logo
ಕನ್ನಡ ಸುದ್ದಿ  /  ಕರ್ನಾಟಕ  /  Puc Results 2024: ಆಕೆಯದ್ದುಗುಜರಾತ್‌ ಮೂಲ, ಪಿಯುಸಿ ಸಾಧನೆಗೆ ನೆರವಾಯ್ತು ದಕ್ಷಿಣ ಕನ್ನಡ ನೆಲ

Puc Results 2024: ಆಕೆಯದ್ದುಗುಜರಾತ್‌ ಮೂಲ, ಪಿಯುಸಿ ಸಾಧನೆಗೆ ನೆರವಾಯ್ತು ದಕ್ಷಿಣ ಕನ್ನಡ ನೆಲ

Umesha Bhatta P H HT Kannada

Apr 10, 2024 06:03 PM IST

google News

ಪಿಯುಸಿಯಲ್ಲಿ ಸಾಧನೆ ಮಾಡಿದ ಖುಷಿ ಹಾಗೂ ಹರ್ಷಿತ್‌

  • ಸಾಧಕರಿಗೆ ಯಾವ ಊರಾದಾರೇನು. ಗುಜರಾತ್‌ನಿಂದ ಬಂದು ಕರ್ನಾಟಕದಲ್ಲಿ ಓದು ಪಿಯುಸಿ ಕಲಾ ವಿಭಾಗದಲ್ಲಿ ಮೂರನೇ ಟಾಪರ್‌ ಎನ್ನಿಸಿರುವ ಖುಷಿ ಸಾಧನೆ ಖುಷಿಪಡುವಂತದ್ದು.

    ವರದಿ: ಹರೀಶ ಮಾಂಬಾಡಿ, ಮಂಗಳೂರು

ಪಿಯುಸಿಯಲ್ಲಿ ಸಾಧನೆ ಮಾಡಿದ ಖುಷಿ ಹಾಗೂ ಹರ್ಷಿತ್‌
ಪಿಯುಸಿಯಲ್ಲಿ ಸಾಧನೆ ಮಾಡಿದ ಖುಷಿ ಹಾಗೂ ಹರ್ಷಿತ್‌

ಮಂಗಳೂರು: ಆಕೆ ಹುಟ್ಟಿದ್ದು ದೂರದ ಗುಜರಾತ್‌ನಲ್ಲಿ. ಪೋಷಕರು ಉದ್ಯೋಗ ಅರಸಿ ಕರ್ನಾಟಕದ ಕರಾವಳಿಗೆ ಬಂದರು. ಆಕೆಯೂ ದಕ್ಷಿಣ ಕನ್ನಡದ ಪುತ್ತೂರಿಗೆ ಬಂದಳು. ಮೂರನೇ ತರಗತಿವರೆಗೆ ಗುಜರಾತದಲ್ಲಿ ಓದು. ಅಲ್ಲಿನ ಭಾಷೆಯಲ್ಲಿ ಕಲಿತ ಆಕೆ ಕರ್ನಾಟಕಕ್ಕೆ ಬಂದು ಕನ್ನಡವನ್ನೂ ಕಲಿತಳು. ಈಗ ದ್ವಿತೀಯ ಪಿಯುಸಿ ಕಲಾವಿಭಾಗದಲ್ಲಿ ಕರ್ನಾಟಕದಲ್ಲಿ ಮೂರನೇ ಟಾಪರ್‌. ಅಂದರೆ ಟಾಪರ್‌ಗಿಂತ ಬರ ಎರಡು ಅಂಕ ಕಡಿಮೆ ಬಂದಿದೆ. ಆದರೂ ಎಲ್ಲಿಂದಲೋ ಬಂದು ಕರುನಾಡ ನೆಲದಲ್ಲಿ ಸಾಧನೆ ಮಾಡಲು ನೆರವಾಗಿದ್ದಕ್ಕೆ ಆ ವಿದ್ಯಾರ್ಥಿನಿಗೂ ಎಲ್ಲಿಲ್ಲದ ಖುಷಿ. ಪೋಷಕರಿಗೂ ರಾಜ್ಯ ಬದಲಿಸಿ ಬಂದರೂ ಛಲ ಬಿಡದೇ ಓದಿ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಮಗಳ ಸಾಧನೆಯ ಬಗ್ಗೆ ಹೆಮ್ಮೆ. ಇದು ಆಕೆಯೊಬ್ಬಳಿಗೆ ಮಾತ್ರವಲ್ಲ. ಇತರರಿಗೂ ಮಾದರಿ ಹಾಗೂ ಪ್ರೇರಣೆ.

