ಮಂಡ್ಯ ಅಪಘಾತ: ಮಳವಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಕಾರು ಡಿಕ್ಕಿ, ರಸ್ತೆ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳ ದುರ್ಮರಣ
Dec 21, 2024 06:31 PM IST
ಮಂಡ್ಯ ಅಪಘಾತ: ಮಳವಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಕಾರು ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳ ದುರ್ಮರಣವಾದ ದಾರುಣ ಘಟನೆ ನಡೆದಿದೆ.
Mandya Accident: ಬೆಂಗಳೂರಿನಿಂದ ಮೈಸೂರು ದಾರಿಯಾಗಿ ತಲಕಾಡು ಕಡೆಗೆ ಪ್ರವಾಸ ಹೊರಟಿದ್ದ ವಿದ್ಯಾರ್ಥಿಗಳ ಕಾರು ಲಾರಿಗೆ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಳವಳ್ಳಿ ಸಮೀಪ ನಡೆದಿದೆ. ಮಂಡ್ಯ ಅಪಘಾತದ ವಿವರ ಇಲ್ಲಿದೆ.
Mandya Accident: ಮಳವಳ್ಳಿ ತಾಲೂಕು ಬೋಸೇಗೌಡನದೊಡ್ಡಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣಕ್ಕೀಡಾದರು. ಈ ದುರಂತದಲ್ಲಿ ಮತ್ತೊಬ್ಬ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದೆ. ಮೃತರನ್ನು ಬೆಂಗಳೂರಿನ ಪ್ರಣವ್, ಆಕಾಶ್, ಆದರ್ಶ ಎಂದು ಗುರುತಿಸಲಾಗಿದೆ. ಗಾಯಾಳು ವಿದ್ಯಾರ್ಥಿಯನ್ನು ಪೃಥ್ವಿ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗಳು ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರು ದಾರಿಯಾಗಿ ಕೊಡಗು, ತಲಕಾಡು ಭಾಗಕ್ಕೆ ಪ್ರವಾಸ ಹೋಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅನ್ನು ಓವರ್‌ಟೇಕ್ ಮಾಡಿದ ಕಾರು ಎದುರು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಒಂದು ಭಾಗ ಪೂರ್ತಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು-ಜೇವರ್ಗಿ ಹೆದ್ದಾರಿಯಲ್ಲಿ ಬೈಕ್‌ಗೆ ಲಾರಿ ಡಿಕ್ಕಿ, ಇಬ್ಬರು ಮಹಿಳೆಯರ ದುರ್ಮರಣ
ಮಂಡ್ಯ ಜಿಲ್ಲೆಯಲ್ಲಿ ಇಂದು ಎರಡು ಭೀಕರ ಅಪಘಾತಗಳು ಸಂಭವಿಸಿದ್ದು, ಇದು ಎರಡನೇಯದ್ದು. ಮಹದೇಶ್ವರ ಪುರ ಮೈಸೂರು-ಜೇವರ್ಗಿ ಹೆದ್ದಾರಿಯಲ್ಲಿ ಈ ರಸ್ತೆ ದುರಂತ ಸಂಭವಿಸಿದೆ. ಗ್ರಾಮದ ಶೈಲಜ ಹಾಗೂ ಶಿಲ್ಪಾ ತಿರುಪತಿಗೆ ತೆರಳುವ ವೇಳೆ ಸ್ನೇಹಿತೆಯ ದ್ವಿಚಕ್ರವಾಹದಲ್ಲಿ ಡ್ರಾಪ್ ತೆಗೆದುಕೊಂಡಿದ್ದರು. ಹಾಗೆ ಹೋಗುತ್ತಿರುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ 19 ವರ್ಷದ ಸಂಧ್ಯಾ ಹಾಗೂ 35 ವರ್ಷದ ಶಿಲ್ಪ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಶೈಲಜ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿಂಧನೂರು ಬಳಿ ಬೈಕ್-ಲಾರಿ ಡಿಕ್ಕಿ, ಮಹಿಳೆಯ ಸಾವು
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಅರಗಿನಮರ ಕ್ಯಾಂಪ್ ಸಮೀಪ ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಆಕೆಯನ್ನು ಹುಸೇನಮ್ಮ (43) ಎಂದು ಗುರುತಿಸಲಾಗಿದೆ. ಚಾಲಕನ ನಿರ್ಲಕ್ಷ್ಯದಿಂದಾಗಿ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಕೇಸ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೂವಿನಹಡಗಲಿ: ಕಾರು, ಬೈಕ್ ಡಿಕ್ಕಿ, ಬೈಕ್ ಸವಾರನ ದುರ್ಮರಣ
ವಿಜಯಪುರ ಜಿಲ್ಲೆ ಹೂವಿನ ಹಡಗಲಿ ಪಟ್ಟಣದ ಹೊರವಲಯದಲ್ಲಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿದೆ, ಈ ರಸ್ತೆ ದುರಂತದದಲ್ಲಿ ಬೈಕ್ ಸವಾರ ಉತ್ತಂಗಿ ಗ್ರಾಮದ ಬಸವರಾಜ್ (47) ದಾರುಣವಾಗಿ ಮೃತಪಟ್ಟಿದ್ದಾರೆ. ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಭಾಗ