logo
ಕನ್ನಡ ಸುದ್ದಿ  /  ಕರ್ನಾಟಕ  /  ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಕರ್ನಾಟಕ ಪಡಿತರ ಚೀಟಿ ಮಾರ್ಗದರ್ಶಿ

ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಕರ್ನಾಟಕ ಪಡಿತರ ಚೀಟಿ ಮಾರ್ಗದರ್ಶಿ

Praveen Chandra B HT Kannada

Nov 21, 2024 12:52 PM IST

google News

ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವುದು ಹೇಗೆ?

    • ಕರ್ನಾಟಕದಲ್ಲಿ ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದು ವಿಚಾರ ಸುದ್ದಿಯಲ್ಲಿದೆ. ಬಿಪಿಎಲ್‌ ಕಾರ್ಡ್‌ ಅನರ್ಹತೆಗೊಂಡಿದ್ದರೆ ಇದನ್ನು ಮರುಪರಿಶೀಲನೆ ಮಾಡುವಂತೆ ವಿನಂತಿಸಬಹುದು. ಇದಕ್ಕಾಗಿ ನಿಮ್ಮ ಊರಿನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಚೇರಿಗೆ ಭೇಟಿ ನೀಡಬಹುದು.
ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕದಲ್ಲಿ ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದು ವಿಚಾರ ಸುದ್ದಿಯಲ್ಲಿದೆ. ರಾಜ್ಯ ಸರಕಾರವು ಅರ್ಹರ ಬಿಪಿಎಲ್‌ ಕಾರ್ಡ್‌ಗಳನ್ನೂ ರದ್ದು ಮಾಡಿದೆ ಎಂಬ ಆಕ್ರೋಶದ ಬಳಿಕ ಸರಕಾರಿ ನೌಕರರು ಮತ್ತು ತೆರಿಗೆ ಪಾವತಿದಾರರರು ಹೊರತುಪಡಿಸಿ ಉಳಿದ ಎಲ್ಲರ ಬಿಪಿಎಲ್‌ ಕಾರ್ಡ್‌ಗಳನ್ನು ವಾಪಸ್‌ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಈಗಾಗಲೇ ಸಾಕಷ್ಟು ಜನರ ಬಿಪಿಎಲ್‌ ಕಾರ್ಡ್‌ ರದ್ದಾಗಿರಬಹುದು. ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ ಮರುಪರಿಶೀಲನೆಗೆ ಮನವಿ ಸಲ್ಲಿಸುವುದು ಹೇಗೆ? ಎಲ್ಲಿ ಅರ್ಜಿ ಕೊಡಬೇಕು? ಈ ರೀತಿ ಮನವಿ ಪತ್ರ ಕೊಡುವಾಗ ಯಾವೆಲ್ಲ ದಾಖಲೆ ಪತ್ರಗಳನ್ನು ಹೊಂದಿಸಿಕೊಳ್ಳಬೇಕು? ಇತ್ಯಾದಿ ಪ್ರಶ್ನೆಗಳು ಸಾಕಷ್ಟು ಜನರಲ್ಲಿ ಇರಬಹುದು.

ಮುಖ್ಯಮಂತ್ರಿಗಳ ಸೂಚನೆ ಏನು?