ಬುಧವಾರ ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪುರೋಹಿತ್ ಖುಷಿಬೆನ್ ರಾಜೇಂದ್ರಕುಮಾರ್ ಅವರಿಗೆ 3ನೇ ರ್‍ಯಾಂಕ್ ಲಭಿಸಿದೆ. ಒಟ್ಟು 594 ಅಂಕಗಳನ್ನು ಪಡೆದಿರುವ ಖುಷಿ ಮೊದಲನೇ ರ್‍ಯಾಂಕ್ ಗಳಿಸಿದ ಮೇಧಾ ಡಿ. ಅವರಿಗಿಂತ ಕೇವಲ ಎರಡು ಅಂಕ ಕಡಿಮೆ ಗಳಿಸಿದ್ದಾಳೆ.

ಉಪ್ಪಿನಂಗಡಿಯಲ್ಲಿ ತಂದೆ, ತಾಯಿ ಜೊತೆ ವಾಸಿಸುವ ಖುಷಿ ಬೆನ್ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಥಳೀಯ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಮಾಡಿದ್ದು, ಬಳಿಕ ಪಿಯುಸಿಗೆ ವಿವೇಕಾನಂದ ವಿದ್ಯಾಸಂಸ್ಥೆಗೆ ಸೇರಿದ್ದಳು. ಬಾಲ್ಯದಲ್ಲೇ ಪ್ರತಿಭಾವಂತೆಯಾಗಿದ್ದ ಖುಷಿ, ಪಿಯುಸಿಯಲ್ಲಿ ಕಲಾವಿಭಾಗವನ್ನು ಆಯ್ಕೆ ಮಾಡಿಕೊಳ್ಳಲು ಲಾಯರ್ ಆಗುವ ಆಸೆ ಕಾರಣವಾಗಿದೆ. ವಕೀಲವೃತ್ತಿಯನ್ನು ಮಾಡುವ ಮಹದಾಸೆ ಹೊತ್ತ ಖುಷಿಬೆನ್ ಅದಕ್ಕೆ ಪೂರ್ವತಯಾರಿಯಾಗಿ ಪಿಯುಸಿಯಲ್ಲಿ ಕಲಾವಿಭಾಗವನ್ನು ಆಯ್ಕೆ ಮಾಡಿಕೊಂಡು ಅದರಲ್ಲೇ ಏಕಾಗ್ರತೆಯಿಂದ ಮನಸ್ಸಿಟ್ಟು ವಿದ್ಯಾರ್ಜನೆ ಮಾಡಿದ ಹಿನ್ನೆಲೆಯಲ್ಲಿ 594 ಅಂಕ ಗಳಿಸಿ, ಕಾಲೇಜಿಗೆ ಕೀರ್ತಿ ತಂದಿದ್ದಾಳೆ.

