Kasaragod: ಕನ್ನಡ ಹೋರಾಟಗಾರರೇ, ಕಾಸರಗೋಡಿನ ಸರ್ಕಾರಿ ಶಾಲೆಯಲ್ಲಿ ಕನ್ನಡ ಉಳಿಸಲು ಮಕ್ಕಳು ಬೀದಿಗಿಳಿದಿದ್ದಾರೆ, ನೀವು ಎಲ್ಲಿದ್ದೀರಿ? VIDEO
Jun 23, 2023 06:53 PM IST
ಕನ್ನಡ ಉಳಿಸಲು ವಿದ್ಯಾರ್ಥಿಗಳ ಪ್ರತಿಭಟನೆ
- Kasaragod Kannada School: ಸುಳ್ಯ ಸಮೀಪ ಅಡೂರು ಇದೆ. ಇದು ಕರ್ನಾಟಕ ಕೇರಳದ ಗಡಿಭಾಗವೂ ಹೌದು. ಇಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಇದೆ. ಇಲ್ಲಿ, ಇತ್ತೀಚೆಗೆ ಮಲಯಾಳಿ ಶಿಕ್ಷಕರೊಬ್ಬರನ್ನು ನೇಮಿಸಲಾಗಿದೆ. ಸಮಾಜ ವಿಜ್ಞಾನ ಪಾಠ ಕಲಿಸಲು ಮಲಯಾಳ ಭಾಷಿಗರು ಬಂದದ್ದನ್ನು ವಿರೋಧಿಸಿ ಸ್ಥಳೀಯರು ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಕ್ಯಾರೆನ್ನಲಿಲ್ಲ.
ಮಂಗಳೂರು: ನೀವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಸಿನಿಮಾ ನೋಡಿದ್ದರೆ, ಅದರಲ್ಲಿನ ಕೋರ್ಟ್ ಸೀನ್ನಲ್ಲಿ ವಕೀಲನ ಪಾತ್ರ ಮಾಡುವ ಅನಂತನಾಗ್ ಒಂದು ಡಯಲಾಗ್ ಹೇಳುತ್ತಾರೆ.
“ಸಂಸತ್ತಿಗೆ ಸಂಸದರು ಬರಲ್ಲ ಎಂದು ಪಾರ್ಲಿಮೆಂಟನ್ನು ಮುಚ್ಚಲ್ಲ. ಐಸಿಯುಗೆ ರೋಗಿಗಳು ಬರಲ್ಲ ಎಂದು ಐಸಿಯು ಮುಚ್ಚೋಕೆ ಆಗಲ್ಲ. ಅದೇ ರೀತಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದು ಮಗು ಇದ್ದರೂ ಅಲ್ಲಿ ಕನ್ನಡಿಗರೇ ಶಿಕ್ಷಕರಾಗಿ ಇರಬೇಕು. ಅದನ್ನು ಮುಚ್ಚುವುದಕ್ಕೆ ಸಾಧ್ಯವಿಲ್ಲ”
ಅನಂತನಾಗ್ ಈ ಸಂಭಾಷಣೆಯನ್ನು ಸಿನಿಮಾದಲ್ಲಿ ಹೇಳುವಾಗ ಚಪ್ಪಾಳೆ ಮುಗಿಲುಮುಟ್ಟುತ್ತದೆ. ಕಣ್ಣು ಆರ್ದ್ರಗೊಳ್ಳುತ್ತದೆ. ಇಂಥದ್ದೊಂದು ಸಿನಿಮಾ ಮಾಡಿದ ರಿಷಭ್ ಶೆಟ್ಟಿ ಅವರ ಮೇಲೆ ಹೆಮ್ಮೆ ಎನಿಸುತ್ತದೆ. ಕನ್ನಡಿಗರ ಸ್ವಾಭಿಮಾನದ ಕಿಚ್ಚು ಇಂಥದ್ದು ಎಂದು ಸೋಶಿಯಲ್ ಮೀಡಿಯಾಗಳಲ್ಲು ಪುಂಖಾನುಗಟ್ಟಲೆ ಸಾಹಿತ್ಯಗಳು ಸೃಷ್ಟಿಯಾಗುತ್ತವೆ. ಆದರೆ ಥೇಟ್ ಅಂಥದ್ದೇ ಒಂದು ಸ್ಥಿತಿ ಗಡಿನಾಡ ಕಾಸರಗೋಡು ಜಿಲ್ಲೆಯಲ್ಲಿ ಉದ್ಭವವಾಗಿದೆ. ಮಾಧ್ಯಮಗಳು ಒಂದೊಂದಾಗಿ ಈ ಕುರಿತು ಬೆಳಕು ಚೆಲ್ಲುತ್ತಿವೆಯೇ ಹೊರತು, ಕನ್ನಡಪರ ಸಂಘಟನೆಗಳು ಈ ಕುರಿತು ಇದುವರೆಗೂ ಪ್ರಬಲವಾದ ಅಭಿಯಾನವನ್ನು ಆರಂಭಿಸಿಲ್ಲ. ಬೆಂಗಳೂರಿನಲ್ಲಿ ಕನ್ನಡ ಉಳಿಸುತ್ತೇವೆ ಎಂದು ಹೇಳುವ ದೊಡ್ಡ ದೊಡ್ಡ ಹೋರಾಟಗಾರರು ಕಾಸರಗೋಡು ಕಡೆಗೆ ಧಾವಿಸಿಲ್ಲ. ಫೇಸ್ ಬುಕ್ಗಳಲ್ಲಿ ಒಣಚರ್ಚೆಗಳೇ ಸದ್ದುಮಾಡುತ್ತಿವೆಯೇ ಹೊರತು, ಈ ಕುರಿತು ದೊಡ್ಡ ಮಟ್ಟಿನ ಹ್ಯಾಷ್ ಟ್ಯಾಗ್ ಚಳವಳಿಯೇ ಆಗಿಲ್ಲ. ಸಿನಿಮಾವೇ ಬೇರೆ, ವಾಸ್ತವವೇ ಬೇರೆ.
