ಕರ್ನಾಟಕ ಬಜೆಟ್ 2024; ಕರ್ನಾಟಕದ ಕೋಟಿ ಮನೆಗಳನ್ನು ಬೆಳಗಿದ ಗೃಹಜ್ಯೋತಿಗೆ ಬಜೆಟ್‌ನಲ್ಲಿ ಎಷ್ಟು ಸಿಗಲಿದೆ ಅನುದಾನ
Feb 14, 2024 05:15 AM IST
ಕರ್ನಾಟಕ ಬಜೆಟ್ 2024:: ಮುಂದಿನ ಹಣಕಾಸು ವರ್ಷಕ್ಕೆ ಗೃಹಜ್ಯೋತಿ ಯೋಜನೆಗೆ ಮೀಸಲಿಡುವ ಅನುದಾನ ಎಷ್ಟಿರಬಹುದು ಎನ್ನುವ ಚರ್ಚೆ ನಡೆದಿದೆ.
ಕರ್ನಾಟಕ ಬಜೆಟ್ 2024: ಕರ್ನಾಟಕದಲ್ಲಿ ಜಾರಿಯಾಗಿರುವ ಗೃಹಲಕ್ಷ್ಮಿ ಯೋಜನೆ (Gruha Jyoti Scheme) ಯಡಿ ಬಹುತೇಕ ಕುಟುಂಬಗಳು ಉಚಿತ ವಿದ್ಯುತ್ ಬಳಸುತ್ತಿವೆ. ಈ ಬಾರಿ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಗೃಹ ಜ್ಯೋತಿ ಯೋಜನೆಗೆ ಎಷ್ಟು ಅನುದಾನ ಮೀಸಲಿಡಬಹುದು ಎನ್ನುವ ಕುತೂಹಲವಿದೆ. (ವರದಿ: ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ರಾಜ್ಯದ ಕೋಟಿಗೂ ಹೆಚ್ಚು ಮನೆಗಳಿಗೆ ಬೆಳಕಾದ ಯೋಜನೆ ಗೃಹಜ್ಯೋತಿ. 1, ಜುಲೈ 2023ರಿಂದ ಜಾರಿಗೆ ಬಂದ ಗೃಹಜ್ಯೋತಿ ಯೋಜನೆಯಡಿಯಲ್ಲಿ ಅಂದಾಜು 1.60 ಕೋಟಿ ಗ್ರಾಹಕರು ನೊಂದಾಯಿಸಿಕೊಂಡಿದ್ದು, 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಒಂದು ವರ್ಷದಲ್ಲಿ ಕರ್ನಾಟಕ ಸರ್ಕಾರ ಇದಕ್ಕಾಗಿ ಒಂದು ವರ್ಷದ ಅವಧಿಗೆ 14,000ಕೋಟಿ ರೂ. ವೆಚ್ಚ ಮಾಡುತ್ತಿದೆ. ಈಗಾಗಲೇ ಗ್ಯಾರಂಟಿ ಯೋಜನೆಗಳು ರದ್ದಾಗುವುದಿಲ್ಲ ಎನ್ನುವ ಸ್ಪಷ್ಟನೆಗಳು ಸರ್ಕಾರದಿಂದ ಬಂದರೂ ಗ್ಯಾರಂಟಿ ಯೋಜನೆಯಲ್ಲಿ ಪ್ರಮುಖವಾದ ಗೃಹಜ್ಯೋತಿ ಯೋಜನೆಗೆ ಈ ಬಾರಿ (ಕರ್ನಾಟಕ ಬಜೆಟ್ 2024) ಸಿಎಂ ಸಿದ್ದರಾಮಯ್ಯ ಎಷ್ಟು ಹಣ ಮೀಸಲಿಡಬಹುದು ಎನ್ನುವ ಚರ್ಚೆಗಳೂ ನಡೆದಿವೆ.
