ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ; ದರ್ಶನ್‌ ಬ್ಯಾರಕ್​​​ನಲ್ಲೂ ಜಾಲಾಡಿದ ಸಿಸಿಬಿ ಪೊಲೀಸರು, ಏನೇನು ಸಿಕ್ತು?
ಕನ್ನಡ ಸುದ್ದಿ  /  ಕರ್ನಾಟಕ  /  ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ; ದರ್ಶನ್‌ ಬ್ಯಾರಕ್​​​ನಲ್ಲೂ ಜಾಲಾಡಿದ ಸಿಸಿಬಿ ಪೊಲೀಸರು, ಏನೇನು ಸಿಕ್ತು?

ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ; ದರ್ಶನ್‌ ಬ್ಯಾರಕ್​​​ನಲ್ಲೂ ಜಾಲಾಡಿದ ಸಿಸಿಬಿ ಪೊಲೀಸರು, ಏನೇನು ಸಿಕ್ತು?

Parappana Agrahara Prison: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರ ದಾಳಿ ನಡೆಸಿದ್ದಾರೆ. ದರ್ಶನ್‌ ಬ್ಯಾರಕ್​​​ನಲ್ಲಿಯೂ ಹುಡುಕಾಟ ನಡೆಸಿದ್ದು, ಮಾದಕ ವಸ್ತು, ಮೊಬೈಲ್‌, ಮಾರಕಾಸ್ತ್ರಗಳಿಗಾಗಿ ಶೋಧ ಮಾಡಿದ್ದಾರೆ. (ವರದಿ-ಎಚ್.ಮಾರುತಿ)

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ದಾಳಿ.
ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ದಾಳಿ.

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ದಿಢೀರ್‌ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಇಲ್ಲಿ ಬಂಧಿಗಳಾಗಿರುವ ಕೈದಿಗಳಿಗೆ ಮಾದಕ ವಸ್ತು ಪೂರೈಕೆಯಾಗುತ್ತಿದೆ, ಮೊಬೈಲ್‌ ಬಳಸುತ್ತಿದ್ದಾರೆ. ಜೊತೆಗೆ ಹಲವಾರು ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿದ್ದವು.

ಈ ಹಿನ್ನಲೆಯಲ್ಲಿ ಶ್ವಾನದಳ ಸಹಿತ ದಾಳಿ ನಡೆಸಿದ ಸಿಸಿಬಿ ಪೊಲೀಸರು ಪ್ರತಿಯೊಂದು ಬ್ಯಾರಕ್​ನಲ್ಲಿಯೂ ಇಂಚಿಂಚೂ ತಪಾಸಣೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದರ್ಶನ್‌ ಅವರನ್ನು ಇರಿಸಲಾಗಿರುವ ಬ್ಯಾರಕ್​ನಲ್ಲಿಯೂ ತಪಾಸಣೆ ನಡೆದಿದೆ. ಆದರೆ ಯಾವುದೇ ವಸ್ತು ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಖ್ಯಾತ ರೌಡಿಗಳಾದ ಸುನೀಲ್‌, ವಿಲ್ಸನ್‌ ಗಾರ್ಡನ್‌ ನಾಗ ಸೇರಿದಂತೆ ಹಲವಾರು ರೌಡಿಗಳು ಜೈಲಿನಲ್ಲಿ ಶಿಕ್ಷೆಅನುಭವಿಸುತ್ತಿದ್ದಾರೆ.

ಇವರು ಜೈಲಿನಲ್ಲಿದ್ದರೂ ಮೊಬೈಲ್‌ ಮೂಲಕ ಸಂಪರ್ಕ ಸಾಧಿಸಿ ಬೆಂಗಳೂರು ನಗರದಲ್ಲಿ ರೌಡಿ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿತ್ತು. ಮಾದಕ ವಸ್ತು, ಮಾರಕಾಸ್ತ್ರ, ಮೊಬೈಲ್‌ ಸೇರಿದಂತೆ ಹಲವಾರು ವಸ್ತುಗಳಿಗೆ ಪ್ರತಿಯೊಂದು ಬ್ಯಾರಕ್​​ನಲ್ಲಿಯೂ ಜಾಲಾಡಲಾಗಿದೆ. ಆದರೆ ಜೈಲಿನಲ್ಲಿ ಯಾವುದೇ ವಸ್ತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ವಿಚಾರಾಣಾಧೀನ ಖೈದಿಯೊಬ್ಬ ಮನೆಯೂಟಕ್ಕೆ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದ. ವಿಚಾರಣೆ ಸಂದರ್ಭದಲ್ಲಿ ಅತನ ಪರ ವಕೀಲರು ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ರಾಜ್ಯದ ಬಹುತೇಕ ಜೈಲುಗಳಲ್ಲಿ ಮೊಬೈಲ್‌, ಮಾದಕ ವಸ್ತು ಮತ್ತು ಮಾರಕಾಸ್ತ್ರಗಳನ್ನು ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು. 

