Karnataka polls: ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಅಧಿಕೃತ ಪತ್ರ ನೀಡಿದ ಕರ್ನಾಟಕ ವೀರಶೈವ ಲಿಂಗಾಯತ ವೇದಿಕೆ
May 07, 2023 12:35 PM IST
ಸೋನಿಯಾ ಗಾಂಧಿ ಕರ್ನಾಟಕದಲ್ಲಿ ಪ್ರಚಾರ, ಲಿಂಗಾಯತ ಪ್ರಮುಖ ನಾಯಕ ಜಗದೀಶ್ ಶೆಟ್ಟರ್ ಚಿತ್ರದಲ್ಲಿದ್ದಾರೆ. (ಸಾಂದರ್ಭಿಕ ಚಿತ್ರ)
Karnataka Election: ಕರ್ನಾಟಕ ವೀರಶೈವ ಲಿಂಗಾಯತ ವೇದಿಕೆಯು (Lingayat forum) ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತನ್ನ ಬೆಂಬಲವನ್ನು ನೀಡುವುದಾಗಿ ಅಧಿಕೃತ ಪತ್ರವನ್ನು ನೀಡಿದೆ.
ಬೆಂಗಳೂರು: ಕರ್ನಾಟಕ ವೀರಶೈವ ಲಿಂಗಾಯತ ವೇದಿಕೆಯು ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತನ್ನ ಬೆಂಬಲವನ್ನು ನೀಡುವುದಾಗಿ ಅಧಿಕೃತ ಪತ್ರವನ್ನು ನೀಡಿದೆ. ಲಿಂಗಾಯತ ಸಮುದಾಯದ ಜನರನ್ನು ಕಾಂಗ್ರೆಸ್‌ಗೆ ಮತ ಹಾಕುವಂತೆ ವೇದಿಕೆ ಒತ್ತಾಯಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಹೋದರಿ ಪತ್ರಿಕೆ ಲೈವ್ ಮಿಂಟ್ ವರದಿ ಮಾಡಿದೆ.
ಈಗಾಗಲೇ ಹಲವು ಕಾಂಗ್ರೆಸ್ ಮುಖಂಡರು ವೀರಶೈವ, ಲಿಂಗಾಯತ ಮುಖಂಡರನ್ನು ಕಾಂಗ್ರೆಸ್ ಭೇಟಿಯಾಗಿದೆ. ಇತ್ತೀಚೆಗೆ ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಪಕ್ಷದ ಮುಖಂಡ ಶಾಮನೂರು ಶಿವಶಂಕರಪ್ಪ ಒಳಗೊಂಡ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರು ಸಭೆ ನಡೆಸಿದ್ದಾರೆ.
"ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬಲವಂತದಿಂದ ಕೆಳಗಿಳಿಸಲಾಗಿದೆ. ಕೇಸರಿ ಪಕ್ಷದಲ್ಲಿನ ಲಿಂಗಾಯತ ನಾಯಕತ್ವವನ್ನು ವ್ಯವಸ್ಥಿತವಾಗಿ ನಿರ್ನಾಮ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಲಿಂಗಾಯತ ಮಠಕ್ಕೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) (ಜೆಡಿಎಸ್) ಅಭಿವೃದ್ಧಿಯ ಬಗ್ಗೆ ಹೇಳಿಕೆಗಳನ್ನು ನೀಡುತ್ತಿವೆ. ಇದು ಚುನಾವಣೆಯ ಪ್ರಮುಖ ವಿಷಯವಾಗಿದ್ದರೂ, ರಾಜಕೀಯವಾಗಿ ಎಲ್ಲಾ ಪಕ್ಷಗಳಿಗೆ ಲಿಂಗಾಯತ ಮತದ ಮೇಲೆ ಕಣ್ಣಿದೆ ಎಂದು ಎನ್‌ಎನ್‌ಐ ವರದಿ ತಿಳಿಸಿದೆ.
ದಕ್ಷಿಣ ರಾಜ್ಯವಾದ ಕರ್ನಾಟಕದಲ್ಲಿ ಚುನಾವಣೆಯಲ್ಲಿ ಜಾತಿ ರಾಜಕೀಯ ಪ್ರಮುಖ ಪಾತ್ರವಹಿಸುತ್ತದೆ. ಇದರೊಂದಿಗೆ ಲಿಂಗಾಯತ ಮಠಾಧೀಶರು ಮತ್ತು ಅವರ ಆಶೀರ್ವಾದಗಳು ಚುನಾವಣಾ ಫಲಿತಾಂಶ ತಿರುಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಲಿಂಗಾಯತರು ಸಾಂಪ್ರದಾಯಿಕವಾಗಿ ಕೇಸರಿ ಪಾಳೆಯದತ್ತ ಒಲವು ತೋರುವವರು. ಆದರೆ, ಪ್ರತಿಸ್ಪರ್ಧಿಗಳು ಮತದಾರರನ್ನು ಮತ್ತು ಸೆಳೆಯಲು ಇರುವ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ ಎಂದು ಎಎನ್‌ಐ ಸುದ್ದಿ ವಿಶ್ಲೇಷಣೆ ತಿಳಿಸಿದೆ.
ಅಧಿಕಾರಕ್ಕೆ ಮರಳುವ ಹಂಬಲದಲ್ಲಿರುವ ಕೇಸರಿ ಪಕ್ಷವು ತನ್ನ ಸಾಂಪ್ರದಾಯಿಕ ಲಿಂಗಾಯತ ಮತಬ್ಯಾಂಕ್‌ನ ಹಿಂದೆ ಹೋಗುತ್ತಿದೆ ಎನ್ನುವ ಸ್ಪಷ್ಟ ಸುಳಿವನ್ನು ಇತ್ತೀಚಿನ ನಡೆ ನೀಡಿತ್ತು. ಬಿಜೆಪಿ ಮುಖಂಡ ಮಹೇಶ್ ಟೆಂಗಿನಕಾಯಿ ನಾಮಪತ್ರ ಸಲ್ಲಿಸುವ ಮೊದಲು ಶ್ರೀ ಸಿದ್ದಾರೂಢ ಸ್ವಾಮಿ ಮಠಕ್ಕೆ ಭೇಟಿ ನೀಡಿದರು ಎಂದು ಎಎನ್‌ಐ ವರದಿ ಮಾಡಿದೆ.
ಆದರೆ, ಈ ಬಾರಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸೇರಿದಂತೆ ಹಲವು ಪ್ರಮುಖ ನಾಯರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. 2018ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉತ್ತರ ಕರ್ನಾಟಕದ ಎರಡು ಲಿಂಗಾಯತ ಮಠಗಳಿಂದ ಬಿಜೆಪಿಗೆ ಬೆಂಬಲ ದೊರಕುವುದು ಕಷ್ಟ ಎನ್ನಲಾಗುತ್ತಿದೆ. ಸವದಿ, ನೆಹರು ಓಲೇಕಾರ್, ಎನ್‌ವೈ ಗೋಪಾಲಕೃಷ್ಣ ಸೇರಿದಂತೆ ಪ್ರಮುಖ ನಾಯಕರು ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ದೊರಕದೆ ಇದ್ದದ್ದರಿಂದ ಕಾಂಗ್ರೆಸ್‌ಗೆ ಸೇರಿದ್ದರು.
ಉತ್ತರ ಕರ್ನಾಟಕವು ಕಿತ್ತೂರು ಕರ್ನಾಟಕ (ಮುಂಬೈ ಕರ್ನಾಟಕ) ಮತ್ತು ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಪ್ರದೇಶಗಳನ್ನು ಒಳಗೊಂಡಿದೆ. 13 ಜಿಲ್ಲೆಗಳು ಮತ್ತು 90 ಅಸೆಂಬ್ಲಿ ಸ್ಥಾನಗಳನ್ನು ಹೊಂದಿವೆ.
