ಕರಾವಳಿ ಸೇರಿ 13 ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ, ಬೆಂಗಳೂರಲ್ಲಿ ಮಳೆ ಯಾವಾಗ ಬರುತ್ತೆ, ಇಲ್ಲಿದೆ ಕರ್ನಾಟಕ ಹವಾಮಾನ ವಿವರ
Nov 04, 2024 06:51 AM IST
ಹವಾಮಾನ ಮುನ್ಸೂಚನೆ: ಕರಾವಳಿ ಸೇರಿ 13 ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಮಳೆ ಯಾವಾಗ ಬರುತ್ತೆ? ಎಂಬ ಪ್ರಶ್ನೆಗೆ ಉತ್ತರವಾಗಿ ಕರ್ನಾಟಕ ಹವಾಮಾನ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಸೇರಿ 13 ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನೀಡಿದ ಹವಾಮಾನ ಮುನ್ಸೂಚನೆಯಲ್ಲಿ ಬೆಂಗಳೂರಲ್ಲಿ ಮಳೆ ಯಾವಾಗ ಬರುತ್ತೆ, ಕರ್ನಾಟಕದ ಹವಾಮಾನ ಹೇಗಿದೆ ಎಂಬಿತ್ಯಾದಿ ಅಂಶಗಳಿದ್ದು, ಆ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದ ಕರಾವಳಿ ಸೇರಿ 13 ಜಿಲ್ಲೆಗಳ ಕೆಲವು ಕಡೆ ಅಲ್ಲಲ್ಲಿ ಎಂಬಂತೆ ಇಂದು (ನವೆಂಬರ್ 4) ಮಳೆ ಸುರಿಯಲಿದೆ. ಹಲವು ಕಡೆ ಚಳಿ ಶುರುವಾಗಿದ್ದು, ಮುಂಜಾನೆ ಮಂಜು ಮುಸುಕಿದ ವಾತಾವರಣ ಗೋಚರಿಸಲಿದೆ. ಹಗಲು ಹೊತ್ತು ಒಣಹವೆ ಇರಲಿದ್ದು, ಸಹಜ ವಾತಾವರಣ ಕಾಣಬಹುದು. ಯಾವುದೇ ಮುನ್ನೆಚ್ಚರಿಕೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ. ನಾಳೆ ಬೆಳಗ್ಗೆ 8.30ರ ತನಕವೂ ಇದೇ ವಾತಾವರಣ ಇರಲಿದೆ. ಸದ್ಯದ ಹವಾಮಾನ ಲಕ್ಷಣಗಳ ಬಗ್ಗೆ ಉಲ್ಲೇಖಿಸಿರುವ ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ,"ದಕ್ಷಿಣ ತಮಿಳುನಾಡು ಕರಾವಳಿ ಮತ್ತು ಪಕ್ಕದ ಶ್ರೀಲಂಕಾದ ಮೇಲೆ ಚಂಡಮಾರುತದ ಪರಿಚಲನೆಯು ಈಗ ದಕ್ಷಿಣ ಕೇರಳ ಕರಾವಳಿಯ ಆಗ್ನೆಯ ಅರೇಬಿಯನ್ ಸಮುದ್ರದ ಮೇಲೆ ಚಲಿಸುತ್ತಿದೆ. ಇದು ಸಮುದ್ರ ಮಟ್ಟದಿಂದ ಸರಾಸರಿ 0.9 ಕಿಮೀ ವರೆಗೆ ವಿಸ್ತರಿಸಿದೆ. ಅದೇ ರೀತಿ, ದಕ್ಷಿಣ ತಮಿಳುನಾಡು ಕರಾವಳಿಯಲ್ಲಿ ಮೇಲಿನ ಚಂಡಮಾರುತದ ಪರಿಚಲನೆಯಿಂದ ಟ್ರಫ್ ಮತ್ತು ಪಕ್ಕದ ಶ್ರೀಲಂಕಾದಿಂದ ಕರಾವಳಿ ಕರ್ನಾಟಕಕ್ಕೆ 0.9 ಕಿಮೀ ಎತ್ತರದಲ್ಲಿ ಸಮುದ್ರ ಮಟ್ಟದಿಂದ ಕಡಿಮೆ ಇರುವುದನ್ನು ಗುರುತಿಸಲಾಗಿದೆ" ಎಂದು ಹವಾಮಾನ ಮುನ್ಸೂಚನೆ ವರದಿಯಲ್ಲಿ ತಿಳಿಸಿದೆ.
ಬೆಂಗಳೂರು ಹವಾಮಾನ: ಯಾವಾಗ ಮಳೆ ಬರುತ್ತೆ
ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ (ನವೆಂಬರ್ 3) ಮಧ್ಯಾಹ್ನ ಪ್ರಕಟಿಸಿದ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಇಂದು ಕೆಲವು ಕಡೆ ಅಲ್ಲಲ್ಲಿ ಮಳೆ ಸುರಿಯಲಿದೆ. ಮುಂಜಾನೆ ಮಂಜು ಮತ್ತು ಚಳಿ ಇರಲಿದೆ. ನವೆಂಬರ್ 5 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ ಹೀಗಿದೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರಗಳಲ್ಲಿ ಇಂದು (ನವೆಂಬರ್ 4) ಸಾಮಾನ್ಯವಾಗಿ ಮೋಡ ಕವಿದ ಆಕಾಶ ಕಾಣಬಹುದು. ಕೆಲವು ಕಡೆ ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಸ್ಥಳಗಳಲ್ಲಿ ಬೆಳಗಿನ ಜಾವದಲ್ಲಿ ಮಂಜು ಬೀಳುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಡಿಗ್ರಿ ಸೆಲ್ಶಿಯಸ್ ಮತ್ತು 20 ಡಿಗ್ರಿ ಸೆಲ್ಶಿಯಸ್ ಇರಬಹುದು. ನಾಳೆ (ನವೆಂಬರ್ 5) ಮಧ್ಯಾಹ್ನವರೆಗೂ ಇದೇ ವಾತಾವರಣ ಇರಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.
ಕರ್ನಾಟಕ ಹವಾಮಾನ ಇಂದು; ಕರ್ನಾಟಕ ಮಳೆ ವಿವರ ಏನಿದೆ
ಭಾರತೀಯ ಹವಾಮಾನ ಇಲಾಖೆ ಕೊಟ್ಟಿರುವ ಕರ್ನಾಟಕ ಹವಾಮಾನ ಮುನ್ಸೂಚನೆ ಪ್ರಕಾರ, ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಒಳನಾಡಿನ ಉಳಿದ ಜಿಲ್ಲೆಗಳ ಮೇಲೆ ಒಣ ಹವಾಮಾನದ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.