logo
ಕನ್ನಡ ಸುದ್ದಿ  /  ಕರ್ನಾಟಕ  /  Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿ ಮಾಡಿಸಿಲ್ಲವೇ, ಎರಡು ದಿನ ನೋಂದಣಿ ಅವಧಿ ವಿಸ್ತರಣೆ

Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿ ಮಾಡಿಸಿಲ್ಲವೇ, ಎರಡು ದಿನ ನೋಂದಣಿ ಅವಧಿ ವಿಸ್ತರಣೆ

Umesha Bhatta P H HT Kannada

Dec 04, 2024 07:17 PM IST

google News

ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿ ಅವಧಿಯನ್ನು ಎರಡು ದಿನ ವಿಸ್ತರಿಸಲಾಗಿದೆ.

  • Mandya  Kannada Sahitya Sammelana: ಮಂಡ್ಯದಲ್ಲಿ ನೆಡಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳ ಆನ್‌ಲೈನ್‌ ನೋಂದಣಿಗೆ ಇನ್ನೂ ಎರಡು ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ.

ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿ ಅವಧಿಯನ್ನು ಎರಡು ದಿನ ವಿಸ್ತರಿಸಲಾಗಿದೆ.
ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿ ಅವಧಿಯನ್ನು ಎರಡು ದಿನ ವಿಸ್ತರಿಸಲಾಗಿದೆ.

ಮಂಡ್ಯ: ಮಂಡ್ಯದಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20,21,22 ರಂದು ನಡೆಯುತ್ತಿರುವುದರಿಂದ, ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳು https://kannadasahithyaparishattu.in/sammelana2024/ ವೆಬ್ಸೈಟ್ ಮೂಲಕ ಪ್ರತಿನಿಧಿಗಳ ಸಂಖ್ಯೆ, ಮೊಬೈಲ್ ನಂಬರ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈವರೆಗೂ 4,077 ಜನರು ಆನ್‌ಲೈನ್ ಮೂಲಕ ನೋಂದಣಿಯಾಗಿದ್ದು, ನೋಂದಣಿ ಮಾಡಿಕೊಳ್ಳಲು ಡಿಸೆಂಬರ್ 05 ರಂದು ಕೊನೆಯ ದಿನಾಂಕವಾಗಿದ್ದು, ಈ ದಿನಾಂಕವನ್ನು 07 ವರೆಗೆ ವಿಸ್ತರಿಸಲಾಗಿದೆ.ಒಟ್ಟು 6000 ಜನರಿಗೆ ಅವಕಾಶ ಕಲ್ಪಿಸಿದ್ದು, ಮೊದಲು ನೋಂದಣಿಯಾದವರಿಗೆ ಅದ್ಯತೆ ಕಲ್ಪಿಸಲಾಗುತ್ತದೆ. ನೋಂದಾಯಿತ ಪ್ರತಿನಿಧಿಗಳಿಗೆ ಬ್ಯಾಗ್, ನೋಟ್ ಪ್ಯಾಡ್, ಪೆನ್, ಅಧ್ಯಕ್ಷರ ಭಾಷಣ, ಆಹ್ವಾನ ಪ್ರತಿಕೆ, ಅರ್ಧ ಕೆ.ಜಿ. ಸಕ್ಕರೆ, ಅರ್ಧ ಕೆ.ಜಿ. ಬೆಲ್ಲ ಹಾಗೂ ಐ.ಡಿ. ಕಾರ್ಡ್ ಗಳನ್ನು ನೀಡಲಾಗುವುದು ಹಾಗೂ ನೊಂದಾಯಿತ ಪ್ರತಿನಿಧಿಗಳಿಗೆ ಆನ್ ಲೈನ್ ನಲ್ಲಿ ಓ.ಓ.ಡಿ ಪ್ರಮಾಣ ಪತ್ರವನ್ನುಸಹ ನೀಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್‌ ತಿಳಿಸಿದೆ.

