Karnataka Rains: ಕರ್ನಾಟಕದಲ್ಲಿ ಮುಂದುವರೆದ ಮಳೆ; ಉಡುಪಿ, ಮೈಸೂರು, ಕೋಲಾರ ಸಹಿತ 5 ಜಿಲ್ಲೆಗಳಲ್ಲಿ ಭಾರೀ ಮಳೆ ಅಲರ್ಟ್
Oct 22, 2024 10:41 AM IST
ಕರ್ನಾಟಕದ ಆರು ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.
- ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿದಿದ್ದು, ಮಂಗಳವಾರವೂ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು: ಕರ್ನಾಟಕದ ನಾನಾ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಂಗಳವಾರವೂ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಜತೆಗೆ ಕರಾವಳಿ ಭಾಗದಲ್ಲಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವು ಮಂಗಳವಾರದ ವರದಿಯನ್ನು ಬಿಡುಗಡೆ ಮಾಡಿದೆ. ಕರಾವಳಿಯ ಉಡುಪಿ, ಹಳೆ ಮೈಸೂರು ಭಾಗದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆಯಿದೆ. ಈ ಆರೂ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ. ಮೈಸೂರು ಭಾಗದಲ್ಲಿ ಸೋಮವಾರವೂ ಭಾರೀ ಮಳೆಯಾಗಿ ಅಲ್ಲಲ್ಲಿ ಅನಾಹುತಗಳೂ ಆಗಿವೆ. ಈ ವಾರಾಂತ್ಯದವರೆಗೂ ಮಳೆ ಮುಂದುವರಿಯಲಿದೆ ಎಂದು ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಎಲ್ಲೆಲ್ಲಿ ಮಳೆಯಾಗಲಿದೆ
ಕರಾವಳಿ ಭಾಗದ ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಮಂಗಳವಾರ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಬಹುದು.
ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿದ್ದು, ಮಂಗಳವಾರವೂ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ಗುಡುಗು ಮಿಶ್ರಿತ ಮಳೆಯೂ ಆಗಬಹುದು.
ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆ ಆಗಲಿದೆ. ಕೆಲವು ಕಡೆಗಳಲ್ಲಿ ಗುಡುಗು ಕೂಡ ಇರಲಿದೆ
ಉತ್ತರ ಒಳನಾಡಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಒಂದೆರಡು ಕಡೆಗಳಲ್ಲಿ ಗುಡುಗು ಮಿಶ್ರಿತ ಮಳೆಯೂ ಆಗಬಹುದು.
ಅಕ್ಟೋಬರ್ 23 ರ ಬುಧವಾರವೂ ಕರಾವಳಿ ಜಿಲ್ಲೆಗಳು, ಮಲೆನಾಡು ಭಾಗ, ಬೆಂಗಳೂರು ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು, ಹಾಸನ,ಕೊಡಗು, ಮೈಸೂರು, ಮಂಡ್ಯ, ರಾಮನಗರ,ಚಿಕ್ಕಮಗಳೂರು, ಬೆಂಗಳೂರು ನಗರ,ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.
ಉತ್ತರ ಕನ್ನಡದಲ್ಲಿ ಸುರಿದ ಮಳೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಅತ್ಯಧಿಕ ಮಳೆ ಸುರಿದಿದೆ. ಉತ್ತರ ಕನ್ನಡ ಜಿಲ್ಲೆಯ ಕದ್ರಾದಲ್ಲಿ ಅತ್ಯಧಿಕ 11 ಸೆ.ಮೀ ಮಳೆಯಾಗಿದ್ದರೆ, ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ 10 ಸೆ.ಮೀ. ಹಿರೇಕೆರೂರಿನಲ್ಲಿ 8 ಸೆ.ಮೀ ಮಳೆ ಸುರಿದಿದೆ. ಉಡುಪಿ ಜಿಲ್ಲೆ ಕುಂದಾಪುರದಲ್ಲಿ9 ಸೆ. ಮೀ, ದಾವಣಗೆರೆ ಜಿಲ್ಲೆ ಹೊನ್ನಾಳಿ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಿರವತ್ತಿ, ಹೊನ್ನಾವರ, ಸಿದ್ದಾಪುರ, ಬನವಾಸಿ, ಗೋಕರ್ಣ, ಗೇರುಸೊಪ್ಪ, ಜಗಲ್ ಬೆಟ್, ಕ್ಯಾಸಲ್ ರಾಕ್, ಅಂಕೋಲಾ, ಶಿರಾಲಿ, ಕುಮಟಾ, ಯಲ್ಲಾಪುರ, ಮಂಕಿ, ಶಿವಮೊಗ್ಗ ಜಿಲ್ಲೆಯ ಹುಂಚದಕಟ್ಟೆ, ಭದ್ರಾವತಿ, ದಾವಣಗೆರೆ, ಹಾಸನ ಜಿಲ್ಲೆಯ ಶ್ರವಣ ಬೆಳಗೊಳ, ತುಮಕೂರು ಜಿಲ್ಲೆಯ ಕುಣಿಗಲ್, ತಿಪಟೂರು, ಮಂಡ್ಯದ ಕೆಆರ್‌ಎಸ್, ಶ್ರೀರಂಗಪಟ್ಟಣ, ಚಿಕ್ಕಮಗಳೂರು ಜಿಲ್ಲೆಯ ಜಯಪುರ, ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ ಮಳೆಯಾಗಿದೆ.
ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ. ಬಿ ದುರ್ಗ, ಹಾವೇರಿ ಜಿಲ್ಲೆಯ ಗುತ್ತಲ, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ, ಹರಪನಹಳ್ಳಿ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಬೆಳಗಾವಿ, ಉಡುಪಿ ಜಿಲ್ಲೆ ಕಾರ್ಕಳ, ಕೋಟ, ಗದಗ ಜಿಲ್ಲೆ ಬೆಳ್ಳಟ್ಟಿ, ಕೊಡಗು ಜಿಲ್ಲೆ ನಾಪೊಕ್ಲು, ಸೋಮವಾರಪೇಟೆ, ಬೆಳಗಾವಿ ಜಿಲ್ಲೆ ಸೇಡಬಾಳ, ರಾಮನಗರ, ಮಾಗಡಿಯಲ್ಲೂ ಉತ್ತಮ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ಚಿಕ್ಕಮಗಳೂರು ಜಿಲ್ಲೆಯ ಸೃಂಗೇರಿ, ಎನ್‌ಆರ್‌ಪುರ, ತರೀಕೆರೆ, ಕೊಪ್ಪದಲ್ಲೂ ಮಳೆಯಾಗಿದೆ.