Climate Change: ಹವಾಮಾನ ವೈಪರೀತ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು; ಕೃಷಿ ತಜ್ಞರಿಂದ ಕಾರಣಗಳ ಹುಡುಕಾಟ
Jan 11, 2024 02:42 PM IST
ಕೃಷಿ ತಜ್ಞ ಪಿಜಿಎಸ್ಎನ್ ಪ್ರಸಾದ್ ಅವರ ಮನೆಯಲ್ಲಿ ಬುಧವಾರ (ಜ.10) ಹವಾಮಾನ ವೈಪರೀತ್ಯದ ಕುರಿತು ಕೃಷಿ ತಜ್ಞರ ಸಭೆ ನಡೆಯಿತು.
ಅಕಾಲದಲ್ಲಿ ಮಳೆ, ಬಿಸಿಲು, ಚಳಿ ಹೀಗೆ ಹವಾಮಾನ ವೈಪರೀತ್ಯ ಆದಾಗ ಮೊದಲು ಸಂಕಷ್ಟಕ್ಕೆ ಒಳಗಾಗುವುದು ಕೃಷಿ ಮತ್ತು ಕೃಷಿಕರು. ಆದ್ದರಿಂದ ಹವಾಮಾನ ವೈಪರೀತ್ಯವನ್ನು ಗಂಭೀರವಾಗಿ ಪರಿಗಣಿಸಬೇಕಾದ ತುರ್ತು ಈಗ ಎದುರಾಗಿದೆ ಎಂಬುದು ಕೃಷಿ ಪರಿಣತರ ಅಭಿಪ್ರಾಯ. ಈ ಕುರಿತು ಕೃಷಿ ತಜ್ಞರು ಸಭೆಯನ್ನೂ ನಡೆಸಿ ಚರ್ಚಿಸಿದರು. ಅದರ ವಿವರ ಇಲ್ಲಿದೆ (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಜನವರಿ ತಿಂಗಳ ಆರಂಭದಲ್ಲೇ ಮಳೆಗಾಲದಂಥ ಮಳೆ. ಕೆಲವೆಡೆ ಸಿಡಿಲಿನ ಸದ್ದು. ಸೆಖೆ ಎನ್ನುವವರಿಗೆ ತಂಪು ನೀಡಿದೆ ಎಂಬುದು ಹೊರತುಪಡಿಸಿದರೆ, ಅಕಾಲದಲ್ಲಿ ನಾನಾ ಕಾರಣಗಳಿಂದ ಹವಾಮಾನ ವೈಪರೀತ್ಯವಾಗುತ್ತಿದ್ದರೆ, ಮೊದಲ ಹೊಡೆತ ಅನುಭವಿಸುವವರು ಕೃಷಿಕರು. ಇದು ಕೃಷಿಕರ ಸಮಸ್ಯೆಯಷ್ಟೇ ಅಲ್ವಾ, ನಮಗೇಕೆ ಎಂದು ಹೊದ್ದುಕೊಂಡು ಮಲಗುವವರು ಎದ್ದು ಹೊಟ್ಟೆಗೇನು ಎಂದು ನೋಡುವಾಗ ಏನೂ ಇಲ್ಲದಿದ್ದರೆ, ಸಂಕಟಪಡುವ ಘೋರ ಸನ್ನಿವೇಶ ಮುಂದಕ್ಕೆ ಸೃಷ್ಟಿಯಾಗದೆ ಇರದು ಎನ್ನುತ್ತಾರೆ ತಜ್ಞರು.
