ಮದ್ಯ ಮಾರಾಟಗಾರರ ಮುಷ್ಕರ ವಾಪಸ್, ಕರ್ನಾಟಕದಲ್ಲಿ ಇಂದು ಎಣ್ಣೆ ಅಂಗಡಿ ಬಂದ್ ಇಲ್ಲ; ಪ್ರತಿಭಟನೆ ವಾಪಸ್‌ಗೆ ಕಾರಣವೇನು
Nov 20, 2024 01:25 AM IST
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಕರ್ನಾಟಕ ಮದ್ಯ ಮಾರಾಟಗಾರರ ಸಂಘದ ಪ್ರತಿನಿಧಿಗಳು ಮನವಿ ಪತ್ರವನ್ನು ಸಲ್ಲಿಸಿದರು.
- ಕರ್ನಾಟಕದಲ್ಲಿ ಅಬಕಾರಿ ಇಲಾಖೆ ಸಚಿವರು, ಅಧಿಕಾರಿಗಳ ಕಿರುಕುಳ, ಭ್ರಷ್ಟಾಚಾರದ ವಿರುದ್ದ ಆಕ್ರೋಶಗೊಂಡ ಮುಷ್ಕರಕ್ಕೆ ಮುಂದಾಗಿದ್ದ ಮದ್ಯ ವ್ಯಾಪಾರಸ್ಥರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
- ವರದಿ: ಎಚ್.ಮಾರುತಿ.ಬೆಂಗಳೂರು
ಬೆಂಗಳೂರು: ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವ ಜತೆಗೆ ಅಬಕಾರಿ ಇಲಾಖೆ ಸಚಿವರು ಹಾಗೂ ಅಧಿಕಾರಿಗಳಿಂದ ಮಿತಿ ಮೀರಿರುವ ಕಿರುಕುಳ ಕಡಿಮೆ ಮಾಡಿ ಸಹಜ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವ ಭರವಸೆಯನ್ನು ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮದ್ಯ ಮಾರಾಟಗಾರರು ನವೆಂಬರ್ 20ರಂದು ವಹಿವಾಟು ಬಂದ್ ಮಾಡಿ ಮುಷ್ಕರ ನಡೆಸಲು ಮುಂದಾಗಿದ್ದ ನಿರ್ಧಾರವನ್ನು ವಾಪಸ್ ಪಡೆದಿದ್ದಾರೆ. ಇದರಿಂದ ಬುಧವಾರ ಎಂದಿನಂತೆ ಕರ್ನಾಟಕದಾದ್ಯಂತ ಎಂದಿನಂತೆ ಮದ್ಯದಂಗಡಿಗಳು ಕೆಲಸ ಮಾಡಲಿವೆ. ಮದ್ಯ ಮಾರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಮಂಗಳವಾರ ಗೃಹ ಕಚೇರಿ ಕೃಷ್ಣದಲ್ಲಿ ನಡೆಸಿದ ಸಭೆ ಯಶಸ್ವಿಯಾಗಿದ್ದು ಮುಷ್ಕರ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಅಭಯ
ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಅಲ್ಲದೇ ಅಧಿಕಾರಿಗಳು ಮದ್ಯ ಮಾರಾಟಗಾರರಿಗೆ ಕಿರುಕುಳ ನೀಡದಂತೆ ನಿಗಾ ವಹಿಸುವಂತೆ ಅಬಕಾರಿ ಆಯುಕ್ತರಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಮದ್ಯ ಮಾರಾಟಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ ಮದ್ಯ ಮಾರಾಟಗಾರರ ಬೇಡಿಕೆ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು.ಮದ್ಯಮಾರಾಟಗಾರರಿಗೆ ವ್ಯಾಪಾರ ಹೆಚ್ಚಾಗಿ ಸರ್ಕಾರಕ್ಕೆ ಆದಾಯ ತರುವಂತೆ ಪ್ರತ್ಯೇಕ ಜಾರಿ ನಿರ್ದೇಶನಾಲಯ ಮಾಡಲಾಗುವುದು ಎಂದರು.
ರಾಜ್ಯಪಾಲರಿಗೆ ದೂರು ನೀಡಿಲ್ಲ
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯಪಾಲರಿಗೆ ನಾವು ದೂರು ಕೊಟ್ಟಿಲ್ಲ. ಈ ಬಗ್ಗೆ ಸುಳ್ಳು ಹಬ್ಬಿಸಿದ್ದಾರೆ. ದೂರು ಕೊಟ್ಟವರಿಗೂ ನಮಗೂ ಸಂಬಂಧವೇ ಇಲ್ಲ. ಈ ಬಗ್ಗೆ ಬೇಕಿದ್ದರೆ ಪರಿಶೀಲನೆ ನಡೆಸಿ, ತನಿಖೆ ನಡೆಸಿ ಎಂದು ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಒಕ್ಕೋರಲಿನಿಂದ ಸ್ಪಷ್ಟಪಡಿಸಿದರು.