ಆನ್‌ಲೈನ್ ಮೂಲಕ ನೋಂದಣಿಯಾದ ಪ್ರತಿನಿಧಿಗಳಿಗೆ, ಸಮುದಾಯ ಭವನ, ಖಾಸಗಿ ವಸತಿ ಶಾಲೆ, ಹಾಸ್ಟೆಲ್, ಕಲ್ಯಾಣ ಮಂಟಪದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು, ವಸತಿ ಕಿಟ್ ನಲ್ಲಿ ಹಾಸುವ ಮ್ಯಾಟ್, ಹೊದಿಕೆ, ಏರ್ ಪಿಲ್ಲೋ, ಟೂತ್ ಪೆಸ್ಟ್, ಬ್ರಷ್, ಸೋಪ್ ಹಾಗೂ ಬಾಚಣಿಗೆಯನ್ನು ನೀಡಲಾಗುವುದು. ಆನ್‌ಲೈನ್ ಮೂಲಕ ನೋಂದಣಿಯಾದ ಪ್ರತಿನಿಧಿಗಳು ವಸತಿ ಸ್ಥಳಗಳ ವಿವರವನ್ನು ಆನ್ಲೈನ್ ಮೂಲಕ ಮಾಹಿತಿ ನೀಡಲಾಗುತ್ತದೆ. ಸಮ್ಮೇಳನಕ್ಕೆ ಹಾಜರಾಗುವವರಿಗೆ ಮಾರ್ಗದರ್ಶನ ನೀಡಲು ಸೇವಾ ಕೇಂದ್ರ ತೆರೆಯಲಾಗಿರುತ್ತದೆ ಎಂದು ಮಂಡೆ ಉಪ ವಿಭಾಗಾಧಿಕಾರಿ ಶಿವಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಡ್ಯದ ಮನೆಗಳ ಮೇಲೆ ಕನ್ನಡ ಬಾವುಟ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು ಮಂಡ್ಯ ನಗರವನ್ನು ಮದುವಣಗಿತ್ತಿಯಂತೆ ಸಿಂಗಾರಗೊಳಿಸಬೇಕು. ಎಲ್ಲಿ ನೋಡಿದರೂ ಕನ್ನಡದ ಬಾವುಟಗಳು ರಾರಾಜಿಸುವ ಮೂಲಕ ಮಂಡ್ಯ ನಗರ ಸಂಪೂರ್ಣ ಕನ್ನಡಮಯವಾಗಿ ಕಂಗೊಳಿಸಬೇಕು ಎಂದು ಶಾಸಕರು ಹಾಗೂ ನಗರ ಅಲಂಕಾರ ಸಮಿತಿ ಅಧ್ಯಕ್ಷರಾದ ರವಿಕುಮಾರ್ ಹೇಳಿದ್ದಾರೆ.

ಮಂಡ್ಯ ನಗರದ ರಸ್ತೆಗಳು, ಸರ್ಕಲ್ ಗಳಲ್ಲಿ ಹಾಗೂ ಮನೆಮನೆಗಳ ಮೇಲೂ ಕನ್ನಡದ ಬಾವುಟ ಹಾರಾಡಬೇಕು. ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸುವ ಕಾರ್ಯಕ್ರಮಕ್ಕೆ ಡಿ.6 ಅಥವಾ 7ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು. ನಗರದಲ್ಲಿನ ಸುಮಾರು 20 ಸಾವಿರಕ್ಕೂ ಹೆಚ್ಚು ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲಾಗುವುದು. ಇದರ ಜೊತೆಗೆ ಪ್ರಮುಖ ಸರ್ಕಲ್, ರಸ್ತೆಗಳ ಅಕ್ಕಪಕ್ಕ, ವಾಣಿಜ್ಯ ಮಳಿಗೆಗಳ ಮೇಲೂ ಕನ್ನಡ ಬಾವುಟ ಹಾರಿಸಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂಬುದು ಅವರ ಸೂಚನೆ.

ಈ ತಿಂಗಳ ಪೂರ್ತಿ ಕನ್ನಡದ ಬಾವುಟ ಹಾರಾಡಲಿದೆ. ಇನ್ನೂ ಹತ್ತು ದಿನದೊಳಗೆ ನಗರದೆಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸಬೇಕು. ಮೆರವಣಿಗೆ ಸಾಗುವ ಮಾರ್ಗದ ಸರ್ಕಲ್ ಗಳನ್ನು ಪುಷ್ಪಾಲಂಕಾರದಿಂದ ಸಿಂಗರಿಸಬೇಕು. ರಸ್ತೆಗಳು ತಳಿರು ತೋರಣದಿಂದ ಕಂಗೊಳಿಸಬೇಕು. ಗೋಡೆಗಳ ಮೇಲೆ ಕೆಂಪು ಹಳದಿ ಬಣ್ಣದ ಚಿತ್ರಾಲಂಕಾರ ಮೂಡಿಸಬೇಕು ಎನ್ನುವುದು ಶಾಸಕರ ಮನವಿ.

