logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Budget 2024: ಪ್ರವಾಸೋದ್ಯಮ, ಬಂದರು, ಪ್ರಕೃತಿ ಸಂರಕ್ಷಣೆ; ಕರ್ನಾಟಕ ಬಜೆಟ್‌ನಲ್ಲಿ ಕರಾವಳಿ, ಪಶ್ಚಿಮ ಘಟ್ಟದ ಬೇಡಿಕೆಗಳು

Karnataka Budget 2024: ಪ್ರವಾಸೋದ್ಯಮ, ಬಂದರು, ಪ್ರಕೃತಿ ಸಂರಕ್ಷಣೆ; ಕರ್ನಾಟಕ ಬಜೆಟ್‌ನಲ್ಲಿ ಕರಾವಳಿ, ಪಶ್ಚಿಮ ಘಟ್ಟದ ಬೇಡಿಕೆಗಳು

Umesha Bhatta P H HT Kannada

Feb 14, 2024 08:00 AM IST

google News

ಕರ್ನಾಟಕ ಬಜೆಟ್ 2024 ಕರಾವಳಿ ಭಾಗದ ನಿರೀಕ್ಷೆಗಳು ಅಧಿಕ.

    • ಬಂದರು, ಮೀನುಗಾರಿಕೆಯ ಹೊರತಾಗಿಯೂ ಕರಾವಳಿಯಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಆಡಳಿತ ಕಣ್ತೆರೆದು ನೋಡಬೇಕಷ್ಟೇ..ಕರ್ನಾಟಕ ಬಜೆಟ್ 2024 ಪೂರ್ವಭಾವಿ ನಿರೀಕ್ಷೆಗಳ ಪಟ್ಟಿ ಇಲ್ಲಿದೆ. 
    • ವರದಿ: ಹರೀಶ ಮಾಂಬಾಡಿ, ಮಂಗಳೂರು
ಕರ್ನಾಟಕ ಬಜೆಟ್ 2024 ಕರಾವಳಿ ಭಾಗದ ನಿರೀಕ್ಷೆಗಳು ಅಧಿಕ.
ಕರ್ನಾಟಕ ಬಜೆಟ್ 2024 ಕರಾವಳಿ ಭಾಗದ ನಿರೀಕ್ಷೆಗಳು ಅಧಿಕ.

ಮಂಗಳೂರು: ಮಂತ್ರಿಮಂಡಲ ರಚನೆ ಇರಲಿ, ಸಾಮಾನ್ಯವಾಗಿ ಮಾತುಕತೆಯಾಡುವ ಸಂದರ್ಭವಿರಲಿ, ಕರಾವಳಿ ಎಂದ ತಕ್ಷಣ ನೆನಪಾಗುವುದು ವಿಶಾಲವಾದ ಸಮುದ್ರ, ಮೀನುಗಳ ರಾಶಿ ಹಾಗೂ ಬಂದರು. ಕರಾವಳಿಯ ಜನಪ್ರತಿನಿಧಿಗಳಿಗೆ ಬಂದರು ಮತ್ತು ಮೀನುಗಾರಿಕಾ ಖಾತೆ ಕೊಟ್ಟರೆ ಅಷ್ಟೇ ಸಂತೃಪ್ತರು ಎಂಬ ಭಾವನೆ ರಾಜಕೀಯ ಪಡಸಾಲೆಯಲ್ಲಿದೆ. ಆದರೆ ಅದಕ್ಕೂ ಹೊರತಾಗಿ ಕರ್ನಾಟಕ ಕರಾವಳಿಯಲ್ಲಿ ಪ್ರವಾಸೋದ್ಯಮ, ಕೃಷಿ ಸಹಿತ ಸಾಕಷ್ಟು ಬೆಳವಣಿಗೆಗೆ ಅವಕಾಶಗಳು ಇವೆ. ಆಯಾ ಸರಕಾರ ಬಜೆಟ್ ಮಂಡನೆ ಸಂದರ್ಭ ಕೆಲವೊಂದು ಘೋಷಣೆಗಳನ್ನು ಮಾಡುತ್ತದೆ. ಕಾರ್ಯರೂಪಕ್ಕೆ ತರುವ ವೇಳೆ ಮರೆಯುತ್ತದೆ. ಈ ಬಾರಿಯ ಬಜೆಟ್ ನಲ್ಲಾದರೂ ಕರಾವಳಿಗೆ ಏನಾದರೂ ಕೊಡುಗೆ ದೊರಕಬಹುದೇ ಎಂಬ ನಿರೀಕ್ಷೆ ಹಲವರದ್ದು. ಇಲ್ಲಿ ಕರಾವಳಿ ಎಂದರೆ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ಉತ್ತರ ಕನ್ನಡ ಜಿಲ್ಲೆಯ ಮಾಜಾಳಿವರೆಗೂ ವ್ಯಾಪಿಸುತ್ತದೆ. ಕರಾವಳಿಗೆ ಏನೇನು ಬೇಕು ಇಲ್ಲಿದೆ ಪಟ್ಟಿ.

