logo
ಕನ್ನಡ ಸುದ್ದಿ  /  ಕರ್ನಾಟಕ  /  ಕೈಗೆಟಕುವ ದರದಲ್ಲಿ ಮಂಗಳೂರಿನ ಬಂಗುಡೆ ಮೀನು; ಒಂದೇ ತಿಂಗಳಲ್ಲಿ ಕುಸಿಯಿತು 100 ರಿಂದ 120 ರೂಪಾಯಿ, ಈಗೆಷ್ಟಿದೆ?

ಕೈಗೆಟಕುವ ದರದಲ್ಲಿ ಮಂಗಳೂರಿನ ಬಂಗುಡೆ ಮೀನು; ಒಂದೇ ತಿಂಗಳಲ್ಲಿ ಕುಸಿಯಿತು 100 ರಿಂದ 120 ರೂಪಾಯಿ, ಈಗೆಷ್ಟಿದೆ?

Prasanna Kumar P N HT Kannada

Nov 09, 2024 07:11 PM IST

google News

ಕೈಗೆಟಕುವ ದರದಲ್ಲಿ ಮಂಗಳೂರಿನ ಬಂಗುಡೆ ಮೀನು; ಒಂದೇ ತಿಂಗಳಲ್ಲಿ ಕುಸಿಯಿತು 100 ರಿಂದ 120 ರೂಪಾಯಿ!

    • Bangude fish: ಕರಾವಳಿ ಭಾಗದ ಪ್ರಸಿದ್ಧವಾದ ಬಂಗುಡೆ ಮೀನು ದರ ಇಳಿಕೆಯಾಗಿದೆ. ಒಂದೇ ಒಂದು ತಿಂಗಳಲ್ಲಿ 200-250 ರಿಂದ 80-150ಕ್ಕೆ ಇಳಿಕೆಯಾಗುವ ಮೂಲಕ ಅಚ್ಚರಿ ಮೂಡಿಸಿದೆ. (ವರದಿ-ಹರೀಶ ಮಾಂಬಾಡಿ)
ಕೈಗೆಟಕುವ ದರದಲ್ಲಿ ಮಂಗಳೂರಿನ ಬಂಗುಡೆ ಮೀನು; ಒಂದೇ ತಿಂಗಳಲ್ಲಿ ಕುಸಿಯಿತು 100 ರಿಂದ 120 ರೂಪಾಯಿ!
ಕೈಗೆಟಕುವ ದರದಲ್ಲಿ ಮಂಗಳೂರಿನ ಬಂಗುಡೆ ಮೀನು; ಒಂದೇ ತಿಂಗಳಲ್ಲಿ ಕುಸಿಯಿತು 100 ರಿಂದ 120 ರೂಪಾಯಿ!

ಮಂಗಳೂರು: ನೀವು ಮೀನುಪ್ರಿಯರು, ಅದರಲ್ಲೂ ಮಂಗಳೂರಿನ ಮೀನುಪ್ರಿಯರು ಹೌದು ಎಂದಾದರೆ, ಕರಾವಳಿಯ ಮೀನುಗಳಲ್ಲಿ ಪ್ರಸಿದ್ಧವಾದ ಕಾಸ್ಟ್ಲಿ ಎಂದೇ ಹೇಳಲಾಗುತ್ತಿದ್ದ ಬಂಗುಡೆ ಮೀನು (Bangude Fish), ಈಗ ಕೈಗೆಟಕುವ ದರದಲ್ಲಿ ದೊರಕುತ್ತಿದೆ. ಒಂದೇ ತಿಂಗಳಲ್ಲಿ ರೇಟ್ ಡೌನ್ ಆಗಿದ್ದು, ಕಳೆದ ತಿಂಗಳ ಸಮಯದಲ್ಲೆಲ್ಲಾ 200 ರೂಗಳಿಂದ 250 ರೂಗಳವರೆಗೆ ಇದ್ದ ಒಂದು ಕೆಜಿ ಬಂಗುಡೆ ಮೀನೀಗ 80 ರಿಂದ 150 ರೂಗಳವರೆಗೆ ದೊರೆಯುತ್ತಿದೆ. ಗ್ರಾಹಕರು ಫುಲ್ ಖುಷ್. ಆದರೆ ಮೀನುಗಾರರು, ಮೀನು ಮಾರಾಟಗಾರರು ಚಿಂತಾಕ್ರಾಂತರಾಗಿದ್ದಾರೆ. 

ವಿದೇಶಗಳಲ್ಲಿ ಬಂಗುಡೆ ಮೀನಿಗೆ ಬೇಡಿಕೆ ಕಡಿಮೆಯಾಗುತ್ತಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇದೀಗ ಹೆದ್ದಾರಿ ಬದಿಯಲ್ಲಿ ಅಲ್ಲಲ್ಲಿ ಮೀನು ಮಾರುವವರು ಬಂಗುಡೆಯನ್ನು ಮಾರುತ್ತಿದ್ದಾರೆ. ದೊಡ್ಡ, ಸಣ್ಣ ಗಾತ್ರದ ಬಂಗುಡೆಗಳೂ ಇವೆ. ಇದೀಗ ದೊಡ್ಡ ಗಾತ್ರದ ಬಂಗುಡೆಗಳೂ ಮೀನುಗಾರರ ಬುಟ್ಟಿಯಲ್ಲಿವೆ. ಪಶ್ಚಿಮ ಕರಾವಳಿಯಲ್ಲಿ ಸಿಕ್ಕಿದ ಬಂಗುಡೆಗಳಿಗೆ ಮುಖ್ಯವಾಗಿ ಚೀನ ಅತೀ ದೊಡ್ಡ ಮಾರುಕಟ್ಟೆ. ಉಳಿದಂತೆ ಬ್ಯಾಂಕಾಕ್, ಥಾಲಂಡ್, ವಿಯೆಟ್ನಾಂ ಮೊದಲಾದೆಡೆಗೆ ರಫ್ತಾಗುತ್ತದೆ. ಆದರೆ ಅಲ್ಲಿಂದಲೂ ಬಂಗುಡೆಗೆ ದೊಡ್ಡ ಬೇಡಿಕೆ ಇಲ್ಲವಾಗಿದೆ.

ಮೀನು ದರ ಏರಿಳಿತದಲ್ಲಿ ಇಳಿಕೆಯಾದಾಗ ಹೋಟೆಲ್​​ನಲ್ಲಿ ಮೀನೂಟದ ದರ ಇಳಿಕೆಯಾಗುತ್ತದೆ ಎಂದು ನಂಬಿ ಹೋಟೆಲ್​ಗೆ ಹೋದರೆ, ದರ ಮೊದಲಿನಂತೆಯೇ ಇದೆ. ಬಂಗುಡೆ ದರ ಇಳಿಕೆಯಾದರೂ ಹೋಟೆಲ್ ದರ ಹಾಗೆಯೇ ಇದೆ ಎಂದು ಮೀನುಪ್ರಿಯರು ಹೇಳುತ್ತಿದ್ದಾರೆ. ಆದರೆ ಬಂಗುಡೆಯನ್ನು ಮನೆಗೆ ಕೊಂಡು ಹೋಗಿ ಮತ್ಸ್ಯಖಾದ್ಯ ಮಾಡಿ ಸವಿಯೂಟ ಮಾಡುವವರ ಮೊಗದಲ್ಲಿ ನಗೆಯರಳಿದೆ.

ಮೀನುಗಾರರಿಗೆ ಹೊಡೆತ

ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಿದೆ ಎಂದರೆ ವ್ಯಾಪಾರಿಗಳಿಗೆ ಅದಕ್ಕಿಂತಲೂ ಕಡಿಮೆ ಬೆಲೆಗೆ ಮೀನು ಲಭ್ಯವಾಗಿರುತ್ತದೆ. ಇದರ ನೇರ ಪರಿಣಾಮ ಬೀಳುವುದು ಮೀನುಗಾರರ ಮೇಲೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಸರ್ಕಾರ ಮೀನುಗಾರರ ನೆರವಿಗೆ ಬರಬೇಕು. ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎನ್ನುತ್ತಾರೆ ಮೀನುಗಾರರು. 

ಬಂಗುಡೆಯ ಬದಲು ಇತರ ತಳಿಯ ಮೀನುಗಳಿಗೆ ಈಗ ವಿದೇಶಿ ಮೀನು ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ. ಹೀಗಾಗಿ ಬಂಗುಡೆಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ವಿದೇಶಕ್ಕೆ ಹೋಗುವ ಮೀನುಗಳು ಮಂಗಳೂರಿನ ಮೀನು ಮಾರಾಟಗಾರರ ಬುಟ್ಟಿಯಲ್ಲಿ ಊರ ಗ್ರಾಹಕರನ್ನು ಕಾಯುತ್ತಿವೆ.

ಆದರೆ ಇದರ ನೇರ ಹೊಡೆತ ಬೋಟ್ ಮಾಲೀಕರಿಗೆ ಆಗುತ್ತಿದೆ. ಬಂಗುಡೆಗಳಿಗೆ ಅವುಗಳ ಗಾತ್ರ ಮತ್ತು ಗುಣಮಟ್ಟವನ್ನು ಅನುಸರಿಸಿ ಬೆಲೆ ಇರುತ್ತದೆ. ಪರ್ಸಿನ್ ಬೋಟ್‌ನ ಬಂಗುಡೆ ತಾಜಾ ಇರುವುದರಿಂದ ಬೇಡಿಕೆ ಹೆಚ್ಚಿರುತ್ತದೆ. ಆದರೆ ಡೀಸೆಲ್ ಖರ್ಚೂ ಬರುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ ಮೀನುಗಾರರು. ಬಂಗುಡೆ ಬೇಡಿಕೆ ಗಳಿಸಿದರೆ ಮಾತ್ರ ಬೋಟ್ ಮಾಲೀಕರಿಗೆ ಲಾಭ.

ಇತರ ಮೀನುಗಳ ದರ

ಬಂಗುಡೆ ಬಿಟ್ಟರೆ ಇತರ ಮೀನುಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೂತಾಯಿ ಮೀನಿಗೆ 150 ರೂಪಾಯಿ ದರವಿದ್ದರೆ ಮುರು, ಕಲ್ಲೂರು 200 ರೂ. ವರೆಗೆ ಮಾರಾಟವಾಗುತ್ತಿದೆ. ಅಂಜಲ್, ಮಾಂಜಿ ಮೊದಲಾದ ಮೀನಿಗೆ 400 ರೂ. ಮೇಲ್ಪಟ್ಟು ದರವಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