ಏಪ್ರಿಲ್ 26ಕ್ಕೆ ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ; ಈ ಭಾಗಗಳಲ್ಲಿ ಮತದಾನಕ್ಕಾಗಿ ವಿಶೇಷ ರೈಲುಗಳ ಸಂಚಾರ
Apr 25, 2024 01:44 PM IST
ಏಪ್ರಿಲ್ 26ರ ಶುಕ್ರವಾರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ವಿವಿಧ ಭಾಗಗಳಿಗೆ ವಿಶೇಷ ರೈಲು ಸೇವೆಯ ವ್ಯವಸ್ಥೆಯನ್ನು ಮಾಡಿದೆ.
- ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ಏಪ್ರಿಲ್ 26ರ ಶುಕ್ರವಾರ ನಡೆಯಲಿದ್ದು, ಮತದಾರರು ತಮ್ಮ ಊರುಗಳಿಗೆ ತೆರಳಲು ಭಾರತೀಯ ರೈಲ್ವೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.
ಮಂಗಳೂರು : ಭಾರಿ ಕುತೂಹಲ ಮೂಡಿಸಿರುವ ಕರ್ನಾಟಕ ಲೋಕಸಭಾ ಚುನಾವಣೆಯ (Karnataka Lok Sabha Election 2024) ಮೊಹಲ ಹಂತದ ಮತದಾನ ನಾಳೆ (ಏಪ್ರಿಲ್ 26, ಶುಕ್ರವಾರ) ನಡೆಯಲಿದ್ದು, ಮತಗಟ್ಟೆಗಳಲ್ಲಿ ಸಿದ್ದತೆಗಳು ನಡೆಯುತ್ತಿವೆ. ಇದರ ನಡುವೆ ಮತದಾರರು ತಮ್ಮ ತಮ್ಮ ಊರುಗಳಿಗೆ ತೆರಳಿ ಮತದಾನ ಮಾಡುವ ಹಿನ್ನೆಲೆಯಲ್ಲಿ ರೈಲು ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಅರಿತ ಭಾರತೀಯ ರೈಲ್ವೆ (Indian Railway) ಕರ್ನಾಟಕದ ಕೆಲವೊಂದು ಭಾಗಗಳಿಗೆ ವಿಶೇಷ ರೈಲು ಸೇವೆಯ ವ್ಯವಸ್ಥೆಗಳನ್ನು ಮಾಡಿದೆ. ಯಾವೆಲ್ಲಾ ಭಾಗಗಳಿಗೆ ವಿಶೇಷ ರೈಲು ಸೇವೆಯನ್ನು ನೀಡಲಾಗಿದೆ ಅನ್ನೋದರ ವಿವರ ಇಲ್ಲಿದೆ.
ರೈಲು ಸಂಖ್ಯೆ 06553 ಬೆಂಗಳೂರು-ಮಂಗಳೂರು ಸೆಂಟ್ರಲ್ ವಿಶೇಷ ರೈಲು ಬೆಂಗಳೂರಿನ ಸಂರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಇಂದು (ಏಪ್ರಿಲ್ 25, ಗುರುವಾರ) ಸಂಜೆ 6 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 10 ಗಂಚಟೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ ಎಂದು ನೈಋತ್ಯ ರೈಲ್ವೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿ-ಮಂಗಳೂರು ವಿಶೇಷ ರೈಲು ರಿಟರ್ನ್ ಮಾಹಿತಿ
ರೈಲು ಸಂಖ್ಯೆ 06554 ಮಂಗಳೂರು ಸೆಂಟ್ರಲ್-ಬೆಂಗಳೂರು ವಿಶೇಷ ರೈಲು ಏಪ್ರಿಲ್ 26ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಏಪ್ರಿಲ್ 27ರ ಶನಿವಾರ ಮುಂಜಾನೆ 3 ಗಂಟೆಗೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.
ಬೆಂಗಳೂರಿನಿಂದ ಉಡುಪಿಗೆ ಸಂಪರ್ಕ ಕಲ್ಪಿಸಲು ಯಶವಂತಪುರ-ಕುಂದಾಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. 06547 ಸಂಖ್ಯೆಯ ರೈಲು ಬೆಂಗಳೂರಿನ ಯಶವಂತಪುರದಿಂದ ಇಂದು (ಏಪ್ರಿಲ್ 25, ಗುರುವಾರ) ರಾತ್ರಿ 11.20ಕ್ಕೆ ಹೊರಡಲಿದ್ದು, ನಾಳೆ (ಏಪ್ರಿಲ್ 26, ಶುಕ್ರವಾರ) ಬೆಳಗ್ಗೆ 10.45ಕ್ಕೆ ಕುಂದಾಪುರಕ್ಕೆ ಆಗಮಿಸಲಿದೆ.
ಶುಕ್ರವಾರ (ಏಪ್ರಿಲ್ 26) 06548 ಸಂಖ್ಯೆಯ ರೈಲು ಬೆಳಗ್ಗೆ 11.20ಕ್ಕೆ ಕುಂದಾಪುರದಿಂದ ಹೊರಟು ಅದೇ ದಿನ ರಾತ್ರಿ 9.50ಕ್ಕೆ ಯಶವಂತಪುರ ತಲುಪಲಿದೆ. ನಾಳೆ (ಏಪ್ರಿಲ್ 26, ಶುಕ್ರವಾರ) ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾರರು ತಮ್ಮ ಊರುಗಳಿಗೆ ಹೋಗಲು ಪ್ರಯಾಣದಲ್ಲಿ ಸಮಸ್ಯೆ ಆಗದಿರುಲು ನೈಋತ್ಯ ರೈಲು ಹೆಚ್ಚುವರಿ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಿದೆ.