ಜೆಡಿಎಸ್ ಮಾಜಿ ಶಾಸಕಗೆ ಲೋಕಸಭೆ ಟಿಕೆಟ್ ಹೆಸರಲ್ಲಿ 2 ಕೋಟಿ ರೂ. ವಂಚನೆ ಆರೋಪ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕುಟುಂಬದವರ ವಿರುದ್ದ ಪ್ರಕರಣ
Oct 18, 2024 07:22 AM IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹೋದರ, ಸಹೋದರಿ ವಿರುದ್ದ ಜೆಡಿಎಸ್ ಮಾಜಿ ಶಾಸಕ ದೇವಾನಂದ ಚವ್ಹಾಣ್ ಪತ್ನಿ ದೂರು ನೀಡಿದ್ದು. ಬೆಂಗಳೂರಲ್ಲಿ ಪ್ರಕರಣ ದಾಖಲಾಗಿದೆ.
- ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರ , ಸಹೋದರಿ ವಿರುದ್ದ ಬೆಂಗಳೂರಿನಲ್ಲಿ ಮಾಜಿ ಶಾಸಕ ದೇವಾನಂದ ಚವ್ಹಾಣ್ ಪತ್ನಿ ಸುನೀತಾ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬೆಂಗಳೂರು: ಐದು ತಿಂಗಳ ಹಿಂದೆ ನಡೆದಿದ್ದ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ ವಿಜಯಪುರ ಜಿಲ್ಲೆ ನಾಗಠಾಣ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ದೇವಾನಂದ್ ಫೂಲ್ ಸಿಂಗ್ ಚವ್ಹಾಣ್ ಅವರಿಂದ 2 ಕೋಟಿ ಸುಲಿಗೆ ಮಾಡಿದ್ದ ಆರೋಪದ ಅಡಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹೋದರ, ಸಹೋದರಿ ಸೇರಿದಂತೆ ಮೂವರ ವಿರುದ್ಧ ಬೆಂಗಳೂರಿನ ಬಸವೇಶ್ವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೇವಾನಂದ್ ಫೂಲ್ ಸಿಂಗ್ ಚವ್ಹಾಣ್ ಅವರು ವಿಜಯಪುರ ಜಿಲ್ಲೆ ನಾಗಠಾಣ ಕ್ಷೇತ್ರದಿಂದ ಕಳೆದ ಬಾರಿ ಗೆದ್ದಿದ್ದರು. ಈ ಬಾರಿ ಸೋತಿದ್ದರು. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಅವರ ಪತ್ನಿ ಸುನೀತಾ ಚವ್ಹಾಣ್ ಸೋತಿದ್ದರು. ಈ ಬಾರಿ ಸುನೀತಾ ಅವರಿಗೆ ದೇವಾನಂದ್ ಜೆಡಿಎಸ್- ಬಿಜೆಪಿಯಿಂದ ಟಿಕೆಟ್ ಕೇಳಿದ್ದರು.
ಪ್ರಲ್ಹಾದ ಜೋಶಿ ಅವರ ಸಹೋದರ ಗೋಪಾಲ ಜೋಶಿ, ಸಹೋದರಿ ವಿಜಯಲಕ್ಷ್ಮಿ ಜೋಶಿ ಹಾಗೂ ಸಂಬಂಧಿ ಅಜಯ್ ಜೋಶಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಾಜಿ ಶಾಸಕ ದೇವಾನಂದ್ ಪತ್ನಿ ಸುನಿತಾ ಚವ್ಹಾಣ್ ಅವರು ದೂರು ನೀಡಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ದೇವಾನಂದ್ ಫೂಲ್ ಸಿಂಗ್ ಚವ್ಹಾಣ್ ಅವರು 2018ರಲ್ಲಿ ಜೆಡಿಎಸ್ ಟಿಕೆಟ್ ಪಡೆದು ವಿಧಾನಸಭೆಗೆ ಆಯ್ಕೆಯಾಗಿದ್ದರು. 2023ರ ಚುನಾವಣೆಯಲ್ಲಿ ಸೋಲುಂಡಿದ್ದರು. ನಂತರ, ಲೋಕಸಭೆ ಚುನಾವಣೆ ಟಿಕೆಟ್ಗೆ ಪ್ರಯತ್ನ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಅಥಣಿಯ ಎಂಜಿನಿಯರ್ ಶೇಖರ್ ನಾಯಕ್ ಎಂಬುವವರು ಪ್ರಲ್ಹಾದ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಅವರ ಪರಿಚಯ ಇರುವುದಾಗಿ ಹೇಳಿ ಕೊಂಡಿದ್ದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ. ಹಾಗಾಗಿ ನಿಮಗೆ ಬಿಜೆಪಿ ಟಿಕೆಟ್ ಸಿಗಬಹುದು ಎಂಬ ಭರವಸೆ ನೀಡಿದ್ದರು.
ನಂತರ ಅವರನ್ನು ಗೋಪಾಲ್ ಜೋಶಿ ಅವರ ಹುಬ್ಬಳ್ಳಿಯ ಮನೆಗೆ ಕರೆದೊಯ್ದು ಪರಿಚಯ ಮಾಡಿಸಿ ಭೇಟಿ ಮಾಡಿಸಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರದಲ್ಲಿ ನನ್ನ ಸಹೋದರ ಪ್ರಲ್ಹಾದ ಜೋಶಿ ಅವರ ವರ್ಚಸ್ಸು ನಡೆಯುತ್ತದೆ. ಅವರು ತುಂಬಾ ಪ್ರಭಾವಿಯಾಗಿದ್ದು, ಅವರು ಹೇಳಿದಂತೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ನಡೆಯುತ್ತಾರೆ. ಆದ್ದರಿಂದ ನನ್ನ ಸಹೋದರನ ಜತೆ ಮಾತನಾಡಿ, ನಿಮಗೆ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕಟ್ಕೊ ಡಿಸುವುದಾಗಿ ಗೋಪಾಲ್ ಜೋಶಿ ಭರವಸೆ ನೀಡಿದ್ದರು. ಆರಂಭದಲ್ಲಿ ಅವರು 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣವ ಇಲ್ಲ ಎಂದಾಗ 25 ಲಕ್ಷ ಮುಂಗಡ ಕೇಳಿ ಚೆಕ್ ಪಡೆದಿದ್ದರು. ಆ ಹಣವನ್ನು ಬೆಂಗಳೂರಿನ ಬಸವೇಶ್ವರನಗರದಲ್ಲಿ ಇರುವ ವಿಜಯಲಕ್ಷ್ಮಿ ಅವರಿಗೆ ತಲುಪಿಸಲಾಗಿತ್ತು.
ನಂತರದ ದಿನಗಳಲ್ಲಿ ಅಮಿತ್ ಶಾ ಅವರ ಆಪ್ತ ಸಹಾಯಕರ ಜತೆಯಲ್ಲಿ ಮಾತನಾಡಿದ್ದು, ಟಿಕೆಟ್ ಸಿಗಲಿದೆ ಎಂದು ಹೇಳಿದ್ದರು. ಆದರೆ ಟಿಕೆಟ್ ಕೊಡಿಸದೇ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ವಿವಿಧ ಖರ್ಚು ವೆಚ್ಚಗಳಿಗೆ ಎಂದು ಹೇಳಿ 1.75 ಕೋಟಿ ಪಡೆದುಕೊಂಡಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೂವರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.
(ವರದಿ: ಎಚ್. ಮಾರುತಿ, ಬೆಂಗಳೂರು)