ಮೂಲತಃ ಗುಜರಾತ್ ನ ಬರೋಡಾ ನಿವಾಸಿಗಳಾದ ರಾಜೇಂದ್ರಕುಮಾರ್, ಮನೀಷಾ ಬೆನ್ ದಂಪತಿಯ ಪುತ್ರಿ ಖುಷಿ ಮೂರನೇ ತರಗತಿ ಕಲಿಯುವ ವೇಳೆ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದರು. ಕನ್ನಡ ಭಾಷೆಯನ್ನೂ ಸುಲಲಿತವಾಗಿ ಮಾತನಾಡುವ ಇವರ ತಂದೆ ರಾಜೇಂದ್ರಕುಮಾರ್ ಅವರು ಉಪ್ಪಿನಂಗಡಿಯಲ್ಲಿ ಸದರ್ನ್ ಇಂಡಿಯಾ ಬೀಡಿ ವರ್ಕ್ಸ್ ನಲ್ಲಿ ಮ್ಯಾನೇಜರ್ ಆಗಿದ್ದರೆ, ತಾಯಿ ಮನೆವಾರ್ತೆ ನೋಡಿಕೊಳ್ಳುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಇವರು ಉಪ್ಪಿನಂಗಡಿಯಲ್ಲಿ ವಾಸಿಸುತ್ತಿದ್ದಾರೆ. ಲಾಯರ್ ಆಗುವ ಮಹದಾಸೆ ಹೊತ್ತಿರುವ ಖುಷಿ ಬೆನ್, ಅದಕ್ಕಾಗಿ ತಯಾರಿ ಮಾಡಿಕೊಂಡಿದ್ದಾರೆ. ಎಲ್.ಎಲ್.ಬಿ.ಯನ್ನು ಎಲ್ಲಿ ಮಾಡುವುದು ಎಂಬ ನಿರ್ಧಾರವನ್ನು ಅವರು ಇನ್ನೂ ಮಾಡಿಲ್ಲ. ಹಾಗೆಯೇ ಕಾನೂನು ವಿದ್ಯಾಭ್ಯಾಸದ ಜತೆಗೆ ಸಿವಿಲ್ ಸರ್ವೀಸ್ ಬರೆಯುವ ಕುರಿತು ಅವರು ಯೋಚನೆಯನ್ನೂ ಮಾಡುತ್ತಿದ್ದು, ಪ್ರಸ್ತುತ ಕಾನೂನು ವಿದ್ಯಾಭ್ಯಾಸವೇ ಅವರ ಪರಮಗುರಿ.

ಕಾಮರ್ಸ್ ನಲ್ಲಿ 596 ಅಂಕ ಗಳಿಸಿದ ಹರ್ಷಿತ್ ಗೆ ಸಿಎ ಆಗುವ ಹಂಬಲ

ಉಡುಪಿಯಲ್ಲಿ ವ್ಯಾಸಂಗ ಮಾಡಿದ ತೀರ್ಥಹಳ್ಳಿಯ ಕೃಷಿಕ ದಂಪತಿ ಹರೀಶ್ ಮತ್ತು ಲತಾ ಅವರ ಒಬ್ಬನೇ ಮಗ ಹರ್ಷಿತ್ ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಕಾಮರ್ಸ್ ವಿಭಾಗದಲ್ಲಿ 596 ಅಂಕ ಗಳಿಸಿ, 3ನೇ ರ್‍ಯಾಂಕ್ ಗಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮಾಡಿದ ಹರ್ಷಿತ್ ಅಲ್ಲೂ ಟಾಪರ್ ಆಗಿದ್ದರು. ಪ್ರಾಥಮಿಕ ವಿದ್ಯಾಬ್ಯಾಸವನ್ನು ಸೇವಾಭಾರತಿಯಲ್ಲಿ ನಡೆಸಿದ್ದು, ಬಾಲ್ಯದಲ್ಲೇ ಪ್ರತಿಭಾವಂತನಾಗಿದ್ದ ಹರ್ಷಿತ್, ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಅಂಕ ಗಳಿಸಿದ ಬಳಿಕ ಉಡುಪಿಗೆ ತೆರಳಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾರೆ. ಉಡುಪಿಯ ಪೂರ್ಣಪ್ರಜ್ಞ ವಿದ್ಯಾಲಯಕ್ಕೆ ಸೇರಿ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಎರಡು ವರ್ಷಗಳ ಪಿಯುಸಿ ಪೂರೈಸಿದ ಹರ್ಷಿತ್ ಈಗ ಸಿಎ ಆಗುವತ್ತ ಮೊದಲ ಹೆಜ್ಜೆ ಇಟ್ಟಿದ್ದು, ಮುಂದೆ ಬಿಕಾಂ ವಿದ್ಯಾಭ್ಯಾಸದ ಜತೆಜತೆಗೆ ಸಿಎ ಕಲಿಯುವತ್ತ ಹೊರಟಿದ್ದಾಗಿ ಅವರ ತಂದೆ ಹರೀಶ್ ತಿಳಿಸಿದ್ದಾರೆ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