logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಭಾರೀ ಮಳೆ ಮುನ್ಸೂಚನೆ, ಬೆಂಗಳೂರು ಹವಾಮಾನ ಹೇಗಿದೆ ?

Karnataka Rains: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಭಾರೀ ಮಳೆ ಮುನ್ಸೂಚನೆ, ಬೆಂಗಳೂರು ಹವಾಮಾನ ಹೇಗಿದೆ ?

Umesha Bhatta P H HT Kannada

Aug 01, 2024 06:45 AM IST

google News

ಕರ್ನಾಟಕದಲ್ಲಿ ಗುರುವಾರವೂ ಮಳೆಯ ಸೂಚನೆಯಿದೆ.

    • Karnataka Weather update ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ಗುರುವಾರವೂ ಭಾರೀಯಿಂದ ಅತಿ ಭಾರೀ ಮಳೆ ನಿರೀಕ್ಷಿಸಲಾಗಿದೆ.
ಕರ್ನಾಟಕದಲ್ಲಿ ಗುರುವಾರವೂ ಮಳೆಯ ಸೂಚನೆಯಿದೆ.
ಕರ್ನಾಟಕದಲ್ಲಿ ಗುರುವಾರವೂ ಮಳೆಯ ಸೂಚನೆಯಿದೆ.

ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀಯಿಂದ ಅತೀ ಭಾರ ಮಳೆ ಗುರುವಾರ ಸುರಿಯಲಿದೆ. ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮಲೆನಾಡಿನ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ( IMD) ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ಸೂಚನೆ ನೀಡಿದೆ. ಈ ಐದೂ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದ್ದು, ಈ ಎರಡು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯಲ್ಲೋ ಅಲರ್ಟ್‌ ಅನ್ನು ಘೋಷಣೆ ಮಾಡಿದೆ. ಬುಧವಾರವೂ ಕರಾವಳಿ. ಮಲೆನಾಡು ಸೇರಿದಂತೆ ಹಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಅಲ್ಲಲ್ಲಿ ಗುಡ್ಡಕುಸಿತ, ಪ್ರವಾಹದಂತಹ ಸನ್ನಿವೇಶಗಳು ಕಂಡು ಬಂದಿವೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಿಗ್ಗೆವರೆಗೂ ಭಾರೀಯಿಂದ ಅತಿ ಭಾರೀ ಮಳೆ ಸುರಿಯಲಿದೆ. ಈ ಭಾಗದಲ್ಲಿ ನಿರಂತರ ಗಾಳಿಯ ವೇಗವು 30-40 ಕಿ.ಮಿ. ತಲುಪುವ ಸಾಧ್ಯತೆಗಳು ಅಧಿಕವಾಗಿವೆ. ತೀವ್ರ ಬಿರುಗಾಳಿಯಿಂದ ಕೂಡಿದ ಹವಾಮಾನವು ಕೆಲವೊಮ್ಮೆ ಬದಲಾವಣೆ ಕೂಡ ಆಗಲಿದೆ. ಸಮುದ್ರಕ್ಕೆ ಇಳಿಯುವ ಮುನ್ನ ಮೀನುಗಾರರು ಎಚ್ಚರಿಕೆ ಕೂಡ ವಹಿಸಬೇಕು ಎಂದು ತಿಳಿಸಲಾಗಿದೆ.

ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗಬಹುದು. ಈ ಎರಡೂ ಜಿಲ್ಲೆಗಳಲ್ಲೂ ಗಾಳಿಯ ವೇಗವು 30-40 ಕಿ.ಮೀ ಇರಬಹುದು. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಹಾಗೂ ಉತ್ತರ ನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಬಹುದು. ಈ ಭಾಗದಲ್ಲಿ ಗಾಳಿಯ ಪ್ರಮಾಣವೂ ಅಧಿಕವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಭಾರೀ ಮಳೆ

