ಕೇರಳದ ಪಾಪ್ಯುಲರ್ ಫೈನಾನ್ಸ್ ಹಗರಣ, ಬೆಂಗಳೂರಿಗರಿಗೆ 100 ಕೋಟಿ ರೂ. ವಂಚನೆ; ಸಿಐಡಿ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ
Dec 23, 2024 07:13 PM IST
ಕೇರಳದ ಪಾಪುಲರ್ ಫೈನಾನ್ಸ್ ವಂಚನೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಲು ಕರ್ನಾಟಕ ಸಿಐಡಿ ಸಿದ್ದವಾಗಿದೆ.
- ಕೇರಳದ ಪಾಪ್ಯುಲರ್ ಫೈನಾನ್ಸ್ ನಡೆಸಿದ ವಂಚನೆ ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ಕರ್ನಾಟಕ ಸಿಐಡಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.
ಬೆಂಗಳೂರು: ಕೇರಳದಲ್ಲಿ ಬಹುಕೋಟಿ ಹಗರಣದಲ್ಲಿ ಸಿಲುಕಿ ಬೆಂಗಳೂರಿನ 2,000 ಕ್ಕೂ ಹೆಚ್ಚು ಗ್ರಾಹಕರಿಂದ ಹಣ ಲಪಟಾಯಿಸಿದ್ದ ಕೇರಳದ ಪಾಪ್ಯುಲರ್ ಫೈನಾನ್ಸ್ ನ ಹಗರಣದ ತನಿಖೆ ನಡೆಸಿರುವ ಕರ್ನಾಟಕ ಸಿಐಡಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ದರಾಗುತ್ತಿದ್ದಾರೆ. ಈಗಾಗಲೇ ಈ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿರುವ ಸಿಐಡಿ ಪೊಲೀಸರು ಸಾಕಷ್ಟು ಮಾಹಿತಿ ಕಲೆ ಹಾಕಿದ್ಧಾರೆ. ಇಡೀ ಪ್ರಕರಣದ ಕುರಿತು ವಿಚಾರಣೆಯನ್ನು ಅಂತಿಮಗೊಳಿಸಿದ್ದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆದ ನಂತರ ಹಣ ಕಳೆದುಕೊಂಡಿರುವವರು ತಮ್ಮ ಠೇವಣಿ ಮೊತ್ತವನ್ನು ವಾಪಾಸ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಕೇರಳ ಮೂಲದ ಆರು ದಶಕಗಳ ಹಿಂದೆಯೇ ಆರಂಭಿಸಿರುವ ಪಾಪ್ಯುಲರ್ ಫೈನಾನ್ಸ್ ಇಡೀ ಕೇರಳದಲ್ಲಿ ವಹಿವಾಟು ಹೊಂದಿದೆ. ನೂರಾರು ಶಾಖೆಗಳು ಅಲ್ಲಿ ಕೆಲಸ ಮಾಡುತ್ತಿವೆ. ಪಾಪ್ಯುಲರ್ ಫೈನಾನ್ಸ್, ಕೇರಳದ ಪಥನಂತಿಟ್ಟದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ, ಒಂದು ಕಾಲದಲ್ಲಿ ಆ ರಾಜ್ಯದ ಅತ್ಯಂತ ವಿಶ್ವಾಸಾರ್ಹ ಹಣಕಾಸು ಸಂಸ್ಥೆಯಾಗಿತ್ತು. ಇದು 1960 ರ ದಶಕದ ಮಧ್ಯಭಾಗದಲ್ಲಿ ಥಾಮಸ್ ಅವರ ತಂದೆಯಿಂದ ಸಣ್ಣ-ಸಮಯದ ಚಿಟ್ ಫಂಡ್ ಆಗಿ ಸ್ಥಾಪಿಸಲ್ಪಟ್ಟಿತು ಮತ್ತು ಠೇವಣಿಗಳ ಮೇಲೆ ಆಕರ್ಷಕ ಆದಾಯವನ್ನು ನೀಡುವ ಎನ್‌ಬಿಎಫ್‌ಸಿಯಾಗಿ ಬೆಳೆಯಿತು.
