Prajwal Revanna : ಹಾಸನ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪ್ರಕರಣದ ಕುರಿತು ನೀವು ತಿಳಿಯಬೇಕಾದ 10 ಅಂಶಗಳು
Nov 11, 2024 01:41 PM IST
ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
- ಹಾಸನದ ಮಾಜಿ ಸಂಸದ ಹಾಗೂ ಮಾಜಿ ಪ್ರಧಾನಿ ಎಚ್‌ಡಿದೇವೇಗೌಡರ ಮೊಮ್ಮರ ಪ್ರಜ್ವಲ್ ರೇವಣ್ಣ ಅವರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆ ಆಗಿವೆ. ಈಗ ಸುಪ್ರೀಂಕೋರ್ಟ್ ಅವರ ಜಾಮೀನು ಅರ್ಜಿ ತಿರಸ್ಕರಿಸಿದೆ. ಎಲ್ಲಾ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.
ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ಬೆಂಗಳೂರು: ಹಾಸನದ ಮಾಜಿ ಸಂಸದ ಹಾಗೂ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರ ವಿರುದ್ದದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿ ಆರು ತಿಂಗಳಿನಿಂದ ಜೈಲು ಅನುಭವಿಸುತ್ತಿದ್ದಾರೆ. ಹೊಳೆ ನರಸೀಪುರದಲ್ಲಿ ಮನೆ ಕೆಲಸದಾಕೆ ಸೇರಿದಂತೆ ಹಲವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದೂ ಅಲ್ಲದೇ ಸಿಡಿ ಮಾಡಿದ ಆರೋಪವೂ ಅವರ ಮೇಲಿದೆ. ಬೆಂಗಳೂರಿನ ಸ್ಥಳೀಯ ನ್ಯಾಯಾಲಯ, ಹೈಕೋರ್ಟ್ ನಂತರ ಈಗ ಸುಪ್ರೀಂಕೋರ್ಟ್‌ನಲ್ಲೂ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಇಡೀ ಪ್ರಕರಣ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದ ಗಮನವನ್ನೂ ಸೆಳೆದಿದೆ. ಪ್ರಜ್ವಲ್ ರೇವಣ್ಣ ಅವರ ಈ ಪ್ರಕರಣದ ಹಿನ್ನೆಲೆ, ಈವರೆಗಿನ ಬೆಳವಣಿಗೆ ಏನಾಗಿದೆ ಎನ್ನುವ ಹತ್ತು ಅಂಶಗಳ ವಿವವರವಾದ ಮಾಹಿತಿ ಇಲ್ಲಿದೆ.
- ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಖಾಸಗಿ ಕ್ಷಣಗಳ ಸಿಡಿಯನ್ನೂ ಮಾಡಿಕೊಂಡು ತೊಂದರೆ ನೀಡಿದ್ದಾರೆ ಎನ್ನುವ ಕುರಿತು ಪ್ರಜ್ವಲ್ ರೇವಣ್ಣ ವಿರುದ್ದ 2024ರ ಏಪ್ರಿಲ್ 27ರಂದು ಹೊಳೆ ನರಸೀಪುರದಲ್ಲಿ ಪ್ರಕರಣ ದಾಖಲಾಯಿತು. ಮನೆ ಕೆಲಸದ ಮಹಿಳೆ ವಿರುದ್ದವೂ ಇಂತಹದೇ ಕೃತ್ಯ ಎಸಗಿದ ಆರೋಪ ಕೇಳಿ ಬಂದಿತು.
- ಹಾಸನದ ಹೊಳೆ ನರಸೀಪುರದಲ್ಲಿ ಮನೆ ಕೆಲಸದ ಮಹಿಳೆಯನ್ನು ಮೈಸೂರು ನಗರದ ಕೆಆರ್‌ನಗರದಿಂದ ಅಪಹರಿಸಲು ಯತ್ನಿಸಿದ್ದಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ, ಅವರ ತಂದೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ ವಿರುದ್ದವೂ ಪ್ರಕರಣ ದಾಖಲಾಯಿತು.
- 2024ರ ಏಪ್ರಿಲ್ 28ರಂದು ಪ್ರಜ್ವಲ್ ರೇವಣ್ಣ ಅವರು ಭಾರತದಿಂದ ಬೇರೆ ದೇಶಕ್ಕೆ ಪಲಾಯನಗೈದರು. ಪ್ರಕರಣ ದಾಖಲಾಗಿದ್ದರಿಂದ ಅವರು ಯಾರ ಕೈಗೂ ಸಿಗದೇ ಸುಮಾರು ಒಂದು ತಿಂಗಳ ಕಾಲ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು.
ಇದನ್ನೂ ಓದಿರಿ: Prajwal Revanna: ಅತ್ಯಾಚಾರ ಆರೋಪ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್ - ಪ್ರಜ್ವಲ್ ರೇವಣ್ಣ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕರ್ನಾಟಕ ಸರ್ಕಾರವು 2024ರ ಏಪ್ರಿಲ್ 30 ರಂದು ವಿಶೇಷ ತನಿಖಾ ತಂಡ( ಎಸ್‌ಐಟಿ)ಯನ್ನು ನೇಮಕ ಮಾಡಿತು. ಎಡಿಜಿಪಿ ಬಿಕೆ ಸಿಂಗ್, ಮೈಸೂರು ಎಸ್ಪಿಯಾಗಿದ್ದ ಸೀಮಾ ಲಾಟ್ಕರ್, ಡಾ.ಸುಮನ್ ಪಣ್ಣೇಕರ್ ಅವರನ್ನು ತನಿಖೆಗೆ ನಿಯೋಜಿಸಿತು.
