ದರ್ಶನ್ ತೂಗುದೀಪ್‌ಗೆ ಮತ್ತೆ ಜಾಮೀನು ಕೊಡದಿರುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುತ್ತಿದ್ದೇವೆ; ಗೃಹ ಸಚಿವ ಜಿ ಪರಮೇಶ್ವರ್
Nov 21, 2024 07:47 PM IST
ದರ್ಶನ್‌ಗೆ ಜಾಮೀನು ಕೊಡದಿರುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುತ್ತೇವೆ ಎಂದ ಗೃಹ ಸಚಿವ ಜಿ ಪರಮೇಶ್ವರ್
ಮೈಸೂರು: ದರ್ಶನ್ ತೂಗುದೀಪ್ ಅನಾರೋಗ್ಯದ ಕಾರಣ ಬೇಲ್ ಪಡೆದು ಹೊರ ಬಂದಿದ್ದಾರೆ. ಜಾಮೀನು ಅವಧಿ ಮುಗಿದ ನಂತರ ಅವರು ಮತ್ತೆ ವಾಪಸ್ ಜೈಲಿಗೆ ಹೋಗಬೇಕು. ಆದರೆ ಅವರಿಗೆ ಮತ್ತೆ ಬೇಲ್ ಕೊಡದಿರುವಂತೆ ನಾವು ಸುಪ್ರೀಂ ಕೋರ್ಟ್‌ಗೆ ಅಪೀಲು ಮಾಡುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಮೈಸೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ್ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೈಕೋರ್ಟ್ 6 ವಾರಗಳ ಕಾಲ ಮಾತ್ರ ಮಧ್ಯಂತರ ಜಾಮೀನು ನೀಡಿದೆ, ಆದರೆ ಇದುವರೆಗೂ ದರ್ಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ.
ಸುಪ್ರೀಂ ಕೋರ್ಟ್‌ಗೆ ಅಪೀಲ್ ಹೋಗುತ್ತೇವೆ ಎಂದ ಜಿ ಪರಮೇಶ್ವರ್
ದರ್ಶನ್‌ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಗೃಹ ಸಚಿವ ಜಿ ಪರಮೇಶ್ವರ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು ನಟ ದರ್ಶನ್‌ಗೆ ಬೇಲ್ ನೀಡದಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ದರ್ಶನ್ ಚಿಕಿತ್ಸೆ ಪಡೆಯುವ ಸಲುವಾಗಿ ಬೇಲ್ ನಲ್ಲಿದ್ದಾರೆ. ಚಿಕಿತ್ಸೆ ಪಡೆದ ನಂತರ ಮತ್ತೆ ವಾಪಸ್ ಹೋಗಬೇಕಾಗುತ್ತದೆ. ದರ್ಶನ್ ಮತ್ತೆ ಮುಂದುವರಿದು ಬೇಲ್ ಕೇಳುವ ವಿಚಾರ ನಮಗೆ ಗೊತ್ತಿಲ್ಲ. ಮತ್ತೆ ಬೇಲ್ ಕೊಡಬಾರದು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವ ಪ್ರಕ್ರಿಯೆ ನಮ್ಮಿಂದ ನಡೆಯುತ್ತಿದೆ. ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸುವ ಬಗ್ಗೆ ಮತ್ತಷ್ಟು ಸಾಕ್ಷ್ಯ ಸಂಗ್ರಹ ಮಾಡುವ ಕೆಲಸವಾಗುತ್ತಿದೆ. ಸಾಕ್ಷ್ಯ ಸಂಗ್ರಹದ ನಂತರ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.
ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ವಿಚಾರದ ಬಗ್ಗೆ ಪ್ರತಿಕ್ರಿಯಿದ ಗೃಹ ಸಚಿವರು, ಈ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಇದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಅದು ನಮಗೆ ಹೇಳಿ ಮಾಡುವ ಕೆಲಸವಲ್ಲ. ಸಿಎಂ ಹಾಗೂ ಪಕ್ಷದ ಹೈಕಮಾಂಡ್ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಚಿವ ಜಮೀರ್ ಅಹಮದ್ ಖಾನ್ ಬದಲಾವಣೆ ವಿಚಾರವೂ ನನಗೆ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿರುವುದು ಸಹಕಾರಿ ಇಲಾಖೆಯ ಕಾರ್ಯಕ್ರಮಕ್ಕೆ. ಬೇರೆ ಯಾವುದೇ ವಿಚಾರಕ್ಕೆ ಅಲ್ಲ ಎಂದರು.
ಎಕ್ಸಿಟ್ ಪೋಲ್ ಎಲ್ಲಾ ಸಮಯದಲ್ಲೂ ನಿಜವಾಗುವುದಿಲ್ಲ
ಉಪ ಚುನಾವಣೆ ಎಕ್ಸಿಟ್ ಪೋಲ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿ ಪರಮೇಶ್ವರ್, ಎಕ್ಸಿಟ್ ಪೋಲ್ ಎಲ್ಲಾ ಸಂದರ್ಭದಲ್ಲೂ ನಿಜವಾಗುವುದಿಲ್ಲ. ನಾನು ಮಹಾರಾಷ್ಟ್ರ ಉಸ್ತುವಾರಿ ವಹಿಸಿದ್ದೆ ಅಲ್ಲಿ ಬೇರೆಯೇ ವಾತಾವರಣವಿದೆ. ಕೆಲವು ಸರ್ವೇಗಳು INDIA ಒಕ್ಕೂಟಕ್ಕೂ ಬಹುಮತ ಸಿಗುವುದಾಗಿ ವರದಿ ನೀಡಿವೆ.
ಕೆಲವರು ಎನ್‌ಡಿಎ ಪರ, ಮತ್ತೆ ಕೆಲವರು INDIA ಪರವಾಗಿ ವರದಿ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ನಮ್ಮ ಒಕ್ಕೂಟಕ್ಕೆ ಗೆಲುವು ಸಿಗುವ ವಿಶ್ವಾಸವಿದೆ. ರಾಜ್ಯದ 3 ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲುವ ವಾತಾವರಣವಿದೆ. ನಮಗಿರುವ ಮಾಹಿತಿ ಪ್ರಕಾರ ಮೂರರಲ್ಲೂ ಕಾಂಗ್ರೆಸ್ ಜಯ ಗಳಿಸಲಿದೆ ಎನ್ನುವ ಮಾಹಿತಿ ಇದೆ ಎಂದು ಪರಮೇಶ್ವರ್ ಎಕ್ಸಿಟ್ ಪೋಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ವಕ್ಫ್ ಬೋರ್ಡ್‌ನಿಂದ ರೈತರ ಆಸ್ತಿ ಕಬಳಿಕೆಯಾಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ವಿಚಾರದ ಬಗ್ಗೆಯೂ ಮಾತನಾಡಿರುವ ಪರಮೇಶ್ವರ್, ವಿರೋಧ ಪಕ್ಷವಾಗಿ ಅವರು ಹೋರಾಟ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಕ್ಫ್ ಮಂಡಳಿಯಿಂದ ನೋಟೀಸ್ ಕೊಟ್ಟಿರುವುದನ್ನು ವಾಪಸ್ ಪಡೆಯಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ. ಆದರೂ ವಿರೋಧ ಪಕ್ಷಗಳ ನಾಯಕರು ರಾಜಕೀಯ ಕಾರಣಕ್ಕೆ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆ ಮಾಡುತ್ತಿದ್ದಾರೆ ಎಂದಿದ್ದಾರೆ.