ಇದರ ನಡುವೆ ಕಂಪನಿಯು 2013 ರಲ್ಲಿ ಕರ್ನಾಟಕದಲ್ಲೂ ವಹಿವಾಟು ವಿಸ್ತರಿಸಿ ಬೆಂಗಳೂರಿನಲ್ಲಿ 20 ಶಾಖೆಗಳನ್ನು ತೆರೆಯಿತು. ಇದು ಠೇವಣಿಗಳನ್ನು ಸ್ವೀಕರಿಸಿ ವಾರ್ಷಿಕ ಆದಾಯದಲ್ಲಿ ಶೇ.12 ರ ಆಮಿಷ ತೋರಿತು. 2,000 ಕ್ಕೂ ಹೆಚ್ಚು ಬೆಂಗಳೂರಿಗರು 100 ಕೋಟಿ ರೂಪಾಯಿ ಗಳನ್ನು ಇಲ್ಲಿ ಹೂಡಿದ್ದರು. ಆದರೆ ಏಕಾಏಕಿ ಕೋವಿಡ್ ಸಮಯದಲ್ಲಿ ಸಂಸ್ಥೆ ಕಚೇರಿಗಳನ್ನು ಮುಚ್ಚಿತು. ಕಂಗಾಲಾದ ಗ್ರಾಹಕರು ಬೆಂಗಳೂರು ವಿವಿಧ ಠಾಣೆಗಳಲ್ಲಿ ದೂರು ನೀಡಿದ್ದರು. ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು.
ಇಲ್ಲಿಯವರೆಗೆ, ನಗರದಿಂದ 2,000 ಕ್ಕೂ ಹೆಚ್ಚು ಠೇವಣಿದಾರರು ಪೊಲೀಸ್ ದೂರುಗಳನ್ನು ದಾಖಲಿಸಿದ್ದಾರೆ. ನಗರದ ಯಶವಂತಪುರ, ಎಚ್‌ಎಸ್‌ಆರ್ ಲೇಔಟ್, ಬಾಣಸವಾಡಿ, ಮೈಕೋ ಲೇಔಟ್ ಸೇರಿ ನಾಲ್ಕು ಪೊಲೀಸ್ ಠಾಣೆಗಳಲ್ಲಿ ಒಟ್ಟು 66 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದಿರುವ ಹಗರಣದ ಪ್ರಮಾಣ 100 ಕೋಟಿ ರೂ. ತನಿಖೆಯ ಅಂತಿಮ ಹಂತದಲ್ಲಿದ್ದೇವೆ. ಕಂಪನಿಯ ಮಾಲೀಕ ಥಾಮಸ್ ಡೇನಿಯಲ್, ಅವರ ಪತ್ನಿ ಮತ್ತು ಮೂವರು ಪುತ್ರಿಯರ ವಿರುದ್ಧ ಚಾರ್ಜ್ ಶೀಟ್ ಸಿದ್ಧಪಡಿಸಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿರುವ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಬಹುಕೋಟಿ ಹಗರಣದ ಕುರಿತು ಈಗಾಗಲೇ ಸಿಬಿಐ ಕೂಡ ತನಿಖೆ ನಡೆಸುತ್ತಿದೆ. ಇಡಿ ಕೂಡ ದಾಳಿ ನಡೆಸಿ ಹಣ ವಿದೇಶದಲ್ಲಿ ಹೂಡಿಕೆ ಮಾಡಿರುವುದು ಸೇರಿದಂತೆ ಹಲವು ಮಾಹಿತಿಗಳನ್ನು ಕಲೆ ಹಾಕಿದೆ. ಇದರ ನಡುವೆ ಸಿಐಡಿ ತನ್ನ ವ್ಯಾಪ್ತಿಯ ಪ್ರಕರಣದ ವಿಚಾರಣೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಲು ತಯಾರಿ ಮಾಡಿಕೊಳ್ಳುತ್ತಿದೆ.
ಕರ್ನಾಟಕದಲ್ಲಿಯೂ ಸರ್ಕಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತು, ಅವರು ಅದನ್ನು ಕೈಗೆತ್ತಿಕೊಳ್ಳಲಿಲ್ಲ. ಇದರಿಂದ ಸಿಐಡಿ ತನಿಖೆ ಮುಂದುವರಿಸಿದೆ. ಸಂಸ್ಥೆಯ ವಿರುದ್ಧ ಕೇರಳದಲ್ಲಿ ಒಟ್ಟು 1,368 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 2,000 ಕೋಟಿ ರೂಪಾಯಿ ಹಗರಣದ ಪ್ರಮಾಣವಿದೆ" ಎಂದು ಸಿಐಡಿ ಅಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ ಸಿಐಡಿ ಸಿಬಿಐ ಮತ್ತು ಇಡಿಗೆ ಪತ್ರ ಬರೆದು ರಾಜ್ಯದಲ್ಲಿನ ಸಂತ್ರಸ್ತರಿಗೆ ಮರುಪಾವತಿಗೆ ವಿನಂತಿಸಲಿದೆ ಎಂದು ಹೇಳಿದರು.