ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆ; ಕೆದಿಲದಲ್ಲಿ ಸಿಡಿಲಾಘಾತಕ್ಕೆ ಬಾಲಕ ಬಲಿ
Nov 17, 2024 09:26 PM IST
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆ; ಕೆದಿಲದಲ್ಲಿ ಸಿಡಿಲಾಘಾತಕ್ಕೆ ಬಾಲಕ ಬಲಿ
- ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲದಲ್ಲಿ ಸಿಡಿಲಾಘಾತಕ್ಕೆ ಕುಸಿದು ಬಿದ್ದು ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಕರಾವಳಿಯಲ್ಲಿ ಇಂದು ಸಂಜೆ ವೇಳೆ ಭಾರಿ ಮಳೆಯಾಗಿದ್ದು, ಹಲವೆಡೆ ದುರಂತಗಳು ಸಂಭವಿಸಿವೆ.
ಮಂಗಳೂರು : ಭಾನುವಾರ (ನವೆಂಬರ್ 17ರ) ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಸಿಡಿಲು ಮಿಂಚಿನೊಂದಿಗೆ ಭಾರಿ ಮಳೆಯಾಗಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಪುತ್ತೂರು, ಕಡಬ, ಬಂಟ್ವಾಳ ಹಾಗೂ ಮಂಗಳೂರಿನ ಕೆಲವೆಡೆ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಲ್ಲಿಯೂ ಸಂಜೆ ವೇಳೆ ವರುಣನ ಅಬ್ಬರವಾಗಿದೆ. ಈ ನಡುವೆ ಬಂಟ್ವಾಳ ತಾಲೂಕಿನ ಕೆದಿಲದಲ್ಲಿ ಸಿಡಿಲಾಘಾತಕ್ಕೆ ಕುಸಿದು ಬಿದ್ದು ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಗಡಿಯಾರ ಸಮೀಪ ಮುರಿಯಾಜೆ ಮನೆಯ ಚಂದ್ರಹಾಸ ಎಂಬವರ ಪುತ್ರ ಸುಬೋಧ್ ಸಿ (14) ಸಾವನ್ನಪ್ಪಿದ ಬಾಲಕ. ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ಸುಬೋಧ್, ಸದಾ ಚಟುವಟಿಕೆಯಲ್ಲಿರುವಾತ. ಭಾನುವಾರ ಮನೆಯ ಹೊರಗಿನ ಜಗಲಿಯಲ್ಲಿ ಕುಳಿತುಕೊಂಡಿದ್ದ ವೇಳೆ ಆಗಸದಲ್ಲಿ ಗುಡುಗು, ಮಿಂಚಿನ ಶಬ್ದದ ಜೊತೆ ಸಿಡಿಲು ಅಪ್ಪಳಿಸಿದೆ. ಈ ವೇಳೆ ದೊಡ್ಡ ಸದ್ದು ಹಾಗೂ ಸಿಡಿಲಿನ ಹೊಡೆತಕ್ಕೆ ಆಘಾತಗೊಂಡ ಬಾಲಕ ಸ್ಥಳದಲ್ಲಿ ಬಿದ್ದಿದ್ದಾನೆ.
ಘಟನೆಯಿಂದ ಕಳವಳಗೊಂಡ ತಂದೆ ಚಂದ್ರಹಾಸ್, ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಈತನನ್ನು ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಮರಣೋತ್ತರ ಪರೀಕ್ಷೆ
ಸ್ಥಳಕ್ಕೆ ಕೆದಿಲ ಗ್ರಾಪಂ ಅಧ್ಯಕ್ಷ ಹರೀಶ್ ವಾಲ್ತಾಜೆ, ಸದಸ್ಯರಾದ ಅಜೀಜ್, ಉಮೇಶ್ ಮುರುವ, ಕಂದಾಯ ಇಲಾಖೆಯ ರೆವೆನ್ಯೂ ಇನ್ಸ್ ಪೆಕ್ಟರ್ ಪ್ರಶಾಂತ್ ಶೆಟ್ಟಿ ಹಾಗೂ ಗ್ರಾಮಾಡಳಿತಾಧಿಕಾರಿ ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಯಿತು.
ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಯುವತಿಯರ ಸಾವು
ಮಂಗಳೂರು ಸಮೀಪದ ಸೋಮೇಶ್ವರದ ಖಾಸಗಿ ರೆಸಾರ್ಟ್‌ನ ಈಜುಕೊಳದಲ್ಲಿ ಮೂವರು ಯುವತಿಯರು ಸಾವನ್ನಪ್ಪಿದ್ದಾರೆ. ಖಾಸಗಿ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೈಸೂರು ಮೂಲದ ಮೂವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ, ಖಾಸಗಿ ವ್ಯಕ್ತಿಗಳಿಗೆ ಸೇರಿದ ಬೀಚ್ ರೆಸಾರ್ಟ್‌ಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ. ರೆಸಾರ್ಟ್‌ನ ಟ್ರೇಡ್ ಲೈಸನ್ಸ್ ಮತ್ತು ಟೂರಿಸಂ ಪರವಾನಗಿಯನ್ನು ಅಮಾನತ್ತಿನಲ್ಲಿಡಲಾಗಿದೆ.