ದೀಪಾಲಂಕಾರಕ್ಕೆ ಸೂಚನೆ

ನಗರದಲ್ಲಿ ದೀಪಾಲಂಕಾರವನ್ನು ಚೆಸ್ಕಾಂನವರೇ ವಹಿಸಿಕೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಪ್ರತಿ ಮಳಿಗೆಗಳ ವ್ಯಾಪಾರಸ್ಥರಿಗೆ ಕನ್ನಡದ ಶಾಲು ವಿತರಣೆ ಮಾಡಿ ಸಾಹಿತ್ಯ ಸಮ್ಮೇಳನದ ಕುರಿತು ಪ್ರಚಾರ ಮಾಡುವಂತೆ ಮನವಿ ಮಾಡಬೇಕು. ಈ ಸಂಬಂಧ ನಗರಸಭೆ ವತಿಯಿಂದ ಕರಪತ್ರಗಳನ್ನು ಮುದ್ರಿಸಿ ಹಂಚಬೇಕು. ವ್ಯಾಪಾರಿಗಳು, ಸಾರ್ವಜನಿಕರು ಮನೆಯ ಹಬ್ಬದ ರೀತಿಯಲ್ಲಿ ಸಾಹಿತ್ಯ ಸಮ್ಮೇಳನ ಆಚರಿಸಿದಾಗ ಸಮ್ಮೇಳನ ಯಶಸ್ವಿ ಆಗಲಿದೆ .ಡಿ.18ರಂದು ಶಾಲಾ, ಕಾಲೇಜು ಮಕ್ಕಳಿಂದ 'ಕನ್ನಡಕ್ಕಾಗಿ ಓಟ' ಎಂಬ ಘೋಷವಾಕ್ಯದೊಂದಿಗೆ ಮ್ಯಾರಥಾನ್ ಹಮ್ಮಿಕೊಳ್ಳಲಾಗುವುದು. ಗ್ರಾಮ ಪಂಚಾಯತಿ ಕಚೇರಿಗಳ ಮೇಲೂ ಕನ್ನಡ ಬಾವುಟ ಹಾರಿಸುವುದರ ಜೊತೆಗೆ ಕಟ್ಟಡವನ್ನು ಲೈಟಿಂಗ್ ನಿಂದ ಸಿಂಗರಿಸುವ ಕೆಲಸವಾಗಬೇಕು ಎನ್ನುವುದನ್ನೂ ತಿಳಿಸಿದರು.

ಮಂಡ್ಯದಲ್ಲಿ ಕನ್ನಡ ಭವ ನಿರ್ಮಾಣ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ಸಮ್ಮೇಳನ ಕುರಿತಾಗಿ ಸಭೆ ನಡೆಸಿದರು. ಕನ್ನಡ ಭವನ ನಿರ್ಮಾಣ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯುತ್ತಿದ್ದು, ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು. ಸಮ್ಮೇಳನಕ್ಕೆ ಹೊರ ಜಿಲ್ಲೆಯಿಂದ ಅನೇಕರು ಬರುತ್ತಿದ್ದು, ಮಂಡ್ಯ ಜಿಲ್ಲೆಯಲ್ಲಿನ ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ಜಿಲ್ಲೆ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎನ್ನುವ ಮನವಿ ಮಾಡಿದರು.

ಕನ್ನಡವನ್ನು ಹೆಚ್ಚಾಗಿ ಬಳಸಿದರೆ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ. ಕನ್ನಡದ ನೆಲ, ಜಲವನ್ನು ಪಡೆಯುತ್ತಿರುವ ನಾವೇ ಕನ್ನಡ ಬಳಸದೇ ಹೋದರೆ ಕನ್ನಡ ಭಾಷೆಯು ಮುಂದೊಂದು ದಿನ ಕಣ್ಮರೆಯಾಗುತ್ತದೆ. ಆದ್ದರಿಂದ ಕನ್ನಡವನ್ನು ಉಳಿಸುವ ಭಾವನೆ ಎಲ್ಲರ ಹೃದಯದಲ್ಲಿರಬೇಕು. ಎಲ್ಲರೂ ಜೊತೆಗೂಡಿ ಪರಸ್ಪರ ವಿಶ್ವಾಸದಿಂದ ಕನ್ನಡವನ್ನು ಕಟ್ಟೋಣ. ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಕನ್ನಡ ಪ್ರಾಧಿಕಾರವನ್ನು ಸಂಪರ್ಕಿಸಿ ಎಂದು ಕೋರಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