ಸದ್ಯ ಸರಕಾರಿ ನೌಕರರು ಮತ್ತು ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಬೇರೆ ಯಾರೋಬ್ಬರ ಬಿಪಿಎಲ್‌ ಕಾರ್ಡ್‌ ರದ್ದು ಪಡಿಸದಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹೀಗಾಗಿ, ಈಗ ಬಿಪಿಎಲ್‌ ಕಾರ್ಡ್‌ ರದ್ದುಗೊಂಡಿದ್ದರೆ ಅಧಿಕಾರಿಗಳು ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ನೀವು ತೆರಿಗೆ ಪಾವತಿದಾರರ ವ್ಯಾಪ್ತಿಗೆ ಬಾರದೆ ಇದ್ದರೆ, ಸರಕಾರಿ ಉದ್ಯೋಗದಲ್ಲಿ ಇರದೆ ಇದ್ದರೆ ಖಂಡಿತಾ ನಿಮಗೆ ನಿಮ್ಮ ಬಿಪಿಎಲ್‌ ಕಾರ್ಡ್‌ ದೊರಕಬಹುದು. ಎಲ್ಲಾದರೂ ನಿಮ್ಮ ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ, ಅದನ್ನು ಸಂಬಂಧಪಟ್ಟ ಇಲಾಖೆ ವಾಪಸ್‌ ನೀಡದೆ ಇದ್ದರೆ ನೀವು ಮುಂದಿನ ಕ್ರಮ ಕೈಗೊಳ್ಳಬಹುದು.

ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ ಮರುಪರಿಶೀಲನೆಗೆ ಮನವಿ ಸಲ್ಲಿಸುವುದು ಹೇಗೆ?

ಮೊದಲಿಗೆ ನಿಮ್ಮ ಊರಿನ ನಿಮ್ಮ ರೇಷನ್‌ ಅಂಗಡಿಗೆ ತೆರಳಿ ಅಲ್ಲಿನವರಲ್ಲಿ ಈ ಕುರಿತು ಚರ್ಚಿಸಬಹುದು. ಅವರು ಮುಂದಿನ ಕ್ರಮಗಳನ್ನು ಸೂಚಿಸಬಹುದು. ನಿಮ್ಮ ಊರಿನ ಸಾಕಷ್ಟು ಜನರ ಕಾರ್ಡ್‌ ರದ್ದಾಗಿದ್ದರೆ ಏನು ಮಾಡುತ್ತಿದ್ದಾರೆ, ಹೇಗೆ ಮನವಿ ಪತ್ರ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಬಹುದು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ನಿಮ್ಮ ತಾಲೂಕಿನಲ್ಲಿರುವ ಕಚೇರಿಗೆ ಭೇಟಿ ನೀಡಿ. ಸಾಮಾನ್ಯವಾಗಿ ತಾಲೂಕು ಕಚೇರಿಗಳಲ್ಲಿ ಅಥವಾ ಪ್ರತ್ಯೇಕ ಕಟ್ಟಡಗಳಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಚೇರಿ ಇರಬಹುದು. ಅಲ್ಲಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿ.

ಮನವಿ ಪತ್ರ ಸಲ್ಲಿಸುವಾಗ ನೀವು ಹೇಗೆ ಬಿಪಿಎಲ್‌ ಕಾರ್ಡ್‌ಗೆ ಅರ್ಹರು ಎನ್ನುವುದನ್ನು ನಮೂದಿಸಿ. ಸರಕಾರಿ ಉದ್ಯೋಗಿ ಮತ್ತು ತೆರಿಗೆ ಪಾವತಿದಾರರು ಅಲ್ಲದೆ ಇರುವುದನ್ನು ಆ ಅರ್ಜಿಯಲ್ಲಿ ಖಚಿತಪಡಿಸಿ.

ಸದ್ಯ ಈ ರೀತಿ ಮನವಿ ಪತ್ರ ಸಲ್ಲಿಸಲು ಯಾವುದೇ ಆನ್‌ಲೈನ್‌ ಲಿಂಕ್‌ ನೀಡಲಾಗಿಲ್ಲ. ಹೀಗಾಗಿ, ತಾಲೂಕಿನಲ್ಲಿರುವ ಆಹಾರ ವಿಭಾಗದ ಕಚೇರಿಗೆ ಹೋಗುವುದು ಸೂಕ್ತ.