ಕನ್ನಡಿಗರನ್ನು ಹತ್ತಿಕ್ಕುವ ಕೆಲಸ:
ಇದು ಇಂದು ನಿನ್ನೆಯದಲ್ಲ, ಕನ್ನಡಿಗರನ್ನು ಹತ್ತಿಕ್ಕುವ ಕೆಲಸ ಗಡಿನಾಡ ಕಾಸರಗೋಡಿನಲ್ಲಿ ಹಲವು ವರ್ಷಗಳಿಂದ ಆಗುತ್ತಿವೆ. ಕನ್ನಡದ ಸೋದರ ಭಾಷೆಯಾದ ತುಳು ಭಾಷಿಗರು ಬಹಳಷ್ಟಿರುವ ಉತ್ತರ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡವನ್ನು ಸಂಪೂರ್ಣ ದಮನಿಸಲಾಗುತ್ತಿದೆ. ಒಂದು ಭಾಷೆಯನ್ನು ಕೊಲ್ಲಬೇಕು ಎಂದಿದ್ದರೆ, ಸಂಸ್ಕೃತಿಯನ್ನು ಹೊಸಕಿಹಾಕಬೇಕು ಎಂಬಂತೆ, ತುಳು ಸಂಪ್ರದಾಯ, ಸಂಸ್ಕೃತಿಯನ್ನು ಸಂಪೂರ್ಣ ಮಲಯಾಳೀಕರಣ ಮಾಡಿ, ಮಲಯಾಳವೇ ಚೆನ್ನಾಗಿದೆ ಎಂದು ಹೇಳುವುದೊಂದೇ ಬಾಕಿ ಎನ್ನುವಂತೆ ವ್ಯವಸ್ಥಿತವಾಗಿ ಬದಲಾಯಿಸಲಾಗಿದೆ. ರಿಷಭ್ ಶೆಟ್ಟಿ ಇಂಥದ್ದೊಂದು ಎಳೆಯನ್ನು ಹಿಡಿದುಕೊಂಡು 2018ರಲ್ಲಿ ಸಿನಿಮಾ ಮಾಡಿದ್ದರು. ಅದಾಗಿ ಐದು ವರ್ಷ ಕಳೆದರೂ ಸ್ಥಿತಿ ಬದಲಾಗಿಲ್ಲ. ಕನ್ನಡ ಶಾಲೆಗಳೇ ಇಲ್ಲದಿದ್ದರೆ, ಭಾಷೆ ಎಲ್ಲಿಂದ ಕಲೀತಾರೆ ಎಂಬ ಹುಂಬತನದಿಂದ ಕೇರಳ ಸರ್ಕಾರ ಅಲ್ಲಿ ಮಲಯಾಳಿ ಶಿಕ್ಷಕರನ್ನು ನೇಮಿಸುವ ಮೂಲಕ ಕನ್ನಡವನ್ನು ವ್ಯವಸ್ಥಿತವಾಗಿ ಮಟ್ಟ ಹಾಕುತ್ತಿದೆ.
ಎಲ್ಲಿದೆ ಅಡೂರು?