ಪ್ರಸ್ತುತ, ಲಿಂಗಾಯತ ಭದ್ರಕೋಟೆ ಎಂದು ಪರಿಗಣಿಸಲಾದ ಈ ಪ್ರದೇಶಗಳಿಂದ ಬಿಜೆಪಿ 52 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಇಲ್ಲಿ ಕಾಂಗ್ರೆಸ್ 32 ಮತ್ತು ಜೆಡಿಎಸ್ 6 ಸ್ಥಾನಗಳನ್ನು ಹೊಂದಿದೆ. ಆದರೆ, ಹಲವು ಲಿಂಗಾಯತ ಪ್ರಮುಖರು ಕೇಸರಿ ಪಾಳಯವನ್ನು ತೊರೆದು ಕಾಂಗ್ರೆಸ್ ಸೇರಿದ್ದು, ಕೇಸರಿ ಭದ್ರಕೋಟೆಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ನಿರ್ಣಾಯಕ ಸವಾಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಬಿಎಸ್ವೈ, ಸವದಿ, ಶೆಟ್ಟರ್ರನ್ನು ಎತ್ತಿ ಎಸೆದಿದ್ದು ಲಿಂಗಾಯತರು ಬೇಡ ಎಂಬ ಕಾರಣಕ್ಕೆ ಅಲ್ಲವೇ; ಕಾಂಗ್ರೆಸ್
ಲಿಂಗಾಯತರ ಅಗತ್ಯವಿಲ್ಲ ಎಂಬುದನ್ನು ಬಿಜೆಪಿ ಕ್ರಿಯೆಯಲ್ಲೂ ತೋರಿಸಿದೆ. ಲಕ್ಷ್ಮಣ್ ಸವದಿ (Laxman Savadi), ಜಗದೀಶ್ ಶೆಟ್ಟರ್ (Jagadish Shettar), ಬಿಎಸ್ ಯಡಿಯೂರಪ್ಪ (BS Yediyurappa) ಸೇರಿದಂತೆ ಹಲವು ಲಿಂಗಾಯತ ನಾಯಕರನ್ನು (Lingayat Leaders) ಎತ್ತಿ ಎಸೆದಿದ್ದು ಲಿಂಗಾಯತರು ಬೇಡ ಎಂಬ ಕಾರಣಕ್ಕಾಗಿಯೇ ಅಲ್ಲವೇ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಕುರಿತ ವರದಿ ಇಲ್ಲಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲಿಂಗಾಯತ, ದಲಿತರ ಮೀಸಲಾತಿ ತೆಗೆದುಹಾಕುತ್ತಾರೆ: ಅಮಿತ್ ಶಾ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲಿಂಗಾಯತರಿಗೆ ನೀಡಿದ ಮೀಸಲಾತಿ ಹಿಂಪಡೆಯುತ್ತದೆ. ದಲಿತರಿಗೆ ನೀಡಲಾದ ಮೀಸಲಾತಿಯನ್ನು ತೆಗೆಯುತ್ತಾರೆ. ಅವರಿಗೆ ತುಷ್ಟೀಕರಣದ ಹೊರತು ಮತ್ತೇನು ಕಾಣಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದರು. ಮೈಸೂರಿನ ವರುಣಾ ಕ್ಷೇತ್ರದಲ್ಲಿ ವಿ.ಸೋಮಣ್ಣ ಪರ ಮತಯಾಚನೆ ಮಾಡಿದ ಅವರು, ಸಿದ್ದರಾಮಯ್ಯ ಅವರು ಲಿಂಗಾಯತರಿಗೆ ಅಪಮಾನ ಮಾಡಿದ್ದಾರೆ. ಆದರೆ ಬಿಜೆಪಿ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿದೆ. ಸಿದ್ದರಾಮಯ್ಯ ಅವರು ಲಿಂಗಾಯತರು ಭ್ರಷ್ಟಾಚಾರಿಗಳು ಎನ್ನುವ ಮೂಲಕ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ನವರು ಈ ಹಿಂದೆ ನಿಜಲಿಂಗಪ್ಪ ಮತ್ತು ವಿರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ ಅಪಮಾನ ಮಾಡಿತು ಎಂದು ಆರೋಪಿಸಿದರು. ಈ ಕುರಿತ ಪೂರ್ತಿ ವರದಿ ಇಲ್ಲಿದೆ ಓದಿ.