ಈ ಕುರಿತು ಅಡಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಹೀಗೆ ಹೇಳುತ್ತಾರೆ. "ಹವಾಮಾನ ಬದಲಾವಣೆ. ಬಹಳ ಗಂಭೀರವಾದ ವಿಷಯವಾಗಿದೆ ಈಗ. ಕಾರಣ ಏಕೆ? ಎಲ್ಲರೂ ಮಾತನಾಡುತ್ತಿರುವುದು ಮಳೆ ಮಾರಾಯ್ರೆ... ಎಂತಾ ಅವಸ್ಥೆ ಅಂತ ಮಾತ್ರಾ..!. ನಾಳೆಯೂ ಮತ್ತೆ ಅದೇ ಕೆಲಸ. ಹಾಗಿದ್ದರೆ ಕಾರಣದ ಬಗ್ಗೆ ಕೃಷಿಕರ ಅಭಿಪ್ರಾಯ, ದಾಖಲೆಗಳೊಂದಿಗೆ ಮಾತುಕತೆ, ಮಳೆ ಪ್ಯಾಟರ್ನ್ ಹೇಗೆ ಬದಲಾಗುತ್ತಾ ಹೋಗುತ್ತಿದೆ, ಚಳಿ ಯಾಕಿಲ್ಲ, ಹ್ಯುಮುಡಿಟಿ ಎಷ್ಟು ಕಡಿಮೆ ಆಗುತ್ತಿದೆ... ಇದೆಲ್ಲಾ ಯೋಚಿಸಬೇಕಾದ ವಿಷಯ. ಅಷ್ಟೇ ಅಲ್ಲ, ಹವಾಮಾನದ ಕಾರಣದಿಂದ ಕೃಷಿಯ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆಯು ದಾಖಲೆ ಸಹಿತ ಅಧ್ಯಯನ ಅಗತ್ಯ ಇದೆ."
"ಅದಕ್ಕೂ ಮೊದಲು ಕೃಷಿಕರು ಕುಳಿತು ಈ ಬಗ್ಗೆ ಮಾತನಾಡಬೇಕಿದೆ. ಮಲೆನಾಡಿನಲ್ಲಿ ಈಚೆಗೆ ಕೆಲವು ಸಮಯಗಳಿಂದ ಕೃಷಿಯ ಅದರಲ್ಲೂ ಅಡಿಕೆಯ ಮೇಲೆ ಆಗುತ್ತಿರುವ ಬದಲಾವಣೆ ಗಮನಿಸಿದಾಗ ಇದೆಲ್ಲಾ ಸ್ಪಷ್ಟವಾಗಿದೆ. ಈ ನೆಲೆಯಲ್ಲಿ ಸಣ್ಣ ಮಾತುಕತೆ ನಿನ್ನೆ ಪಿಜಿಎಸ್ಎನ್ ಪ್ರಸಾದ್ ಅವರ ಮನೆಯಲ್ಲಿ ನಾವು ಒಂದಷ್ಟು ಜನ, ಸುರೇಶ ಕಂಜರ್ಪಣೆ ಹಾಗೂ ಮೈಸೂರಿನ ಫಣೀಶ್ ಕೃಷ್ಣ ಕುಳಿತು ಮೊದಲ ಸುತ್ತಿನ ಮಾತುಕತೆ ನಡೆಸಿದೆವು. ಬಹಳ ಗಂಭೀರವಾದ ವಿಷಯ. ಹವಾಮಾನ ಬದಲಾವಣೆ ಬಗ್ಗೆ ಈಗ ಹಳ್ಳಿ ಮಟ್ಟದಲ್ಲಿ ಚರ್ಚೆ, ಪರಿಹಾರದ ಬಗ್ಗೆ ಮುಂದೆ ಮಾತುಕತೆ ಅಗತ್ಯ ಇದೆ. ದೇಶಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ.’’ ಎಂದು ಮಹೇಶ್ ಪುಚ್ಚಪ್ಪಾಡಿ ಹೇಳಿದರು.
