ಆನ್​ಲೈನ್ ಟ್ರೇಡಿಂಗ್ ಹೆಸರಲ್ಲಿ 97 ಕೋಟಿ ರೂ ವಂಚನೆ; ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್ ಗ್ಯಾಂಗ್, ಇಂತಹ ಹಗರಣಗಳ ಬಗ್ಗೆ ಎಚ್ಚರ!
ಕನ್ನಡ ಸುದ್ದಿ  /  ಕರ್ನಾಟಕ  /  ಆನ್​ಲೈನ್ ಟ್ರೇಡಿಂಗ್ ಹೆಸರಲ್ಲಿ 97 ಕೋಟಿ ರೂ ವಂಚನೆ; ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್ ಗ್ಯಾಂಗ್, ಇಂತಹ ಹಗರಣಗಳ ಬಗ್ಗೆ ಎಚ್ಚರ!

ಆನ್​ಲೈನ್ ಟ್ರೇಡಿಂಗ್ ಹೆಸರಲ್ಲಿ 97 ಕೋಟಿ ರೂ ವಂಚನೆ; ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್ ಗ್ಯಾಂಗ್, ಇಂತಹ ಹಗರಣಗಳ ಬಗ್ಗೆ ಎಚ್ಚರ!

Online Trading Scam: ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಆನ್​ಲೈನ್ ಟ್ರೇಡಿಂಗ್ ಹಗರಣಕ್ಕೆ ಸಂಬಂಧಿಸಿ 97 ಕೋಟಿ ರೂ ವಂಚಿಸಿದ್ದ ಪ್ರಕರಣವೊಂದರಲ್ಲಿ ಖಾಸಗಿ ಬ್ಯಾಂಕ್ ವ್ಯವಸ್ಥಾಪಕ ಸೇರಿ 8 ಮಂದಿಯನ್ನು ಬಂಧಿಸಿದ್ದಾರೆ.

ಆನ್​ಲೈನ್ ಟ್ರೇಡಿಂಗ್ ಹೆಸರಲ್ಲಿ 97 ಕೋಟಿ ರೂ ವಂಚನೆ; ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್ ಗ್ಯಾಂಗ್
ಆನ್​ಲೈನ್ ಟ್ರೇಡಿಂಗ್ ಹೆಸರಲ್ಲಿ 97 ಕೋಟಿ ರೂ ವಂಚನೆ; ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್ ಗ್ಯಾಂಗ್

ಬೆಂಗಳೂರು: ಆನ್​ಲೈನ್ ಟ್ರೇಡಿಂಗ್ ಹಗರಣ ಪ್ರಕರಣವೊಂದರಲ್ಲಿ ಖಾಸಗಿ ಬ್ಯಾಂಕ್ ವ್ಯವಸ್ಥಾಪಕ ಸೇರಿದಂತೆ 8 ಮಂದಿಯನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಈ ತಂಡವು ಆನ್​ಲೈನ್ ಟ್ರೇಡಿಂಗ್​​ನಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ಗ್ರಾಹಕರನ್ನು ನಂಬಿಸಿದ್ದರು. ಇವರ ಮಾತುಗಳಿಗೆ ಮರುಳಾದ ಅನೇಕರು ಹೂಡಿಕೆ ಮಾಡಿ ನಷ್ಟ ಮಾಡಿಕೊಂಡಿದ್ದರು. ಈ ವಂಚನೆ ಕುರಿತು 1.5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದ ಯಲಹಂಕದ ಉದ್ಯಮಿಯೊಬ್ಬರು ದೂರು ನೀಡಿದ್ದರು.

ವಂಚಕರು ಮಾರ್ಚ್​​ನಿಂದ ಜೂನ್ ತಿಂಗಳವರೆಗೆ ನಿಮಗೆ 28 ಕೋಟಿ ರೂಪಾಯಿ ಲಾಭ ಬಂದಿದೆ ಎಂದು ನಂಬಿಸಿದ್ದರು. ಇದಕ್ಕಾಗಿ ಇವರು ನಕಲಿ ವೆಬ್​ಸೈಟ್ ಸೃಷ್ಟಿಸಿ ಕೇವಲ ನಾಲ್ಕು ತಿಂಗಳಲ್ಲಿ ಲಾಭ ಬಂದಿರುವ ಹಾಗೆ ತೋರಿಸಿದ್ದರು. ಆದರೆ ಈ ಹಣವನ್ನು ಹಿಂಪಡೆಯಲು ಉದ್ಯಮಿಗೆ ಸಾಧ್ಯವಾಗಿರಲಿಲ್ಲ. ಈ ಹಣವನ್ನು ಹಿಂಪಡೆಯಲು ಮತ್ತೆ 75 ಲಕ್ಷ ರೂಪಾಯಿ ಶುಲ್ಕವನ್ನು ಪಾವತಿಸಬೇಕು ಎಂದು ವಂಚಕರು ನಂಬಿಸಿದ್ದರು. ಉದ್ಯಮಿಗೆ ಇವರ ಮಾತುಗಳಲ್ಲಿ ನಂಬಿಕೆ ಉಂಟಾಗಲಿಲ್ಲ. ಹಾಗಾಗಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರ ತಂಡ ನಕಲಿ ಆರೋಪಿಗಳ ಖಾಸಗಿ ಬ್ಯಾಂಕ್​ಗಳ ನಾಲ್ಕು ಖಾತೆಗಳನ್ನು ಪರಿಶೀಲಿಸಿದಾಗ ವಂಚನೆ ಪತ್ತೆಯಾಗಿತ್ತು.

