ನ 13ಕ್ಕೆ ಮೂರು ಕ್ಷೇತ್ರಗಳ ಉಪಚುನಾವಣೆ ಸಿದ್ದತೆ; 48 ಗಂಟೆ ಮುಂಚೆ ಬಹಿರಂಗ ಪ್ರಚಾರ ಅಂತ್ಯ, ಮದ್ಯ ಮಾರಾಟಕ್ಕೆ ನಿಷೇಧ
Nov 09, 2024 10:25 PM IST
ನ 13ಕ್ಕೆ ಮೂರು ಕ್ಷೇತ್ರಗಳ ಉಪಚುನಾವಣೆ ಸಿದ್ದತೆ; 48 ಗಂಟೆ ಮುಂಚೆ ಬಹಿರಂಗ ಪ್ರಚಾರ ಅಂತ್ಯ, ಮದ್ಯ ಮಾರಾಟಕ್ಕೆ ನಿಷೇಧ
- ನವೆಂಬರ್ 13ಕ್ಕೆ ಮೂರು ಕ್ಷೇತ್ರಗಳ ಉಪಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತಗಳಿಂದ ಸಕಲ ಸಿದ್ದತೆ ನಡೆದಿದೆ. 48 ಗಂಟೆ ಮುಂಚೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಮತದಾರರಲ್ಲದವರು ಕ್ಷೇತ್ರ ಬಿಟ್ಟು ಹೋಗಲು ಸೂಚನೆ ನೀಡಲಾಗಿದೆ. ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. (ವರದಿ-ಎಚ್.ಮಾರುತಿ)
ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಆಯಾ ಜಿಲ್ಲಾಡಳಿತ ಸಜ್ಜುಗೊಂಡಿದೆ. ಮತದಾನಕ್ಕೆ ಮೂರು ದಿನಗಳು ಮಾತ್ರ ಬಾಕಿ ಉಳಿದಿದ್ದು, ವಹಿಸಬೇಕಾದ ಕ್ರಮಗಳನ್ನು ಕುರಿತು ಜಿಲ್ಲಾಡಳಿತಗಳು ಮುನ್ಸೂಚನೆ ನೀಡಿವೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿ ಜಿಲ್ಲೆಯ ಶಿಂಗ್ಗಾವಿ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳಿಗೆ ನವೆಂಬರ್ 13ರ ಬುಧವಾರ ಮತದಾನ ನಡೆಯಲಿದೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಕ್ಷೇತ್ರದ ಮತದಾರರಲ್ಲದವರು ನ.11ರ ಸಂಜೆ 5.30ರ ನಂತರ ಕ್ಷೇತ್ರಗಳನ್ನು ಬಿಟ್ಟು ಹೊರಹೋಗಬೇಕು. ಮತದಾರರಲ್ಲದವರು ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವಂತಿಲ್ಲ. ಅಂದು ಸಂಜೆ 6ಕ್ಕೆ ಬಹಿರಂಗ ಪ್ರಚಾರವೂ ಅಂತ್ಯಗೊಳ್ಳಲಿದೆ. ಮೂರೂ ಕ್ಷೇತ್ರಗಳಲ್ಲಿ ನ.12ರ ಮಂಗಳವಾರ ಸಂಜೆ 6 ಗಂಟೆಯಿಂದ ನ.14ರ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೆ ವಿವಿಧ ಷರತ್ತುಗಳನ್ನು ವಿಧಿಸಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಮದ್ಯ ಮಾರಾಟಕ್ಕೆ ನಿಷೇಧ
ನವೆಂಬರ್ 11ರ ಸೋಮವಾರ ಸಂಜೆ 6 ಗಂಟೆಯಿಂದ ನವೆಂಬರ್ 14ರ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೆ ಕ್ಷೇತ್ರಗಳಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಸಾಗಾಣೆಯನ್ನು ನಿಷೇಧಿಸಲಾಗಿದೆ. ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕ್ಷೇತ್ರದ ಮತದಾರರಲ್ಲದವರು ಅಥವಾ ಕ್ಷೇತ್ರದ ಚುನಾವಣಾ ಗುರುತಿನ ಚೀಟಿ ಇಲ್ಲದವರಿಗೆ ವಾಸ್ತವ್ಯಕ್ಕೆ ಅವಕಾಶ ನೀಡಬಾರದು ಎಂದು ಹೋಟೆಲ್, ರೆಸಾರ್ಟ್ಸ್, ಹೋಂ ಸ್ಟೇ ಮತ್ತು ಕಲ್ಯಾಣ ಮಂಟಪಗಳ ಮಾಲೀಕರಿಗೆ ಮಾಹಿತಿ ನೀಡಲಾಗಿದೆ.
