ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ; ಗೌಪ್ಯ ವಿಚಾರಣೆ ಏಕೆ ಮಾಡಬೇಕು ಹೇಳಿ, ಚಾಟಿ ಬೀಸಿದ ಕರ್ನಾಟಕ ಹೈಕೋರ್ಟ್-court news hassan former mp prajwal revanna case karnataka high court rejects confidential trail mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ; ಗೌಪ್ಯ ವಿಚಾರಣೆ ಏಕೆ ಮಾಡಬೇಕು ಹೇಳಿ, ಚಾಟಿ ಬೀಸಿದ ಕರ್ನಾಟಕ ಹೈಕೋರ್ಟ್

ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ; ಗೌಪ್ಯ ವಿಚಾರಣೆ ಏಕೆ ಮಾಡಬೇಕು ಹೇಳಿ, ಚಾಟಿ ಬೀಸಿದ ಕರ್ನಾಟಕ ಹೈಕೋರ್ಟ್

Prajwal Revanna ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ದದ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್‌( Karnataka Highcourt) ಗೌಪ್ಯ ವಿಚಾರಣೆ ನಿರಾಕರಿಸಿದೆ.(ವರದಿ: ಎಚ್. ಮಾರುತಿ, ಬೆಂಗಳೂರು)

ಪ್ರಜ್ವಲ್‌ ರೇವಣ್ಣ ಅವರ ಪ್ರಕರಣಗಳ ಗೌಪ್ಯ ವಿಚಾರಣೆ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.
ಪ್ರಜ್ವಲ್‌ ರೇವಣ್ಣ ಅವರ ಪ್ರಕರಣಗಳ ಗೌಪ್ಯ ವಿಚಾರಣೆ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಗಳನ್ನು ಸಂತ್ರಸ್ತೆಯರ ಖಾಸಗಿತನವನ್ನು ರಕ್ಷಿಸುವ ಉದ್ದೇಶದಿಂದ ಗೌಪ್ಯವಾಗಿ ವಿಚಾರಣೆ ನಡೆಸಬೇಕು ಎಂಬ ರಾಜ್ಯ ಪ್ರಾಸಿಕ್ಯೂಷನ್ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಹಾಸನ ಜಿಲ್ಲೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಮತ್ತು ಹಾಸನ ನಗರದ ಸೈಬರ್ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ಸಂದರ್ಭದಲ್ಲಿ ಪ್ರಜ್ವಲ್ ಪರ ಹಾಜರಾಗಿದ್ದ.ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ಅವರು, ಈ ಹಿಂದಿನ ವಿಚಾರಣೆ ವೇಳೆಯಲ್ಲಿ ಪ್ರಕರಣದ ಗೌಪ್ಯ ವಿಚಾರಣೆಗೆ ಮನವಿ ಮಾಡಿದ್ದ ಅಂಶವನ್ನು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ನ್ಯಾಯಾಲಯಗಳಲ್ಲಿ ಪ್ರತಿದಿನವೂ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿನ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ. ಹೀಗಿರುವಾಗ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಹೊಸದೇನಿದೆ ಎಂದು ಪ್ರಶ್ನಿಸಿದರು. ಗೌಪ್ಯವಿಚಾರಣೆಯ ಅವಶ್ಯಕತೆಯಿಲ್ಲ. ಆದರೆ, ವಿಚಾರಣೆ ನಡೆಯುವಾಗ ಸಂತ್ರಸ್ತೆಯರ ಹೆಸರು ಮತ್ತು ಅಶ್ಲೀಲತೆ ಒಳಗೊಂಡ ಅಂಶಗಳನ್ನು ವಕೀಲರು ಓದಬಾರದು. ಅದನ್ನು ನನಗೆ ತಿಳಿಸಿದರೆ ನಾನೇ ಓದಿಕೊಳ್ಳುತ್ತೇನೆ ಎಂದು ತಿಳಿಸಿದರು.

ಈ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರವಿವರ್ಮ ಕುಮಾರ್ ಅವರು ಗೌಪ್ಯ ವಿಚಾರಣೆಯ ವಿಷಯವನ್ನು ನ್ಯಾಯಾಲಯದ ವಿವೇಚನೆಗೆ ಬಿಟ್ಟಿದ್ದು ಎಂದರು. ನಂತರ ವಿಚಾರಣೆಯನ್ನು ಇದೇ ತಿಂಗಳ 19ಕ್ಕೆ ಮುಂದೂಡಲಾಯಿತು.

ದರ್ಶನ್‌ ಪ್ರಕರಣ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್‌ ತೂಗುದೀಪ ಆಕೆಯ ಸ್ನೇಹಿತೆ ಪವಿತ್ರಾಗೌಡ ಸೇರಿಂತೆ ಎಲ್ಲ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಒಂದು ದಿನದ ಮಟ್ಟಿಗೆ ಅಂದರೆ ಸೆ.13 ರವರೆಗೆ ವಿಸ್ತರಿಸಲಾಗಿದೆ. ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನ ಅವದಿಯನ್ನು ವಿಸ್ತರಿಸಿದೆ.

ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಗುರುವಾರಕ್ಕೆ ಮುಕ್ತಾಯವಾಗಿತ್ತು.

ದರ್ಶನ್‌, ಪವಿತ್ರಾಗೌಡ ಸೇರಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ, ತುಮಕೂರು ಮತ್ತು ಬಳ್ಳಾರಿ ಮತ್ತಿತರ ಜಿಲ್ಲಾ ಜೈಲುಗಳಲ್ಲಿರುವ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಕೊಲೆ ಪ್ರಕರಣದ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವುದಾಗಿ ನ್ಯಾಯಾಧೀಶರು ತಿಳಿಸಿದರು. ತನಿಖಾಧಿಕಾರಿಗಳು ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ ಬಳಿಕ ಸೆಷನ್ಸ್ ಕೋರ್ಟ್‌ಗೆ ಪ್ರಕರಣ ವರ್ಗಾವಣೆ ಮಾಡುವಂತೆ ಆರೋಪಿಗಳ ಪರ ವಕೀಲರು ಮನವಿ ಮಾಡಿಕೊಂಡರು.

ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡುವಂತೆ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಸೆಪ್ಟಂಬರ್‌ 4 ರಂದು ಪೊಲೀಸರು ನ್ಯಾಯಾಲಯಕ್ಕೆ 3,991 ಪುಟಗಳ ಚಾರ್ಜ್‌ ಶೀಟ್‌ ಸಲ್ಲಿಸಿದ್ದರು.

(ವರದಿ: ಎಚ್. ಮಾರುತಿ, ಬೆಂಗಳೂರು)

 

mysore-dasara_Entry_Point