logo
ಕನ್ನಡ ಸುದ್ದಿ  /  ಕರ್ನಾಟಕ  /  Kodagu News: ಭೂದಾಖಲೆಗಳ ಡಿಜಿಟಲೀಕರಣದ ಭೂಸುರಕ್ಷಾ ಯೋಜನೆಗೆ ಕೊಡಗಲ್ಲಿ ಚಾಲನೆ, ಗ್ರಾಮ ಲೆಕ್ಕಿಗರಿಗೂ ಬರಲಿವೆ ಲ್ಯಾಪ್‌ಟಾಪ್‌

Kodagu News: ಭೂದಾಖಲೆಗಳ ಡಿಜಿಟಲೀಕರಣದ ಭೂಸುರಕ್ಷಾ ಯೋಜನೆಗೆ ಕೊಡಗಲ್ಲಿ ಚಾಲನೆ, ಗ್ರಾಮ ಲೆಕ್ಕಿಗರಿಗೂ ಬರಲಿವೆ ಲ್ಯಾಪ್‌ಟಾಪ್‌

Umesha Bhatta P H HT Kannada

Feb 05, 2024 07:30 PM IST

google News

ಸಚಿವ ಕೃಷ್ಣಬೈರೇಗೌಡ ಮಡಿಕೇರಿಯಲ್ಲೊ ಭೂದಾಖಲೀಕರಣಕ್ಕೆ ಚಾಲನೆ ನೀಡಿದರು.

    • ಕೊಡಗಿನಲ್ಲಿ ಭೂ ದಾಖಲೆಗಳ ಡಿಜಿಟಲೀಕರಣ ಯೋಜನೆಗೆ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು. ಕರ್ನಾಟಕದ 31 ಜಿಲ್ಲೆಯ 31 ತಾಲೂಕು ಗಳಲ್ಲಿ ಭೂ ದಾಖಲೆಗಳ ಡಿಜಿಟಲೀಕರಣ ಆಗಲಿದೆ. 
ಸಚಿವ ಕೃಷ್ಣಬೈರೇಗೌಡ ಮಡಿಕೇರಿಯಲ್ಲೊ ಭೂದಾಖಲೀಕರಣಕ್ಕೆ ಚಾಲನೆ ನೀಡಿದರು.
ಸಚಿವ ಕೃಷ್ಣಬೈರೇಗೌಡ ಮಡಿಕೇರಿಯಲ್ಲೊ ಭೂದಾಖಲೀಕರಣಕ್ಕೆ ಚಾಲನೆ ನೀಡಿದರು.

ಮಡಿಕೇರಿ: ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಬಹು ನಿರೀಕ್ಷಿತ "ಭೂ ಸುರಕ್ಷಾ" ಪ್ರಾಯೋಗಿಕ ಯೋಜನೆಗೆ ಸೋಮವಾರ ಕೊಡಗಿನಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಚಾಲನೆ ನೀಡಿದರು.

ಈ ಯೋಜನೆಗೆ ಪ್ರಾಯೋಗಿಕವಾಗಿ 31 ಜಿಲ್ಲೆಯ 31 ತಾಲೂಕು ಗಳನ್ನು ಆಯ್ಕೆ ಮಾಡಿದ್ದು ಈ ತಾಲೂಕುಗಳ ಎಲ್ಲಾ ಭೂ ಮತ್ತು ಸರ್ವೇ ದಾಖಲೆಯನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸುವುದು ಯೋಜನೆಯ ಗುರಿ. ಮುಂದಿನ ಎರಡು ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು, ಜನಸಾಮಾನ್ಯರಿಗೆ ಡಿಜಿಟಲ್ ದಾಖಲೆಗಳನ್ನೇ ನೀಡಲಾಗುವುದು. ತದನಂತರ ಈ ಯೋಜನೆಯನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

ರೆಕಾರ್ಡ್ ರೂಂ ಗಳಲ್ಲಿ ಕಡತ ಕಳುವಾಗುವುದು ಹಾಗೂ ತಿದ್ದುವುದು ಸೇರಿದಂತೆ ಅನೇಕ ಅಕ್ರಮಗಳಿಂದಾಗಿ ಶತಮಾನಗಳಿಂದ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಎಲ್ಲಾ ಸಂಕಷ್ಟಗಳಿಂದ ರೈತರನ್ನು ಪಾರು ಮಾಡುವ ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಹಿರಿಯ ಅಧಿಕಾರಿಗಳ ಕಳೆದ ಆರು ತಿಂಗಳ ಪರಿಶ್ರಮ ಈ ಯೋಜನೆಯಾಗಿದೆ ಎನ್ನುವುದು ಕಂದಾಯ ಇಲಾಖೆ ಅಧಿಕಾರಿಗಳ ವಿವರಣೆ.