ಏನಿದು ಯೋಜನೆ
ರಾಜ್ಯದಲ್ಲಿ 2.16 ಕೋಟಿ ಗ್ರಾಹಕರಿದ್ದು, ಇವರಲ್ಲಿ 2.14 ಕೋಟಿ ಗ್ರಾಹಕರು 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸುತ್ತಿದ್ದು, ಇವರೆಲ್ಲರೂ ಉಚಿತ ಯೋಜನಗೆ ಅರ್ಹರಾಗಿರುತ್ತಾರೆ. ಅಂದರೆ ಇವರು ಸರಾಸರಿ 53 ಯೂನಿಟ್ ಬಳಸುತ್ತಿದ್ದಾರೆ. ಈ ಯೋಜನೆಯಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 13,575 ಕೋಟಿ ರೂ. ವೆಚ್ಚವಾಗುತ್ತಿದೆ. ಒಂದು ವೇಳೆ 200 ಯೂನಿಟ್ ಗಿಂತಲೂ ಹೆಚ್ಚು ಬಳಸಿದರೆ ಸಂಪೂರ್ಣ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ. ಮೂರು ತಿಂಗಳೊಳಗೆ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಮನೆಯ ಮಾಲೀಕ ಮತ್ತು ಬಾಡಿಗೆದಾರರೂ ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳಾಗಲು ಅವಕಾಶವಿದೆ.
ಬೆಸ್ಕಾಂನಲ್ಲೇ ಅಧಿಕ
ಬೆಸ್ಕಾಂ ವ್ಯಾಪ್ತಿಯಲ್ಲಿ 69.73 ಗ್ರಾಹಕರಿದ್ದು, ಕೇವಲ 48 ಯೂನಿಟ್ ಮಾತ್ರ ಬಳಕೆ ಮಾಡುತ್ತಿದ್ದು, ಹೆಚ್ಚುವರಿಯಾಗಿ 10 ಯೂನಿಟ್ ಒದಗಿಸುತ್ತಿರುವುದರಿಂದ ಸರ್ಕಾರದಬೊಕ್ಕಸಕ್ಕೆ 33 ಕೋಟಿ ರೂ. ಹೊರೆಯಾಗುತ್ತಿದೆ ಎಂದು ತಿಳಿದು ಬಂದಿದೆ.
ವಿದ್ಯುತ್ ಬಿಲ್ ಹೊರೆಯಿಂದ ಕಂಗೆಟ್ಟಿದ್ದ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿ ನೆಮ್ಮದಿಯ ಬದುಕು ಕಲ್ಪಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಈ ಯೋಜನೆಗೆ ನವೆಂಬರ್ ನಿಂದ ಜನವರಿವರೆಗೆ ಸರ್ಕಾರ 2,900 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಹೆಚ್ಚುವರಿ 10 ಯೂನಿಟ್
ಗೃಹ ಜ್ಯೋತಿ ಯೋಜನೆಯಡಿಯಲ್ಲಿ ತಿಂಗಳಿಗೆ 48 ಯೂನಿಟ್‌ಗಳಿಗಿಂತ ಕಡಿಮೆ ವಿದ್ಯುತ್ ಬಳಸುವ ಎಲ್‌ಟಿ 2 ಗ್ರಾಹಕರಿಗೆ ಹೆಚ್ಚುವರಿ ಶೇ. 10 ಬದಲು ಹೆಚ್ಚುವರಿ 10 ಯೂನಿಟ್‌ಗಳನ್ನು ಅರ್ಹತಾ ಯೂನಿಟ್‌ಗಳನ್ನಾಗಿ ಒದಗಿಸಲು ನಿರ್ಧರಿಸಲಾಗಿದೆ.
ಒಬ್ಬ ಗ್ರಾಹಕ 150 ಯೂನಿಟ್ ಬಳಸುತ್ತಿದ್ದರೆ, ಈಗ 15 ಯೂನಿಟ್ ಹೆಚ್ಚುವರಿಯಾಗಿ ಸಿಗುತ್ತಿದೆ. ಹೊಸ ತೀರ್ಮಾನದಿಂದ 5 ಯೂನಿಟ್ ಕಡಿತ ಆಗುತ್ತದೆ. ಆದರೆ, 48 ಯೂನಿಟ್‌ಗಿಂತ ಕಡಿಮೆ ಬಳಸುವ ಗ್ರಾಹಕರಿಗೆ 10 ಯೂನಿಟ್ ಕೊಡುವುದರಿಂದ ಅನುಕೂಲವಾಗುತ್ತದೆ. 30 ಯೂನಿಟ್‌ಗಳನ್ನು ಬಳಸುವ ಬಡ ಕುಟುಂಬಗಳಿಗೆ ಅರ್ಹತಾ ಯೂನಿಟ್‌ಗಳು ಕೇವಲ 3 ಆಗಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆಯೇ ಬೀಳಲಿದ್ದು, ಅದನ್ನು ಭರಿಸಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಈಗಾಗಲೇ ಹೇಳಿದ್ದಾರೆ.
