Karnataka Weather: ಮೈಸೂರು, ಕೋಲಾರ, ಬೆಂಗಳೂರು ಸೇರಿ ಕೆಲವೆಡೆ ಇಂದು ಲಘು ಮಳೆಯಾಗುವ ಸಾಧ್ಯತೆ
Nov 18, 2024 07:43 AM IST
ನವೆಂಬರ್ 18 ಕರ್ನಾಟಕ ಹವಾಮಾನ
Karnataka Weather: ಭಾನುವಾರ ರಾಜ್ಯದ ಅನೇಕ ಕಡೆ ಲಘು ಮಳೆಯಾಗಿದೆ. ಇಂದು ಕೂಡಾ ಬೆಂಗಳೂರು, ಮೈಸೂರು, ಕೋಲಾರ ಸೇರಿ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ತಾಪಮಾನ 20 ಡಿಗ್ರಿಗೆ ಕುಸಿದಿದೆ. ರಾಜ್ಯದ ಇತರೆಡೆ ಇಂದಿನ ಹವಾಮಾನ ಮಾಹಿತಿ ಇಲ್ಲಿದೆ.
ಬೆಂಗಳೂರು: ಇಂದು ಬೆಳಗ್ಗೆ 6:20ಕ್ಕೆ ಸೂರ್ಯೋದಯವಾಗಿದ್ದು ಸಂಜೆ 5.50ಕ್ಕೆ ಸೂರ್ಯಾಸ್ತವಾಗಲಿದೆ. ಹವಾಮಾನ ಇಲಾಖೆ ನೀಡಿರುವ ವರದಿ ಪ್ರಕಾರ ಬೆಳಗ್ಗೆ 6.30ಕ್ಕೆ ರಾಜ್ಯ ರಾಜಧಾನಿ ಬೆಂಗಳೂರು ವಾತಾವಣ 20 ಡಿಗ್ರಿಗೆ ಕುಸಿದಿದೆ. ಭಾನುವಾರ ಕರ್ನಾಟಕದ ಯಾವ ಸ್ಥಳಗಳಲ್ಲಿ ಮಳೆ ಆಯ್ತು? ಒಣಹವೆ ಇತ್ತು? ಇಂದು ಎಲ್ಲೆಲ್ಲಿ ಮಳೆ ಆಗಲಿದೆ? ಮುಂದಿನ 24 ಗಂಟೆ ರಾಜ್ಯದಲ್ಲಿ ವಾತಾವರಣ ಹೇಗಿರಲಿದೆ? ಮಾಹಿತಿ ಇಲ್ಲಿದೆ.
ಭಾನುವಾರ ದಕ್ಷಿಣ ಒಳನಾಡಿನಲ್ಲಿ ಹಿಂಗಾರು ಮಳೆ ಸಾಮಾನ್ಯವಾಗಿದ್ದು ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರ್ನಾಟಕ ದಕ್ಷಿಣ ಒಳಭಾಗದ ಕೆಲವು ಸ್ಥಳಗಳಲ್ಲಿ ಮಳೆಯಾಗಿದೆ. ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ, ಹಾಸನದ ಶ್ರವಣಬೆಳಗೊಳ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಹಾಸನದ ಅರಕಲಗೂಡು, ಚಿಕ್ಕಬಳ್ಳಾಪುರದ ಚಿಂತಾಮಣಿ, ಮಂಡ್ಯ ಜಿಲ್ಲೆಯ ನಾಗಮಂಗಲ, ಕೋಲಾರದ ಕೆಲವೆಡೆ ಭಾನುವಾರ ತಲಾ 1 ಸೆಮೀನಷ್ಟು ಮಳೆ ಆಗಿದೆ. ಉತ್ತರ ಒಳಕರ್ನಾಟಕದ ಕೆಲವೆಡೆ ಉಷ್ಠಾಂಶ ಗಮನಾರ್ಹವಾಗಿ ಇಳಿಕೆ ಆಗಿದೆ. ಕರಾವಳಿ ಕರ್ನಾಟಕ , ದಕ್ಷಿಣ ಒಳ ಕರ್ನಾಟಕದ ಮೇಲೆ, ಉತ್ತರ ಒಳ ಕರ್ನಾಟಕದ ಹೆಚ್ಚಿನ ಸ್ಥಳಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಭಾನುವಾರ ರಾಜ್ಯದಲ್ಲೇ ಗರಿಷ್ಠ ಉಷ್ಣಾಂಶ ಕಾರವಾರದಲ್ಲಿ (36.6 ಡಿಗ್ರಿ) ಸೆಲ್ಸಿಯಸ್ ದಾಖಲಾಗಿದೆ. ಕಡಿಮೆ ಉಷ್ಣಾಂಶ (17.0) ಡಿಗ್ರಿ ಸೆಲ್ಸಿಯಸ್ ಧಾರವಾಡದಲ್ಲಿ ದಾಖಲಾಗಿದೆ.
ಇಂದು ಎಲ್ಲೆಲ್ಲಿ ಮಳೆ ಆಗಲಿದೆ?
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳಕರ್ನಾಟಕ, ಕರಾವಳಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನದ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ರಾಜ್ಯ ಹವಾಮಾನ ಇಲಾಖೆಯು ಮೀನುಗಾರರಿಗೆ ಯಾವುದೇ ಮುನ್ನೆಚರಿಕೆ ನೀಡಿಲ್ಲ.
ಬೆಂಗಳೂರಿನ ವಾತಾವರಣ
ಬೆಂಗಳೂರು ಹಾಗೂ ಸುತ್ತಮುತ್ತ ಮುಂದಿನ 48 ಗಂಟೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು ಲಘು ಮಳೆಯಾಗಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣವಿರುವ ಸಾಧ್ಯತೆ ಇದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಕ್ರಮವಾಗಿ 28 ಹಾಗೂ 20 ಡಿಗ್ರಿ ಇರಲಿದೆ. ಮುಂದಿನ 48 ಗಂಟೆಗಳು ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.