ಚಿಕ್ಕಮಗಳೂರಿನ ಓರ್ವ ಮಹಿಳೆ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರಿನ ಈ ವಂಚನೆಯ ಕಿಂಗ್ ಪಿನ್ ಸದ್ಯ ದುಬೈನಲ್ಲಿದ್ದು ಅಲ್ಲಿಂದಲೇ ವಂಚಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ. ಈ ನಾಲ್ಕು ಖಾತೆಗಳಿಂದ ಸುಮಾರು 97 ಕೋಟಿ ರೂ. ವಹಿವಾಟು ನಡೆದಿದೆ. ಈ ತಂಡವು ದೇಶಾದ್ಯಂತ ಸುಮಾರು 254 ವಂಚನೆಯ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ವಂಚನೆ ನಡೆಸಲು ಬಳಸಿದ್ದ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಪೊಲೀಸರು 28 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಆನ್​ಲೈನ್ ಗೇಮ್​ನಲ್ಲಿ ನಷ್ಟ; ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ಆನ್​ಲೈನ್ ಗೇಮ್​ನಲ್ಲಿ ಕಳೆದುಕೊಂಡಿದ್ದ ಹಣವನ್ನು ಮರಳಿ ಸಂಪಾದಿಸಲು ಕಳ್ಳತನಕ್ಕೆ ಇಳಿದಿದ್ದ ಆರೋಪಿಯೊಬ್ಬನನ್ನು ಬೆಳ್ಳಂದೂರು ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುಜರಾತ್‌ ಮೂಲದ ಭಾವೇಶ್ ಬಂಧಿತ ಆರೋಪಿ. ಈತನಿಂದ 22 ಲಕ್ಷ ರೂಪಾಯಿ ಮೌಲ್ಯದ 322 ಗ್ರಾಂ. ಚಿನ್ನಾಭರಣ ಹಾಗೂ 71 ಗ್ರಾಂ. ನಕಲಿ ಆಭರಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಭಾವೇಶ್ ಕೆಲವು ವರ್ಷಗಳ ಹಿಂದೆ ಕುಟುಂಬದ ಸದಸ್ಯರೊಂದಿಗೆ ಬೆಂಗಳೂರಿಗೆ ಆಗಮಿಸಿ ನೆಲಸಿದ್ದ. ಸಹೋದರನ ಪ್ಲೈವುಡ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ಆನ್‌ಲೈನ್ ಗೇಮ್‌ನಲ್ಲಿ ಕಳೆದುಕೊಂಡಿದ್ದ ಅಪಾರ ಹಣವನ್ನು ಮರಳಿ ಸಂಪಾದಿಸಲು ಕಳ್ಳತನ ಮಾಡುತ್ತಿದ್ದ. ಕಸವನಹಳ್ಳಿಯ ಅಪಾರ್ಟ್‌ಮೆಂಟ್‌ನ ನಿವಾಸಿಯೊಬ್ಬರು ದೇವಸ್ಥಾನಕ್ಕೆ ತೆರಳಿದ್ದಾಗ 320 ಗ್ರಾಂ. ಚಿನ್ನಾಭರಣ ಕಳವು ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕದ್ದ ಚಿನ್ನವನ್ನು ಗ್ರೀನ್‌ ಗ್ಲೀನ್ ಲೇಔಟ್‌ನ ಅಪಾರ್ಟ್‌ಮೆಂಟ್ ಬಳಿಯ ಖಾಲಿ ಪ್ರದೇಶದ ಪೊದೆಯಲ್ಲಿ ಬಚ್ಚಿಟ್ಟಿರುವುದಾಗಿ ವಿಚಾರಣೆ ಮಾಡುವಾಗ ಆತ ಒಪ್ಪಿಕೊಂಡಿದ್ದಾನೆ. ಆನ್‌ಲೈನ್ ಗೇಮ್​ನಲ್ಲಿ ಆರೋಪಿ ಭಾವೇಶ್ ಸುಮಾರು 40 ಲಕ್ಷ ರೂಪಾಯಿ ಕಳೆದುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

Whats_app_banner