Nandini Milk Price: ಇಂದಿನಿಂದ ನಂದಿನಿ ಹಾಲು ಮೊಸರು ದರ ಲೀಟರ್‌ಗೆ 3 ರೂಪಾಯಿ ದುಬಾರಿ, ಅರ್ಧ ಲೀಟರ್‌ನ ಚಿಲ್ಲರೆ ಸಮಸ್ಯೆಗೆ ಪರಿಹಾರ
Aug 01, 2023 11:23 AM IST
Nandini Milk Price: ಇಂದಿನಿಂದ ನಂದಿನಿ ಹಾಲು ಮೊಸರು ದರ ಲೀಟರ್‌ಗೆ 3 ರೂಪಾಯಿ ದುಬಾರಿ
- Nandini milk dairy product price: ಆಗಸ್ಟ್ 1ರಿಂದ ನಂದಿನಿ ಹಾಲಿನ ದರ ಇಂದು ಬೆಳಗ್ಗೆಯಿಂದಲೇ ಲೀಟರ್‌ಗೆ 3 ರೂಪಾಯಿ ಹೆಚ್ಚಾಗಿದೆ. ಈ ದರ ಹೆಚ್ಚಳದ ಮೊತ್ತವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂದು ಕೆಎಂಎಫ್ ತಿಳಿಸಿದೆ.
ಬೆಂಗಳೂರು: ಕರ್ನಾಟಕದಲ್ಲಿ ಆಗಸ್ಟ್ 1ರಿಂದ ಹಲವು ಬದಲಾವಣೆಗಳು ಜಾರಿಗೆ ಬಂದಿವೆ. ವಿಶೇಷವಾಗಿ ನಂದಿನಿ ಹಾಲಿನ ದರ ಇಂದು ಬೆಳಗ್ಗೆಯಿಂದಲೇ ಲೀಟರ್‌ಗೆ 3 ರೂಪಾಯಿ ಹೆಚ್ಚಾಗಿದೆ. ಹೆಚ್ಚಿನ ಜನರು ಅರ್ಧ ಲೀಟರ್ ಹಾಲು ಖರೀದಿಸುವುದರಿಂದ ಅರ್ಧ ಲೀಟರ್‌ಗೆ 1.50 ಪೈಸೆ ರೂಪಾಯಿ ಹೆಚ್ಚು ನೀಡಬೇಕಿತ್ತು. ಐವತ್ತು ಪೈಸೆ ನಾಣ್ಯ ಬಳಕೆ ಕಡಿಮೆ ಆಗಿರುವುದರಿಂದ ಅಂಗಡಿಯವರು ನೀಡುವ ಚಾಕೋಲೇಟ್ ಅಥವಾ ನಾಳೆಯ ಹಾಲಿನೊಂದಿಗೆ ಅಜೆಸ್ಟ್‌ಮೆಂಟ್ ಇತ್ಯಾದಿ ಮಾಡಬೇಕಿತ್ತು. ಈ ರೀತಿ ಚಿಲ್ಲರೆ ಸಮಸ್ಯೆಯಾಗುವುದನ್ನು ತಡೆಯಲು ಪ್ಯಾಕೆಟ್‌ಗೆ 10 ಮಿಲಿಲೀಟರ್ ಹಾಲು/ಮೊಸರು ಹೆಚ್ಚು ತುಂಬಿಸಿ ಎರಡು ರೂಪಾಯಿ ದರ ಹೆಚ್ಚಿಸಲಾಗಿದೆ.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ಅಥವಾ ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಇಂದಿನಿಂದ ಹೆಚ್ಚಿಸಿದೆ. ಈ ದರ ಹೆಚ್ಚಳದ ಮೊತ್ತವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂದು ಕೆಎಂಎಫ್ ತಿಳಿಸಿದೆ. ಹಾಲು ಉತ್ಪಾದನೆ ಮತ್ತು ಹಾಲು ಸಂಸ್ಕರಣಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ದರ ಹೆಚ್ಚಿಸಲಾಗಿದೆ. ಜತೆಗೆ ಹೈನುಗಾರಿಕೆ ಉದ್ಯಮಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ದರ ಹೆಚ್ಚಳ ಮಾಡಲಾಗಿದೆ. ಹೋಮೋಜಿನೈಸ್ಟ್ ಟೋನ್ಡ್ ಹಾಲಿನ ದರ ಪ್ರತಿಲೀಟರ್‌ಗೆ 43 ರೂಪಾಯಿ ಇರಲಿದೆ.