ಬುಧವಾರದಂದು ಕರ್ನಾಟಕದ ಆಗುಂಬೆಯಲ್ಲಿ ಅತ್ಯಧಿಕ 21 ಸೆ.ಮೀನಷ್ಟು ಮಳೆಯಾಗಿದೆ. ದಕ್ಷಿಣ ಕನ್ನಡದ ಮಾಣಿ,‌ ಉಪ್ಪಿನಂಗಡಿ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ, ಉತ್ತರ ಕನ್ನಡದ ಕ್ಯಾಸಲ್‌ ರಾಕ್‌, ಮಂಕಿ, ಅಂಕೋಲಾ, ಗೇರುಸೊಪ್ಪಾ, ಉಡುಪಿಯ ಕಾರ್ಕಳ, ಚಿಕ್ಕಮಗಳೂರು ಜಿಲ್ಲೆಯ ಕಮ್ಮರಡಿ, ಶೃಂಗೇರಿ, ಮೂಡಿಗೆರೆ, ಕೊಡಗಿನ ಭಾಗಮಂಡಲದಲ್ಲಿ ಅತಿ ಭಾರೀ ಮಳೆಯಾದ ವರದಿಯಾಗಿದೆ. ಹಾಸನ,ಮಂಡ್ಯ, ಬೆಳಗಾವಿ, ಹಾವೇರಿ, ಶಿವಮೊಗ್ಗ, ಕಲಬುರಗಿ, ದಾವಣಗೆರೆ ಜಿಲ್ಲೆಗಳಲ್ಲಿ ಸಾಧಾರಣಾ ಮಳೆಯಾಗಿದೆ.

ಉಷ್ಣಾಂಶ ಕುಸಿತ

ಕರ್ನಾಟಕದ ಕರಾವಳಿ, ಉತ್ತರ ಒಳನಾಡಿನ ಕೆಲ ಜಿಲ್ಲೆ ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ ಪ್ರಮಾಣ ಕುಸಿತವಾಗಿದೆ. ರಾಯಚೂರಿನಲ್ಲಿ35 ಡಿಗ್ರಿ ಸೆಲ್ಸಿಯಸ್‌, ಕಲಬುರಗಿಯಲ್ಲಿ33.3 ಡಿಗ್ರಿ ಸೆಲ್ಸಿಯಸ್‌, ಕೊಪ್ಪಳದಲ್ಲಿ32.7 ಡಿಗ್ರಿ, ಬಾಗಲಕೋಟೆಯಲ್ಲಿ 32.2 ಡಿಗ್ರಿ, ವಿಜಯಪುರದಲ್ಲಿ 31.5 ಡಿಗ್ರಿ ಸೆಲ್ಸಿಯಸ್‌, ಬೀದರ್‌ ನಲ್ಲಿ 30.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಕಂಡು ಬಂದಿದೆ. ಕಾರವಾರದಲ್ಲಿ 31.6 ಡಿಗ್ರಿ, ಹೊನ್ನಾವರದಲ್ಲಿ 30.4 ಡಿಗ್ರಿ ಇದೆ. ಉಳಿದಂತೆ ಶಿರಾಲಿ 27.8 ಡಿಗ್ರಿ, ಮಂಗಳೂರು ವಿಮಾನ ನಿಲ್ದಾಣ 26.4 ಡಿಗ್ರಿ, ಪಣಂಬೂರು 26.8 ಡಿಗ್ರಿ, ಬೆಳಗಾವಿ ನಗರ 25 ಡಿಗ್ರಿ, ಬೆಳಗಾವಿ ವಿಮಾನ ನಿಲ್ದಾಣ 25.6 ಡಿಗ್ರಿ, ಧಾರವಾಡ 26.8 ಡಿಗ್ರಿ, ಗದಗ 29 ಡಿಗ್ರಿ,. ಹಾವೇರಿ 25.6 ಡಿಗ್ರಿ. ಆಗುಂಬೆ 23.4 ಡಿಗ್ರಿ, ಚಾಮರಾಜನಗರ 27 ಡಿಗ್ರಿ, ಚಿಕ್ಕಮಗಳೂರು 24.4 ಡಿಗ್ರಿ, ಚಿತ್ರದುರ್ಗ27.9, ದಾವಣಗೆರೆ 26 ಡಿಗ್ರಿ. ಹಾಸನ 29.2 ಡಿಗ್ರಿ, ಚಿಂತಾಮಣಿ 28.7 ಡಿಗ್ರಿ, ಮಂಡ್ಯ 28.2 ಡಿಗ್ರಿ. ಮಡಿಕೇರಿ 24.7 ಡಿಗ್ರ, ಮೈಸೂರು 27 ಡಿಗ್ರಿ ಹಾಗೂ ಶಿವಮೊಗ್ಗದಲ್ಲಿ 26.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರಲ್ಲಿ ಸಾಧಾರಣ ಮಳೆ

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆ ಅಲ್ಲಲ್ಲಿ ಆಗಬಹುದು. ಬೆಂಗಳೂರು ನಗರದಲ್ಲಿ ನಿರಂತರ ಗಾಳಿಯ ವೇಗವು 40 ರಿಂದ 50 ಕಿ.ಮಿ. ತಲುಪುವ ಸಾಧ್ಯತೆಗಳು ಹೆಚ್ಚಾಗಿವೆ. ಗರಿಷ್ಠ ಉಷ್ಣಾಂಶವು 28 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್‌ ನಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