ಆಸ್ತಿಗಾಗಿ ನಿವೃತ್ತ ಶಿಕ್ಷಕನ ಅಟ್ಟಾಡಿಸಿ ಕೊಂದ ಅಳಿಯ, ಮೊಮ್ಮಗ; ಊಟ ಮಾಡಿದ್ದ ಎಲೆಗಳಿಂದ ಸಿಕ್ತು ಆರೋಪಿಗಳ ಸುಳಿವು
Aug 25, 2024 08:56 AM IST
ಆಸ್ತಿಗಾಗಿ ನಿವೃತ್ತ ಶಿಕ್ಷಕನ ಅಟ್ಟಾಡಿಸಿ ಕೊಂದ ಅಳಿಯ, ಮೊಮ್ಮಗ
- Mangaluru Crime News: ಆಸ್ತಿ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ವತಃ ಅಳಿಯ, ಮೊಮ್ಮಗನೇ ನಿವೃತ್ತ ಶಿಕ್ಷಕನನ್ನು ಅಟ್ಟಾಡಿಸಿ ಕೊಂದಿದ್ದಾರೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲುವಿನಲ್ಲಿ ನಡೆದಿದೆ.
ಮಂಗಳೂರು: ಹೆಣ್ಣು ಕೊಟ್ಟ ಮಾವ ಎಂದು ಪರಿಗಣಿಸಲಿಲ್ಲ, ಸ್ವಂತ ಅಜ್ಜ ಎಂಬ ಕರುಣೆಯೂ ಬರಲಿಲ್ಲ. ಆಸ್ತಿ ಕೊಡಲಿಲ್ಲ ಎಂದು ಮಾವನನ್ನೆ ಅಳಿಯ ಕಡಿದುಕೊಂದು ಹಾಕಿದರೆ, ಮೊಮ್ಮಗ ತಂದೆ ಜೊತೆ ಸೇರಿಕೊಂಡಿದ್ದ!
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲುವಿನಲ್ಲಿ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಬಡಕ್ಕಿಲ್ಲಾಯ ಹತ್ಯೆ ಮಾಡಿದ್ದು ಬೇರಾರು ಅಲ್ಲ, ಸ್ವಂತ ಅಳಿಯ ಹಾಗೂ ಮೊಮ್ಮಗ. ಕೇವಲ ಆಸ್ತಿ ವಿವಾದ ಇದಕ್ಕೆ ಕಾರಣ. ವಿಪರ್ಯಾಸವೆಂದರೆ, ಈ ಘಟನೆಗೆ ತನ್ನ ಪತಿ, ಮಗ ಕಾರಣವೆಂದು ಮೃತ ಭಟ್ ಮಗಳಿಗೂ ಗೊತ್ತಿರಲಿಲ್ಲ.
ಬೆಳಾಲು ಎಸ್ಪಿಬಿ ಕಾಂಪೌಂಡ್ ನಿವಾಸಿ ನಿವೃತ್ತ ಶಿಕ್ಷಕ ಎಸ್ಪಿ ಬಾಲಕೃಷ್ಣ ಭಟ್ (83) ಕೊಲೆ ಪ್ರಕರಣವನ್ನು ಕೊನೆಗೂ ಪೊಲೀಸರು ಪತ್ತೆಹಚ್ಚಿದ್ದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದ್ದು, ಮೃತ ಬಾಲಕೃಷ್ಣ ಭಟ್ ಅವರ ಮಗಳ ಗಂಡ ಹಾಗೂ ಮೊಮ್ಮಗ (ಮಗಳ ಮಗ) ಸೇರಿ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಹೊರ ಬಂದಿದ್ದು ಕೇರಳ ಕಾಸರಗೋಡಿನ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಜ್ಯೋತಿಷಿ
ಬಂಧಿತ ಆರೋಪಿಗಳು ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ ಜ್ಯೋತಿಷಿಯಾಗಿರುವ ರಾಘವೇಂದ್ರ ಕೆದಿಲಾಯ (53) ಹಾಗೂ ಅವರ ಮಗ ಮುರಳೀಕೃಷ್ಣ (20) ಎಂಬವರಾಗಿದ್ದಾರೆ.
ಧರ್ಮಸ್ಥಳ ಪೊಲೀಸರು ಸಿಸಿ ಕ್ಯಾಮೆರಾಗಳು, ಮೊಬೈಲ್ ಲೊಕೇಶನ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಮೂರು ದಿನಗಳಲ್ಲಿ ಪತ್ತೆಹಚ್ಚಿ ಕಾನೂನಿನ ಮುಂದೆ ತಂದಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.