ಅಬಕಾರಿ ಇಲಾಖೆ ವರ್ಗಾವಣೆಗೆ ಕೌನ್ಸಿಲಿಂಗ್ ಪದ್ಧತಿ ಜಾರಿಗೆ ತರುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಿಎಂ ತಿಳಿಸಿದರು.
ಮುಷ್ಕರ ವಾಪಸ್ ಘೋಷಣೆ
ರಾಜ್ಯ ಮದ್ಯ ಮಾರಾಟಗಾರರ ಸಂಘ ನಾಳೆ ನ.20 ರಂದು ಮದ್ಯದಂಗಡಿಗಳನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಇಂದು ಮದ್ಯ ಮಾರಾಟಗಾರರ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಸರ್ಕಾರ ಭರವಸೆ ನೀಡಿರುವ ಹಿನ್ನಲೆಯಲ್ಲಿ ಮುಷ್ಕರವನ್ನು ಹಿಂಪಡೆದಿರುವುದಾಗಿ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ತಿಳಿಸಿದ್ದಾರೆ.
ತಾತ್ಕಾಲಿಕವಾಗಿ ಮಾತ್ರ ಮುಷ್ಕರ ಮುಂದೂಡಿದ್ದೇವೆ. ಸಮಸ್ಯ ಮತ್ತು ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳೇ ಭರವಸೆ ನೀಡಿರುವುದರಿಂದ ನಾಳೆ ಮದ್ಯದ ಅಂಗಡಿಗಳನ್ನು ಬಂದ್ ಮಾಡುವುದಿಲ್ಲ ಒಂದು ವೇಳೆ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಮದ್ಯ ಮಾರಾಟಗಾರರ ಸಂಘ ಎಚ್ಚರಿಕೆ ನೀಡಿದೆ.
ಈ ಹಿಂದೆ ಸಂಘವು ಅಬಕಾರಿ ಇಲಾಖೆಯಲ್ಲಿ ಲಂಚದ ಹಾವಳಿ ಮಿತಿಮೀರಿ ಹೋಗಿದೆ ಎಂದು ಮದ್ಯ ಮಾರಾಟಗಾರರು ಆರೋಪಿಸಿದ್ದರು. ಅಧಿಕಾರಿಗಳಿಂದ ಕಿರುಕುಳ ಹೆಚ್ಚುತ್ತಿದೆ. ಲಂಚಕ್ಕೆ ನೇರವಾಗಿ ಬೇಡಿಕೆ ಇಡಲಾಗುತ್ತಿದೆ. ಅಧಿಕಾರಿಗಳು ಈ ಪೋಸ್ಟ್ ಗೆ ನಾವು ನಾವು ಲಂಚ ಕೊಟ್ಟು ಬಂದಿದ್ದೇವೆ ಎಂದು ಹೇಳಿ ಹಣ ಕೇಳುತ್ತಾರೆ ಎಂದು ಆಪಾದಿಸಿದ್ದರು.
ಸಚಿವರ ವಿರುದ್ದ ದೂರು
ಅಧಿಕಾರಿಗಳು ಸನ್ನದುದಾರರು ತಡೆದುಕೊಳ್ಳಲು ಸಾದ್ಯವಾಗದಷ್ಟು ಕಿರುಕುಳ ನೀಡುತ್ತಿದ್ದಾರೆ. ಎಲ್ಲವೂ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅವರ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂದು ದೂರಿದ್ದರು.
ಬಿಜೆಪಿ ಸರ್ಕಾರದಲ್ಲಿ ಗೋಪಾಲಯ್ಯ ಸಚಿವರಾಗಿದ್ದಾಗಲೂ ಲಂಚ ಹೆಚ್ಚಾಗಿತ್ತು, ಅದಕ್ಕಿಂತ ಹಿಂದೆ ನಾಗೇಶ್ ಸಚಿವರಾಗಿದ್ದಾಗಲೂ ಹೆಚ್ಚಾಗಿತ್ತು. ಈಗ ಲಂಚಾವತಾರ ಮಿತಿ ಮೀರಿದೆ. ಆದರೆ ಸತೀಶ್ ಜಾರಕಿ ಹೊಳಿ ಸಚಿವರಾಗಿದ್ದಾಗ ಲಂಚ ಇರಲಿಲ್ಲ ಎಂದು ಹೇಳಿದ್ದರು. ಆದ್ದರಿಂದ ನ.20ರಂದು ಮದ್ಯದಂಗಡಿಗಳನ್ನು ಮುಚ್ಚುವ ಮೂಲಕ ಮುಷ್ಕರ ನಡೆಸಲು ತೀರ್ಮಾನಿಸಿದ್ದರು.