ಕಂದಾಯ ಇಲಾಖೆಯ ಎಲ್ಲ ದಾಖಲೆಗಳೂ ಡಿಜಿಟಲೀಕರಗೊಂಡು ಆನ್‌ಲೈನ್‌ ಮೂಲಕವೇ ಸಂಪೂರ್ಣವಾಗಿ ಪಡೆಯುವ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಕೈಗೊಳ್ಳುವುದು ಸಚಿವ ಕೃಷ್ಣಬೈರೇಗೌಡ ಅವರ ಉದ್ದೇಶ. ಈ ನಿಟ್ಟಿನಲ್ಲಿಯೇ ಕೆಲಸಗಳು ನಡೆದಿವೆ.

ಈ ಯೋಜನೆಯ ಅಡಿ 31 ಜಿಲ್ಲೆಯ 31 ತಾಲೂಕುಗಳ ರೆಕಾರ್ಡ್ ರೂಂ (ಭೂ ದಾಖಲೆ ಕೊಠಯ) ದಾಖಲೆಗಳನ್ನು ಪ್ರಾಯೋಗಿಕವಾಗಿ ಡಿಜಿಟಲೀಕರಣಗೊಳಿಸಲಾಗುವುದು. ಕಂದಾಯ ಮತ್ತು ಸರ್ವೇ ಇಲಾಖೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ಮುಂದಿನ ಮೂರು ತಿಂಗಳಲ್ಲಿ ಡಿಜಿಟಲೀಕರಣಗೊಳ್ಳಲಿದೆ. ಜನರಿಗೂ ಡಿಜಿಟಲ್ ದಾಖಲೆಗಳನ್ನೇ ನೀಡಲಾಗುವುದು. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದ ನಂತರ ರಾಜ್ಯಾದ್ಯಂತ ಏಕ ಕಾಲಕ್ಕೆ ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತರಲಾಗುವುದು ಎಂಬುದು ಸಚಿವ ಕೃಷ್ಣಬೈರೇಗೌಡ ಅವರ ವಿವರಣೆ.

ಇ-ಆಫೀಸ್: ಕೊಡಗು ಉತ್ತಮ ಸಾಧನೆ

ಕೊಡಗಿನ ಎಲ್ಲಾ ತಾಲೂಕುಗಳಲ್ಲೂ ಇ-ಆಫೀಸ್ ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾಸಭೆಯಲ್ಲೇ ಸಂಸತ ವ್ಯಕ್ತಪಡಿಸಿದರು.

ನಾವು ಶೋಕಿಗಾಗಿ ಇ-ಆಫೀಸ್ ಜಾರಿಗೆ ತಂದಿಲ್ಲ. ಬದಲಾಗಿ ಸರ್ಕಾರಿ ಕಚೇರಿಯಲ್ಲಿ ಕಾಯುವ ಶೋಷಣೆಯಿಂದ ಜನಸಾಮಾನ್ಯರಿಗೆ ಮುಕ್ತಿ ನೀಡುವ ಹಾಗೂ ಆಡಳಿತ ಯಂತ್ರಕ್ಕೆ ವೇಗ ನೀಡುವ ಉದ್ದೇಶದಿಂದ ಇ-ಆಫೀಸ್ ಅನುಷ್ಠಾನಗೊಳಿಸಲಾಗಿತ್ತು. ಕೊಡಗಿನ ಇ-ಆಫೀಸ್ ತೃಪ್ತಿಕರವಾಗಿದೆ. ಅಲ್ಲದೆ, ಭಾಗಶಃ ಕಂದಾಯ ಕಚೇರಿಗಳ ಪೈಕಿ ಸಿಸಿಎಂಎಸ್ ಅನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿರುವ ಮೊದಲ ಜಿಲ್ಲೆ ಕೊಡಗು ಎಂದು ಅವರು ಶ್ಲಾಘಿಸಿದರು.

ಗ್ರಾಮ ಲೆಕ್ಕಿಗರಿಗೆ ಲ್ಯಾಪ್ ಟಾಪ್ ನೀಡಬೇಕು ಎಂದು ನಾವು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದೇವೆ. ಭಾಗಶಃ ಮುಂದಿನ ಬಜೆಟ್ ನಲ್ಲಿ ಇದನ್ನು ಘೋಷಿಸುವ ಸಾಧ್ಯತೆ ಇದೆ. ಹೀಗಾಗಿ ಶೀಘ್ರದಲ್ಲೇ ಗ್ರಾಮ ಲೆಕ್ಕಿಗರಿಗೆ ಲ್ಯಾಪ್ ಟಾಪ್ ಸಿಗಲಿದೆ ಎಂದು ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ತಿಳಿಸಿದರು.

