logo
ಕನ್ನಡ ಸುದ್ದಿ  /  ಕರ್ನಾಟಕ  /  ಹೆಬ್ಬಾವು ಮರಿಯೆಂದು ಹಿಡಿಯಲೆತ್ನಿಸಿ ಕನ್ನಡಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಸಾವು; ಡ್ರಾ ಮಾಡಿದ್ದ ಹಣ ಬ್ಯಾಂಕ್​ನಲ್ಲೇ ಮಂಗಮಾಯ

ಹೆಬ್ಬಾವು ಮರಿಯೆಂದು ಹಿಡಿಯಲೆತ್ನಿಸಿ ಕನ್ನಡಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಸಾವು; ಡ್ರಾ ಮಾಡಿದ್ದ ಹಣ ಬ್ಯಾಂಕ್​ನಲ್ಲೇ ಮಂಗಮಾಯ

Prasanna Kumar P N HT Kannada

Sep 14, 2024 10:35 AM IST

google News

ಹೆಬ್ಬಾವು ಮರಿಯೆಂದು ಹಿಡಿಯಲೆತ್ನಿಸಿ ಕನ್ನಡಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಸಾವು

    • Mangaluru Crime News: ಹೆಬ್ಬಾವು ಮರಿಯೆಂದು ಹಿಡಿದ ವ್ಯಕ್ತಿಗೆ ಕನ್ನಡಿ ಹಾವು ಕಚ್ಚಿದ್ದು, ವಿಷವೇರಿ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಡ್ರಾ ಮಾಡಿದ್ದ ಹಣ ಬ್ಯಾಂಕ್​​ನಲ್ಲೇ ಮಂಗಮಾಯವಾಗಿದೆ.
ಹೆಬ್ಬಾವು ಮರಿಯೆಂದು ಹಿಡಿಯಲೆತ್ನಿಸಿ ಕನ್ನಡಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಸಾವು
ಹೆಬ್ಬಾವು ಮರಿಯೆಂದು ಹಿಡಿಯಲೆತ್ನಿಸಿ ಕನ್ನಡಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಸಾವು

ಮಂಗಳೂರು: ಕೆಲಸಕ್ಕಿದ್ದ ಮನೆಯಲ್ಲಿ ಮನೆಯೊಳಗೆ ಬಂದಿದ್ದ ಕನ್ನಡಿ ಹಾವಿನ ಮರಿಯನ್ನು ಬರಿಗೈಯಲ್ಲಿ ಹಿಡಿಯಲು ಮುಂದಾದ ವೇಳೆ ವ್ಯಕ್ತಿಯ ಕೈಗೆ ಹಾವು ಕಚ್ಚಿ ಮೃತಪಟ್ಟ (Mangaluru crime news) ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮರವೂರು ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿ ರಾಮಚಂದ್ರ ಪೂಜಾರಿ (55) ಬಂಟ್ವಾಳ ತಾಲೂಕು ಕುರಿಯಾಳದವರಾಗಿದ್ದು ಮರವೂರಿನ ಮನೆಯೊಂದರಲ್ಲಿ ಹಲವು ವರ್ಷಗಳಿಂದ ಮನೆ ಕೆಲಸಕ್ಕಿದ್ದರು.