ಗರಿಷ್ಠ 50 ಸಾವಿರ ನಗದು ಸಾಗಿಸಬಹುದು
ಐವರಿಗಿಂತ ಹೆಚ್ಚು ಜನರು ಒಟ್ಟಾಗಿ ಸಂಚರಿಸುವಂತಿಲ್ಲ. ನವೆಂಬರ್ 11ರ ಸಂಜೆ 6ಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ವಾಹನಗಳ ಮೂಲಕ ಬಹಿರಂಗ ಪ್ರಚಾರ ಮತ್ತು ಧ್ವನಿವರ್ದಕಗಳ ಬಳಕೆಗೆ ಅವಕಾಶ ಇರುವುದಿಲ್ಲ. ಆದರೆ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದು. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವ್ಯಕ್ತಿಯೊಬ್ಬರು ಗರಿಷ್ಠ ರೂ. 50 ಸಾವಿರ ನಗದು ಸಾಗಿಸಬಹುದಾಗಿದೆ. ಅದಕ್ಕೂ ಹೆಚ್ಚಿನ ಮೊತ್ತ ಕೊಂಡೊಯ್ಯಬೇಕಾದರೆ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕಾಗುತ್ತದೆ.
ಮತದಾರರನ್ನು ಸೆಳೆಯಲು ಹಣ ಮತ್ತು ಇತರೆ ಆಮಿಷ ಒಡುತ್ತಿದ್ದರೆ ದೂರು ದಾಖಲಿಸಲು 1950ಗೆ ಕರೆ ಮಾಡಬಹುದು ಅಥವಾ ಸಿ-ವಿಜಿಲ್ ಆಪ್ ಮೂಲಕ ದೂರು ನೀಡಲು ಅವಕಾಶವಿದೆ. ಮೂರೂ ಕ್ಷೇತ್ರಗಳಲ್ಲಿ ಪಾರದರ್ಶಕ ಚುನಾವಣೆಗೆ ಎಲ್ಲಾ ಹಂತದಲ್ಲಿ ಇವಿಎಂ ಮತಯಂತ್ರಗಳನ್ನು ಪರಸೀಲನೆ ನಡೆಸಲಾಗಿದ್ದು ಯಾವುದೇ ಗೊಂದಲ ಇಲ್ಲ ಎಂದು ಜಿಲಾಡಳಿತಗಳು ತಿಳಿಸಿವೆ.
ಚನ್ನಪಟ್ಟಣದಲ್ಲಿ ಸೂಕ್ತ ಬಂದೋಬಸ್ತ್
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 276 ಮತಗಟ್ಟೆ ಸ್ಥಾಪಿಸಲಾಗಿದೆ. ಎಲ್ಲಾ ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ಪ್ರಕ್ರಿಯೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 119 ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತಿಳಿಸಿದರು ತಿಳಿಸಿದ್ದಾರೆ. ಈಗಾಗಲೇ 8 ಪ್ಯಾರಾ ಮಿಲಿಟರಿ ತಂಡ ಆಗಮಿಸಿದ್ದು, ಅದರಲ್ಲಿ ಏಳು ಪ್ಯಾರಾ ಮಿಲಿಟರಿ ಪಡೆಯನ್ನು 197 ಮತಗಟ್ಟೆಗಳ ಬಂದೋಬ್‌ಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದರು. 119 ಸೂಕ್ಷ್ಮ ಮತಗಟ್ಟೆ ಸ್ಥಾಪಿಸಲಾಗಿದೆ. ಒಂಬತ್ತು ಅಬಕಾರಿ ಪ್ರಕರಣಗಳು ದಾಖಲಾಗಿದ್ದು, 676 ಸೀರೆ ಜಪ್ತಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ವ್ಯವಸ್ಥಾಪಕ ಹಾಗೂ ಮತ್ತೊಬ್ಬರ ಮೇಲೆ ಎಫ್‌ಐಆರ್ ದಾಖಲಾಗಿದೆ.