Karnataka Rain: ಕರ್ನಾಟಕ ಕರಾವಳಿ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯ ಮುನ್ಸೂಚನೆ; ಉಡುಪಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ
Jul 25, 2023 08:39 AM IST
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ. (HT)
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದರೆ, ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ, ಕಲಬುರಗಿ, ವಿಜಯಪುರ ಹಾಗೂ ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಬೆಂಗಳೂರು: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದು (Karnataka Heavy Rain), ಇಂದಿನಿಂದ (ಜುಲೈ 25, ಮಂಗಳವಾರ) ಮೂರು ದಿನಗಳ ಕಾಲ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದರೆ, ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ, ಕಲಬುರಗಿ, ವಿಜಯಪುರ ಹಾಗೂ ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ನಾಳೆ (ಜುಲೈ 26, ಬುಧವಾರ) ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದರೆ, ಬೆಳಗಾವಿ, ಹಾವೇರಿ, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಬೀಳುವ ಸಂಭವ ಇದೆ. ರಾಜ್ಯದ ಕೆಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಮಿಂಚು ಗುಡುಗಿನ ಸಾಧ್ಯತೆ ಇದ್ದು, ಬಿರುಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಲೋ ಮೀಟರ್ ವರೆಗೆ ಇರಲಿದೆ.
ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ರಿಂದ 55 ಕಿಲೋ ವೇಗದಲ್ಲಿ ಬೀಸುವ ವಾತಾವಕರಣ ಇರುತ್ತದೆ. ಹೀಗಾಗಿ ಮೀನುಗಾರರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಕಳೆದ ಎರಡ್ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ನದಿಗಳ ನದಿಗಳು ಉಕ್ಕಿ ಹರಿಯುತ್ತಿವೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮತ್ತೊಂದೆಡೆ ಭಾರಿ ಅವಾಂತರಗಳೇ ಸೃಷ್ಟಿಯಾಗಿದ್ದು, ಕರಾವಳಿ ಜಿಲ್ಲೆಗಳ ಜನರು ತತ್ತರಿಸಿ ಹೋಗಿದ್ದಾರೆ.
ಕರಾವಳಿಯಲ್ಲಿ ಹೆಚ್ಚಿನ ಮಳೆಯಿಂದಾಗಿ ನದಿ, ಹಳ್ಳ, ಕೊಳ್ಳಗಳಲ್ಲಿ ಹೆಚ್ಚಿನ ನೀರು ಹರಿಯುತ್ತಿದ್ದು, ಮುಂದಿನ ಎರಡ್ಮೂರು ದಿನ ಭಾರಿ ಮಳೆಯ ಮುನ್ಸೂಚನೆ ಇರುವ ಕಾರಣ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಾಲಾ-ಕಾಲೇಜುಗಳು, ದಕ್ಷಿಣ ಕನ್ನಡದ ಕೆಲವು ತಾಲೂಕುಗಳಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಭಾರಿ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗದಲ್ಲಿ ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ಮಂಗಳೂರಿನ ಮುಗೇರ ಕುದ್ರು ಪ್ರದೇಶ ಮತ್ತೆ ಸಂಕಷ್ಟಕ್ಕೀಡಾಗಿದೆ. ಫಲ್ಗುಣಿ ನದಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದು, ಪ್ರವಾಹ ಪರಿಸ್ಥಿತಿಯಿಂದ ಮುಗೇರ ಕುದ್ರು ದ್ವೀಪದಂತಾಗಿದೆ. ಭಾರಿ ಮಳೆಗೆ ಮಧ್ಯ ಕರ್ನಾಟಕದ ಜಿಲ್ಲೆಗಳು ತತ್ತರಗೊಂಡಿದ್ದು, ದಾವಣಗೆರೆಯಲ್ಲಿ 7 ಮನೆಗಳು ಸಂಪೂರ್ಣವಾಗಿ ಹಾನಿಗೀಡಾಗಿದ್ದರೆ, 15 ಮನೆಗಳು ಭಾಗಶಃ ಹಾನಿಗೀಡಾಗಿವೆ. ಇತ್ತ ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಎಮ್ಮೆಮಾಡುವಿನಲ್ಲಿ ಮನೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿಗಳಿಂದ ಮೋಡ ಕವಿದ ವಾತಾವರಣ ಇದ್ದು, ಇನ್ನೂ ಎರಡ್ಮೂರು ದಿನ ಇದೇ ವಾತಾವರಣ ಮುಂದುವರೆಯಲಿದೆ. ಇಂದು ಹಗುರದಿಂದ ಕೂಡಿದ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 26 ಇರಲಿದ್ದು, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಜುಲೈ 24ರ ಬೆಳಗ್ಗೆ 8.30ರ ವರೆಗೆ ದಾಖಲಾಗಿರುವ ಮಾಹಿತಿ ಪ್ರಕಾರ, ಉತ್ತರ ಕನ್ನಡದ ಸಿದ್ಧಾಪುರ, ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಕರ್ನಾಟಕದಲ್ಲೇ ಅತಿ ಗರಿಷ್ಠ 20 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್‌ನಲ್ಲಿ 19, ಗೇರುಸೊಪ್ಪದಲ್ಲಿ 18, ಯಲ್ಲಾಪುರ, ಸುಬ್ರಹ್ಮಣ್ಯದಲ್ಲಿ ತಲಾ 17, ಮಾಣಿ, ಕೊಟ್ಟಿಗೆಹಾರ ತಲಾ 16, ನಾಪೋಕ್ಲು 15, ಕದ್ರಾ, ಕುಮಟಾ, ಮಂಕಿ, ಹುಂಚದಕಟ್ಟೆ, ಮೂರ್ನಾಡು ತಲಾ 14, ಶಿರಾಲಿ, ಹೊನ್ನಾವರ, ಕೊಲ್ಲೂರು, ತಾಳಗುಪ್ಪ, ಸೋಮವಾರಪೇಟೆ, ಕಮ್ಮರಡಿ, ಕೊಪ್ಪ ತಲಾ 13, ಉಪ್ಪಿನಂಗಡಿ, ಲಿಂಗನಮಕ್ಕಿಯಲ್ಲಿ ತಲಾ 12 ಸೆಂಟಿ ಮೀಟರ್ ಮಳೆಯಾಗಿದೆ.
-----------------------------------------------------------------------------------
ಸಂಬಂಧಿತ ಲೇಖನ