ಕರಾವಳಿ ಮಲೆನಾಡು ಭಾಗದಲ್ಲಿ ಏನಾಗುತ್ತಿದೆ: ಕಳೆದ ಕೆಲ ವರ್ಷಗಳಿಂದ ದೇಶದಾದ್ಯಂತ ಹವಾಮಾನ ಬದಲಾವಣೆ ಪರಿಣಾಮಗಳು ಕಂಡುಬರುತ್ತಿವೆ. ಇದರಿಂದ ಕೃಷಿ ಪರಿಸರ ಸೇರಿ ಕರಾವಳಿ ಮಲೆನಾಡು ಭಾಗಗಳಲ್ಲಿ ಕೃಷಿಯ ಮೇಲೆ ಪರಿಣಾಮವೂ ಉಂಟಾಗುತ್ತಿದೆ. ಸಕಾಲದಲ್ಲಿ ಬೆಳೆಯಾಗದೇ ಇರುವುದು, ಕೈಗೆ ಬಂದ ಬೆಳೆ ಹವಾಮಾನ ವೈಪರೀತ್ಯದಿಂದ ನಾಶವಾಗುವುದು ಪ್ರಮುಖ.
ಈ ಕುರಿತು ಚರ್ಚೆ ಮೊನ್ನೆ ನಡೆದ ಸಂವಾದದಲ್ಲಿ ಕಂಡುಬಂತು. ಕಳೆದ ಸುಮಾರು 50 ವರ್ಷಗಳಿಂದ ಮಳೆಯ ಪ್ಯಾಟರ್ನ್‌ನಲ್ಲಿ ಬದಲಾವಣೆ ಆಗುತ್ತಿರುವುದು ಹಾಗೂ ಮಳೆಯ ಬದಲಾವಣೆಗೆ ಕಾರಣಗಳು ಏನು ಎಂಬುದರ ಕುರಿತು ಒಬ್ಬೊಬ್ಬರಾಗಿ ವಿಚಾರ ಮಂಡಿಸಿದರು.
ಇದರಿಂದ ಕೃಷಿ ಮೇಲೆ ಆಗುತ್ತಿರುವ ಪರಿಣಾಮ, ಬಹುವಾರ್ಷಿಕ ಬೆಳೆಯಾದ ಅಡಕೆ ಮೇಲೆ ಆಗುತ್ತಿರುವ ಪರಿಣಾಮ, ಅಡಕೆಯ ಮೇಲೆ ಬರುತ್ತಿರುವ ಈಚೆಗಿನ ರೋಗಗಳಾದ ಸಿಂಗಾರ ಒಣಗುವಿಕೆ, ಎಲೆಚುಕ್ಕಿ ರೋಗದ ಕಾರಣ, ಅಡಕೆ ಒಡೆದು ಬೀಳುತ್ತಿರುವುದು ಇತ್ಯಾದಿಗಳಿಗೆ ಹವಾಮಾನ ವೈಪರೀತ್ಯತ ಕಾರಣವಾಗುತ್ತಿದೆಯೇ ಎಂಬ ಕುರಿತು ಚರ್ಚೆ ನಡೆಯಿತು.
ರಬ್ಬರ್ ಕೃಷಿ, ಕಾಫಿ ಬೆಳೆಯಲ್ಲಿ ಭಾರಿ ಬದಲಾವಣೆಗಳು ಆಗುತ್ತಿವೆ. ಇಳುವರಿ ಕೊರತೆ ದೊಡ್ಡ ಸಮಸ್ಯೆ ಆಗಿದೆ. ಇದಕ್ಕೆ ಹವಾಮಾನ ಬದಲಾವಣೆಯೇ ಕಾರಣವಾಗಿದೆ ಎಂಬುದು ಚರ್ಚೆಯಲ್ಲಿ ವ್ಯಕ್ತವಾದವು. ಮುಂದೆ ಏನು ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಹಾಗೂ ದೀರ್ಘಾವಧಿಯಾಗಿ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತು ಚರ್ಚೆ ನಡೆಯಿತು. ಸುಳ್ಯ, ಪುತ್ತೂರು ಸೇರಿ ಕರಾವಳಿ, ಮಲೆನಾಡು ಭಾಗದ ಕೃಷಿಕರ ಅಭಿಪ್ರಾಯ ಸಂಗ್ರಹದ ನೆಲೆಯಲ್ಲಿ ಇದರ ಮುಂದುವರಿದ ಚರ್ಚೆಗಳು ನಡೆಯುವ ಸೂಚನೆಯೂ ವ್ಯಕ್ತವಾಗಿವೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)