ಸೆಪ್ಟೆಂಬರ್​ 4ರಂದು ಮಧ್ಯಾಹ್ನದ ವೇಳೆ ಕನ್ನಡಿ ಹಾವಿನ ಮರಿಯೊಂದು ಮನೆಯೊಳಗೆ ಬಂದಾಗ ಬರಿಗೈಯಲ್ಲಿ ಅದನ್ನು ಹಿಡಿಯಲು ಮುಂದಾಗಿದ್ದು, ಹಾವಿನ ಮರಿ ರಾಮಚಂದ್ರ ಪೂಜಾರಿ ಅವರ ಕೈಗೆ ಕಚ್ಚಿದ್ದು ಮತ್ತೆ ಹಿಡಿಯಲು ಮುಂದಾದಾಗ ಮತ್ತೆ ಹಾವು ಕಚ್ಚಿದೆ ಎನ್ನಲಾಗಿದೆ. ಈ ಘಟನೆ ಗಂಭೀರವಾಗಿ ಪರಿಗಣಿಸದೆ ರಾಮಚಂದ್ರ ಪೂಜಾರಿ ಯಾವುದೇ ಚಿಕಿತ್ಸೆ ಪಡೆದಿರಲಿಲ್ಲ. ಸಂಜೆಯ ವೇಳೆಗೆ ವಿಷವೇರಿ ತಲೆತಿರುಗಲು ಪ್ರಾರಂಭಗೊಂಡಾಗ ಅವರು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದು, ಸೆಪ್ಟೆಂಬರ್​ 9ರಂದು ಮೃತಪಟ್ಟಿರುತ್ತಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿಡಿಯೋದಲ್ಲಿ ಕಂಡುಬಂದಂತೆ, ರಾಮಚಂದ್ರ ಪೂಜಾರಿ ಅವರು ವಿಷವುಳ್ಳ ಕನ್ನಡಿ ಹಾವಿನ ಮರಿಯನ್ನು ಹೆಬ್ಬಾವಿನ ಮರಿಯೆಂದು ತಿಳಿದು ಬರಿಗೈಯಲ್ಲಿ ಹಿಡಿಯಲು ತಯಾರಾಗಿದ್ದು ಇದೇ ವೇಳೆ ಅದೇ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯೊಬ್ಬರು 'ಹಿಡಿಯಬೇಡಿ ಬಿಟ್ಟುಬಿಡಿ' ಎನ್ನುವುದನ್ನು ಕೇಳಬಹುದು.

ಫುಟ್​ ಬೋರ್ಡ್​​ನಲ್ಲಿ ನೇತಾಡ್ತಿದ್ದ ವಿದ್ಯಾರ್ಥಿ ಬಿದ್ದ ಘಟನೆ, ಕೇಸು ದಾಖಲು 

ಫುಟ್‌ಬೋರ್ಡ್​ನಲ್ಲಿ ನೇತಾಡುತ್ತಾ ಸಂಚರಿಸುತ್ತಿದ್ದ ಬಸ್‌ನಿಂದ ಶಾಲಾ ವಿದ್ಯಾರ್ಥಿಯೋರ್ವ ಕೈಜಾರಿ ಬಿದ್ದ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ನಡೆದಿದೆ. ವಿದ್ಯಾರ್ಥಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ತಲಪಾಡಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ರೂಟ್ ನಂಬರ್ 42 ಸೈಂಟ್ ಆ್ಯಂಟನಿ ಬಸ್‌‌ನಲ್ಲಿ ಬುಧವಾರ ಬೆಳಗ್ಗೆ 8.25ಕ್ಕೆ ಈ ಘಟನೆ ನಡೆದಿದೆ. ಬಸ್​​ನಲ್ಲಿ ಭರ್ತಿ ಪ್ರಯಾಣಿಕರಿದ್ದರು. ಎರಡೂ ಫುಟ್‌ಬೋರ್ಡ್‌ನಲ್ಲೂ ಶಾಲಾ ವಿದ್ಯಾರ್ಥಿಗಳು ನೇತಾಡುತ್ತಾ ಸಂಚರಿಸುತ್ತಿದ್ದರು.‌

ಬಸ್ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ತಲುಪಿದಾಗ ಚಾಲಕ ಬ್ರೇಕ್ ಹಾಕಿದ್ದು, ನೇತಾಡಿಕೊಂಡು ಬರುತ್ತಿದ್ದ ವಿದ್ಯಾರ್ಥಿ ಕೆಳಗೆ ಬಿದ್ದಿದ್ದಾನೆ. ಅದೃಷ್ಟವಶಾತ್ ವಿದ್ಯಾರ್ಥಿಗೆ ಯಾವುದೇ ಗಾಯಗಳಾಗಿಲ್ಲ. ಬಸ್ಸಿನ ಹಿಂಭಾಗದಿಂದ ಬರುತ್ತಿದ್ದ ವಾಹನದಲ್ಲಿದ್ದವರು ಇದರ ವಿಡಿಯೋ ಮಾಡಿದ್ದಾರೆ. ಪುಟ್‌ಬೋರ್ಡ್‌ನಲ್ಲಿ ಜನರನ್ನು ನೇತಾಡಿಸಿಕೊಂಡು ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿದ ಆರೋಪದ ಮೇಲೆ ಚಾಲಕ ಮುಹಮ್ಮದ್ ಫಯಾಝ್ ಮತ್ತು ನಿರ್ವಾಹಕ ಮನೀಶ್ ವಿರುದ್ಧ ಜಪ್ಪಿನಮೊಗರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕಿನಲ್ಲೇ ಹಣ ಕಳವು