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪ ಅಡೂರು ಇದೆ. ಇದು ಕರ್ನಾಟಕ ಕೇರಳದ ಗಡಿಭಾಗವೂ ಹೌದು. ಇಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಇದೆ. ಇಲ್ಲಿ, ಇತ್ತೀಚೆಗೆ ಮಲಯಾಳಿ ಶಿಕ್ಷಕರೊಬ್ಬರನ್ನು ನೇಮಿಸಲಾಗಿದೆ. ಸಮಾಜ ವಿಜ್ಞಾನ ಪಾಠ ಕಲಿಸಲು ಮಲಯಾಳ ಭಾಷಿಗರು ಬಂದದ್ದನ್ನು ವಿರೋಧಿಸಿ ಸ್ಥಳೀಯರು ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಅವರು ಕ್ಯಾರೆನ್ನಲಿಲ್ಲ. ಹೀಗಾಗಿ ಕೆಲದಿನಗಳ ಹಿಂದೆ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದ್ದರು. ಇದೀಗ ಸ್ಥಳೀಯರು ಹೈಕೋರ್ಟ್ ಮೆಟ್ಟಲೇರಿದ್ದಾರೆ.
ರಾಜ್ಯ ಸರ್ಕಾರ ಏನು ಮಾಡಿತು?
ಕರ್ನಾಟಕ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಕೇರಳ ಶಿಕ್ಷಣ ಸಚಿವ ಶಿವನ್ ಕುಟ್ಟಿ ಅವರಿಗೆ ಜೂನ್ 5ಕ್ಕೆ ಈ ಕುರಿತು ಪತ್ರ ಬರೆದಿದ್ದರು. ಗಡಿನಾಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರದ್ದು ಮಾತೃಭಾಷೆಯಲ್ಲಿ ಕಲಿಯುವುದು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದ್ದರು. ಆದರೆ ಈ ಮನವಿಗೂ ಕೇರಳ ಸರ್ಕಾರ ಸೊಪ್ಪು ಹಾಕಿಲ್ಲ.
ಕಡ್ಡಾಯ ಕನ್ನಡ ಶಿಕ್ಷಕರ ನೇಮಕವಾಗಬೇಕಿತ್ತು
ಕಾಸರಗೋಡಿನಲ್ಲಿ ಕನ್ನಡ ವಿಭಾಗದ ಶಾಲೆಗಳಿಗೆ ಶಿಕ್ಷಕರ ನೇಮಕ ಕುರಿತು 2013ರಲ್ಲಿ ಕೇರಳ ಕೆ.ಪಿ.ಎಸ್.ಸಿ. ಅಧಿಸೂಚನೆಯೊಂದನ್ನು ಹೊರಡಿಸಿತ್ತು. ಅದರಂತೆ ಕಾಸರಗೋಡಿನ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕ ಕಡ್ಡಾಯಗೊಳಿಸಿತ್ತು. 2019, 2020ರಲ್ಲಿ 18ಕ್ಕೂ ಅಧಿಕ ಶಿಕ್ಷಕರನ್ನು ನೇಮಿಸಲಾಯಿತು. ಅದರಲ್ಲಿ ಕನ್ನಡ ಬಾರದ ಮಲಯಾಳಿ ಶಿಕ್ಷಕರೂ ಸೇರಿದ್ದರು. ಮಲಯಾಳಿ ಶಿಕ್ಷಕರನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ನೇಮಿಸುವ ನಿರ್ಧಾರದ ಕುರಿತು ವಿದ್ಯಾರ್ಥಿಗಳು, ಪೋಷಕರು ತೀವ್ರ ಹೋರಾಟ ನಡೆಸಿದ್ದರು. ಕೇರಳ ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದರು. ಆಗ ಕನ್ನಡ ಭಾಷಾ ತರಬೇತಿ ಪಡೆದು ಪಾಠ ಮಾಡುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಕೆಲ ಶಿಕ್ಷಕರು ಕೇರಳ ಸರ್ಕಾರದ ಸೂಚನೆಯಂತೆ ಮೈಸೂರು ಭಾಷಾ ಅಧ್ಯಯನ ಕೇಂದ್ರಕ್ಕೆ ಕನ್ನಡ ಕಲಿಯಲು ಹೋದರು. ಉಳಿದ ಶಿಕ್ಷಕರು ಬೇರೆ ಕಡೆ ವರ್ಗಾವಣೆ ಹೊಂದಿದರು. ಮಲಯಾಳ ಭಾಷಿಕ ಶಿಕ್ಷಕರು 10 ತಿಂಗಳ ಕಾಲ ಮೈಸೂರು ಭಾಷಾ ಅಧ್ಯಯನ ಕೇಂದ್ರಕ್ಕೆ ತೆರಳಿ, ಕನ್ನಡ ಕಲಿತು ಕರ್ತವ್ಯಕ್ಕೆ ಹಾಜರಾಗುತ್ತಾರೆ. ಆದರೆ ತರಗತಿಯಲ್ಲಿ ಪಾಠ ಮಾಡಲು ಸಮಸ್ಯೆಯಾಗುತ್ತದೆ. ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ.
ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು