Bagalkot:ಬಸ್‌ನಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರೇ ತುಂಬಿಕೊಂಡ್ರೆ ಹುಡುಗರು ಏನ್ ಮಾಡ್ಬೇಕು? ಬಾಗಲಕೋಟೆಯಲ್ಲಿ ಬಸ್ ತಡೆದ ವಿದ್ಯಾರ್ಥಿಗಳು
Shakthi Yojane Effect: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್ ತಡೆದು ಅಸಮಾಧಾನ ತೋಡಿಕೊಂಡರು. ಬಸ್‌ಗಳು ಸಂಪೂರ್ಣವಾಗಿ ತುಂಬಿ ಬರುತ್ತಿವೆ, ನಿಲ್ಲಲು ಕೂಡ ಜಾಗವಿಲ್ಲ. ಹೀಗಾದರೆ ನಾವೆಲ್ಲರೂ ಶಾಲಾ-ಕಾಲೇಜುಗಳಿಗೆ ಹೋಗುವುದಾದರು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಬಾಗಲಕೋಟೆ: ಶಕ್ತಿ ಯೋಜನೆಯ (shakthi yojane) ಪರಿಣಾಮವಾಗಿ ಮಹಿಳಾ ಪ್ರಯಾಣಿಕರು, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ನಲ್ಲಿ ಪ್ರಯಾಣಿಸುವಂತಾಗಿದೆ. ಆದರೆ ವಿವಿಧ ಗ್ರಾಮಗಳಿಂದ ಕಾಲೇಜ್‌ಗೆ ತೆರಳುವ ವಿದ್ಯಾರ್ಥಿಗಳು ಬಸ್‌ನಲ್ಲಿ ಜಾಗವಿಲ್ಲದೇ ಪರದಾಡುವಂತಾಗಿದೆ. ಕೊನೆಗೆ ಅನಿವಾರ್ಯವಾಗಿ ಬಸ್ ಅನ್ನೇ ತಡೆದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್ ತಡೆದು ಅಸಮಾಧಾನ ತೋಡಿಕೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳ ಸಂಚಾರ ಆರಂಭಿಸಿಲ್ಲ, ಇರುವ ಬಸ್‌ಗಳು ಸಂಪೂರ್ಣವಾಗಿ ತುಂಬಿ ಬರುತ್ತಿವೆ, ನಿಲ್ಲಲು ಕೂಡ ಜಾಗವಿಲ್ಲ. ಹೀಗಾದರೆ ನಾವೆಲ್ಲರೂ ಶಾಲಾ-ಕಾಲೇಜುಗಳಿಗೆ ಹೋಗುವುದಾದರು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಇದು ಈ ದಿನಕ್ಕೆ ಸೀಮಿತವಾಗಿಲ್ಲ, ಪ್ರತಿದಿನ ನಮಗೆ ಕಾಲೇಜ್ ತಲುಪುವುದು ಹಾಗೂ ಅಲ್ಲಿಂದ ಪುನಃ ನಮ್ಮ ಗ್ರಾಮಗಳಿಗೆ ಹೋಗುವುದು ದೊಡ್ಡ ಸಾಹಸವಾಗಿದೆ, ಬಸ್‌ಗಾಗಿ ಗಂಟೆ ಗಟ್ಟಲೇ ಕಾದರೂ ಸಹ ಬಸ್ ಬಾರದ ಹಾಗೂ ಬಸ್ ಬಂದರೂ ಸಂಪೂರ್ಣವಾಗಿ ಫುಲ್ ಆಗಿರುವ ಬಸ್‌ಗಳೇ ಬರುತ್ತಿವೆ, ನಮ್ಮ ಪರಿಸ್ಥಿತಿ ಯಾರಿಗೆ ಹೇಳಬೇಕು, ಹಲವಾರು ಬಾರಿ ಹೆಚ್ಚುವರಿ ಬಸ್ ಬಿಡುವಂತೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಶೇಳ್ಳಿಕೇರಿ, ನೀರ ಬೂದಿಹಾಳ, ಗಂಗನಬೂದಿಹಾಳ, ಯಂಡಿಗೇರಿ, ಕೆರಕಲಮಟ್ಟಿ ಗ್ರಾಮಗಳ ಮೂಲಕ ಬರುವ ಬಸ್‌ಗಳನ್ನು ತಡೆದ ವಿದ್ಯಾರ್ಥಿಗಳು, ಕೂಡಲೇ ಈ ಎಲ್ಲ ಗ್ರಾಮಗಳಿಂದ ಹೋಗುವ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್ ಬಿಡಬೇಕು, ಹೆಚ್ಚುವರಿ ಬಸ್‌ಗಳ ಸಂಚಾರವನ್ನು ಕೂಡಲೇ ಆರಂಭಿಸಬೇಕು, ಇಲ್ಲವಾದರೆ ಶೈಕ್ಷಣಿಕ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬೀಳಲಿದೆ, ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸಿ ಎಂದು ಒತ್ತಾಯಿಸಿದರು.
ವರದಿ: ಸಮೀವುಲ್ಲಾ ಉಸ್ತಾದ