ಘಟನೆಯ ಹಿನ್ನಲೆ
ಬೆಳಾಲಿನಲ್ಲಿ ಆಗಸ್ಟ್ 20ರಂದು ಮಧ್ಯಾಹ್ನ ಬಳಿಕ ನಿವೃತ್ತ ಶಿಕ್ಷಕ ಎಸ್ಪಿ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರನ್ನು ಅವರ ಮನೆಯ ಅಂಗಳದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪೊಲೀಸರು 4 ವೀಶೇಷ ತಂಡಗಳನ್ನು ರಚಿಸಿ ತನಿಖೆಗೆ ಮುಂದಾಗಿದ್ದರು.
ಕೊಲೆ ನಡೆದ ರೀತಿ ಹಾಗೂ ಆ ಮನೆಯಲ್ಲಿ ಯಾವುದೇ ಕಳ್ಳತನ ನಡೆಯದಿರುವುದನ್ನು ಗಮನಿಸಿದ ಪೊಲೀಸರು ಇದು ಪರಿಚಿತರಿಂದಲೇ ನಡೆದ ಕೃತ್ಯ ಎಂಬ ಅನುಮಾನಕ್ಕೆ ಬಂದಿದ್ದರು. ಅದಕ್ಕೆ ಪೂರಕವಾಗಿ ಊಟ ಮಾಡಿ ಎಸೆದಿದ್ದ 2 ಎಲೆಗಳು ಅಲ್ಲಿ ಕಂಡು ಬಂದಿದ್ದವು. ಈ ಹಿನ್ನಲೆಯಲ್ಲಿ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಸಂಬಂಧಿಕರನ್ನು ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಕೊಲೆ ಪ್ರಕರಣದ ಹಿನ್ನಲೆ ಬಹಿರಂಗಗೊಂಡಿದೆ.
ಆಸ್ತಿ ಕೊಡದ ಕಾರಣಕ್ಕೆ ಕೊಲೆ
ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕಿಲ್ಲಾಯ ಅವರ ಮೃತಪಟ್ಟ ಪತ್ನಿಯ ಚಿನ್ನಾಭರಣಗಳನ್ನು ಮಗಳಾದ ವಿಜಯಲಕ್ಷ್ಮಿ ಅವರಿಗೆ ನೀಡದೆ ಲಾಕರ್ನಲ್ಲಿ ಇರಿಸಿದ್ದರು. ಜಾಗದಲ್ಲಿಯೂ ಪಾಲು ನೀಡಿರಲಿಲ್ಲ ಎನ್ನಲಾಗಿದೆ. ತಾನು ಬದುಕಿರುವ ವರೆಗೂ ಜಾಗ ಪಾಲು ಮಾಡುವುದಿಲ್ಲ ಎಂದು ಹೇಳುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಅಪ್ಪ ಮಗ ಸೇರಿ ಸಂಚು ರೂಪಿಸಿ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.
ಊಟ ಮಾಡಿ, ಕತ್ತಿ ಬೀಸಿ, ಅಟ್ಟಾಡಿಸಿ ಕೊಂದರು!
ಕಾಸರಗೋಡಿನಿಂದ ಮಾರಕಾಸ್ತ್ರದೊಂದಿಗೆ ಸ್ಕೂಟರಿನಲ್ಲಿ ಬಂದ ಅಪ್ಪ ಮಗ ಬೆಳಾಲಿನ ಮನೆಗೆ ಬಂದು ಊಟ ಮಾಡಿದ್ದಾರೆ. ಊಟದ ಬಳಿಕ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಮೇಲೆ ಮನೆಯೊಳಗೆಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಹಲ್ಲೆ ವೇಳೆ ಮನೆಯಿಂದ ಹೊರಗೆ ಓಡಿದ ಅವರನ್ನು ಬೆನ್ನಟ್ಟಿದ ಆರೋಪಿಗಳು ಅಂಗಳದಲ್ಲಿ ಕುಸಿದು ಬಿದ್ದಿದ್ದಾರೆ. ಅಲ್ಲಿ ಅವರ ಮೇಲೆ ಮತ್ತೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಬಳಿಕ ಆರೋಪಿಗಳು ಸ್ಕೂಟರ್ನಲ್ಲಿಯೇ ಪರಾರಿಯಾಗಿದ್ದಾರೆ.
ಕೊಲೆ ಆರೋಪಿ ಮುರಳೀಕೃಷ್ಣ ಅವರ ವಿರುದ್ದ ಈ ಹಿಂದೆ ಕಾಸರಗೋಡಿನ ಬದಿಯಡ್ಕ ಠಾಣೆಯಲ್ಲಿ ಕೊಲೆಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಡನ್ ಮಾರ್ಗದರ್ಶನದಲ್ಲಿ, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಹಾಗೂ ಬೆಳ್ತಂಗಡಿ ವೃತ್ತನಿರೀಕ್ಷಕ ನಾಗೇಶ್ ಕದ್ರಿ ಅವರ ನೇತೃತ್ವದಲ್ಲಿ ಪೊಲೀಸರು ಹಾಗೂ ತಂಡ ತನಿಖೆ ನಡೆಸಿದ್ದರು.