BPL Card: ಕರ್ನಾಟಕದಲ್ಲಿ ಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ್ ಬದಲು: ನಿಮ್ಮ ಕಾರ್ಡ್ ಎಪಿಎಲ್‌ಗೆ ಬದಲಾಗಿರುವುದನ್ನು ಖಚಿತಪಡಿಸೋದು ಹೇಗೆ
ನಿಮ್ಮ ಪಡಿತರ ಬಿಪಿಎಲ್( BPL) ನಿಂದ ಎಪಿಎಲ್( APL) ಕಾರ್ಡ್‌ಗೆ ಹೇಗೆ ಬದಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಏನು ಮಾಡಬೇಕು. ಇಲ್ಲಿದೆ ವಿವರ.
BPL to APL Ration Card ಕರ್ನಾಟಕದಲ್ಲಿ ಈಗ ಪಡಿತರ ಕಾರ್ಡ್‌ಗಳ ಪರ್ವ ಜೋರಾಗಿ ನಡೆದಿದೆ. ಅಂದರೆ ಬಡತನ ರೇಖೆಗಿಂತ ಕೆಳಗೆ ಇರುವವರಿಗೆ ನೀಡುವ ಬಿಪಿಎಲ್ ಪಡಿತರ ಕಾರ್ಡ್ ಅನ್ನು ಬಡತನ ರೇಖೆಗಿಂತ ಮೇಲೆ ಇರುವವರ ಎಪಿಎಲ್ ಕಾರ್ಡ್‌ಗೆ ಬದಲಿಸಲಾಗಿದೆ. ಈ ರೀತಿ ಒಂದು ಲಕ್ಷಕ್ಕೂ ಅಧಿಕ ಕಾರ್ಡ್‌ಗಳನ್ನು ಬದಲು ಮಾಡಲಾಗಿದೆ. ಕಳೆದ ಕೆಲ ತಿಂಗಳಿನಿಂದ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಈ ಪ್ರಕ್ರಿಯೆ ನಡೆದಿದೆ. ಈ ತಿಂಗಳಿನಿಂದಲೇ ಹೀಗೆ ಬದಲಾಗಿರುವ ಪಡಿತರ ಕಾರ್ಡ್ ದಾರರಿಗೆ ಸರ್ಕಾರದಿಂದ ಪಡಿತರ ಸಹಿತ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಈ ರೀತಿ ಬದಲಾಗಿರುವ ಪಡಿತರ ಕಾರ್ಡ್ ನ ಮಾಹಿತಿಯನ್ನು ಪಡೆಯುವುದು ಹೇಗೆ ಎನ್ನುವ ವಿವರ ಇಲ್ಲಿದೆ.
ಕಾರ್ಡ್ ಬದಲಾವಣೆ ಏಕೆ
ಕರ್ನಾಟಕ ಸರ್ಕಾರದ ಆಹಾರ ಇಲಾಖೆಯು ಪಡಿತರ ಕಾರ್ಡ್ ನೀಡುವ ವ್ಯವಸ್ಥೆಯನ್ನು ನಾಲ್ಕು ದಶಕದಿಂದಲೂ ಮುಂದುವರೆಸಿದೆ. ಕಾರ್ಡ್‌ಗಳ ಸ್ವರೂಪ ಬದಲಾಗಿ ಈಗ ಬಡತನ ರೇಖೆಗಿಂತ ಕೆಳಗಿನವರು( ಬಿಪಿಎಲ್) ಹಾಗು ಬಡತನ ರೇಖೆಗಿಂತ ಮೇಲ್ಪಟ್ಟವರು( ಎಪಿಎಲ್) ಎನ್ನುವ ಎರಡು ಕಾರ್ಡ್ ಅನ್ನು ನೀಡಲಾಗುತ್ತಿದೆ. ಇದರಲ್ಲಿ ಬಿಪಿಎಲ್ ಕಾರ್ಡ್‌ಗೆ ಮಾಸಿಕ ಪಡಿತರ, ಆರೋಗ್ಯ ಇಲಾಖೆ ಸಹಿತ ಹಲವೆಡೆ ಸೌಲಭ್ಯಗಳು ಸಿಗಲಿವೆ. ಆದರೆ ಎಪಿಎಲ್ ಕಾರ್ಡ್‌ಗೆ ಯಾವುದೇ ಸೌಲಭ್ಯವಿಲ್ಲ. ಬದಲಿಗೆ ಪಡಿತರ ಕಾರ್ಡ್ ದಾರರು ಎನ್ನುವ ಮಾನ್ಯತೆ ಇರಲಿದೆ.
ಈಗ ಕೇಂದ್ರ ಸರ್ಕಾರ ಹೊರಡಿಸಿರುವ ಕೆಲವು ಮಾನದಂಡಗಳನ್ನು ಆಧರಿಸಿ ಕರ್ನಾಟಕ ಸರ್ಕಾರವೂ ಕಾರ್ಡ್ ಬದಲಾವಣೆ ಪ್ರಕ್ರಿಯೆ ಚುರುಕುಗೊಳಿಸಿದೆ. ಆದಾಯ ತೆರಿಗೆಯನ್ನು ಪಾವತಿಸುವರ ಪಟ್ಟಿಯನ್ನು ಆದಾಯ ತೆರಿಗೆ ಇಲಾಖೆಯಿಂದ ಪಡೆದು ಅವರ ಕಾರ್ಡ್‌ಗಳನ್ನು ಈಗ ಬದಲಾವಣೆ ಮಾಡಲಾಗುತ್ತಿದೆ.
ಯಾರು ತಾವು ಆದಾಯ ತೆರಿಗೆ ಪಾವತಿಸುತ್ತಿರುವುದಾಗಿ ಘೋಷಣೆ ಮಾಡಿಕೊಂಡು ಇಲಾಖೆಗೆ ವಿವರ ಸಲ್ಲಿಸಿದ್ದಾರೋ ಅಂತಹ ವಿವರಗಳನ್ನು ಆಧರಿಸಿ ಕಾರ್ಡ್ ಬದಲಾವಣೆ ಮಾಡಲಾಗಿದ್ದು. ಈ ತಿಂಗಳಿನಿಂದಲೇ ಜಾರಿಗೆ ಬಂದಿದೆ.
ಇದು ಸಾಮಾನ್ಯ ಪ್ರಕ್ರಿಯೆ. ಈ ಬಾರಿ ಆದಾಯ ತೆರಿಗೆ ಮಾಹಿತಿ ಆಧರಿಸಿ ಕಾರ್ಡ್ ಬದಲು ಮಾಡಲಾಗಿದೆ. ಯಾರ ಕಾರ್ಡ್ ರದ್ದು ಮಾತ್ರ ಆಗಿಲ್ಲ. ಕರ್ನಾಟಕದಲ್ಲಿ ಒಂದು ಲಕ್ಷದಷ್ಟು ಪಡಿತರ ಕಾರ್ಡ್‌ಗಳು ಬಿಪಿಎಲ್‌ನಿಂದ ಎಪಿಎಲ್‌ಗೆ ಬದಲಾಗಿವೆ ಎನ್ನುವುದು ಅಧಿಕಾರಿಗಳ ವಿವರಣೆ.
ಇದನ್ನೂ ಓದಿರಿ: Anna Bhagya: ಬಡವರಿಗಾಗಿ ರೂಪಿಸಿರುವ ಉಚಿತ ಅಕ್ಕಿ ಕಾರ್ಯಕ್ರಮಕ್ಕೆ ಸ್ಪಂದಿಸದ ಬಿಜೆಪಿ ನಾಯಕರು; ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್
ಮಾನದಂಡದಲ್ಲೂ ಬದಲು
ಹಿಂದೆ ಬಿಪಿಎಲ್ ಕಾರ್ಡ್ ಪಡೆಯಲು 14 ಮಾನದಂಡಗಳಿದ್ದವು. ಅದರಲ್ಲಿ ಮನೆಯಲ್ಲಿ ಟಿವಿ, ಫ್ರಿಡ್ಜ್ ಸಹಿತ ಯಾವುದೂ ಇರಬಾರದು ಎನ್ನುವುದಿತ್ತು. ಈಗ ಅದು ಬದಲಾಗಿ ಬರೀ 4 ಮಾನದಂಡಗಳನ್ನು ನಿಗದಿಪಡಿಸಿದೆ. ಇದರ ಪ್ರಕಾರ ಆದಾಯ ಮಿತಿ ವಾರ್ಷಿಕ 1.20 ಲಕ್ಷ ರೂ. ಇದ್ದವರಿಗೆ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ. ಒಂದು ಸಾವಿರ ಚದರ ಅಡಿಗಿಂತ ಕಡಿಮೆ ಆಸ್ತಿಯನ್ನು ಹೊಂದಿರಬೇಕು. ಮೂರು ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಇರಬೇಕು. ಆದಾಯ ತೆರಿಗೆ ಪಾವತಿದಾರರು ಆಗಿರಬಾರದು ಎನ್ನುವ ಮಾನದಂಡ ನಿಗದಿಪಡಿಸಲಾಗಿದೆ.
ಕಾರ್ಡ್ ಪರೀಕ್ಷೆ ಹೇಗೆ
- ಈ ವರ್ಷ ನೀವು ಆದಾಯ ತೆರಿಗೆ ತುಂಬಿದ ನಂತರವೂ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಪರೀಕ್ಷಿಸಿಕೊಳ್ಳಬೇಕು.
- ನೀವು ಕಾರ್ಡ್ ಪಡೆದಿರುವ ನಿಮ್ಮ ವ್ಯಾಪ್ತಿಯ ಪಡಿತರ ಅಂಗಡಿಗೆ ತೆರಳಬೇಕು
- ಅಲ್ಲಿ ನೀವು ಪಡಿತರವನ್ನು ಕೇಳಿದಾಗ ಪಡಿತರ ಸಿಕ್ಕರೆ ನಿಮ್ಮದು ಬಿಪಿಎಲ್ ಕಾರ್ಡ್ ಎನ್ನುವುದು ಖಚಿತವಾಗುತ್ತದೆ
- ಪಡಿತರ ಕೊಡಲಿಲ್ಲ ಎಂದರೆ ನಿಮ್ಮ ಕಾರ್ಡ್ ಎಪಿಎಲ್‌ಗೆ ಬದಲಾಗಿದೆ ಎಂದರ್ಥ
- ಆಹಾರ ಇಲಾಖೆಯ ಆಯಾ ನಗರ, ತಾಲ್ಲೂಕು ಕೇಂದ್ರದ ಆಹಾರ ನಿರೀಕ್ಷಕರನ್ನು ಭೇಟಿ ಮಾಡಿದರೆ ನಿಖರ ಮಾಹಿತಿ ಸಿಗಲಿದೆ
- ವೆಬ್‌ಸೈಟ್ ಮೂಲಕವೂ ಪಡಿತರ ಸಂಖ್ಯೆಯನ್ನು ಪರೀಕ್ಷಿಸಿಕೊಳ್ಳಬಹುದು. ಅಲ್ಲಿಯೂ ಬದಲಾಗಿರುವ ಮಾಹಿತಿ ಲಭ್ಯವಾಗಲಿದೆ.