ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಮಂಜಿನೊಂದಿಗೆ ಮುಂದುವರಿದ ಚಳಿ; ಡಿಸೆಂಬರ್ 17 ರಿಂದ 2 ದಿನ ಬೆಂಗಳೂರು ಸೇರಿ 9 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
Dec 16, 2024 07:00 AM IST
ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಂಜು ಹಾಗೂ ಚಳಿಯ ವಾತಾವರಣ ಮುಂದುವರಿದಿದೆ (ಫೋಟೊ-ANI)
- ಡಿಸೆಂಬರ್ 16ರ ಸೋಮವಾರ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಂಜು ಹಾಗೂ ಚಳಿಯ ವಾತಾವರಣ ಮುಂದುವರಿದಿದ್ದು, ಮಳೆಯ ಸಾಧ್ಯತೆ ಕಡಿಮೆ ಇದೆ. ಆದರೆ ಡಿಸೆಂಬರ್ 17ರ ಮಂಗಳವಾರ ಬೆಂಗಳೂರು ನಗರ ಸೇರಿದಂತೆ 9 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಜಿನೊಂದಿಗೆ ಚಳಿ ಮುಂದುವರಿದಿದೆ. ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇಂದು (ಡಿಸೆಂಬರ್ 16, ಸೋಮವಾರ) ಮುಂಜಾನೆಯಿಂದಲೇ ತೀವ್ರ ಮಂಜು ಆವರಿಸಿದೆ. ಬೆಳಗಿನ ಸಮಯದಲ್ಲಿ ಚಳಿ ಮತ್ತು ಹೆಚ್ಚು ಮಂಜು ಇರುವ ಕಾರಣ ಜನ ಮನೆಯಿಂದ ಹೊರ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂದ ಬೆಳಕಿನ ಪರಿಣಾಮವಾಗಿ ಚಾಲಕರಿಗೆ ವಾಹನಗಳನ್ನು ಚಲಾಯಿಸುವುದು ಸವಾಲಿನ ಕೆಲಸವಾಗಿದೆ.
ವಾರಂತ್ಯದ ರಜೆ ಮುಗಿದ ಹಿನ್ನೆಲೆಯಲ್ಲಿ ಜನರು ತಮ್ಮ ದೈನಂದಿನ ಕೆಲಸಗಳಿಗೆ ಹೋಗಲು ಉಲ್ಲನ್ ಸ್ವೆಟರ್ ಮತ್ತು ಟೋಪಿಗಳನ್ನು ಧರಿಸಿ ನಿಧಾನವಾಗಿ ಮನೆಯಿಂದ ಹೊರ ಬರುತ್ತಿದ್ದಾರೆ. ಚಳಿಯಿಂದ ಪಾರಾಗಲು ಕೆಲವರು ಫೈಯರ್ ಕ್ಯಾಂಪ್ ಗಳ ಮೊರೆ ಹೋಗಿದ್ದಾರೆ. ಚಳಿ ಮತ್ತು ಮಂಜಿನ ನಡುವೆ ಮಾರುಕಟ್ಟೆಗಳಲ್ಲಿ ಮುಂಜಾನೆಯ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ನಿನ್ನೆ (ಡಿಸೆಂಬರ್ 15, ಭಾನುವಾರ) ರಾಜ್ಯದ ಯಾವುದೇ ಭಾಗದಲ್ಲೂ ಕೂಡ ಮಳೆಯಾಗಿಲ್ಲ. ಸಮತಟ್ಟಾದ ಪ್ರದೇಶದಲ್ಲಿ ಅತಿ ಕಡಿಮೆ ಉಷ್ಣಾಂಶ 10.2 ಡಿಗ್ರಿ ಸೆಲ್ಸಿಯಸ್ ಬೀದರ್ ನಲ್ಲಿ ದಾಖಲಾಗಿದೆ.
ಲಕ್ಷ್ಮದ್ವೀಪ ಮತ್ತು ಪಕ್ಕದ ಆಗ್ನೇಯ ಅರೇಬಿಯನ್ ಸಮುದ್ರದ ಮೇಲಿನ ವಾಯು ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿಲೋ ಮೀಟರ್ ವರಿಗೆ ವಿಸ್ತರಿಸುತ್ತಿದೆ. ಕಡಿಮೆ ಒತ್ತಡದ ಸಾಧ್ಯತೆ ಇದ್ದು, ಮುಂದಿನ 24 ಗಂಟೆಗಳಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ರಚನೆಯಾಗಲಿದೆ. ನಂತರ ಮುಂದಿನ ಎರಡು ದಿನಗಳಲ್ಲಿ ಪಶ್ಚಿಮ ವಾಯುವ್ಯವಾಗಿ ತಮಿಳುನಾಡಿನ ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.
ಡಿಸೆಂಬರ್ 17ರ ಮಂಗಳವಾರ 9 ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ತುಮಕೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಂಜು ಇರುವ ಸಾಧ್ಯತೆ ಇದೆ.
ಡಿಸೆಂಬರ್ 18ರ ಬುಧವಾರ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ, ತುಮಕೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಕೆಲವೆಡೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ಮಾಹಿತಿ ನೀಡಿದೆ.