗಾದರೂ ಸುಲಭವಾಗಿ ಅರ್ಥವಾದೀತು.

ಟ್ರೆಂಡಿಂಗ್​ ಸುದ್ದಿ

Vijayanagara News: ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್‌ ಪತ್ನಿ ರುದ್ರಾಂಬ ನಿಧನ

Ramanagar News: ಮೇಕೆದಾಟಿನಲ್ಲಿ ಈಜಲು ಹೋಗಿ ಮೂವರು ಯುವತಿಯರು ಸೇರಿ ಐವರ ದುರ್ಮರಣ

Railway News: ಬೆಂಗಳೂರು ಬಿಲಾಸ್‌ಪುರಕ್ಕೆ ವಿಶೇಷ ಬೇಸಿಗೆ ರೈಲು, ಮೇ ತಿಂಗಳ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Holiday Declared: ಶ್ರೀನಿವಾಸಪ್ರಸಾದ್‌ ನಿಧನ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ನಾಳೆ ಸರ್ಕಾರಿ ಕಚೇರಿಗಳಿಗೆ ರಜೆ

ಯಾವ ಯಾವ ಗ್ಯಾರಂಟಿಗಳಿಗೆ ಎಷ್ಟೆಷ್ಟು?

ಮೊದಲಿಗೆ ಒಂದೊಂದು ಯೋಜನೆಯನ್ನು ವಿಶ್ಲೇಷಿಸುತ್ತಾ ಹೋಗೋಣ. ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಎಪಿಎಲ್ ಮತ್ತು ಬಿಪಿಎಲ್ ಕುಟುಂಬಗಳ ಪ್ರತಿ ಮಹಿಳೆಗೆ ಮಾಸಿಕ 2000 ರೂ. ಕೊಡಬೇಕಿದೆ. ಈ ಯೋಜನೆಗೆ ವಾರ್ಷಿಕ 39,000 ಕೋಟಿ ರೂ. ಬೇಕಾಗುತ್ತದೆ.

ಅನ್ನ ಭಾಗ್ಯ(Annabhagya) ಯೋಜನೆಯಡಿಯಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಯೋಜನೆಯಡಿಯ ಫಲಾನುಭವಿಗಳಿಗೆ ಪ್ರಸ್ತುತ ನೀಡುತ್ತಿರುವ ಐದು ಕೇಜಿ ಅಕ್ಕಿಯನ್ನು ಹತ್ತು ಕೆಜಿಗೆ ಹೆಚ್ಚಳ ಮಾಡಿದರೆ ವಾರ್ಷಿಕ 9,800 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಂದಾಜು ಮಾಡಿದೆ.

ಡಿಪ್ಲೊಮಾ ಮತ್ತು ನವ ಪದವೀಧರರಿಗೆ ಮಾಸಿಕ ನೀಡಲಾಗುವ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆ(Yuva Nidhi)ಗೆ 1,274 ಕೋಟಿ ರೂಪಾಯಿಗಳ ಅವಶ್ಯಕತೆ ಇದೆ. ಸರ್ಕಾರದ ಮಾಹಿತಿ ಪ್ರಕಾರ 2022-2023ರಲ್ಲಿ ಉತ್ತೀರ್ಣರಾಗಿರುವ 4.7 ಲಕ್ಷ ಹೊಸ ಪದವೀಧರರು ಮತ್ತು ಸುಮಾರು 50 ಸಾವಿರ ಡಿಪ್ಲೊಮಾ ಫಲಾನುಭವಿಗಳಿದ್ದಾರೆ ಎಂದು ತಿಳಿದು ಬಂದಿದೆ. ಪದವೀಧರರಿಗೆ ಮಾಸಿಕ 3000 ರೂ ಮತ್ತು ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂ ಕೊಡಲಾಗುತ್ತದೆ.

ಶಕ್ತಿ ಯೋಜನೆಗೆ ವಾರ್ಷಿಕ ಅಂದಾಜು 4,800 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಇಂಧನ ಇಲಾಖೆ ಅಂದಾಜು ಮಾಡಿದೆ. ಈ ಯೋಜನೆಯಡಿಯಲ್ಲಿ ಕೆಲವು ಷರತ್ತುಗಳೊಂದಿಗೆ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಗೃಹಜ್ಯೋತಿ ಯೋಜನೆ(Gruha Jyothi Yojane)ಗೆ 12,000 ಕೋಟಿ ರೂಪಾಯಿಗಳ ಅವಶ್ಯಕತೆ ಇದೆ ಎಂದು ಇಂಧನ ಇಲಾಖೆ ಅಂದಾಜು ಮಾಡಿದೆ. ಈ ಯೋಜನೆಯಡಿಯಲ್ಲಿ ಎಪಿಎಲ್ ಮತ್ತು ಬಿಪಿಎಲ್ ಫಲಾನುಭವಿಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಿದರೆ ಇಷ್ಟೊಂದು ಬೃಹತ್ ಮೊತ್ತದ ಅವಶ್ಯಕತೆ ಕಂಡು ಬರುತ್ತದೆ.

ಈ ಯೋಜನೆಗಳ ಅತಿ ಹೆಚ್ಚು ಫಲಾನುಭವಿಗಳೆಂದರೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು. ಈ ಯೋಜನೆಗಳ ಜಾರಿಯಿಂದ ಈ ಕುಟುಂಬಗಳಿಗೆ ವಾರ್ಷಿಕ ರೂ. 8000-10,000 ಕೋಟಿ ಉಳಿತಾಯವಾಗಲಿದ್ದು, ಈ ಮೊತ್ತ ಮತ್ತೆ ಆರ್ಥಿಕತೆಗೆ ಮರಳಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಯಪಡುತ್ತಾರೆ.

ಹಣ ಕ್ರೋಢೀಕರಣ ಹೇಗೆ?

ಹೊಸ ಯೋಜನೆಗಳಿಗೆ ಸಂಪನ್ಮೂಲ ಕ್ರೋಢಿಕರಣ ಯಾವುದೇ ಹೊಸ ಸರಕಾರಕ್ಕೆ ಸವಾಲಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ. ಹಾಗೆಂದು ಎಲ್ಲ ಮಾರ್ಗಗಳೂ ಬಂದ್ ಆಗಿವೆ ಎಂದು ಭಾವಿಸಲೂ ಬೇಕಿಲ್ಲ. ಇಲಾಖಾವಾರು ಬಾಕಿ ಉಳಿದಿರುವ ಅನುದಾನ, ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ, ತೆರಿಗೆ ಸಂಗ್ರಹ ಹೆಚ್ಚಳ, ಸಾಲದ ಮೊರೆ ಹೋಗುವುದು, ಕೆಲವು ಇಲಾಖೆಗಳಿಗೆ ಅನುದಾನ ಕಡಿತ ಮೊದಲಾದ ಕ್ರಮಗಳನ್ನು ಅನುಸರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದೆ.

2022-23ನೇ ಸಾಲಿನಲ್ಲಿ ಎಲ್ಲ 31 ಇಲಾಖೆಗಳಿಗೆ ಹಂಚಿಕೆಯಾದ ಬಜೆಟ್ ಮೊತ್ತ 2,72,973.85 ಕೋಟಿ ರೂ ಗಳು. ಇದರಲ್ಲಿ ಮಾರ್ಚ್ ಅಂತ್ಯದವರೆಗೆ 2,21,018,35 ಕೋಟಿ ರೂ ಗಳು ಮಾತ್ರ ವೆಚ್ಚವಾಗಿದ್ದು ಸುಮಾರು 51,000 ಕೋಟಿ ರೂ ಅನುದಾನ ಬಳಕೆಯಾಗದೆ ಉಳಿದಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಈ ಮೊತ್ತವನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದೆ.

ಆಯಾ ಇಲಾಖೆಗಳ ಉಚಿತ ಕೊಡುಗೆಗಳಿಗೆ ಆಯಾ ಇಲಾಖೆಗಳ ಮಟ್ಟದಲ್ಲಿಯೇ ಅನುದಾನ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹೇಗೆಂದರೆ ಇಂಧನ ಇಲಾಖೆಗೆ ಅಗತ್ಯವಿರುವ ಅನುದಾನವನ್ನು ಈ ಇಲಾಖೆಯೇ ಹೊಂದಿಸಿಕೊಳ್ಳುವುದು. ಈ ಇಲಾಖೆಯಲ್ಲಿ ಸುಮಾರು 5 ಸಾವಿರ ಕೋಟಿ ಅನುದಾನ ಹೊಂದಿಸಿಕೊಳ್ಳಲು ಸಾಧ್ಯವಿದೆ. ರಾಜ್ಯದಲ್ಲಿಯೇ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ. ಆದರೂ ಬಹುತೇಕ ಸರ್ಕಾರಗಳು ಅನಗ್ಯವಾಗಿ ಅತಿ ಹೆಚ್ಚಿನ ಮೊತ್ತಕ್ಕೆ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳುತ್ತವೆ. ಎರಡು-ಮೂರು ರೂಗಳಿಗೆ ವಿದ್ಯುತ್ ಲಭ್ಯವಿದ್ದರೂ ಹಿಂದಿನ ಸರ್ಕಾರ ಪ್ರತಿ ಯೂನಿಟ್‌ಗೆ ಎಂಟರಿಂದ ಹತ್ತು ರೂವರೆಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ರದ್ದುಗೊಳಿಸುವ ಮೂಲಕ, ವಿದ್ಯುತ್ ಸೋರಿಕೆ, ಕಳವು ನಿಯಂತ್ರಣ ಮಾಡುವ ಮಾಡುವ ಮೂಲಕ 5000 ಕೋಟಿ ರೂಗಳವರೆಗೆ ಉಳಿತಾಯ ಮಾಡಲು ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.

ಅನುದಾನಕ್ಕೆ ಕೇಂದ್ರಕ್ಕೆ ಒತ್ತಾಯ?

ಅನುದಾನ ಒದಗಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು ಸರ್ಕಾರದ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿದೆ. ಜಿಎಸ್‌ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರ ವಾರ್ಷಿಕ 3 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತಿದ್ದು, ರಾಜ್ಯಕ್ಕೆ ಶೇ 41ರಷ್ಟು ಅಂದರೆ ಪ್ರತಿ ವರ್ಷ 1.20 ಲಕ್ಷ ಕೋಟಿ ರೂಪಾಯಿಗಳನ್ನು ಮರಳಿಸಬೇಕಾಗಿರುತ್ತದೆ. ಆದರೆ ಅಷ್ಟು ಮೊತ್ತವನ್ನು ಕೇಂದ್ರ ಸರ್ಕಾರ ಮರಳಿಸುತ್ತಿಲ್ಲ. ಇದುವರೆಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದ ಕಾರಣ ಕೇಂದ್ರದ ಮೇಲೆ ಒತ್ತಡ ಹೇರಲೂ ಆಗಿರಲಿಲ್ಲ. ಈಗ ಸಿದ್ದರಾಮಯ್ಯ ಸರ್ಕಾರ

ಈ ಮೊತ್ತವನ್ನು ಕರಾರುವಕ್ಕಾಗಿ ನೀಡುವಂತೆ ಒತ್ತಡ ಹೇರುವುದರಲ್ಲಿ ಸಂಶಯವಿಲ್ಲ.

ಜನ ಸಾಮಾನ್ಯರಿಗೆ ಹೊರೆಯಾಗದ ಹಾಗೆ ತೆರಿಗೆ ಹೆಚ್ಚಳ ಮಾಡುವ ಮಾರ್ಗವನ್ನೂ ಸರ್ಕಾರ ಮುಕ್ತವಾಗಿರಿಸಿಕೊಂಡಿದೆ. ಈ ರೀತಿ ತೆರಿಗೆ ಹೆಚ್ಚಳ ಮಾಡಿ ಸರ್ಕಾರಕ್ಕೆ ಆದಾಯ ತಂದು ಕೊಡುವುದರಲ್ಲಿ ಕೇಂದ್ರ ವಿತ್ತ ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಪರಿಣಿತಿ ಹೊಂದಿದ್ದರು ಎಂದು ಇತಿಹಾಸ ಹೇಳುತ್ತದೆ. ಅಬಕಾರಿ ಸುಂಕ ಹೆಚ್ಚಳ ಮಾಡಿದರೆ ಯಾರ ಅಭ್ಯಂತರವೂ ಇರುವುದಿಲ್ಲ. ಇನ್ನು ಪೆಟ್ರೋಲ್ ಡೀಸೆಲ್ ಮೇಲಿನ ವ್ಯಾಟ್ ಹೆಚ್ಚಳ ಮಾಡಲು ಸರ್ಕಾರಕ್ಕೆ ಸಲಹೆಗಳು ಬಂದಿವೆಯಾದರೂ ಈ ನೀತಿಯನ್ನು ಅನುಸರಿಸಲು ಸಿದ್ದರಾಮಯ್ಯ ಮುಂದಾಗುವ ಸಾದ್ಯತೆಗಳು ಕಡಿಮೆ. ಪೆಟ್ರೋಲ್ ಡೀಸೆಲ್ ಬೆಲೆ ನೂರರ ಗಡಿ ದಾಟಿದ್ದು ಶ್ರೀ ಸಾಮಾನ್ಯರು ಬೇಸತ್ತಿದ್ದು ಶಾಪ ಹಾಕುತ್ತಿದ್ದಾರೆ.

ಈ ಹಿಂದೆ ಅಡುಗೆ ಅನಿಲ ಮೇಲಿನ ರಿಯಾಯಿತಿಯನ್ನು ಬಿಟ್ಟುಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದಾಗ ದೇಶದ ಕೋಟ್ಯಂತರ ನಾಗರೀಕರು ಬಿಟ್ಟುಕೊಟ್ಟು ಔದಾರ್ಯವನ್ನು ಮೆರದಿದ್ದರು. ಈಗಲೂ ಉಳ್ಳವರು ಅದೇ ಔದಾರ್ಯವನ್ನು ತೋರಿದರೆ ಮತ್ತಷ್ಟು ಸಹಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಅನುತ್ಪಾದಕ ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕವೂ ಬೃಹತ್ ಮೊತ್ತದ ಕ್ರೋಢೀಕರಣಕ್ಕೆ ಸರ್ಕಾರ ಮುಂದಾಗಿದೆ. ಪ್ರತಿಯೊಂದು ಇಲಾಖೆಯಿಂದ ಈ ರೀತಿ 20-50 ಕೋಟಿ ರೂಪಾಯಿಗಳವರೆಗೆ ಉಳಿತಾಯ ಮಾಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮುಂದಿನ ವರ್ಷ ಕಥೆಯೇನು?

ಸರ್ಕಾರ ಏನೆಲ್ಲ ಸರ್ಕಸ್ ಮಾಡಿದರೂ ಪ್ರಸಕ್ತ ಸಾಲಿಗೆ ಅನುದಾನ ಹೊಂದಿಸಿಕೊಳ್ಳಬಹುದು. ಆದರೆ 2024-2025 ನೇ ಸಾಲಿಗೆ ಸಿದ್ದರಾಮಯ್ಯ ಯಾವ ಕ್ರಮಗಳನ್ನು ಅನುಸರಿಸುತ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ. ಲೋಕಸಭಾ ಚುನಾವಣೆ, ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವವರೆಗೆ ಈ ಗ್ಯಾರಂಟಿಗಳು ಮುಂದುವರಿಯುತ್ತವೆ. ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಆಯವ್ಯಯ ಮಂಡಿಸಿರುವ ದಾಖಲೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿದೆ. ಆರ್ಥಿಕ ಇಲಾಖೆಯ ಮೇಲೆ ಹಿಡಿತ ಹೊಂದಿರುವ ಅವರಿಗೆ ಅನುದಾನ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗಲಾರದು ಎನ್ನುವುದು ಅವರ ಆಪ್ತರ ಅನಿಸಿಕೆ. ಅವರು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತಾರೆ ಎಂದು ನೋಡಲು ಒಂದು ವರ್ಷ ಬೇಕಾದೀತು. ಅಲ್ಲಿಯವರಗೆ ಕಾಯಲೇಬೇಕು.

ವಿಶ್ಲೇಷಣೆ: ಎಚ್.ಮಾರುತಿ

    ಹಂಚಿಕೊಳ್ಳಲು ಲೇಖನಗಳು