ಸಾಲ ತೀರಿಸಲು ಕಳ್ಳತನಕ್ಕಿಳಿದಿದ್ದ ಆರೋಪಿ ಬಂಧನ

ಸಾಲ ತೀರಿಸಲು ಮಹಿಳೆಯೊಬ್ಬರ ಸರಗಳ್ಳತನ ಮಾಡಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಿದ್ದ ಕತ್ರಿಗುಪ್ಪೆ ನಿವಾಸಿ ಕುಮಾರ್‌ ಎಂಬಾತನನ್ನು ಬಂಧಿಸಿ ರೂಪಾಯಿ 45 ಸಾವಿರ ಬೆಲೆಯ 7 ಗಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಕುಮಾರ್‌ ಅನ್‌ ಲೈನ್‌ ಗೇಮ್‌ ಆಪ್​​ನಲ್ಲಿ ಬೆಟ್ಟಿಂಗ್‌ ಅಡುತ್ತಿದ್ದು ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದ.

ಬೆಟ್ಟಿಂಗ್‌ ಹುಚ್ಚಿಗೆ 5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಹಾಗಾಗಿ ಸಾಲ ತೀರಿಸಲು ಸರಗಳ್ಳತನಕ್ಕಿಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಭೈರಪ್ಪ ಲೇ ಔಟ್​ನಲ್ಲಿ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಿತ್ತುಕೋಂಡು ಪರಾರಿಯಾಗಿದ್ದ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆದರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ನಾಯಂಡನಹಳ್ಳಿ ನಿವಾಸಿ ಪೆಪ್ಸಿ ರಘು ಎಂಬಾತನನ್ನು ಬಂಧಿಸಿ ಆತನಿಂದ 4 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಿರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆ ಹತ್ತಿರದಲ್ಲಿ ದ್ವಿಚಕ್ರ ವಾಹನ ಕಳುವಾಗಿತ್ತು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಸ್ನೇಹಿತನನ್ನೇ ಕೊಂದ ದುಷ್ಕರ್ಮಿಗಳು

ಸಂಪಿಗೆಹಳ್ಳಿಯ 80 ರಸ್ತೆ ಹತ್ತಿರದ ನಿರ್ಜನ ಪ್ರದೇಶದಲ್ಲಿ ತಡರಾತ್ರಿ ಗುಂಡಿನ ಪಾರ್ಟಿ ನಡೆಸುತ್ತಿದ್ದ ಸ್ನೇಹಿತರು ತಮ್ಮ ಸ್ನೇಹಿತನನ್ನೇ ಹತ್ಯೆ ಮಾಡಿದ್ದಾರೆ. ಮೃತ ಯುವಕನನ್ನು ಪುಷ್ಪರಾಜ್‌ ಎಂದು ಗುರುತಿಸಲಾಗಿದೆ. ಖಾಲಿ ಶೆಡ್‌ ವೊಂದರಲ್ಲಿ ಪಾರ್ಟಿ ನಡೆಸುತ್ತಿದ್ದರು. ಮದ್ಯದ ನಶೆಯಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಆಗ ಪುಷ್ಪರಾಜ್‌ ಕೊಲೆಯಾಗಿದೆ. ನಂತರ ಅರೋಪಿಗಳು ಪುಷ್ಪರಾಜ್‌ ಮೃತದೇಹವನ್ನು ಪೊದೆಗೆ ಎಸೆದಿದ್ದರು. ದೂರು ದಾಖಲಿಸಿಕೊಂಡ ಸಂಪಿಗೆಹಳ್ಳಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Whats_app_banner