ಉಚಿತವಾಗಿ ವಿದ್ಯುತ್ ನೀಡಿದರೆ, ದುರುಪಯೋಗವಾಗಲಿದೆ, ಸಿಕ್ಕಾಪಟ್ಟೆ ವಿದ್ಯುತ್ ಬಳಕೆಯಾಗುತ್ತದೆ. ಇದು ಸರ್ಕಾರಕ್ಕೆ ಹೊರೆಯಾಗಲಿದೆ. ಎಂಬ ಸಂಶಯ ಕೇಳಿ ಬಂದಿತ್ತು. ಆದರೆ ಅಚ್ಚರಿ ಎಂಬಂತೆ ಬಹುತೇಕ ಜಿಲ್ಲೆಗಳಲ್ಲಿ ವಿದ್ಯುತ್ ಬಳಕೆ ಕಡಿಮೆಯಾಗಿದೆ. ಐದು ಭಾಗ್ಯಗಳಿಂದ 1.2 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಯಿಂದ ಮಧ್ಯಮ ವರ್ಗದ ಸ್ಥಿತಿಗೆ ತಲುಪುತ್ತಿವೆ. ಸರ್ಕಾರದ ಈ ನಿರ್ಣಯದಿಂದ ರಾಜ್ಯದ 5 ಕೋಟಿಗೂ ಹೆಚ್ಚು ಜನರು ಮಧ್ಯಮ ವರ್ಗದ ಸ್ಥಿತಿಗೆ ತಲುಪುತ್ತಿರುವುದು ಜಾಗತಿಕ ದಾಖಲೆಯಾಗಿದೆ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ.
ಬಜೆಟ್ ನತ್ತ ಚಿತ್ತ
ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ಒಂದು ಕೋಟಿಗೂ ಅಧಿಕ ಕುಟುಂಬಗಳು ಎಂಟು ತಿಂಗಳಿನಿಂದ ಉಚಿತ ವಿದ್ಯುತ್ ಬಳಸುತ್ತಿವೆ. ಲೋಕಸಭೆ ಚುನಾವಣೆಯಲ್ಲಿ ಸೋಲಾದರೆ ಗ್ಯಾರಂಟಿ ರದ್ದು ಎನ್ನುವ ಶಾಸಕ ಬಾಲಕೃಷ್ಣ ಹೇಳಿಕೆ ನಂತರ ಜನರಲ್ಲಿ ಮುಂದೇನಾಬಹುದು ಎನ್ನುವ ಕುತೂಹಲವೂ ಇದೆ. ಈ ಕಾರಣದಿಂದಲೇ ಜನ ಈ ಬಾರಿ ಬಜೆಟ್‌ನತ್ತ ಚಿತ್ತ ಹರಿಸಿದ್ದಾರೆ. ಈ ಯೋಜನೆಗೆ ಎಷ್ಟು ಖರ್ಚು ಮಾಡಿದೆ. ಎಸ್ಕಾಂ ಸಂಸ್ಥೆಗಳ ಸ್ಥಿತಿಗತಿ ಏನಾಗಿದೆ ಎನ್ನುವ ಅಂಕಿ ಅಂಶಗಳು, ಮುಂದಿನ ವರ್ಷದಲ್ಲಿ ಈ ಯೋಜನೆಯ ಸ್ಥಿತಿಗತಿ ಕುರಿತು ಸಿಎಂ ವಿವರ ನೀಡಲಿದ್ದಾರೆ. ಈ ಕಾರಣದಿಂದಲೂ ಜನರ ದೃಷ್ಟಿ ಬಜೆಟ್‌ನತ್ತ ನೆಟ್ಟಿದೆ.
( ವರದಿ: ಎಚ್.ಮಾರುತಿ, ಬೆಂಗಳೂರು)