ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರ ಸಾವು ಪ್ರಕರಣ; ಬೀಚ್ ರೆಸಾರ್ಟ್‌ಗೆ ಬೀಗಮುದ್ರೆ
ಕನ್ನಡ ಸುದ್ದಿ  /  ಕರ್ನಾಟಕ  /  ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರ ಸಾವು ಪ್ರಕರಣ; ಬೀಚ್ ರೆಸಾರ್ಟ್‌ಗೆ ಬೀಗಮುದ್ರೆ

ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರ ಸಾವು ಪ್ರಕರಣ; ಬೀಚ್ ರೆಸಾರ್ಟ್‌ಗೆ ಬೀಗಮುದ್ರೆ

ಮಂಗಳೂರು ಸಮೀಪದ ಸೋಮೇಶ್ವರದ ಖಾಸಗಿ ರೆಸಾರ್ಟ್‌ನ ಸ್ವಿಮ್ಮಿಂಗ್‌ ಪೂಲ್‌​ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವನ್ನಪ್ಪಿರುವ ಬೆನ್ನಲ್ಲೇ ಬೀಚ್ ರೆಸಾರ್ಟ್‌ನ ಟ್ರೇಡ್ ಲೈಸನ್ಸ್ ಮತ್ತು ಟೂರಿಸಂ ಪರವಾನಗಿಯನ್ನು ಅಮಾನತ್ತಿನಲ್ಲಿಡಲಾಗಿದೆ. ರೆಸಾರ್ಟ್‌ಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.

ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಯುವತಿಯರ ಸಾವು ಪ್ರಕರಣ; ಬೀಚ್ ರೆಸಾರ್ಟ್‌ಗೆ ಬೀಗಮುದ್ರೆ
ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಯುವತಿಯರ ಸಾವು ಪ್ರಕರಣ; ಬೀಚ್ ರೆಸಾರ್ಟ್‌ಗೆ ಬೀಗಮುದ್ರೆ

ಮಂಗಳೂರು ಹೊರವಲಯದ ಸೋಮೇಶ್ವರದ ಖಾಸಗಿ ರೆಸಾರ್ಟ್‌ನ ಈಜುಕೊಳದಲ್ಲಿ ಮೂವರು ಯುವತಿಯರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ, ಖಾಸಗಿ ವ್ಯಕ್ತಿಗಳಿಗೆ ಸೇರಿದ VAZCO ಬೀಚ್ ರೆಸಾರ್ಟ್‌ಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ. ರೆಸಾರ್ಟ್‌ನ ಟ್ರೇಡ್ ಲೈಸನ್ಸ್ ಮತ್ತು ಟೂರಿಸಂ ಪರವಾನಗಿಯನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಮಂಗಳೂರು ಉಪವಿಭಾಗ ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ರೆಸಾರ್ಟ್‌ನ ಸ್ವಿಮ್ಮಿಂಗ್‌ ಪೂಲ್‌​ನಲ್ಲಿ ಮುಳುಗಿ ಮೈಸೂರು ಮೂಲದ ಮೂವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ ಘಟನೆ ನವೆಂಬರ್ 17ರ ಭಾನುವಾರ ನಡೆದಿದೆ. ಈಜಲು ಬಾರದೆ ಸ್ವಿಮ್ಮಿಂಗ್ ಪೂಲ್ ನೀರಿಗಿಳಿದು ಯುವತಿಯರು ದುರಂತ ಸಾವು ಕಂಡಿದ್ದಾರೆ. ಮೈಸೂರು ದೇವರಾಜ ಮೊಹಲ್ಲಾದ ಕೀರ್ತನಾ ಎನ್ (21), ಮೈಸೂರು ಕುರುಬರ ಹಳ್ಳಿ 4ನೇ ಕ್ರಾಸ್‌ ನಿವಾಸಿ ನಿಶಿತಾ ಎಂಡಿ (21) ಹಾಗೂ ಮೈಸೂರು ಕೆಆ‌ರ್ ಮೊಹಲ್ಲ ರಾಮಾನುಜ ರಸ್ತೆಯ 11ನೇ ಕ್ರಾಸ್ ನಿವಾಸಿ ಪಾರ್ವತಿ ಎಸ್ (20) ಮೃತಪಟ್ಟ ಯುವತಿಯರು.

ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಅಡ್ಡರಸ್ತೆ ಪೆರಿಬೈಲ್‌ ಎಂಬಲ್ಲಿರುವ ರೆಸಾರ್ಟ್‌ಗೆ ನವೆಂಬರ್ 16ರ ಶನಿವಾರವೇ ಈ ಯುವತಿಯರು ಬಂದಿದ್ದರು. ಭಾನುವಾರ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಆಡಲು ಯುವತಿಯರು ನೀರಿಗಿಳಿದಿದ್ದಾರೆ. ಈಜು ಬಾರದಿದ್ದ ಯುವತಿಯರು, ವಿಲ ವಿಲ ಒದ್ದಾಡಿ ಸಾವನ್ನಪ್ಪಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಳಗ್ಗೆ 10.30ಕ್ಕೆ ಸಿಬ್ಬಂದಿ ಗಮನಿಸಿದಾಗ ಮೂವರು ಯುವತಿಯರು ನೀರಿನಲ್ಲಿ ಮುಳುಗಿದ್ದು ಪತ್ತೆಯಾಗಿದೆ. ಸ್ವಿಮ್ಮಿಂಗ್ ಪೂಲ್‌ ಬಳಿ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದಿರುವುದೇ ಯುವತಿಯರ ಸಾವಿಗೆ ಕಾರಣ ಎಂಬ ಆರೋಪ ವ್ಯಕ್ತವಾಗಿದೆ. ರೆಸಾರ್ಟ್ ಖಾಸಗಿ ವ್ಯಕ್ತಿಗಳಿಗೆ ಸೇರಿರುವುದರಿಂದ ಅಲ್ಲಿ ಏನೇ ಘಟನೆ ಆದರೂ ಸಿಬ್ಬಂದಿಯೇ ಹೊಣೆಯಾಗುತ್ತಾರೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಕಠಿಣ ಕ್ರಮ ಕೈಗೊಂಡು ರೆಸಾರ್ಟ್‌ನ ಲೈಸೆನ್ಸ್‌ ರದ್ದು ಮಾಡಿದೆ.

ಈಜುಕೊಳ ಕೇವಲ ಆರು ಅಡಿ ಆಳವಿದೆ. ಯುವತಿಯರು ಆಳ ಇಲ್ಲದ ಒಂದು ಬದಿಯಿಂದ ನೀರಿಗಿಳಿದಿದ್ದಾರೆ. ಮತ್ತೊಂದು ಭಾಗದಲ್ಲಿ ಈಜು ಕೊಳ ಆರು ಅಡಿ ಆಳವಿದೆ. ಪೂಲ್‌ನ ಮಧ್ಯಕ್ಕೆ ಹೋದಂತೆ ಕಾಲಿಗೆ ತಳ ಸಿಗದೆ ರಕ್ಷಣೆಗಾಗಿ ಯುವತಿಯರು ಒದ್ದಾಡಿದ್ದಾರೆ. ಆದರೆ, ಯುವತಿಯರ ಕೂಗು ನರಳಾಟ ಕೇಳಲು ಅಲ್ಲಿ ಸಿಬ್ಬಂದಿಯೇ ಇರಲಿಲ್ಲ. ಹೀಗಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈಜು ಬಾರದೆ ಸಾವು

ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್, ಮೂವರು ಯುವತಿಯರಿಗೂ ಈಜು ಬರುತ್ತಿರಲಿಲ್ಲ. ಒಬ್ಬಳು ಯುವತಿ ಮಧ್ಯಕ್ಕೆ ಹೋಗಿ ಸಿಲುಕೊಂಡಿದ್ದಳು. ಉಳಿದ ಇಬ್ಬರು ಆಕೆಯ ರಕ್ಷಣೆಗೆ ಹೋಗಿದ್ದಾರೆ. ಈಜು ಬಾರದೆ ಮೂವರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Whats_app_banner