Mandya Elections: ಮಂಡ್ಯ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ 35 ಸ್ಥಾನಗಳ ಉಪ ಚುನಾವಣೆಗೆ ವೇಳಾಪಟ್ಟಿ ಪ್ರಕಟ
Oct 31, 2024 06:12 PM IST
ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಪಂಚಾಯಿತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ನವೆಂಬರ್‌ನಲ್ಲಿ ಉಪ ಚುನಾವಣೆ ನಿಗದಿಯಾಗಿದೆ.
- ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಪಂಚಾಯಿತಿಗಳಲ್ಲಿ ತೆರವಾಗಿರುವ 35 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನವೆಂಬರ್ ತಿಂಗಳಲ್ಲಿ ನಡೆಯಲಿದ್ದು, ಇದಕ್ಕಾಗಿ ಮಂಡ್ಯ ಜಿಲ್ಲಾಡಳಿತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮಂಡ್ಯ: ಕರ್ನಾಟಕದ ರಾಮನಗರ, ಬಳ್ಳಾರಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ವಿಧಾನಸಭೆ ಚುನಾವಣೆಗೆ ಕದನ ಕುತೂಹಲ ಏರ್ಪಟ್ಟಿದ್ದರೆ, ಮಂಡ್ಯ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯಿತಿ 35 ಸದಸ್ಯ ಸ್ಥಾನಗಳನ್ನು ಭರ್ತಿಮಾಡಲು ಉಪ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ನವೆಂಬರ್ ತಿಂಗಳಿನಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಮಂಡ್ಯ ಜಿಲ್ಲಾಡಳಿತವು ಚುನಾವಣೆ, ಮತ ಎಣಿಕೆಗೆ ಸಿದ್ದತೆ ಮಾಡಿಕೊಂಡಿದೆ. ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನವು ಮುಕ್ತಾಯಗೊಳ್ಳುವ 48 ಗಂಟೆಗಳ ಮೊದಲಿನ ಅವಧಿಯಲ್ಲಿ ಎಲ್ಲಾ ಮದ್ಯದ ಅಂಗಡಿಗಳು ಮತ್ತು ಮದ್ಯ ತಯಾರಿಕ ಘಟಕಗಳನ್ನು ಅದರ ಮಾಲೀಕರು, ಅದಿಭೋಗದಾರರು ಸಂದರ್ಭಾನುಸಾರ ಅದರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದ್ದಾರೆ.
ವೇಳಾ ಪಟ್ಟಿ ಹೀಗಿದೆ
ಗ್ರಾಮ ಪಂಚಾಯತಿಯ ಚುನಾವಣೆ ನಡೆಯುವ ವೇಳಾಪಟ್ಟಿ ಪ್ರಕಾರ ನವೆಂಬರ್ 6 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ನವೆಂಬರ್ 12 ಕೊನೆಯ ದಿನಾಂಕವಾಗಿರುತ್ತದೆ. ನವೆಂಬರ್ 13 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನವೆಂಬರ್ 15 ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕವಾಗಿರಲಿದೆ.
ಮತದಾನದ ಅವಶ್ಯವಿದ್ದರೆ ನವೆಂಬರ್ 23 ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಮತದಾನ ನಡೆಸಲಾಗುವುದು. ಮತ ಎಣಿಕೆ ನವೆಂಬರ್ 26 ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ಎಲ್ಲೆಲ್ಲಿ ಮತದಾನ
ಉಪ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯಿತಿ ಹಾಗೂ ಕ್ಷೇತ್ರದ ಸಂಖ್ಯೆಯ ವಿವರ ಇಂತಿದೆ
ಮಂಡ್ಯ ತಾಲ್ಲೂಕಿನ 3-ಕೆರಗೋಡು-3, 5-ಕೀಲಾರ-5, 1-ಹುಲಿವಾನ-1, 1-ಯಲಿಯೂರು-1, ಮದ್ದೂರು ತಾಲೂಕಿನ 5-ಅಡಗನಹಳ್ಳಿ-1, 5-ಅಡಗನಹಳ್ಳಿ-1, 6-ಅಡಗನಹಳ್ಳಿ-2, 1-ವಳಗೆರೆಹಳ್ಳಿ-1, 3-ವಳಗೆರೆಹಳ್ಳಿ-3, 5-ತೈಲೂರು-1, 5-ತೈಲೂರು-1, 2-ಗೊರವನಹಳ್ಳಿ-2, 3-ಶಿಂಘಟಗೆರೆ, 2-ಕೆ.ಶೆಟ್ಟಿಹಳ್ಳಿ-2, ಮಳವಳ್ಳಿ ತಾಲೂಕಿನಲ್ಲಿ 5-ಅಂಕನಹಳ್ಳಿ, 3-ಹೊಸಹಳ್ಳಿ-3, 5-ರಾಮನಾಥ ಮೋಳೆ, 4-ಬೆಳಕವಾಡಿ-4 ಸ್ಥಾನಗಳಲ್ಲಿ ಚುನಾವಣೆ ನಡೆಯುತ್ತದೆ.
ಪಾಂಡವಪುರ ತಾಲೂಕಿನಲ್ಲಿ 3-ಬೆಳ್ಳಾಳೆ, 2-ವಳಗೆರೆದೇವರಹಳ್ಳಿ, 3-ಹೊಸಹಳ್ಳಿ, 5-ಕುರಹಟ್ಟಿ, 3-ಬಸವನಗುಡಿಕೊಪ್ಪಲು, 6-ಹೊಸಸಾಯಪ್ಪನಹಳ್ಳಿ, ಶ್ರೀರಂಗಪಟ್ಟಣ ತಾಲೂಕಿನಲ್ಲಿ 04-ಬೆಳಗೊಳ-4, 2-ಗಾಮನಹಳ್ಳಿ, 4-ನೀಲನಕೊಪ್ಪಲು, 06-ಮರಳಗಾಲ, ನಾಗಮಂಗಲ ತಾಲೂಕಿನಲ್ಲಿ 5-ಹೊನ್ನೇನಹಳ್ಳಿ, 4-ಶಿಖರನಹಳ್ಳಿ, 8-ಅಲ್ಪಹಳ್ಳಿ, ಕೆ.ಆರ್ ಪೇಟೆ ತಾಲ್ಲೂಕಿನ 07-ಚಿಕ್ಕೋನಹಳ್ಳಿ, 05-ಕಾಮನಹಳ್ಳಿ, 10-ಪೂವನಹಳ್ಳಿ, 02-ಪುರ ಜಿಲ್ಲೆಯಲ್ಲಿ ಒಟ್ಟು 35 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣೆ ನಡೆಸಲು 30 ಚುನಾವಣಾಧಿಕಾರಿಗಳು ಹಾಗೂ 30 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ನೀತಿ ಸಂಹಿತೆ ಜಾರಿ
ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್ 6 ರಿಂದ 26 ವರೆಗೆ ಜಾರಿಯಲ್ಲಿರುತ್ತದೆ. ಗ್ರಾಮ ಪಂಚಾಯಿತಿಯ ಎಲ್ಲಾ ಸ್ಥಾನಗಳಿಗೆ ಚುನಾವಣೆ ನಡೆಯದ ಸಂದರ್ಭದಲ್ಲಿ ಅಥವಾ ಅವಿರೋಧ ಆಯ್ಕೆಯಾಗಿ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸಿದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ನಿಂತುಹೋಗುತ್ತದೆ.
ನೀತಿ ಸಂಹಿತೆಯು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರ ಪಾಲಿಕೆ ಹಾಗೂ ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷ ರಹಿತ ಚುನಾವಣೆಯಾಗಿದೆ.
ಗ್ರಾಮ ಪಂಚಾಯಿತಿ ಉಪ ಚುನಾವಣೆಯು ಮತಪತ್ರಗಳ ಮೂಲಕ ನಡೆಯಲಿದ್ದು, ಮತಪತ್ರದಲ್ಲಿ ನೋಟಾ ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.