Channapatna Elections: ಚನ್ನಪಟ್ಟಣಕ್ಕೆ ಎನ್‌ಡಿಎ ಅಭ್ಯರ್ಥಿ ಘೋಷಿಸಿದ ಜೆಡಿಎಸ್; ನಿಖಿಲ್ ಕುಮಾರಸ್ವಾಮಿಗೆ ಮೂರನೇ ಚುನಾವಣೆ
Oct 24, 2024 05:35 PM IST
ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿಯನ್ನು ಎನ್‌ಡಿಎ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.
- ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ಕೊನೆಗೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ. ಟಿಕೆಟ್ ಬಯಸಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಸೇರಿದ್ದ ಸಿ.ಪಿ. ಯೋಗೇಶ್ವರ್ ಅವರಿಗೆ ಟಕ್ಕರ್ ನೀಡಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಒತ್ತಾಯದ ಹಿನ್ನೆಲೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಕಟಿಸಲಾಯಿತು.
ಬೆಂಗಳೂರು: ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹೆಸರು ಅಂತಿಮವಾಗಿದೆ. ರಾಮನಗರದ ನಂತರ ಚನ್ನಪಟ್ಟಣದಲ್ಲೂ ದೇವೇಗೌಡರ ಕುಟುಂಬದ ಮೂರನೇ ಕುಡಿ ಇಲ್ಲಿ ಅಭ್ಯರ್ಥಿಯಾಗಲಿದ್ದಾರೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನೆ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎನ್ನುವ ಒಮ್ಮತದ ತೀರ್ಮಾನವನ್ನು ಗುರುವಾರ ಕೈಗೊಳ್ಳಲಾಗಿದೆ. ದೇವೇಗೌಡರ ಕುಟುಂಬದವರು ಹೊರತುಪಡಿಸಿ ಯಾರೇ ಸ್ಪರ್ಧೆ ಮಾಡಿದರೂ ಇಲ್ಲಿ ಕಾಂಗ್ರೆಸ್‌ನ ಅಬ್ಬರದ ಮುಂದೆ ಮಂಕಾಗುವ ಜತೆಗೆ ಸೋಲುವ ಸಾಧ್ಯತೆಯೂ ಇರುವುದರಿಂದ ಕುಟುಂಬದ ಒಬ್ಬರಿಗೆ ಅವಕಾಶ ಮಾಡಿಕೊಡಿ. ಅದರಲ್ಲೂ ನಿಖಿಲ್ ಕುಮಾರಸ್ವಾಮಿ ಅವರೇ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಕೊನೆಗೆ ಎಚ್.ಡಿ.ದೇವೇಗೌಡ ಅವರ ಸಲಹೆ ಮೇರೆಗ ಅಭ್ಯರ್ಥಿ ಹೆಸರನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಮತ್ತಿತರರು ಪ್ರಕಟಿಸಿದರು.ನಿಖಿಲ್ ಅವರು ಆರು ವರ್ಷದಲ್ಲಿ ಮೂರನೇ ಚುನಾವಣೆ, ಒಂದೂವರೆ ವರ್ಷದಲ್ಲಿ ಎರಡನೇ ವಿಧಾನಸಭೆ ಚುನಾವಣೆ ಎದುರಿಸಲು ಅಣಿಯಾಗಲಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದೂ ಅಲ್ಲದೇ ಆ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಇದರಿಂದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜೋಡಿ ಪ್ರಬಲ ಅಭ್ಯರ್ಥಿ ಮೂಲಕ ಇಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಮುಖಭಂಗ ಮಾಡುವ ಪಣ ತೊಟ್ಟಿದ್ದಾರೆ. ಇದರಿಂದ ಜೆಡಿಎಸ್ ಇಕ್ಕಟ್ಟಿಗೆ ಸಿಲುಕಿತ್ತು.
ದೇವೇಗೌಡರ ಸಭೆ
ಈ ಹಿನ್ನೆಲೆಯಲ್ಲಿ ಗುರುವಾರ ಮೊದಲು ಜೆಡಿಎಸ್ ಸಭೆ ನಡೆಯಿತು. ದೇವೇಗೌಡರೊಂದಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚರ್ಚೆ ನಡೆಸಿದರು. ಕಾಂಗ್ರೆಸ್ ತಂತ್ರಗಾರಿಕೆ ತಕ್ಕ ಉತ್ತರ ನೀಡಲು ನಿಖಿಲ್ ಕುಮಾರಸ್ವಾಮಿಯೇ ಸೂಕ್ತ ಎನ್ನುವ ಅಭಿಪ್ರಾಯ ಜೆಡಿಎಸ್ ಸಭೆಯಲ್ಲಿ ವ್ಯಕ್ತವಾಗಿದೆ. ಇದರಿಂದ ನಿಖಿಲ್ ಕಣಕ್ಕೆ ಇಳಿಯಲಿ ಎನ್ನುವ ಅಭಿಪ್ರಾಯವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದರು. ಇದಕ್ಕೆ ದೇವೇಗೌಡರು ಸಮ್ಮತಿಸಿದರು.