ರೈತರ ಆರ್ಟಿಸಿ ಆಧಾರ್ ಲಿಂಕ್

ರೈತರ ಆರ್‌ಟಿಸಿ ಜೊತೆಗೆ ಆಧಾರ್ ಲಿಂಕ್ ಜೋಡಣೆ ನಮ್ಮ ಮುಂದಿನ ಆದ್ಯತೆಯಾಗಬೇಕು ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಗಮನ ಸೆಳೆದ ಅವರು, “ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಕನಿಷ್ಠ ಶೇ.77 ರಷ್ಟಿದೆ. ಆದರೆ, ಕೇಂದ್ರ ಸರ್ಕಾರದ ಅಂಕಿಅಂಶದ ಪ್ರಕಾರ ಈ ಸಂಖ್ಯೆ ಕೇವಲ ಶೇ.44 ರಷ್ಟು ಮಾತ್ರ. ಪರಿಣಾಮ ಕೇಂದ್ರದ ಮಾನದಂಡದ ಪ್ರಕಾರ ರಾಜ್ಯಕ್ಕೆ ಕನಿಷ್ಠ ಮೊತ್ತದ ಬರ ಪರಿಹಾರ ಲಭ್ಯವಾಗುತ್ತಿದೆ. ಹೀಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಮಾಹಿತಿ ನಮೂದಿಸುವಾಗ ಅವರ ಆರ್ಟಿಸಿ ಜೊತೆಗೆ ಆಧಾರ್ ಲಿಂಕ್ ಮಾಡಬೇಕು. ಆ ಮೂಲಕ ಪರಿಹಾರ‌ ಹಣದ ದುರ್ಬಳಕೆಯನ್ನು ತಡೆಯುವ ಜೊತೆಗೆ ರಾಜ್ಯದ ರೈತರ ನಿಖರ ಅಂಕಿಅಂಶ ಪಡೆಯಬಹುದು ಎಂದು ಅವರು ವಿವರಿಸಿದರು.

ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆ ಕೊಡಗಿನಲ್ಲಿ ಅಧಿಕವಾಗಿದ್ದು ದಶಕಗಳ ಕಾಲದಿಂದ ಉಳಿದಿದ್ದ ಈ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸನ್ನಿಹಿತ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.

ಪಹಣಿ ಪ್ರಕರಣ

"ಪ್ರಸ್ತುತ ರಾಜ್ಯಾದ್ಯಂತ ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆ ಒಟ್ಟಾರೆ 1,32,618. ಈ ಪೈಕಿ ಕೊಡಗಿನಲ್ಲೇ ಸುಮಾರು 60,000ಕ್ಕೂ ಹೆಚ್ಚಿನ ಪ್ರಕರಣಗಳಿವೆ" ಎಂದು ವಿಷಾದಿಸಿದರು.

ಸಮಸ್ಯೆಯ ಕಾರಣಗಳ ಕುರಿತು ಸಭೆಯಲ್ಲಿ ಚರ್ಚಿಸಿದ ಅವರು, "ಸೋಮವಾರ ಪೇಟೆ ತಾಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ಸರ್ಕಾರಿ ಮಂಜೂರು ಭೂಮಿ ಇದ್ದರೆ, ಉಳಿದ ತಾಲೂಕುಗಳಲ್ಲಿ ಜಮಾ ಬಾಣೆ ಭೂಮಿ ಹೆಚ್ಚಿದೆ. ಹೀಗಾಗಿ ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆಯೂ ಅಧಿಕವಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಅಲ್ಲಿನ ಸ್ಥಳೀಯ ಶಾಸಕರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಕೊಡಗಿನಲ್ಲಿ ವಿಶೇಷ ಆದ್ಯತೆಯ ಮೇಲೆ ಕೆಲಸ ನಿರ್ವಹಿಸುವ ತುರ್ತು ಇದೆ. ಸಂಬಂಧಿತ ಕಂದಾಯ ಮತ್ತು ಸರ್ವೇ ಇಲಾಖೆ ಹಿರಿಯ ಅಧಿಕಾರಿಗಳು ಈಗಲೇ ಕೊಡಗಿಗೆ ತೆರಳಿ ಸರ್ವೇ ತಯಾರಿ ಕೆಲಸ ಆರಂಭಿಸಬೇಕು. ಲೈಸೆನ್ಸ್ ಸರ್ವೇಯರ್ ಗಳ ಸಹಾಯ ಪಡೆದುಕೊಳ್ಳಿ. ಗ್ರಾಮ ಲೆಕ್ಕಿಗರಿಗೂ ಸರ್ವೇ ತರಬೇತಿ ನೀಡಿ ಎಂದು ನಿರ್ದೇಶನ ನೀಡಿದರು.

ಈ ಕೆಲಸಕ್ಕೆ ಹೊಸ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಿಕೊಳ್ಳಿ. ಕಂದಾಯ ಇಲಾಖೆ ಅಧಿಕಾರಿಗಳು ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ಸರ್ವೇ ಕೆಲಸವನ್ನು ಮುಂದಿನ 60 ದಿನಗಳಲ್ಲಿ ಪೂರೈಸಬೇಕು. ಕಂದಾಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ಚರ್ಚಿಸಬೇಕು" ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