ನಿವೃತ್ತ ಸೈನಿಕ ,ಹಿರಿಯ ನಾಗರಿಕರೋರ್ವರು ಬಿಸಿರೋಡಿನ ರಾಷ್ಟ್ರೀಕೃತ ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿದ ಕ್ಷಣಾರ್ಧದಲ್ಲಿ ಲಕ್ಷಾಂತರ ರೂಪಾಯಿ ನಗದು ಇದ್ದ ಬ್ಯಾಗ್ ಅನ್ನು ಬ್ಯಾಂಕಿನೊಳಗಿಂದಲೇ ಕಳವುಗೈದ ಘಟನೆ (Money stolen in bank) ನಡೆದ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳ ತಾಲೂಕಿನ ರೈಮಂಡ್ ಲೋಬೋ ನಗರದ ನಿವಾಸಿಯಾಗಿರುವ ಅಂಬ್ರೋಸ್ ಡಿ‌ಸೋಜ ಅವರ ಲಕ್ಷಾಂತರ ರೂ ಇದ್ದ ಬ್ಯಾಂಕ್ ಕಳವಾಗಿದೆ.

ಬಿ.ಮೂಡ ಗ್ರಾಮದ ಬಿಸಿರೋಡಿನ‌ಲ್ಲಿರುವ ಎಸ್​ಬಿಐ (SBI) ಒಳಗಿನಿಂದ ರೂ.1,30,000 ನಗದು ಕಳವಾಗಿದೆ. ಅಂಬ್ರೋಸ್ ಅವರು ನಿವೃತ್ತ ಸೈನಿಕರಾಗಿದ್ದು, ಇವರಿಗೆ ಬರುವ ಪೆನ್ಸನ್ ಹಣವನ್ನು ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಅವರ ಖಾತೆಯಿಂದ ‌ಡ್ರಾ ಮಾಡುತ್ತಿದ್ದರು. ಸಮುದಾಯದ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಸೆಪ್ಟೆಂಬರ್ 4 ರಂದು ಒಟ್ಟು 50 ಸಾವಿರ ಹಣವನ್ನು ಬ್ಯಾಗ್ ಒಂದರಲ್ಲಿ ಇರಿಸಿಕೊಂಡು ಬಿಸಿರೋಡಿನ ಎಸ್​ಬಿಐ ಬ್ಯಾಂಕ್​​ಗೆ ಬಂದಿದ್ದರು.

80 ಸಾವಿರ ಹಣವನ್ನು ಡ್ರಾ ಮಾಡಿ, ಒಟ್ಟು 1,30,000 ಹಣವನ್ನು ಒಂದೇ ಬ್ಯಾಗ್​​ನಲ್ಲಿ ಹಾಕಿ ಬ್ಯಾಂಕ್​​ನ ಟೇಬಲ್ ಮೇಲೆ ಇಟ್ಟು, ಪಾಸ್ ಬುಕ್ ಎಂಟ್ರಿ ಮಾಡಲು ಕೌಂಟರ್ ಬಳಿ ಹೋಗಿದ್ದರು. ಅಲ್ಲಿ ಎಂಟ್ರಿ ಮಾಡಿಸಿ ವಾಪಸು ಟೇಬಲ್ ಕಡೆ ಬಂದಾಗ ಬ್ಯಾಗ್ ಅಲ್ಲಿರದೆ ಕಾಣೆಯಾಗಿತ್ತು. ಇದೀಗ ಪಾಸ್​ಬುಕ್ ಹಾಗೂ ದಾಖಲೆಗಳಿದ್ದ ಕಳವಾದ ಬ್ಯಾಗ್ ಬಿಸಿರೋಡು ಕೈಕುಂಜೆ ರಸ್ತೆಯಲ್ಲಿ ಸಿಕ್ಕಿದೆ. ಕಳವು ಆಗಿರುವ ಹಣವನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿಕೊಡಿ ಎಂದು ಅಂಬ್ರೋಸ್ ಅವರು ನಗರ ಪೋಲೀಸ್ ಠಾಣೆಗೆ ತಡವಾಗಿ ದೂರು ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