logo
ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ಎರಡನೇ ಪತ್ನಿಗೂ ಆರೇ ತಿಂಗಳಲ್ಲಿ ತಲಾಖ್; ಮಂಗಳೂರಿನಲ್ಲಿ ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಮಹಿಳೆ

Mangaluru News: ಎರಡನೇ ಪತ್ನಿಗೂ ಆರೇ ತಿಂಗಳಲ್ಲಿ ತಲಾಖ್; ಮಂಗಳೂರಿನಲ್ಲಿ ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಮಹಿಳೆ

HT Kannada Desk HT Kannada

May 30, 2023 06:11 PM IST

google News

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ ಮತ್ತು ಆರೋಪಿ

    • Triple Talaq: ಮಂಗಳೂರಿನಲ್ಲಿ ಮದುವೆಯಾದ ಆರೇ ತಿಂಗಳಲ್ಲಿ ಪತ್ನಿಗೆ ಪತಿಯು ಮಾರಣಾಂತಿಕ ಹಲ್ಲೆ ನಡೆಸಿ ತಲಾಖ್ ಹೇಳಿ ದಾಂಪತ್ಯವನ್ನೇ ಮುರಿದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. 
ಪೊಲೀಸ್‌ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ ಮತ್ತು ಆರೋಪಿ
ಪೊಲೀಸ್‌ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ ಮತ್ತು ಆರೋಪಿ

ಮಂಗಳೂರು: ಎರಡನೇ ಪತ್ನಿಗೂ ಆರೇ ತಿಂಗಳಲ್ಲಿ 'ತಲಾಖ್' ನೀಡಿದ ಪತಿಯ ವಿರುದ್ಧ ಶಬಾನಾ ಎಂಬ ಮಹಿಳೆ ಠಾಣೆ ಮೆಟ್ಟಿಲೇರಿದ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ತ್ರಿವಳಿ ತಲಾಖ್ ನಿಷೇಧಿಸಿದ್ದರೂ, ತಲಾಖ್ ನೀಡುತ್ತಿರುವುದು ಮಾತ್ರ ಇನ್ನೂ ಜೀವಂತವಿದೆ. ಮಂಗಳೂರಿನಲ್ಲಿ ಮದುವೆಯಾದ ಆರೇ ತಿಂಗಳಲ್ಲಿ ಪತ್ನಿಗೆ ಪತಿಯು ಮಾರಣಾಂತಿಕ ಹಲ್ಲೆ ನಡೆಸಿ ತಲಾಖ್ ಹೇಳಿ ದಾಂಪತ್ಯವನ್ನೇ ಮುರಿದಿದ್ದಾನೆ ಎಂದು ಆರೋಪಿಸಲಾಗಿದೆ. ನಗರದ ಮಂಗಳಾದೇವಿ ಸಮೀಪದ ಮಾರ್ನಮಿಕಟ್ಟೆ ನಿವಾಸಿ ಮಹಮ್ಮದ್ ಹುಸೇನ್, ಪತ್ನಿಯನ್ನು ಹಿಂಸಿಸಿ ತಲಾಖ್ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಶಬಾನಾ ದೂರೇನು?

ಶಬಾನಾ ಮಂಗಳೂರಿನ ಪಾಂಡೇಶ್ವರ ಪೊಲೀಸರಿಗೆ ನೀಡಿದ ದೂರಿನಂತೆ ವಿವರ ಹೀಗಿದೆ. ಆರೋಪಿಯು ತರಕಾರಿ ವ್ಯಾಪಾರಿ. ಸಂತ್ರಸ್ತೆ ಶಬಾನಾಗೆ ಮೊದಲೊಂದು ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಮೊದಲ ಪತಿಯಿಂದ ದೂರವಾಗಿದ್ದ ಈಕೆ ಆರು ತಿಂಗಳ ಹಿಂದಷ್ಟೇ ಹುಸೇನ್ ಅವರನ್ನು ವಿವಾಹವಾಗಿದ್ದರು. ಎರಡು ತಿಂಗಳು ಚೆನ್ನಾಗಿಯೇ ಸಂಸಾರ ನಡೆದಿತ್ತು. ಆ ಬಳಿಕ ಆತನ ಅಸಲಿ ಮುಖದ ಪತ್ನಿಗೆ ದರ್ಶನವಾಗತೊಡಗಿದೆ. ಮದುವೆಯಾದ ಕೇವಲ ಎಂಟೇ ದಿನಗಳಲ್ಲಿ ನಯವಾಗಿ ಮಾತನಾಡಿ ಸಾಲದಲ್ಲಿದ್ದೇನೆಂದು ಹುಸೇನ್ ಪತ್ನಿಯ ಚಿನ್ನಾಭರಣ ಸೇರಿ 10 ಲಕ್ಷ ರೂಪಾಯಿಯನ್ನು ಪೀಕಿಸಿದ್ದ ಎಂದು ಆರೋಪಿಸಲಾಗಿದೆ.

ಕೇವಲ ಹಣ ಮತ್ತು ಒಡವೆಗಾಗಿ ಮದುವೆಯಾಗಿದ್ದ ಹುಸೇನ್ ಪತ್ನಿಯನ್ನು ತವರು ಮನೆಯಲ್ಲೇ ಇರಿಸಿದ್ದ. ಅಲ್ಲದೆ ಗರ್ಭಿಣಿಯಾಗಿದ್ದ ಆಕೆಯನ್ನು ಬಲವಂತವಾಗಿ ಮಾತ್ರೆ ತಿನ್ನಿಸಿ ಅಬಾರ್ಶನ್ ಮಾಡಿಸಿದ್ದ. ಪತಿ ಮನೆಗೆ ಬಂದಿದ್ದ ವೇಳೆ ಮನಬಂದಂತೆ ಥಳಿಸಿದ ಹುಸೇನ್ ಜುಟ್ಟು ಹಿಡಿದು ಮೂರು ಬಾರಿ ತಲಾಖ್ ಹೇಳಿ ದಾಂಪತ್ಯ ಸಂಬಂಧಕ್ಕೆ ತಿಲಾಂಜಲಿ ಬಿಟ್ಟಿದ್ದ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡಿದ್ದ ಶಬಾನಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊದಲ ಪತ್ನಿಗೂ ತಲಾಖ್ ಹೇಳಿ ಸಂಬಂಧ ಕಡಿದುಕೊಂಡಿದ್ದ ಹುಸೇನ್ ಇದೀಗ ಎರಡನೇ ಪತ್ನಿಗೂ ತಲಾಖ್ ಹೇಳಿದ್ದಾನೆ. ಪರಿಣಾಮ ಶಬಾನಾ ನ್ಯಾಯಕ್ಕಾಗಿ ಪಾಂಡೇಶ್ವರ ಠಾಣೆಯ ಮೆಟ್ಟಿಲೇರಿದ್ದಾರೆ. ಅಲ್ಲದೆ ತನಗಾದ ಅನ್ಯಾಯ ಮತ್ತೊಬ್ಬ ಹೆಣ್ಣಿಗೆ ಆಗಬಾರದೆಂದು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನೊಬ್ಬನಿಂದ 1.69 ಕೋಟಿ ರೂ ಮೌಲ್ಯದ ವಜ್ರದ ಹರಳುಗಳನ್ನು ವಶಪಡಿಸಿಕೊಂಡರು. ಅದನ್ನು ಆತ ತನ್ನ ಒಳಉಡುಪಿನಲ್ಲಿ ಪೌಚ್‌ಗಳಲ್ಲಿ ಯಾರಿಗೂ ಗೊತ್ತಾಗದಂತೆ ಸಾಗಿಸಲು ಪ್ರಯತ್ನಿಸುತ್ತಿದ್ದ. ಆದರೆ ಕಸ್ಟಮ್ಸ್ ಅಧಿಕಾರಿಗಳ ಕೈಯಲ್ಲಿ ಆತ ಸಿಕ್ಕಿಬಿದ್ದ. ಈ ಕುರಿತು ಬೆಂಗಳೂರು ಕಸ್ಟಮ್ಸ್ ಇಲಾಖೆ ಟ್ವೀಟ್ ಮಾಡಿದೆ. ಪ್ರಯಾಣಿಕರ ಭದ್ರತಾ ತಪಾಸಣೆ ವೇಳೆ ದುಬೈಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಚೆಕ್ ಮಾಡಿದಾಗ ಕಾಸರಗೋಡು ಮೂಲದ ವ್ಯಕ್ತಿಯ ಕುರಿತು ಅನುಮಾನ ಬಂದಿದೆ. ಬಳಿಕ ಆತನ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ ಪೌಚ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವರದಿ: ಹರೀಶ ಮಾಂಬಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