  1. ತೆಂಗು ಅಭಿವೃದ್ಧಿ, ನೀರಾಕ್ಕೆ ಉತ್ತೇಜನ

ಯಡಿಯೂರಪ್ಪ ಅವರ ಮೊದಲ ಅವಧಿಯ ಸರಕಾರ ಇದ್ದಾಗಲೇ ಅಂದರೆ ಸುಮಾರು 15 ವರ್ಷಗಳ ಮೊದಲೇ ನೀರಾ ಅಭಿವೃದ್ಧಿ ಉತ್ತೇಜಿಸುವ ಕುರಿತು ಬಜೆಟ್ ನಲ್ಲಿ ಹಣ ನಿಗದಿಯಾಗಿತ್ತು. ಆದರೆ ಅದು ಸದ್ಬಳಕೆ ಆಗಲೇ ಇಲ್ಲ. ಕರಾವಳಿಯಲ್ಲಿ ವಿಫುಲವಾಗಿ ತೆಂಗು ಬೆಳೆ ಇದೆ. ಇದಕ್ಕೆ ಉತ್ತೇಜನ, ಮೌಲ್ಯ ವರ್ಧನೆಯ ಜೊತೆಗೆ ನೀರಾ ಸಂಸ್ಕರಣೆಯನ್ನು ಕೇರಳ ಮಾದರಿಯಲ್ಲಿ ಮಾಡಿದರೆ, ಕೃಷಿಕನ ಮೊಗದಲ್ಲಿ ಮಂದಹಾಸ ಮೂಡೀತು. ಅಡಕೆ ಸಹಿತ ಕರಾವಳಿಯ ಪ್ರಮುಖ ಬೆಳೆಗಳ ಮೌಲ್ಯವರ್ಧನೆ, ಭತ್ತ ಬೆಳೆಗೆ ಉತ್ತೇಜನ ನೀಡುವ ಕಾರ್ಯವಾಗಬೇಕು.

2. ಬಿಯಾಂಡ್ ಬೆಂಗಳೂರು ಯೋಜನೆಯಡಿ ಐಟಿ ಪಾರ್ಕ್ ಆಗಲಿ

ಇಂದು ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ ಇರುವ ಕನ್ನಡಿಗರಲ್ಲಿ ಕರಾವಳಿಯವರ ಪಾಲು ದೊಡ್ಡದಿದೆ. ಇಂಥದ್ದೇ ಐಟಿ ಪಾರ್ಕ್ ಗಳು ಕರಾವಳಿಯಲ್ಲಿ ಇದ್ದರೆ, ಒಳ್ಳೆಯದು. ಹಲವು ವರ್ಷಗಳ ಬೇಡಿಕೆಯಾಗಿರುವ ಐಟಿ ಪಾರ್ಕ್ ಸ್ಥಾಪನೆಯಿಂದ ಪರಿಸರಕ್ಕೂ ಹಾನಿಯಿಲ್ಲ, ಕರಾವಳಿಯ ಪ್ರತಿಭೆಗಳಿಗೂ ಅವಕಾಶ ದೊರಕುತ್ತದೆ. ಹಾಗೆಯೇ ಸಾಕಷ್ಟು ಉದ್ಯೋಗಾವಕಾಶಗಳು ಐಟಿಯ ಪಶ್ಚಾತ್ ಪರಿಣಾಮಗಳಿಂದ ಉಂಟಾಗಬಹುದು. ವ್ಯಾಪಾರ ವಹಿವಾಟು ಬೆಳವಣಿಗೆಯಾಗಬಹುದು. ಈಗಾಗಲೇ ಕರಾವಳಿಯಲ್ಲಿ ಇರುವ ಐಟಿಯ ಪ್ರಮುಖ ಕಂಪನಿಯೆಂದರೆ ಇನ್ಫೋಸಿಸ್. ಉಳಿದಂತೆ ಸಾಕಷ್ಟು ಸ್ಟಾರ್ಟಪ್ ಗಳಿವೆಯಾದರೂ ಸೂಕ್ತ ಉತ್ತೇಜನ ಸರಕಾರದ ವತಿಯಿಂದ ಆಗಿಲ್ಲ.

3. ಹಿಂದಿನ ಬಜೆಟ್ ನಲ್ಲಿ ಹೇಳಿದ್ದ ಮಂಗಳೂರು ಕಾರವಾರ ಗೋವಾ ಮುಂಬಯಿ ಜಲಮಾರ್ಗವಾಗಲಿ:

ಹಲವು ವರ್ಷಗಳ ಬೇಡಿಕೆಯಾದ ಮಂಗಳೂರು, ಕಾರವಾರ, ಗೋವಾ, ಮುಂಬಯಿ ಜಲಮಾರ್ಗದ ಕುರಿತು ಹಿಂದಿನ ಬಜೆಟ್ ನಲ್ಲಿ ಹೇಳಲಾಗಿತ್ತು. ಅದಿನ್ನೂ ಆಗಿಲ್ಲ. ಕಾರ್ಯಗತವಾದರೆ ಪ್ರವಾಸೋದ್ಯಮ ಬೆಳೆದೀತು. ಹಾಗೆಯೇ ಫಲ್ಗುಣಿ, ನೇತ್ರಾವತಿ ನದಿ ಪಾತ್ರಗಳಲ್ಲಿ ಬಾರ್ಜ್ ಸೇವೆ ಮಾಡಿದರೆ ಇನ್ನಷ್ಟು ಪ್ರವಾಸೋದ್ಯಮ ಉತ್ತೇಜನ ದೊರಕಬಹುದು.