- ಮಹಿಳೆ ಅಪಹರಣ, ಸಾಕ್ಷಿ ನಾಶ ಯತ್ನದ ಆರೋಪದ ಮೇಲೆ ಬಂಧನಕ್ಕೆ ಒಳಗಾದ ಮಾಜಿ ಸಚಿವ ಎಚ್.ಡಿ.ರೇವಣ್ಣ ಒಂದು ವಾರ ಕಾಲ ಬೆಂಗಳೂರು ಜೈಲಿನಲ್ಲಿದ್ದರು. ಮೇ ಎರಡನೇ ವಾರ ಅವರಿಗೆ ಎರಡು ಪ್ರಕರಣದಲ್ಲಿ ಜಾಮೀನು ದೊರಕಿತು.
- ಹಾಸನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಎನ್‌ಡಿಎ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಅವರು ಸೋಲು ಅನುಭವಿಸಿದರು. ಫಲಿತಾಂಶದಿಂದಾಗಿ ಜೆಡಿಎಸ್‌ಗೆ ಭಾರೀ ಮುಖಭಂಗವೂ ಆಯಿತು.
ಇದನ್ನೂ ಓದಿರಿ: ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ; ಗೌಪ್ಯ ವಿಚಾರಣೆ ಏಕೆ ಮಾಡಬೇಕು ಹೇಳಿ, ಚಾಟಿ ಬೀಸಿದ ಕರ್ನಾಟಕ ಹೈಕೋರ್ಟ್ - ಪ್ರಕರಣದ ಗಂಭೀರ ಸ್ವರೂಪ ಪಡೆಯುವ ಜತೆಗೆ ಕಾನೂನಿನ ತೊಡಕು ಹೆಚ್ಚುತ್ತಿದ್ದಂತೆ ಮೇ ಮೊದಲ ವಾರದಂದು ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ ಪ್ರಜ್ವಲ್ ರೇವಣ್ಣ ಅವರು ಎಸ್‌ಐಟಿ ಮುಂದೆ ಶರಣಾಗಿದ್ದರು. ಸತತ ಆರು ದಿನಗಳ ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಪ್ರಜ್ವಲ್ ಅವರನ್ನು ಒಪ್ಪಿಸಲಾಗಿತ್ತು. ಆರು ತಿಂಗಳಿನಿಂದಲೂ ಬೆಂಗಳೂರಿನ ಜೈಲಿನಲ್ಲಿ ಪ್ರಜ್ವಲ್ ಬಂಧಿಯಾಗಿದ್ದಾರೆ.
- ಇದಾದ ಬಳಿಕ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಸ್ಥಳೀಯ ನ್ಯಾಯಾಲಯದಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ಸಲ್ಲಿಕೆಯಾದರೂ ಅದಕ್ಕೆ ಪುರಸ್ಕಾರ ದೊರೆಯಲಿಲ್ಲ. ಸ್ಥಳೀಯ ನ್ಯಾಯಾಲಯ ಹಾಗೂ ಹೈಕೋರ್ಟ್‌ನ ಎರಡೂ ಕಡೆಗಳಲ್ಲೂ ಪ್ರಜ್ವಲ್ ರೇವಣ್ಣ ಜಾಮೀನು ತಿರಸ್ಕೃತಗೊಂಡು ಜೈಲು ವಾಸ ಮುಂದುವರಿದಿದೆ.
- ಕೊನೆಗೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಪ್ರಜ್ವಲ್ ರೇವಣ್ಣಗೆ ಜಾಮೀನು ಮಂಜೂರು ಮಾಡಬೇಕು ಎನ್ನುವ ಬೇಡಿಕೆಯನ್ನು ಇರಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರಜ್ವಲ್ ಜಾಮೀನು ಅರ್ಜಿ ವಜಾಗೊಳಿಸಿರುವುದರಿಂದ ಇನ್ನೂ ಕೆಲ ದಿನ ಅವರ ಜೈಲು ವಾಸ ಮುಂದುವರಿಯಲಿದೆ.
ಇದನ್ನೂ ಓದಿರಿ: ಪ್ರಜ್ವಲ್ ರೇವಣ್ಣ ವಿರುದ್ಧ 1652 ಪುಟಗಳ 2ನೇ ಚಾರ್ಜ್ಶೀಟ್ ಸಲ್ಲಿಕೆ; ಹೊಸ ಜಾಮೀನು ಅರ್ಜಿ ವಿಚಾರಣೆ ಸೆ 12ಕ್ಕೆ ಮುಂದೂಡಿಕೆ - ಇದರೊಟ್ಟಿಗೆ ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಅವರನ್ನು ಬಂಧಿಸದಂತೆ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂಕೋರ್ಟ್ ಕೂಡ ಅವರಿಗೆ ಜಾಮೀನು ನೀಡಿರುವುದನ್ನು ಕೆಲ ದಿನಗಳ ಹಿಂದೆ ಎತ್ತಿ ಹಿಡಿದಿತ್ತು. ಇದರಿಂದ ರೇವಣ್ಣ ನಂತರ ಭವಾನಿ ರೇವಣ್ಣ ಈ ಪ್ರಕರಣದಲ್ಲಿ ಕೊಂಚ ನಿರಾಳರಾಗಿದ್ದರು. ಪ್ರಜ್ವಲ್ ಮಾತ್ರ ಕಾನೂನು ಹೋರಾಟ, ಜೈಲು ವಾಸ ಮುಂದುವರಿಸಿದ್ದಾರೆ.