Tejasvi surya: 3 ಲಕ್ಷದಿಂದ 4 ಕೋಟಿ ರೂಪಾಯಿ; ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಆಸ್ತಿ 5 ವರ್ಷದಲ್ಲಿ 30 ಪಟ್ಟು ಹೆಚ್ಚಳ
Apr 05, 2024 08:20 PM IST
ಭಾರತೀಯ ಜನತಾ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ (File Photo / ANI)
- ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಆಸ್ತಿ 5 ವರ್ಷಗಳಲ್ಲಿ 30 ಪಟ್ಟು ಹೆಚ್ಚಳವಾಗಿದೆ. ತೇಜಸ್ವಿ ಸೂರ್ಯ ಒಟ್ಟು ಆಸ್ತಿಯ ವಿವರದ ಮಾಹಿತಿ ಇಲ್ಲಿದೆ.
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ (Lok Sabha Election 2024) ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ 30 ಪಟ್ಟು ಹೆಚ್ಚಾಗಿದೆ ಎಂದು ಅವರು ಗುರುವಾರ (ಏಪ್ರಿಲ್ 4) ಸಲ್ಲಿಸಿದ ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. 2019ರಲ್ಲಿ ತೇಜಸ್ವಿ ಸೂರ್ಯ 13.46 ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದರು. 2024ರಲ್ಲಿ ಅವರ ಆಸ್ತಿ 4.10 ಕೋಟಿ ರೂ.ಗೆ ಏರಿಕೆಯಾಗಿದೆ. ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಅಧ್ಯಕ್ಷರೂ ಆಗಿರುವ ಹಾಲಿ ಸಂಸದ ತೇಜಸ್ವಿ ತಮ್ಮ ಹೆಚ್ಚಿನ ಹಣವನ್ನು ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಷೇರುಗಳ ಮೌಲ್ಯ ಹೆಚ್ಚಾಗುತ್ತಿರುವುದೇ ಇವರ ಆಸ್ತಿ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗಿದೆ.
ತೇಜಸ್ವಿ ಸೂರ್ಯ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಇವರು ಮ್ಯೂಚುವಲ್ ಫಂಡ್‌ಗಳಲ್ಲಿ 1.99 ಕೋಟಿ ರೂಪಾಯಿ ಮತ್ತು ಷೇರುಗಳಲ್ಲಿ 1.79 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಸೂರ್ಯ ವಿರುದ್ಧ ಮೂರು ಪ್ರಕರಣಗಳು ಬಾಕಿ ಉಳಿದಿದ್ದು, ಅವುಗಳಲ್ಲಿ ಎರಡು ಪ್ರಕರಣಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮೊಬೈಲ್ ಅಂಗಡಿ ಮಾಲೀಕರ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿದ ಸಂದರ್ಭದಲ್ಲಿ ಪ್ರತಿಭಟನೆಗೆ ಸಂಬಂಧಪಟ್ಟಿವೆ. ಬಿಜೆವೈಎಂ ಕಾರ್ಯಕರ್ತರೊಂದಿಗೆ ಅರವಿಂದ್ ಕೇಜ್ರಿವಾಲ್ ಅವರ ನಿವಾಸವನ್ನು ಉಲ್ಲಂಘಿಸಿದ ಆರೋಪದ ಮೇಲೆ ದೆಹಲಿಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ 2022 ರಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು.
ತೇಜಸ್ವಿ ಸೂರ್ಯ ವರ್ಸಸ್ ಸೌಮ್ಯ ರೆಡ್ಡಿ
ಬಿಜೆಪಿಯ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣದಿಂದ 33 ವರ್ಷದ ತೇಜಸ್ವಿ ಸೂರ್ಯ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಹಾಗೂ ಜಯನಗರ ಕ್ಷೇತ್ರದ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರು ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಕಣಕ್ಕಿದಿದ್ದಾರೆ. ತೇಜಸ್ವಿ ಸೂರ್ಯ ಅವರು ತಮ್ಮ ನಾಮಪತ್ರ ರ್ಯಾಲಿಯಲ್ಲಿ ಭಾಗವಹಿಸುವಂತೆ ಕಾಲೇಜು ವಿದ್ಯಾರ್ಥಿಗಳನ್ನು ಒತ್ತಾಯಿಸಿದ್ದರು ಎಂದು ಸೌಮ್ಯಾ ರೆಡ್ಡಿ ಗುರುವಾರ ಆರೋಪಿಸಿದ್ದರು ಮತ್ತು ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ವಿ.ವಿ.ಪುರಂನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಸೌಮ್ಯಾ ರೆಡ್ಡಿ ಅವರು ವಿದ್ಯಾರ್ಥಿಗಳಿಗೆ ಸಂದೇಶ ಕಳುಹಿಸಿದ್ದು, "ನಾಳೆ ವಿದ್ಯಾರ್ಥಿ ಪರಿಷತ್ತಿನ ಎಲ್ಲಾ ಸದಸ್ಯರು ಜಯನಗರದ ಮೈಯಾಸ್ ಹೋಟೆಲ್ ಬಳಿ ತೇಜಸ್ವಿ ಸೂರ್ಯ ರ್ಯಾಲಿಗಾಗಿ ಬೆಳಿಗ್ಗೆ 9 ಗಂಟೆಗೆ ಒಟ್ಟುಗೂಡಬೇಕಾಗಿದೆ. ನೀವು ಟಿ-ಶರ್ಟ್ ಪಡೆಯುತ್ತೀರಿ ಆದ್ದರಿಂದ ತಡಮಾಡಬೇಡಿ. ವರದಿ ಮಾಡುವ ಸಮಯದಲ್ಲಿ ಎಲ್ಲರೂ ಇರಬೇಕು ಮತ್ತು ಯಾವುದೇ ನೆಪಗಳನ್ನು ಪರಿಗಣಿಸಲಾಗುವುದಿಲ್ಲ. ಇದಕ್ಕಾಗಿ ನೀವು ಹಾಜರಾತಿಯನ್ನು ಪಡೆಯುತ್ತೀರಿ. ಧನ್ಯವಾದಗಳು! ಎಂದು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಈ ಆರೋಪಕ್ಕೆ ತೇಜಸ್ವಿ ಸೂರ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.