4. ಪ್ರವಾಸೋದ್ಯಮಕ್ಕೆ ಉತ್ತೇಜನ, ಧಾರ್ಮಿಕ ಟೂರಿಸಂ

ಉತ್ತರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗೋಕರ್ಣದಿಂದ ಸುಬ್ರಹ್ಮಣ್ಯದವರೆಗೆ ಸಾಕಷ್ಟು ಧಾರ್ಮಿಕ ಕೇಂದ್ರಗಳಿವೆ ಇಲ್ಲಿನ ಮೂಲ ಸೌಕರ್ಯ ಅಭಿವೃದ್ಧಿ, ಸುರಕ್ಷತೆ, ಪ್ರವಾಸಿಗರಿಗೆ ಅನುಕೂಲಗಳನ್ನು ಒದಗಿಸುವ ಕುರಿತು ಪ್ರವಾಸೋದ್ಯಮ ಇಲಾಖೆ ಬಲಗೊಳ್ಳಬೇಕು. ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಆನೆಗುಡ್ಡೆ, ಕಮಲಶಿಲೆಯಂಥ ಪ್ರದೇಶಗಳಿಗೆ ತೆರಳುವವರಿಗೆ ಅನುಕೂಲವಾಗುವಂತಾಗಬೇಕು. ಹಾಗೆಯೇ ಜಲಪಾತಗಳ ಅಭಿವೃದ್ಧಿ, ಟೂರಿಸಂ ಸರ್ಕೀಟ್ ನಿರ್ಮಾಣವಾದರೆ ಸಾಧ್ಯ, ಇದಕ್ಕೆ ವಿಶೇಷ ಪ್ಯಾಕೇಜ್ ಬೇಕು.

5. ಕಡಲ್ಕೊರೆತ ತಡೆ, ಬಂದರು ಅಭಿವೃದ್ಧಿ, ಬೀಚ್ ಅಭಿವೃದ್ಧಿ

ಕಡಲ್ಕೊರೆತ ತಡೆಗೆ ಸಾಕಷ್ಟು ಹಣ ಪೋಲಾಗುತ್ತಿದೆ. ಶಾಶ್ವತ ಪರಿಹಾರ ಆಗಿಲ್ಲ. ಹಾಗೆಯೇ ಮಲ್ಪೆ, ಗಂಗೊಳ್ಳಿ ಬಂದರು ಅಭಿವೃದ್ಧಿಗೆ ನೆರವು ಬೇಕು. ಗೋಕರ್ಣ, ಕಾರವಾರ, ಮುರುಡೇಶ್ವರ, ಮಲ್ಪೆ, ಮರವಂತೆ, ಬೈಂದೂರು, ಸೋಮೇಶ್ವರ, ಕಾಪು, ಪಡುಬಿದ್ರಿ ಬೀಚ್ ಗಳ ಅಭಿವೃದ್ಧಿಗೆ ಪ್ಯಾಕೇಜ್ ಆಗಬೇಕು.

6. ಪ್ರಕೃತಿ ಸಂರಕ್ಷಣೆ, ನೀರಿಂಗಿಸುವ ಯೋಜನೆ

ಕರಾವಳಿಯಲ್ಲಿ ಪಶ್ಚಿಮ ಘಟ್ಟದ ಸಂರಕ್ಷಣೆ ಅತ್ಯಂತ ಪ್ರಮುಖದ್ದು. ಬಜೆಟ್ ನಲ್ಲಿ ಎತ್ತಿನಹೊಳೆಗೆ ನೂರಾರು ಕೋಟಿ ತೆಗೆದಿರಿಸಲಾಗುತ್ತದೆ. ಅವು ಎಲ್ಲವೂ ನಿಜವಾಗಿಯೂ ಖರ್ಚಾದರೆ, ಪಶ್ಚಿಮ ಘಟ್ಟಕ್ಕೆ ಆತಂಕವಾಗಬಹುದು ಎಂಬ ಅನುಮಾನ ಪರಿಸರವಾದಿಗಳದ್ದು. ಇದಕ್ಕೆ ಪೂರಕವಾದ ಘಟನೆಗಳೂ ನಡೆಯುತ್ತಿವೆ. ಹೀಗಾಗಿ ನೀರಿಂಗಿಸುವ ಯೋಜನೆ, ಜಲಸಾಕ್ಷರತೆಗೆ ಉತ್ತೇಜನ, ಪಶ್ಚಿಮ ಘಟ್ಟ ಸಂರಕ್ಷಣೆ, ಆನೆ ಕಾರಿಡಾರ್ .. ಹೀಗೆ ಕಡಲಿನಿಂದೀಚೆಗೆ ಬೇಡಿಕೆ ಪಟ್ಟಿ ಬೆಳೆಯುತ್ತದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