logo
ಕನ್ನಡ ಸುದ್ದಿ  /  ಕರ್ನಾಟಕ  /  ಡಿಸೆಂಬರ್‌ 9 ರಿಂದ 20ವರೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ; ವಿವಿಧ ಸಮಸ್ಯೆಗಳ ಕುರಿತು ಚರ್ಚೆ

ಡಿಸೆಂಬರ್‌ 9 ರಿಂದ 20ವರೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ; ವಿವಿಧ ಸಮಸ್ಯೆಗಳ ಕುರಿತು ಚರ್ಚೆ

Rakshitha Sowmya HT Kannada

Nov 18, 2024 05:24 PM IST

google News

ಡಿಸೆಂಬರ್‌ 9 ರಿಂದ 20ವರೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ

  • 2024ನೇ ಸಾಲಿನ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ್‌ 9 ರಿಂದ 20ವರೆಗೆ ನಡೆಯಲಿದೆ. ಈ ಬಾರಿ ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ವಿಚಾರಗಳು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎಂದು ಸ್ಪೀಕರ್‌ ಯುಟಿ ಖಾದರ್‌, ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಮಾಹಿತಿ ನೀಡಿದ್ದಾರೆ. 

ಡಿಸೆಂಬರ್‌ 9 ರಿಂದ 20ವರೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ
ಡಿಸೆಂಬರ್‌ 9 ರಿಂದ 20ವರೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ (PC: @AshwiniMS_TNIE)

ಬೆಂಗಳೂರು: ಈ ಬಾರಿಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಡಿಸೆಂಬರ್‌ 9 ರಿಂದ 20ವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಜೆ ಹಿರಿಯ ಸಚಿವರ ಸಭೆ ಕರೆದಿದ್ದಾರೆ. ಬೆಳಗಾವಿ ಅಧಿವೇಶನ ಕರೆಯುವ ಬಗ್ಗೆ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ಕಡತ ರವಾನಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸ್ಪೀಕರ್‌ ಯುಟಿ ಖಾದರ್

ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದ್ದ ವಿಧಾನಸಭೆ ಅಧ್ಯಕ್ಷ ಯುಟಿ ಖಾದರ್‌ ಮತ್ತು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಧಿಕಾರಿಗಳ ಸಭೆ ನಡೆಸಿ ಅಧಿವೇಶನ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದ್ದರು. ಚಳಿಗಾಲದ ಅಧಿವೇಶನದ ಜೊತೆಗೆ ಡಿಸೆಂಬರ್‌ 26, 27 ರಂದು ಬೆಳಗಾವಿಯಲ್ಲೇ ಕಾಂಗ್ರೆಸ್‌ ಅಧಿವೇಶನ ನಡೆಸಲು ಪಕ್ಷ ನಿರ್ಧರಿಸಿದೆ. 1924 ಡಿಸೆಂಬರ್‌ 26, 27ರಂದು ಮಹಾತ್ಮ ಗಾಂಧೀಜಿ, ಬೆಳಗಾವಿಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್‌ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದರು. ಈ ಕಾರ್ಯಕ್ರಮಕ್ಕೆ 100 ವರ್ಷಗಳು ತುಂಬುವ ಹಿನ್ನೆಲೆ ಈ ಬಾರಿ ಬೆಳಗಾವಿಯಲ್ಲೇ ಕಾಂಗ್ರೆಸ್‌ ಅಧಿವೇಶನ ನಡೆಸಲಾಗುತ್ತಿದೆ.

ಈ ಬಾರಿಯ ಅಧಿವೇಶನದಲ್ಲಿ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಚರ್ಚೆಗೆ ಸಮಯ ಮೀಸಲಿಡುತ್ತೇವೆ. ಅಧಿವೇಶನಕ್ಕೆ ಎಲ್ಲಾ ಶಾಸಕರು ಹಾಜರಾಗಲು ತಿಳಿಸುತ್ತಿದ್ದೇವೆ. ಅಧಿವೇಶನ ನೋಡಲು ಸುವರ್ಣಸೌಧಕ್ಕೆ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದೆ. ಅಲ್ಲದೆ ಸಚಿವರು, ಶಾಸಕರಿಗೆ ಎಲ್ಲಾ ಅನುಕೂಲಗಳನ್ನು ಮಾಡುವಂತೆ, ಪೊಲೀಸರು, ವಾಹನ ಚಾಲಕರಿಗೆ ಊಟದ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ.‌

ಶಾಸಕರ ಭವನ ನಿರ್ಮಾಣದ ಬಗ್ಗೆ ಮನವಿ

ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣದ ಬಗ್ಗೆ ಕೆಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇದೆ. ಪ್ರತಿ ವರ್ಷ ಚಳಿಗಾಲದ ಅಧಿವೇಶನ ನಡೆಯುವಾಗ ಶಾಸಕರು, ಸಚಿವರು ಉಳಿದುಕೊಳ್ಳುವ ವ್ಯವಸ್ಥೆಗೆ 6 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಆದರೆ ಶಾಸಕರ ಭವನ ನಿರ್ಮಾಣ ಮಾಡಿದರೆ ಈ ವೆಚ್ಚವನ್ನು ಕಡಿಮೆ ಮಾಡಬಹುದು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಿಧಾನಸಭಾಧ್ಯಕ್ಷ ಯುಟಿ ಖಾದರ್‌, ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಅಧಿವೇಶನದಲ್ಲಿ ಪ್ರತಿಪಕ್ಷಗಳ ಹೋರಾಟಕ್ಕೆ ತಂತ್ರ ರೂಪಿಸುವ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಅಂತಿಮ ದಿನಾಂಕ ನಿಗದಿಯಾಗುತ್ತಿದ್ದಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಸಜ್ಜಾಗುತ್ತಿದ್ದಾರೆ. ಪ್ರತಿಭಟನೆಯಲ್ಲಿ 1 ಲಕ್ಷಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿಭಟನೆಯಲ್ಲಿ ಮಂಡ್ಯದಿಂದ 10 ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಏಕೀಕೃತ ಕರ್ನಾಟಕ ರಾಜ್ಯ ರೈತಸಂಘದ ಸಂಸ್ಥಾಪಕ ಅಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