ಸಹಾಯವಾಣಿ ಸಂಪರ್ಕಿಸಿ

ನಿಜಕ್ಕೂ ನೀವು ಬಿಪಿಎಲ್‌ ಕಾರ್ಡ್‌ಗೆ ಅರ್ಹರಾಗಿದ್ದು, ನಿಮಗೆ ಬಿಪಿಎಲ್‌ ಕಾರ್ಡ್‌ ದೊರಕದೆ ಇದ್ದರೆ, ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ ತಾಲೂಕಿನ ನಿಗದಿತ ಕಚೇರಿಗಳಲ್ಲಿ ಸರಿಯಾದ ಸ್ಪಂದನೆ ದೊರಕದೆ ಇದ್ದರೆ ಸಹಾಯವಾಣಿಯ ಸಹಾಯ ಪಡೆಯಬಹುದು. ಹೆಚ್ಚಿನ ವಿವರ ಪಡೆಯಲು ಯಾವುದೇ ಸಲಹೆ ಅಥವಾ ದೂರುಗಳಿಗೆ ಕರ್ನಾಟಕದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ: 1967, 14445 ಅಥವಾ 1800-425-9339

ಆಹಾರ್‌ ಕರ್ನಾಟಕ ವೆಬ್‌ಸೈಟ್‌ಗೆ ಭೇಟಿ ನೀಡಿ

ಬಿಪಿಎಲ್‌ ಕಾರ್ಡ್‌ಗೆ ಹೊಸದಾಗಿ ಅರ್ಜಿ ಸಲ್ಲಿಸುವವರು ಅಥವಾ ತಾವು ಸಲ್ಲಿಸಿದ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ahara.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಬಿಪಿಎಲ್‌ ಕಾರ್ಡ್‌ ರದ್ದುಪಡಿಸಲಾದ ಮತ್ತು ತಡೆಹಿಡಿಯಲಾದ ಪಟ್ಟಿ ನೋಡಲು https://ahara.kar.nic.in/Home/EServices ಲಿಂಕ್‌ ಕ್ಲಿಕ್‌ಮಾಡಿ.

ರದ್ದಾಗಿರುವ ಬಿಪಿಎಲ್‌ ಕಾರ್ಡ್‌ ಮರುಪರಿಶೀಲಿನೆಗೆ ಸದ್ಯ ಯಾವುದೇ ಆನ್‌ಲೈನ್‌ ವ್ಯವಸ್ಥೆಯನ್ನು ಸರಕಾರ ನೀಡಿಲ್ಲ. ಜತೆಗೆ ಮರುಪರಿಶೀಲನೆ ಅರ್ಜಿ ಸಲ್ಲಿಸಲು ಯಾವ ದಾಖಲೆ ಪತ್ರಗಳು ಬೇಕೆಂದೂ ತಿಳಿಸಿಲ್ಲ. ಸದ್ಯ ಆಧಾರ್‌ ಕಾರ್ಡ್‌ ಸೇರಿದಂತೆ ಪ್ರಮುಖ ದಾಖಲೆಯನ್ನು ಹಿಡಿದುಕೊಂಡು ನಿಮ್ಮ ತಾಲೂಕಿನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಚೇರಿಯಲ್ಲಿ ಈ ಕುರಿತಂತೆ ವಿಚಾರಿಸಬಹುದು.

ರೇಷನ್‌ ಕಾರ್ಡ್‌ ಪಡೆಯಲು ಬೇಕಾಗುವ ದಾಖಲೆಗಳು

ಜನ್ಮ ದಿನಾಂಕ, ಗುರುತಿನ ಚೀಟಿ, ವಿಳಾಸ ದಾಖಲೆ, ಪಾಸ್‌ಪೋರ್ಟ್‌ ಗಾತ್ರದ ಫೋಟೋಗಳು, ಆದಾಯದ ವಿವರ ಇತ್ಯಾದಿ ದಾಖಲೆಗಳು ಸಾಮಾನ್ಯವಾಗಿ ಬೇಕಿರುತ್ತದೆ. ಹೊಸ ಪಡಿತರ ಚೀಟಿಗೆ ಕರ್ನಾಟಕ ಸರಕಾರದ ಆಹಾರ್‌ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