logo
ಕನ್ನಡ ಸುದ್ದಿ  /  ಕರ್ನಾಟಕ  /  ಕಾವೇರಿ ತೀರದಲ್ಲೂ ಗಂಗಾರತಿ ಪಕ್ಕಾ, ವಾರಣಾಸಿಗೆ ಹೊರಟಿತು ಸಚಿವ ಚಲುವರಾಯಸ್ವಾಮಿ ಮತ್ತವರ ತಂಡ: ದಸರಾಕ್ಕೆ ಆರಂಭಿಸಲು ಸಿದ್ದತೆ

ಕಾವೇರಿ ತೀರದಲ್ಲೂ ಗಂಗಾರತಿ ಪಕ್ಕಾ, ವಾರಣಾಸಿಗೆ ಹೊರಟಿತು ಸಚಿವ ಚಲುವರಾಯಸ್ವಾಮಿ ಮತ್ತವರ ತಂಡ: ದಸರಾಕ್ಕೆ ಆರಂಭಿಸಲು ಸಿದ್ದತೆ

Umesha Bhatta P H HT Kannada

Sep 20, 2024 07:16 AM IST

google News

ವಾರಣಾಸಿಯಲ್ಲಿ ನಡೆಯುವ ಗಂಗಾರತಿ.

    • ಕರ್ನಾಟಕದ ಕಾವೇರಿ ನದಿ ತೀರದಲ್ಲಿ ಗಂಗಾ ಆರತಿ ಆರಂಭಿಸುವ ಸಂಬಂಧ ನೀರಾವರಿ ಇಲಾಖೆ ಸಮಿತಿ ರಚಿಸಿದ್ದು,ಸಚಿವ ಎನ್‌.ಚಲುವರಾಯಸ್ವಾಮಿ ನೇತೃತ್ವದ ಸಮಿತಿ ವಾರಣಾಸಿ, ಹರಿದ್ವಾರಕ್ಕೆ ಭೇಟಿ ನೀಡಲಿದೆ.
    • (ವರದಿ: ಎಚ್‌.ಮಾರುತಿ. ಬೆಂಗಳೂರು)
ವಾರಣಾಸಿಯಲ್ಲಿ ನಡೆಯುವ ಗಂಗಾರತಿ.
ವಾರಣಾಸಿಯಲ್ಲಿ ನಡೆಯುವ ಗಂಗಾರತಿ.

ಬೆಂಗಳೂರು: ಕರ್ನಾಟಕದ ಕಾವೇರಿ ನದಿ ತೀರದಲ್ಲೂ ಗಂಗಾರತಿ ಆರಂಭವಾಗುವುದು ಪಕ್ಕಾ ಆಗುತ್ತಿದೆ. ಈಗಾಗಲೇ ತಿಂಗಳ ಹಿಂದೆ ಉತ್ತಮ ಮಳೆಯಿದ ತುಂಬಿದ ಕೃಷ್ಣರಾಜ ಸಾಗರ ಜಲಾಶಯ ಹಾಗೂ ಕಾವೇರಿ ನದಿಗೆ ಬಾಗಿನ ಅರ್ಪಿಸುವ ವೇಳೆ ವಾರಣಾಸಿ ಮಾದರಿಯ ಗಂಗಾರತಿಯನ್ನು ಕಾವೇರಿ ನದಿ ತೀರದಲ್ಲೂ ಆರಂಭಿಸುವುದಾಗಿ ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿದ್ದರು. ಈಗ ವಾರಣಾಸಿಯಲ್ಲಿ ನಡೆಯುವ ಗಂಗಾರತಿ ಮಾದರಿಯನ್ನು ನೋಡಿಕೊಂಡು ಬರಲು ಕರ್ನಾಟಕದ ತಂಡ ಮುಂದಾಗಿದೆ. ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ನೇತೃತ್ವದ ಶಾಸಕರು,ಅಧಿಕಾರಿಗಳ ತಂಡವು ವಾರಾಣಾಸಿಗೆ ತೆರಳಿದೆ.

ಪ್ರತಿ ವರ್ಷ ಗಂಗಾ ನದಿಗೆ ಮಾಡಲಾಗುವ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ನದಿಗೆ ಕಾವೇರಿ ಆರತಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಕಾವೇರಿ ಆರತಿ ಕಾರ್ಯಕ್ರಮದ ರೂಪುರೇಷೆಗಳನ್ನು ಕುರಿತು ಅಧ್ಯಯನ ನಡೆಸಲು ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಸಚಿವರು ಶಾಸಕರು ಮತ್ತು ಅಧಿಕಾರಿ ಗಳನ್ನೊಳಗೊಂಡ ಈ ಸಮಿತಿ ಶುಕ್ರವಾರ ಮತ್ತು ಶನಿವಾರ ವಾರಾಣಸಿ ಮತ್ತು ಹರಿದ್ವಾರಕ್ಕೆ ಭೇಟಿ ನೀಡಲಿದೆ.

ಕಾವೇರಿ ಆರತಿ ಕಾರ್ಯಕ್ರಮದ ಸಮಿತಿ ಅಧ್ಯಕ್ಷ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು.

ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಲ ಸಂಪನ್ಮೂಲ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸಮಿತಿಯ ಸದಸ್ಯರಾಗಿದ್ದಾರೆ.ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಕೆ.ಎಂ.ಉದಯ್, ದಿನೇಶ್ ಗೂಳಿಗೌಡ, ಎಚ್.ಸಿ. ಬಾಲಕೃಷ್ಣ, ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ಕೆ.ಎಂ.ಶಿವಲಿಂಗೇಗೌಡ, ಎ.ಆರ್.‌ಕೃಷ್ಣಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ, ಮಂಡ್ಯ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಮಾಜಿ ಶಾಸಕ ರಾಜು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಜಲ ಸಂಪನ್ಮೂಲ ಸಚಿವರ ಸಲಹೆಗಾರ ಜಯಪ್ರಕಾಶ್ ಸಮಿತಿಯಲ್ಲಿದ್ದಾರೆ.

ನಿಯೋಗವು ಸೆ.20ರ ಶುಕ್ರವಾರ ರಾತ್ರಿ ಹರಿದ್ವಾರದಲ್ಲಿ ಗಂಗಾ ನದಿಗೆ ಆರತಿ ಮಾಡುವುದನ್ನು ವೀಕ್ಷಿಸಲಿದೆ.

ಸೆ.21 ಶನಿವಾರ ವಾರಾಣಸಿಗೆ ತೆರಳಿ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿ ವೀಕ್ಷಣೆ ಮಾಡಲಿದೆ.

ಸೆ.22 ಭಾನುವಾರ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ಅಲ್ಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆರತಿ ನಡೆಸುವ ಸಂಬಂಧ ಮಾಹಿತಿ ಪಡೆಯಲಿದೆ.

ಮುಂಬರುವ ದಸರಾ ಅವಧಿಯ ಹೊತ್ತಿಗೆ ಅದನ್ನು ಕಾರ್ಯಗತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ಎಲ್ಲಿ ಮಾಡಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ. ಮೊದಲು ಕಾವೇರಿ ಆರತಿ ಕಾರ್ಯಕ್ರಮವನ್ನು ಕೆಆರ್‌ಎಸ್ ನಲ್ಲಿ ಮಾಡಲು ಚರ್ಚೆ ನಡೆದಿತ್ತು. ಆದರೆ ಅಲ್ಲಿನ ಸ್ಥಳಾವಕಾಶ ಸಾಲದು ಎಂದು ಹೇಳಲಾಗುತ್ತಿದೆ.

ತಲಕಾಡು, ಕಾವೇರಿ ಸಂಗಮ ಅಥವಾ ಕಾವೇರಿಯ ಉಗಮ ಸ್ಥಾನವಾದ ಭಾಗಮಂಡಲದಲ್ಲಿಯೇ ಆಯೋಜಿಸಲು ಬೇಡಿಕೆ ಕೇಳಿ ಬರುತ್ತಿದೆ. ಆದರೆ ಎಲ್ಲಿ ಇದನ್ನು ಆರಂಭಿಸಲಾಗುತ್ತದೆ ಎನ್ನುವ ಕುರಿತು ಸಮಿತಿ ವರದಿ ನೀಡಲಿದೆ. ಇದನ್ನಾಧರಿಸಿ ಅಂತಿಮ ನಿರ್ಧಾರ ಆಗಲಿದೆ.

ಜುಲೈ 21ರಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾವೇರಿ ಆರತಿ ನಡೆಸುವುದಾಗಿ ಘೋಷಿಸಿದ್ದರು. ಆನಂತರ ಸಮಿತಿ ರಚನೆಯಾಗಿ ಈಗ ಸ್ಥಳ ಪರಿಶೀಲನೆ, ಸಿದ್ದತೆ ಪ್ರಕ್ರಿಯೆಗಳು ನಡೆದಿವೆ. ಪ್ರವಾಸ ಮುಗಿಸಿ ಬಂದ ಸಮಿತಿ ನೀಡುವ ವರದಿಯನ್ನು ಆಧರಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

(ವರದಿ: ಎಚ್‌.ಮಾರುತಿ. ಬೆಂಗಳೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