ನಂತರ ಮಾಜಿ ಸಿಎಂ ಬಿಎಸ್ ವೈ ಅವರ ಧವಳಗಿರಿ ನಿವಾಸದಲ್ಲಿ ಬಿಜೆಪಿ ಜೆಡಿಎಸ್ ಸಮನ್ವಯ ಸಭೆಯನ್ನು ಪ್ರಮುಖರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಸಭೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಆಗಮಿಸಿದ್ದರು. ಈ ವೇಳೆ ಬಿ.ಎಸ್.ಯಡಿಯೂರಪ್ಪ, ಆರ್. ಅಶೋಕ್, ಚಲವಾದಿ ನಾರಾಯಣಸ್ವಾಮಿ. ಡಾ.ಅಶ್ವಥ್ ನಾರಾಯಣ, ಸಾ.ರಾ.ಮಹೇಶ್ ಸಹಿತ ಹಲವರು ಭಾಗಿಯಾಗಿ ಚರ್ಚಿಸಿದರು.
ಅಧಿಕೃತ ಘೋಷಣೆ
ಇಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ಲೋಕಸಭೆ ಚುನಾವಣೆ ನಂತರ ಎದುರಿಸುತ್ತಿರುವ ಪ್ರಮುಖ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸಬೇಕು. ಒಗ್ಗಟ್ಟಿನಿಂದ ಜೆಡಿಎಸ್ ಹಾಗೂ ಬಿಜೆಪಿ ಕೆಲಸ ಮಾಡಬೇಕು. ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಮಾಡಿದರೆ ಗೆಲುವು ನಮ್ಮದಾಗಲಿದೆ ಎಂದು ಹಲವರು ಸಲಹೆ ನೀಡಿದರು. ಕೊನೆಗೆ ಒಮ್ಮತದ ತೀರ್ಮಾನವನ್ನೂ ಕೈಗೊಂಡು ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ತನಕ್ಕೆ ಬೆಂಬಲ ಸೂಚಿಸಲಾಯಿತು.
ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲವಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ನಿಖಿಲ್ ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ. ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಮಾಜಿ ಸಿ ಎಂ.ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಿಖಿಲ್ ಸ್ಪರ್ಧೆ ಮಾಡಲೇಬೇಕು ಎನ್ನುವುದು ಚನ್ನಪಟ್ಟಣದ ಪ್ರತೀ ಕಾರ್ಯಕರ್ತರ ಒತ್ತಾಯವಾಗಿದೆ. ಈ ಕಾರಣದಿಂದಲೇ ನಿಖಿಲ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಅವರು ಸ್ಪರ್ಧಿಸಿ ಗೆಲುವು ಸಾಧಿಸಲಿದ್ದಾರೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿದರು.
ಮೂರನೇ ಚುನಾವಣೆ
ಈ ಹಿಂದೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ವಿರುದ್ದ ಸೋತಿದ್ದ ನಿಖಿಲ್ ಕಳೆದ ವರ್ಷ ರಾಮನಗರ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. ಈಗ ಮೂರನೇ ಬಾರಿಗೆ ಚುನಾವಣೆ ಕಣಕ್ಕೆ ಇಳಿಯುತ್ತಿದ್ದಾರೆ. ಮೊದಲ ಬಾರಿ ಕಾಂಗ್ರೆಸ್ ಮೈತ್ರಿ, ಎರಡನೇ ಬಾರಿ ಜೆಡಿಎಸ್‌ನಿಂದ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ನಿಖಿಲ್ ಈ ಬಾರಿ ಬಿಜೆಪಿ ಬೆಂಬಲದ ಎನ್ ಡಿಎ ಅಭ್ಯರ್ಥಿಯಾಗಲಿದ್ದಾರೆ. ಹಿಂದೆ ಇಲ್ಲಿ ಅವರ ತಾಯಿ ಅನಿತಾ ಕುಮಾರಸ್ವಾಮಿ ಸೋತಿದ್ದರೆ, ಕುಮಾರಸ್ವಾಮಿ ಎರಡು ಬಾರಿ ಶಾಸಕರಾಗಿದ್ದಾರೆ.