ಅರ್ಧ ಲೀಟರ್ ಹಾಲಿಗೆ ಚಿಲ್ಲರೆ ಸಮಸ್ಯೆ
ಅರ್ಧ ಲೀಟರ್ ಹಾಲು ಅಥವಾ ಮೊಸರಿಗೆ 1.50 ಪೈಸೆ ದರ ಹೆಚ್ಚಿಸಬೇಕಿತ್ತು. ಆದರೆ, ಐವತ್ತು ಪೈಸೆ ಚಿಲ್ಲರೆ ಸಮಸ್ಯೆಯನ್ನು ಪರಿಹರಿಸಲು 2 ರೂಪಾಯಿ ದರ ಹೆಚ್ಚಿಸಲಾಗಿದೆ. ಈ 50 ಪೈಸೆ ಹೆಚ್ಚಳ ತೊಂದರೆ ಸರಿಪಡಿಸಲು 10 ಎಂಎಲ್ ಹೆಚ್ಚುವರಿ ಹಾಲು/ಮೊಸರು ಸೇರಿಸಿ ಪ್ಯಾಕೇಟ್ ಮಾಡಲಾಗುತ್ತದೆ ಎಂದು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ತಿಳಿಸಿದೆ. ಧಾರವಾಡ, ವಿಜಯಪುರ, ಕಲಬುರಗಿ ಮತ್ತು ಹಾವೇರಿ ಹಾಲು ಒಕ್ಕೂಟಗಳ ಎಚ್‌ಟಿಎಂ 500 ಮಿ.ಲೀ. ಪ್ಯಾಕೇಟ್‌ಗೆ ಇದು ಅನ್ವಯವಾಗದು. ದೇಶದ ಇತರೆ ಸಂಸ್ಥೆಗಳ ಹಾಲಿನ ದರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಕಡಿಮೆ ಇದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಎಂಕೆ ಜಗದೀಶ್ ಹೇಳಿದ್ದಾರೆ.
ಕಳೆದ ವರ್ಷ ಚರ್ಮಗಂಟು ರೋಗ ಇತ್ಯಾದಿಗಳಿಂದ ಸಾಕಷ್ಟು ರೈತರು ಹೈನುಗಾರಿಕೆ ಬಿಟ್ಟಿದ್ದರು. ಇದರಿಂದ ಹಾಲಿನ ಸಂಗ್ರಹ ಕಡಿಮೆಯಾಗಿತ್ತು. ಪ್ರತಿದಿನ 10 ಲಕ್ಷ ಲೀಟರ್ ಹಾಲು ಸಂಗ್ರಹ ಕಡಿಮೆಯಾಗಿದೆ. ದರ ಹೆಚ್ಚಿಸುವ ಮೂಲಕ ಹೈನುಗಾರರಿಗೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಾಲಿನ ಪರಿಷ್ಕೃತ ದರ ಎಷ್ಟು?
ನೀಲಿ ಪ್ಯಾಕೇಟ್‌ನ ಟೋನ್ಡ್ ಹಾಲಿಗೆ 42 ರೂಪಾಯಿ ನಿಗದಿಪಡಿಸಲಾಗಿದೆ. ಈ ಹಿಂದೆ 39 ರೂಪಾಯಿ ಇತ್ತು. ಇಏ ರೀತಿ ಹೋಮೋಜಿನೈಸ್ಡ್ ಟೋನ್ಡ್ ಹಾಲಿಗೆ 43 ರೂಪಾಯಿ ನಿಗದಿಪಡಿಸಲಾಗಿದೆ. ಈ ಹಿಂದೆ 40 ರೂಪಾಯಿ ಇತ್ತು. ಹಸಿರು ಪ್ಯಾಕೇಟಟ್‌ಗೆ 46 ರೂಪಾಯಿ ನಿಗದಿಪಡಿಸಲಾಗಿದೆ. ಶುಭಂ ಹಾಲಿಗೆ 48 ರೂಪಾಯಿ ನಿಗದಿಪಡಿಸಲಾಗಿದೆ. ಪ್ರತಿಕೆಜಿ ಮೊಸರಿಗೆ 48 ರೂಪಾಯಿ ನಿಗದಿಪಡಿಸಲಾಗಿದೆ. ಈ ಹಿಂದೆ 45 ರೂಪಾಯಿ ಇತ್ತು. ಮಜ್ಜಿಗೆ ಪ್ರತಿ 200 ಮಿ.ಲೀಟರ್‌ಗೆ 9 ರೂಪಾಯಿ ನಿಗದಿಪಡಿಸಲಾಗಿದೆ. ಬಹುತೇಕರು ಈ ಹಿಂದೆಯೂ ಮಜ್ಜಿಗೆ ಪ್ಯಾಕೇಟ್‌ಗೆ 10 ರೂಪಾಯಿ ನೀಡಿ ಕುಡಿಯುತ್ತಿದ್ದರು. ಆದರೆ, ಆಗ ದರ 8 ರೂಪಾಯಿ ಇತ್ತು. ಕೆಲವು ಅಂಗಡಿಯವರು ಚಿಲ್ಲರೆ ನೀಡುತ್ತಿರಲಿಲ್ಲ.